ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಗೆ ಕಿರುಕುಳ ಸಹಿಸಲಾಗದು: ವಿಶ್ವಾಸ್ ಅಮೀನ್ ಎಚ್ಚರಿಕೆ

ಸುಳ್ಳು ಕೇಸು ದಾಖಲಿಸುವ  ಮೂಲಕ ಕಿರುಕುಳಗಳನ್ನು ನೀಡುವುದನ್ನು ನಿಲ್ಲಿಸದೇ ಇದ್ದರೆ ಅದಕ್ಕೆ ತಕ್ಕ ಉತ್ತರವನ್ನು ಯುವ ಕಾಂಗ್ರೆಸ್ ನೀಡಲಿದೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಕುತಂತ್ರಗಳನ್ನು ಮಾಡಿದರೆ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ಗೊತ್ತಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪರವಾಗಿ ಬರೆಯುವ ಕಾರ್ಯಕರ್ತರನ್ನು ಗುರಿಯಾಗಿಸಿ  ಬಿಜೆಪಿಯು ಅನವಶ್ಯಕ ಕಿರುಕುಳ ಕೊಡುತ್ತಿರುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲಾಗುವುದಿಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಬಿಜೆಪಿಯ ಆರು ವರ್ಷದ ಆಡಳಿತವು ಬರೀ ಪೊಳ್ಳು ಭರವಸೆಗಳಿಂದ ಕೂಡಿದ್ದು ಬಿಜೆಪಿಯ ಸುಳ್ಳುಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕಾರ್ಯಕರ್ತರು  ಪ್ರಶ್ನಿಸುತ್ತಿದ್ದಾರೆ. ಇಂತಹ ಕಾರ್ಯಕರ್ತರ ಮೇಲೆ ಬಿಜೆಪಿಯು ತನ್ನ ಅಧಿಕಾರ ದುರುಪಯೋಗ ಪಡಿಸಿ  ಸುಳ್ಳು ಕೇಸು ದಾಖಲಿಸುವ  ಮೂಲಕ ಕಿರುಕುಳಗಳನ್ನು ನೀಡುವುದನ್ನು ನಿಲ್ಲಿಸದೇ ಇದ್ದರೆ ಅದಕ್ಕೆ ತಕ್ಕ ಉತ್ತರವನ್ನು ಯುವ ಕಾಂಗ್ರೆಸ್ ನೀಡಲಿದೆ ಎಂದು ಅಮೀನ್ ಹೇಳಿದ್ದಾರೆ.

ಬಿಜೆಪಿಯು ತಕ್ಷಣ ತನ್ನ ದ್ವೇಷ ರಾಜಕಾರಣವನ್ನು ನಿಲ್ಲಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಇಂತಹ ಕುತಂತ್ರಗಳನ್ನು ಮಾಡಿದರೆ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ನಮಗೂ ಗೊತ್ತಿದೆ. ಇನ್ನು ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಯಾವುದೇ ಕಾಂಗ್ರೆಸ್ ಕಾರ್ಯಕರ್ತನಿಗೆ ತೊಂದರೆಗಳನ್ನು ನೀಡಿದರೆ ಬಿಜೆಪಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ಪ್ರಿಯರು, ಜಾತ್ಯತೀತ ತತ್ವಗಳ ಮೇಲೆ ನಂಬಿಕೆ ಇರಿಸಿದವರು, ಆದರೆ ಬಿಜೆಪಿಯು ಕೋಮು ದ್ವೇಷದ ರಾಜಕಾರಣ ಮಾಡುತ್ತಿದೆ. ಧರ್ಮ ಧರ್ಮಗಳ ನಡುವೆ ಕೋಮು ದ್ವೇಷದ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುತ್ತಿದೆ. ಬಿಜೆಪಿಯ ಈ ಒಡೆದಾಳುವ ನೀತಿಯನ್ನು ನಮ್ಮ ಕಾರ್ಯಕರ್ತರು ಇನ್ನು ಮುಂದಕ್ಕೂ ಪರಿಣಾಮಕಾರಿಯಾಗಿ ಪ್ರಶ್ನಿಸಲಿದ್ದಾರೆ. ನಮ್ಮ ಕಾರ್ಯಕರ್ತರ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ.  ನಮ್ಮ ಕಾರ್ಯಕರ್ತರನ್ನು ರಕ್ಷಿಸಲು ಯಾವುದೇ ಹೋರಾಟಕ್ಕೂ ಯುವ ಕಾಂಗ್ರೆಸ್ ಸಿದ್ದವಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ನೆಲೆಯಲ್ಲಿ ನಾನು ಈ ಮೂಲಕ ಬಿಜೆಪಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

Get real time updates directly on you device, subscribe now.