ಕೋವಿಡ್-19: ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಆದೇಶ ಪಾಲನೆಯಾಗುತ್ತಿಲ್ಲ; ಉಡುಪಿ ಡಿಸಿ ಗಮನ ಸೆಳೆದ ಕಾಂಗ್ರೆಸ್
ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕ ಜನಸಾಮಾನ್ಯರ ಕೈಗೆಟಕುವಂತಿರಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇಕಡಾ 50ರಷ್ಟು ಬೆಡ್ಗಳನ್ನು ಕಾದಿರಿಸಬೇಕೆಂಬ ಸರಕಾರಿ ಆದೇಶ ಉಡುಪಿ ಜಿಲ್ಲೆಯಲ್ಲಿ ಇನ್ನೂ ಪಾಲನೆ ಆಗಿಲ್ಲ.
ಕರಾವಳಿ ಕರ್ನಾಟಕ ವರದಿ
ಉಡುಪಿ: ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇಕಡಾ 50ರಷ್ಟು ಬೆಡ್ಗಳನ್ನು ಕಾದಿರಿಸಬೇಕೆಂಬ ಸರಕಾರಿ ಆದೇಶ ಉಡುಪಿ ಜಿಲ್ಲೆಯಲ್ಲಿ ಇನ್ನೂ ಪಾಲನೆ ಆಗಿಲ್ಲ ಎಂಬ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದರು. ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕ ಜನಸಾಮಾನ್ಯರ ಕೈಗೆಟಕುವಂತಿರಬೇಕು ಎಂಬ ಸಲಹೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ನಿಯೋಗ ಇದೇ ಸಂದರ್ಭ ಜಿಲ್ಲಾಧಿಕಾರಿಗಳಿಗೆ ನೀಡಿತು.
ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಕಂಡು ಬಂದಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇಕಡಾ ಐವತ್ತರಷ್ಟು ಬೆಡ್ಗಳನ್ನು ಸೋಂಕಿತರಿಗೆ ಕಾದಿರಿಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಮಾರ್ಕೊಡು ನೇತೃತ್ವದ ನಿಯೋಗ ಆಗ್ರಹಿಸಿತು.
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ತೀವ್ರವಾಗಿ ಹರಡುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರು ಕಳವಳ ವ್ಯಕ್ತಪಡಿಸಿದರು..ಈ ಸಂದರ್ಭದಲ್ಲಿ ಜಿಲ್ಲಾಡಳಿತ ಗಮನಹರಿಸಬೇಕಾದ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಸಾಮಾನ್ಯ ಜ್ವರ, ಶೀತಕ್ಕೆ ಮದ್ದು ತೆಗೆದುಕೊಳ್ಳಲು ಅನುಮತಿ ಕೊಡಿ
ಮಳೆಗಾಲದ ಈ ದಿನಗಳಲ್ಲಿ ಸಾಮಾನ್ಯವಾಗಿ ಬರುವ ಶೀತ, ನೆಗಡಿಗಳನ್ನೇ ವೈರಸ್ಎಂದು ಪರಿಗಣಿಸದೆ ಕುಟುಂಬ ಯಾ ಸ್ಥಳೀಯ ವೈದ್ಯರಿಗೆ ತಪಾಸಣೆಗೆ ಅವಕಾಶ ಮಾಡಿಕೊಟ್ಟು ರೋಗ ನಿರೋಧಕ ಮದ್ದುಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಬೇಕು. ಆ ಮೂಲಕ ಜನರು ಭಯಭೀತರಾಗಿ ಮಾನಸಿಕ ಅಸಮತೋಲನಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂಬ ಸಲಹೆ ನೀಡಿದರು.ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ವೈದ್ಯರ ಸಭೆಯಲ್ಲಿ ಈ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಯು.ಆರ್.ಸಭಾಪತಿ, ಕೆಪಿಸಿಸಿ ಮುಖಂಡರಾದ ಮುರಳಿ ಶೆಟ್ಟಿ, ಎಂ.ಎ.ಗಫೂರ್, ವೆರೋನಿಕ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ವೈ ಸುಕುಮಾರ್, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ಕಾರ್ಕಳ ಬ್ಲಾಕ್ ಅದ್ಯಕ್ಷರಾದ ಶೇಖರ ಮಡಿವಾಳ, ಲೀಗಲ್ ಸೆಲ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಅಲ್ಪಸಂಖ್ಯಾತಘಟಕ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಹೆಬ್ರಿ ಬ್ಲಾಕ್ ಅದ್ಯಕ್ಷರಾದ ಮಂಜುನಾಥ ಪೂಜಾರಿ, ಕಾರ್ಕಳ ಪುರಸಭಾ ಸದಸ್ಯರಾದ ಶುಭದ ರಾವ್ ಹಾಗೂ ಮಧುರಾಜ್ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಯತೀಶ್ ಕರ್ಕೇರ, ಜಿಲ್ಲಾಕಾಂಗ್ರೆಸ್ ಪ್ರ. ಕಾರ್ಯದರ್ಶಿ ಹೆಚ್. ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಎಂ ಪಿ ಮೊಯಿದಿನಬ್ಬ, ಯೋಗೀಶ್ ನಯನ್ ಇನ್ನ, ಕೃಷ್ಣ ಶೆಟ್ಟಿ ನಲ್ಲೂರ್, ಅಜಿತ್ ಹೆಗ್ಡೆ ಮಾಳಾ, ಪ್ರದೀಪ್ ಶೆಟ್ಟಿ, ಹಮದ್, ಝಮೀರ್ ಹಾಗೂ ಕಾಂಗ್ರೆಸಿನ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.