ಮೆಸ್ಕಾಂ ಉದ್ಯೋಗಿ ಎಂದು ನಂಬಿಸಿ ಮದುವೆ: ಪಡುಕೋಣೆ ಯುವತಿಯಿಂದ ಗಂಗೊಳ್ಳಿ ಪೊಲೀಸರಿಗೆ ದೂರು
ವರದಕ್ಷಿಣೆ ಹಣ ಪಡೆಯುವ ಉದ್ದೇಶದಿಂದ ಮೆಸ್ಕಾಂ ಇಲಾಖೆಯಲ್ಲಿ ಸರಕಾರಿ ಕೆಲಸ ಇರುವುದಾಗಿ ಸುಳ್ಳು ಹೇಳಿ ನಂಬಿಸಿ ಮದುವೆ.
ಸರಕಾರಿ ಕೆಲಸ ಇರುವುದಾಗಿ ಸುಳ್ಳು ಹೇಳಿ ಮದುವೆ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವ ವಿಷಯ ಬಾಯ್ಬಿಟ್ಟಿದ್ದಾನೆ.
ಕರಾವಳಿ ಕರ್ನಾಟಕ ವರದಿ
ಬೈಂದೂರು: ಪಡುಕೋಣೆಯ ಯುವತಿಯೋರ್ವರನ್ನು ಮೆಸ್ಕಾಂ ಉದ್ಯೋಗಿ ಎಂದು ನಂಬಿಸಿ ವರದಕ್ಷಿಣೆ ಪಡೆದು ಮದುವೆಯಾಗಿ ವಂಚಿಸಿದ ಆರೋಪದಲ್ಲಿ ಅಂಪಾರು ಗ್ರಾಮದ ಯುವಕನ ವಿರುದ್ಧ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.
ಅಂಪಾರು ಗ್ರಾಮದ ನೆಲ್ಲಿಕಟ್ಟೆಯ ಶಿವರಾಮ ಪೂಜಾರಿಯವರ ಮಗ ಶಿಥಿಲ್ ಎಂಬಾತ ಪಡುಕೋಣೆಯ ಯುವತಿಯೋರ್ವರನ್ನು ಮೆಸ್ಕಾಂ ಉದ್ಯೋಗಿ ಎಂದು ನಂಬಿಸಿ ಮದುವೆಯಾಗಿದ್ದ. ಮದುವೆಯಾದ ತಿಂಗಳ ಒಳಗೆ ಈತ ಅನೇಕ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂಬುದು ತಿಳಿದ ಹಿನ್ನೆಲೆಯಲ್ಲಿ ಯುವತಿ ಪತಿ, ಅತ್ತೆ, ಮಾವನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಮದುವೆ ಮಾತುಕತೆಗೆ ಬಂದಾಗ ಹುಡುಗನಿಗೆ ಮೆಸ್ಕಾಂ ಇಲಾಖೆಯಲ್ಲಿ ಸರಕಾರಿ ಕೆಲಸ ಇರುವುದಾಗಿ ಹೇಳಿ ನಂಬಿಸಿದ್ದು, ಹುಡುಗಿಗೆ 12 ಪವನ್ ಚಿನ್ನ, ಹುಡುಗನಿಗೆ 2 ಪವನ್ ಬಂಗಾರ ಕೊಡುವಂತೆ ಹೇಳಿ ಮಾತುಕತೆ ನಡೆಸಿದ್ದರು. ಜೂ.30 ರಂದು ಹುಡುಗಿಯ ತಂದೆ ಮನೆಯಾದ ಮರವಂತೆಯ ಹೊಸಮನೆ ಎಂಬಲ್ಲಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಆಗಸ್ಟ್26 ರಂದು ಅಂಪಾರು ಶ್ರೀ ರಾಮ ಸಭಾ ಭವನದಲ್ಲಿ ಹಿಂದೂ ಸಂಪ್ರದಾಯದಂತೆ ಯುವತಿಯ ಮದುವೆಯು ಶಿಥಿಲ ಪೂಜಾರಿ ಯವರ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಗುರು ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಮದುವೆಯ ಸಮಯ ಮಾತುಕತೆಯ ಪ್ರಕಾರ ಚಿನ್ನದ ಒಡವೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದುವೆಯ ನಂತರ ಯುವತಿ ಹುಡುಗನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದು, ಸೆ.4ರಂದು ಶಿಥಿಲ್ ಪೂಜಾರಿ ತನಗೆ ಬೆಂಗಳೂರಿಗೆ ವರ್ಗಾವಣೆ ಆಗಿದೆ ಎಂದು ಹೇಳಿ ಪತ್ನಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದಾನೆ. ಬೆಂಗಳೂರಿನಲ್ಲಿ ಬಸವೇಶ್ವರ ನಗರದಲ್ಲಿ ಒಂದು ಬಾಡಿಗೆ ರೂಮಿನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು.
ಪ್ರತಿ ನಿತ್ಯ ಶಿಥಿಲ್ ಬೆಳಿಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ರೂಮಿಗೆ ಬಂದು ನಂತರ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ಸಂಶಯಗೊಂಡ ಪತ್ನಿ ಗಂಡನಲ್ಲಿ ಕೆಲಸದ ಬಗ್ಗೆ ದಾಖಲೆ ತೋರಿಸುವಂತೆ ಕೇಳಿದಾಗ ಗುರುತು ಚೀಟಿ ಕಛೇರಿಯಲ್ಲಿ ಇರುವುದಾಗಿ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಮೊಬೈಲ್ ಚೆಕ್ ಮಾಡಲು ಹೋದಲ್ಲಿ ಆಕೆಗೆ ಬೈದು ಮೊಬೈಲ್ ಮುಟ್ಟಿದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೇ ತವರು ಮನೆಯಿಂದ ವರದಕ್ಷಿಣೆ ಹಣ ತರಿಸಿಕೊಡುವಂತೆ ಒತ್ತಾಯಿಸಿ ಪತ್ನಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದ.
ಈತನ ಹಿಂಸೆ ತಾಳಲಾಗಡೇ ಬೆಂಗಳೂರಿಗೆ ಬರುವಾಗ ತಾಯಿ ನೀಡಿದ 5000 ರೂಪಾಯಿ ಹಣವನ್ನು ಗಂಡನಿಗೆ ನೀಡಿದ್ದಾರೆ. ಪುನಃ ಹಣಕ್ಕಾಗಿ ಹಿಂಸೆ ನೀಡುತ್ತಿದ್ದು, ಪತ್ನಿಯ ಸಹೋದರಿ ಆಕೆಯ ಖಾತೆಯಿಂದ ಆಪಾದಿತನ ಮೊಬೈಲ್ ಗೆ 5,000/- ರೂಪಾಯಿ ಹಣವನ್ನು ಗೂಗಲ್ ಪೇ ಮಾಡಿರುತ್ತಾರೆ ಎಂದು ದೂರಿನಲ್ಲಿ ವಿವರ ನೀಡಲಾಗಿದೆ.
ಐದು ಸಾವಿರ ತೆಗೆದುಕೊಂಡು ತನಗೆ ರಾಯಚೂರಿನಲ್ಲಿ ಕೆಲಸ ಇರುವುದಾಗಿ ತಿಳಿಸಿ ಅದೇ ದಿನ ಪತ್ನಿಯನ್ನು ಬೆಂಗಳೂರಿನಲ್ಲಿ ಆಕೆಯ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟು ಹೋದ ಶಿಥಿಲ್ ಪೂಜಾರಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ನಂತರ ಈತನ ಮನೆಯವರಿಗೆ ವಿಷಯ ತಿಳಿಸಿ ಹುಡುಕಾಟ ಮಾಡುವಾಗ ಗೋಕಾಕ್ ನಿಂದ ಕುಂದಾಪುರಕ್ಕೆ ಬರುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿ, ಆತನನ್ನು ಕರೆದುಕೊಂಡು ಬಂದು ವಿಚಾರಿಸಿದಾಗ, ಸರಕಾರಿ ಕೆಲಸ ಇರುವುದಾಗಿ ಸುಳ್ಳು ಹೇಳಿ ಮದುವೆ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವ ವಿಷಯ ಬಾಯ್ಬಿಟ್ಟಿದ್ದಾನೆ.
ವರದಕ್ಷಿಣೆ ಹಣ ಪಡೆಯುವ ಉದ್ದೇಶದಿಂದ ಶಿಥಿಲ್ ಪೂಜಾರಿಗೆ ಮೆಸ್ಕಾಂ ಇಲಾಖೆಯಲ್ಲಿ ಸರಕಾರಿ ಕೆಲಸ ಇರುವುದಾಗಿ ಸುಳ್ಳು ಹೇಳಿ ನಂಬಿಸಿ ಮದುವೆ ಮಾಡಿಸಿ ವರದಕ್ಷಿಣೆ ಹಣಕ್ಕಾಗಿ ಮಾನಸಿಕ ಹಿಂಸೆ ನೀಡಿ ಹಣ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2020 ಕಲಂ: 498(ಎ), 504, 506, 417, 420 ಜೊತೆಗೆ 34 ಐ.ಪಿ.ಸಿ ಹಾಗೂ ಕಲಂ 3, 4 ಡಿ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.