ಆಮ್ನಿ ಡಿಕ್ಕಿ: ಬೈಂದೂರು ಪೊಲೀಸ್ ಜೀಪ್ ಪಲ್ಟಿ

ಪರಾರಿಯಾಗುವ ಯತ್ನದಲ್ಲಿ ಆಮ್ನಿ, ಜೀಪಿನ ಮುಂಭಾಗಕ್ಕೆ ಗುದ್ದಿದ ಪರಿಣಾಮ ಜೀಪ್ ಮಗುಚಿಬಿದ್ದಿತ್ತು.

ಬೈಂದೂರು ವೃತ್ತನಿರೀಕ್ಷಕ ಸುರೇಶ್ ನಾಯಕ್ ಅವರ ಬೆನ್ನು ಮೂಳೆಗೆ ಒಳಪೆಟ್ಟು ಬಿದ್ದಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೈಂದೂರು: ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಮ್ನಿ ಕಾರನ್ನು ಬೈಂದೂರು ಪೊಲೀಸರು ನಿಲ್ಲಿಸಲು ಸೂಚಿಸಿದ ಸಂದರ್ಭ ನಿಲ್ಲಿಸದೇ ಪರಾರಿಯಾಗುವ ಯತ್ನದಲ್ಲಿ ಪೊಲೀಸ್ ಜೀಪಿಗೆ ಗುದ್ದಿದ ಪರಿಣಾಮ ಪೊಲೀಸ್ ಜೀಪ್ ಪಲ್ಟಿಯಾದ ಘಟನೆ ವರದಿಯಾಗಿದೆ. ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಅವರು ರಾತ್ರಿ ಗಸ್ತಿನಲ್ಲಿದ್ದ ಸಂದರ್ಭ ಘಟನೆ ನಡೆದಿದ್ದು, ಜೀಪ್ ಪಲ್ಟಿಯಾದ ಸಂದರ್ಭ ಅವರ ಬೆನ್ನು ಮೂಳೆಗೆ ಒಳಪೆಟ್ಟು ಬಿದ್ದಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಹೇಮರಾಜ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಜೀಪ್ ಪಲ್ಟಿಯಾದ ಸಂದರ್ಭ ಸಂಪೂರ್ಣ ಜಖಂಗೊಂಡಿದ್ದು, ಸಾರ್ವಜನಿಕರು ಕ್ರೇನ್ ಸಹಾಯದಿಂದ ಜೀಪಿನಲ್ಲಿ ಸಿಲುಕಿಕೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಕಷ್ಟಪಟ್ಟು ಹೊರತೆಗೆದು ಕುಂದಾಪುರ ಆಸ್ಪತ್ರೆಗೆ ಸೇರಿಸಿದ್ದರು. ವಿಷಯ ತಿಳಿದೊಡನೆ ಕುಂದಾಪುರ ವೃತ್ತನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಪಡುವರಿ ಗ್ರಾಮದ ರಾಘವೇಂದ್ರ ಮಠದ ಬಳಿ ಪೊಲೀಸರು ಫಾರೆಸ್ಟ್ ಗೆಸ್ಟ್‌ಹೌಸ್ ಕಡೆಯಿಂದ ಮಾರುತಿ ಆಮ್ನಿ ಕಾರು ಅನುಮಾನಾಸ್ಪದವಾಗಿ ಬರುತ್ತಿರುವುದನ್ನು ಕಂಡು ಸರ್ಕಲ್ ಇನ್ಸ್‌ಪೆಕ್ಟರ್ ಅವರು ಕಾರನ್ನು ನಿಲ್ಲಿಸಲು ಸೂಚಿಸಿದಾಗ ಪರಾರಿಯಾಗುವ ಯತ್ನದಲ್ಲಿ ಆಮ್ನಿ, ಜೀಪಿನ ಮುಂಭಾಗಕ್ಕೆ ಗುದ್ದಿದ ಪರಿಣಾಮ ಜೀಪ್ ಮಗುಚಿಬಿದ್ದಿತ್ತು.

ಅ.16ರ ರಾತ್ರಿ ಘಟನೆ ನಡೆದಿದ್ದು, ಇಲಾಖಾ ಜೀಪಿಗೆ ಢಿಕ್ಕಿ ಹೊಡೆದ ಕಾರನ್ನು ಅದರ ಚಾಲಕನು ನಿಲ್ಲಿಸಿದೇ ಪರಾರಿಯಾದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುನ್ನಡೆದಿದೆ.

Get real time updates directly on you device, subscribe now.