ಇಂದಿರಾ ಗಾಂಧಿ ಸಾಧನೆ ಗುರುತಿಸಲು ಉಳುವವನೇ ಹೊಲದೊಡೆಯ ಕಾನೂನು ಒಂದೇ ಸಾಕು: ಗೀತಾ ವಾಗ್ಳೆ

'ಇಂದಿರಾ ಗಾಂಧಿಯವರ ಜನಪರ ಸಾಧನೆ - ತ್ಯಾಗ -ಬಲಿದಾನಗಳನ್ನು ಮರೆತ ಯುವ ಪೀಳಿಗೆ'.

ಪಟೇಲರು ಗಾಂಧೀಜಿ ಹತ್ಯೆಯ ನಂತರ ಆರ್.ಎಸ್.ಎಸ್.ಅನ್ನು ನಿಷೇದಿಸಿದ್ದರು ಎನ್ನುವ ಸತ್ಯವನ್ನು ಬಿಜೆಪಿಗರು ಮರೆಮಾಚುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ನುಡಿದರು.

ಕರಾವಳಿ ಕರ್ನಾಟಕ ವರದಿ
ಉದ್ಯಾವರ: ಇಂದಿರಾಜಿಯವರ ಸಾಧನೆಯನ್ನು ಗುರುತಿಸಲು ಉಳುವವನೇ ಹೊಲದೊಡೆಯ ಎಂಬ ಭೂ ಸುದಾರಣೆ ಕಾನೂನು ಒಂದೇ ಸಾಕು. ಸ್ವತಂತ್ರ ಭಾರತದ ಈವರೆಗಿನ ಏಕೈಕ ಮಹಿಳಾ ಪ್ರಧಾನಿಯಾಗಿ ದಿಟ್ಟ ಸವಾಲುಗಳನ್ನು ಎದುರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಭಾರತವನ್ನುತಂದು ನಿಲ್ಲಿಸಲು ಅವರು ಕಂಡುಕೊಂಡ ಅನೇಕ ಕಾರ್ಯಕ್ರಮಗಳು ಇಂದಿಗೂ ಕೂಡಾ ಮರೆಯಲಾಗದ್ದು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯದಲ್ಲಿ ಅವರು ಮಾತನಾಡಿದರು.

ಹನ್ನೆರಡನೇ ವಯಸ್ಸಿನಲ್ಲಿ ಸಂಘಟನೆ ಕಟ್ಟಿ ದೇಶ ಸೇವೆಗೆ ಇಳಿದ ಇಂದಿರಾ

ತನ್ನ ಹನ್ನೆರಡನೇ ವಯಸ್ಸಿನಲ್ಲಿ ವಾನರ ಸೇನೆ ಎಂಬ ಸಂಘಟನೆಯನ್ನು ಕಟ್ಟಿ ದೇಶ ಸೇವೆಗೆ ಇಳಿದ ಇಂದಿರಾ ಗಾಂಧಿ ಅಪತ್ರಿಮದೇಶ ಪ್ರೇಮಿ ದೈರ್ಯವಂತೆ ಹಾಗೂ ಬಡವರ ಪಾಲಿನ ದೇವತೆ. ಆದರೆ ಇಂದಿನ ಯುವ ಪೀಳಿಗೆ ಇಂದಿರಾ ಗಾಂಧಿಯವರ ಜನಪರ ಸಾಧನೆ ತ್ಯಾಗ ಬಲಿದಾನವನ್ನು ಮರೆತು ಸಮ್ಮೋಹನಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷದ  ವಿರುದ್ಧ ಕಾರ್ಯವೆಸಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ದೇಶದ ಬಡ ಹಾಗೂ ಮಧ್ಯಮ ವರ್ಗದ ಆರ್ಥಿಕತೆಗೆ ಬಲ

ಇಂದಿರಾಜಿಯವರ ಹಸಿರು ಕ್ರಾಂತಿ, ಶ್ವೇತಕ್ರಾಂತಿ, ನೀಲ ಕ್ರಾಂತಿಕಾರ್ಯಕ್ರಮ, ಬ್ಯಾಂಕ್ಗಳ ರಾಷ್ಟ್ರೀಕರಣ, ಜೀತಪದ್ದತಿ ನಿರ್ಮೂಲನ, ರಾಜಧನರದ್ದತಿ ಇವೆಲ್ಲಾ ಕಾರ್ಯಕ್ರಮಗಳು ದೇಶದ ಬಡ ಹಾಗೂ ಮಧ್ಯಮ ವರ್ಗದ ಆರ್ಥಿಕತೆಗೆ ಬಲ ನೀಡಿತು.ಓರ್ವ ಪ್ರಧಾನಿಯಾಗಿ ಅವರು ಕೈಗೊಂಡ ದಿಟ್ಟ ನಿಲುವು ಇಂದು ದೇಶವನ್ನು ಅಖಂಡವಾಗಿ ಉಳಿಸುವಲ್ಲಿ ಪೂರಕವಾಗಿತ್ತು. ಆದರೆ ಇಂದಿರಾಗಾಂಧಿಯವರಿಂದಲೇ ಆರ್ಥಿಕವಾಗಿ ಬಲಾಢ್ಯಗೊಂಡ ವರ್ಗವೊಂದು ಇಂದು ಇಂದಿರಾ ಗಾಂಧಿಯವರ ಕಾರ್ಯಕ್ರಮವನ್ನೇ ಗೇಲಿ ಮಾಡುತ್ತಿರುವುದು ಈ ದೇಶದ ದುರಂತ ಎಂದರು.

ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ  ವರ್ಗಕ್ಕೆ ಧಾರ್ಮಿಕ ಸ್ವಾತಂತ್ರ್ಯವನ್ನು ಶ್ರೀ ನಾರಾಯಣ ಗುರುಗಳು ತಂದುಕೊಟ್ಟರೆ ಆರ್ಥಿಕ ಸ್ವಾತಂತ್ರ್ಯವನ್ನ ತಂದುಕೊಟ್ಟವರು ಇಂದಿರಾಗಾಂಧಿ ಎಂದರು.

ಅಸೀಮ ಧೈರ್ಯವಂತ ಮಹಿಳೆ ಇಂದಿರಾ ಗಾಂಧಿ

1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕ್ ಪರವಾಗಿ ಅಮೇರಿಕಾದ ಯುದ್ಧ ನೌಕೆ ಸೆವೆಂತ್ ಫ್ಲೀಟ್ ಭಾರತದೆಡೆಗೆ ಸಾಗ ಹೊರಟಾಗ ಅಮೇರಿಕಾ ಮುಟ್ಟಿನೋಡುವಂತೆ ಸ್ವಾಭಿಮಾನದ ಸಂದೇಶ ನೀಡಿದ್ದರು. ಅಮೇರಿಕಾ ಯುದ್ಧ ನೌಕೆ ವಾಪಸು ಹೋಗುವಂತೆ ಮಾಡಿದ ಅಸೀಮ ಧೈರ್ಯವಂತ ಮಹಿಳೆ ಇಂದಿರಾ ಗಾಂಧಿಯವರನ್ನು ಅಟಲ್ ಬಿಹಾರಿ ವಾಜಪೇಯಿಯವರು ದುರ್ಗಾ ಮಾತೆಎಂದು ಬಣ್ಣಿಸಿದ್ದರು ಎಂದು ನೆನಪಿಸಿದರು.

ಸರ್ದಾರ್ ಪಟೇಲ್  ಆರ್.ಎಸ್.ಎಸ್ ನಿಷೇದಿಸಿದ್ದರು 

ಜವಾಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ನೇಹದಿಂದ ಇದ್ದರೂ ಕೂಡ ಅವರ ಮಧ್ಯೆ ನಿವಾರಿಸಲಾಗದ ಭಿನ್ನಾಭಿಪ್ರಾಯ ಇತ್ತು ಎಂದು ಹುಯಿಲೆಬ್ಬಿಸಿ ಬಿಜೆಪಿ ಪಕ್ಷ ಸರ್ದಾರ್ ಪಟೇಲ್‌ರಿಗೆ ಅನ್ಯಾಯವಾಗಿದೆಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ ಕೋಮುವಾದದ ವಿರುದ್ಧ ದಿಟ್ಟ ನಿಲುವು ಕೈಗೊಂಡಿದ್ದ ಪಟೇಲರು ಗಾಂಧೀಜಿ ಹತ್ಯೆಯ ನಂತರ ಆರ್.ಎಸ್.ಎಸ್.ಅನ್ನು ನಿಷೇದಿಸಿದ್ದರು ಎನ್ನುವ ಸತ್ಯವನ್ನು ಮರೆಮಾಚುತ್ತಾರೆ. ಪಟೇಲರು ತನ್ನಕೊನೆಯ ದಿನಗಳಲ್ಲೂ ಕೂಡಾ ಪ್ರಧಾನಿ ನೆಹರೂರವರಿಗೆ ಸಹಕಾರವನ್ನು ನೀಡುವಂತೆ ಇತರ ಮಂತ್ರಿಗಳಿಗೆ ಹೇಳಿದ್ದು ದಾಖಲೆಯಲ್ಲಿ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕರ್ತ ಕುಮಾರ್ ಸಂಪಿಗೆ ನಗರ ಇವರು ಸರ್ದಾರ್ ವಲ್ಲಭಬಾಯಿ ಪಟೇಲ್ ಬಗ್ಗೆ ವಿವರಿಸುತ್ತಾ ಭಾರತದ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯನ ದೇಶ ಸೇವೆಯನ್ನುಕೊಂಡಾಡಿದರು. ಸ್ವತಂತ್ರ ಭಾರತದ ಪ್ರಪ್ರಥಮ ಉಪಪ್ರಧಾನಿ ಹಾಗೂ ಗೃಹಸಚಿವರಾದ ಪಟೇಲರ ದೇಶ ಸೇವೆಯನ್ನು ಈಗಿನ ರಾಜಕಾರಣಿಗಳು ಮೈಗೂಡಿಸಿ ಕೊಳ್ಳಬೇಕು. ಭಾರತದ ಏಕತೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ನುಡಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿತೇಶ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೆಲನ್ ಫೆರ್ನಾಂಡಿಸ್, ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಇರ್ಫಾನ್, ಕಿಸಾನ್ ಟಕದ ಅಧ್ಯಕ್ಷರಾದ ಶೇಖರ್ ಕೆ.ಕೋಟ್ಯಾನ್, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಧನ್ಯವಾದವಿತ್ತರು.

Get real time updates directly on you device, subscribe now.