ಬಾಲಕನಿಗೆ ಲೈಂಗಿಕ ದೌರ್ಜನ್ಯ: ಚಂದ್ರ ಹೆಮ್ಮಾಡಿಗೆ ಹತ್ತು ವರ್ಷ ಕಠಿಣ ಸಜೆ

ಬಾಲಕನನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಚಂದ್ರ ಕೆ. ಹೆಮ್ಮಾಡಿ.

ಪೋಕ್ಸೊ ಕಾಯ್ದೆ ಅನ್ವಯ ವಿವಿಧ ಪೊಲೀಸ್ ಠಾಣೆಗಳಲ್ಲಿ 21ಪ್ರಕರಣಗಳು ದಾಖಲಾಗಿದ್ದವು. ಆರೋಪಿಯೊಬ್ಬನ ವಿರುದ್ಧ ದಾಖಲಾದ ಗರಿಷ್ಠ ಪೋಕ್ಸೋ ಪ್ರಕರಣಗಳು ಇದಾಗಿವೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ದೈನಿಕವೊಂದರ ವರದಿಗಾರನಾಗಿದ್ದ ಚಂದ್ರ ಕೆ. ಹೆಮ್ಮಾಡಿ ಎಂಬಾತನ ಮೇಲೆ ದಾಖಲಾಗಿದ್ದ 21ಪೋಕ್ಸೊ ಪ್ರಕರಣಗಳಲ್ಲಿ ಮೊದಲ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಫೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ದೋಷಿ ಎಂದು ತೀರ್ಪು ನೀಡಿದ್ದಾರೆ.

ಬಾಲಕನನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಚಂದ್ರ ಕೆ. ಹೆಮ್ಮಾಡಿ ಅಪರಾಧಿ ಎಂದು ನ್ಯಾಯಾಧೀಶರಾದ ವನಮಾಲ ಆನಂದರಾವ್ ಅವರು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡದ ಮೊತ್ತದಲ್ಲಿ 5ಸಾವಿರ ರೂ. ಸರಕಾರಕ್ಕೆ ಮತ್ತು 5ಸಾವಿರ ರೂ. ಸಂತ್ರಸ್ತ ಬಾಲಕನಿಗೆ ನೀಡಲು ಆದೇಶ ತಿಳಿಸಿದೆ.

ಬೈಂದೂರು ಪರಿಸರದ ಹಳ್ಳಿಯೊಂದರ ಬಾಲಕನಿಗೆ ತಾನು ದಿನಪತ್ರಿಕೆ ವರದಿಗಾರ ಎಂದು ಹೇಳಿಕೊಂಡ ಚಂದ್ರ ಕೆ. ಹೆಮ್ಮಾಡಿ ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನೊಂದಿಗೆ ಬರುವಂತೆ ಪುಸಲಾಯಿಸಿ ಕರೆದೊಯ್ದಿದ್ದ. ಅಲ್ಲಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಹನ್ನೊಂದು ವರ್ಷದ ಎಳೆ ಬಾಲಕ ಘಟನೆಯಿಂದ ಮಾನಸಿಕ ತೊಂದರೆಗೊಳಗಾಗಿದ್ದ. ಫೋಷಕರು ಮಣಿಪಾಲದ ಮಾನಸಿಕ ವೈದ್ಯರ ಬಳಿ ಕೌನ್ಸೆಲಿಂಗ್ ಮಾಡಿಸಿದ ಸಂದರ್ಭ ತನ್ನ ಮೇಲಾದ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಹೇಳಿದ್ದ. ಫೋಷಕರು ಬಾಲಕನನ್ನು ವಿಚಾರಿಸಿದಾಗ ಚಂದ್ರ ಹೆಮ್ಮಾಡಿಯ ದುಷ್ಕೃತ್ಯ ಬಯಲಿಗೆ ಬಂದಿತ್ತು. ಆ ಬಳಿಕ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿತ್ತು.

ನವೆಂಬರ್ 2018ರಲ್ಲಿ ಆರೋಪಿ ಚಂದ್ರನನ್ನು ಪೋಕ್ಸೊ ಕಾಯ್ದೆಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದದಲ್ಲಿ ಬೈಂದೂರು ಸಿಪಿಐ ಆಗಿದ್ದ ಪರಮೇಶ್ವರ ಆರ್. ಗುನಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, 36ಸಾಕ್ಷಿಗಳಲ್ಲಿ ಬಾಲಕನ ಸಹಿತ 15ಮಂದಿ ಸಾಕ್ಷಿ ನುಡಿದಿದ್ದರು. ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರ್ ಅಭಿಯೋಜಕ ವೈ.ಟಿ. ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

ಈ ಘಟನೆ ಬೆನ್ನಲ್ಲೇ ಅನೇಕ ಬಾಲಕರು ತಮ್ಮ ಪೋಷಕರಿಗೆ ಈತ ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಹೇಳಿದ್ದು, ಪೋಕ್ಸೊ ಕಾಯ್ದೆ ಅನ್ವಯ ವಿವಿಧ ಪೊಲೀಸ್ ಠಾಣೆಗಳಲ್ಲಿ 21ಪ್ರಕರಣಗಳು ದಾಖಲಾಗಿದ್ದವು. ಆರೋಪಿಯೊಬ್ಬನ ವಿರುದ್ಧ ದಾಖಲಾದ ಗರಿಷ್ಠ ಪೋಕ್ಸೋ ಪ್ರಕರಣಗಳು ಇದಾಗಿವೆ.

 

Get real time updates directly on you device, subscribe now.