ಉಡುಪಿ: ಪೌರ ಕಾರ್ಮಿಕರಿಗೆ ಹಲ್ಲೆ, ಇಬ್ಬರ ಬಂಧನ

ಸಾಮಾಜಿಕ ಮಾಧ್ಯಮದಲ್ಲಿ ಈ ಹಲ್ಲೆ ತೀವೃ ಖಂಡನೆಗೆ ಒಳಗಾಗಿದ್ದು, ಜನರು ಹಲ್ಲೆಗೈದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಪೌರ ಕಾರ್ಮಿಕರ ಶ್ರಮವನ್ನು ಗೌರವಿಸಬೇಕು. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕಸ ಸಂಗ್ರಹಕ್ಕೆ ಸಂಬಂಧಿಸಿ ನಗರ ಸಭೆಯ ಕಸ ಸಂಗ್ರಹಿಸುವ ಕಾರ್ಮಿಕರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಕಾರ್ಮಿಕರಾದ ನಿಟ್ಟೂರಿನ ಸಂಜು ಮಾದರ ಅವರು ಸಹಾಯಕರಾದ ಹನುಮಂತ ಮತ್ತು ರವಿ ಎಂಬವರೊಂದಿಗೆ ಕಸ ವಿಲೇವಾರಿ ಮಾಡುವಾಗ ಹಲ್ಲೆಗೊಳಗಾಗಿದ್ದು, ಹಲ್ಲೆಗೈದ ಆಸ್ಮಾ ಇಲೆಕ್ಟ್ರಾನಿಕ್ಸ್ ಮಳಿಗೆಯ ನೇಜಾರಿನ ಇಸ್ಮಾಯಿಲ್ ಮತ್ತು ಹೂಡೆಯ ಸೋಹೇಲ್ ಎಂಬವರನ್ನು ಬಂಧಿಸಲಾಗಿದೆ.

ಸಿಟಿ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹದ ವಾಹನದೊಂದಿಗೆ ಎಂದಿನಂತೆ ಸಂಜು ಅವರು ಹೋಗಿದ್ದಾಗ ಆರೋಪಿಗಳ ಅಂಗಡಿಯಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಪ್ರಶ್ನಿಸಿದ್ದರು. ಒಣ ಮತ್ತು ಹಸಿ ಕಸ ವಿಂಗಡಿಸಿ ಕೊಡುವಂತೆ ಅಂಗಡಿ ಮಾಲಕರಿಗೆ ಹೇಳಿದ್ದರು. ಈ ಬಗ್ಗೆ ಸಂಜು ಮತ್ತು ಅಂಗಡಿಯವರಿಗೆ ವಾಗ್ವಾದ ನಡೆದಿದ್ದು, ಇಸ್ಮಾಯಿಲ್ ಮತ್ತು ಸೋಹೆಲ್ ಸಂಜುಗೆ ಸಾರ್ವಜನಿಕವಾಗಿ ಹಲ್ಲೆಗೈದಿದ್ದರು. ಆರೋಪಿಗಳ ವಿರುದ್ಧ ಪ.ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆಗೈದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದರು. ಹಲ್ಲೆಗೈದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎಸ್ಪಿ ವಿಷ್ಣುವರ್ಧನ್ ಅವರಿಗೂ ತಿಳಿಸಿದ್ದರು. ಪೌರ ಕಾರ್ಮಿಕರ ಶ್ರಮವನ್ನು ಗೌರವಿಸಬೇಕು. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಹಲ್ಲೆ ತೀವೃ ಖಂಡನೆಗೆ ಒಳಗಾಗಿದ್ದು, ಜನರು ಹಲ್ಲೆಗೈದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

 

Get real time updates directly on you device, subscribe now.