ಯಾವುದೇ ಬ್ಲ್ಯಾಂಕ್ ಚೆಕ್ ಪಡೆದಿಲ್ಲ. ಬಡ್ಡಿ ವ್ಯವಹಾರ ನಾನು ಮಾಡಲ್ಲ: ವಕೀಲ ಸದಾನಂದ ಶೆಟ್ಟಿ ಸ್ಪಷ್ಟನೆ

ವಕಾಲತ್ತು ಬಿಟ್ಟರೆ ನನಗೆ ಬೇರೆ ವ್ಯವಹಾರವಿಲ್ಲ

ಸದಾನಂದ ಉಪ್ಪಿನಕುದ್ರು ನನ್ನ ಮೇಲೆ ಮಾನಹಾನಿಕರ ಮತ್ತು ಸುಳ್ಳು ಆರೋಪಗಳನ್ನು ಜಗದ್ವಿಖ್ಯಾತ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಾಡಿದ್ದಾರೆ. ಇದರ ಹಿನ್ನೆಲೆ ಏನು, ಉದ್ದೇಶವೇನು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು ಅವರಿಗೆ ನಾನು ಬಡ್ಡಿಯಲ್ಲಿ ಯಾವುದೇ ಸಾಲ ನೀಡಿಲ್ಲ. ಅವರಿಂದ ಯಾವುದೇ ಬ್ಲ್ಯಾಂಕ್ ಚೆಕ್ ಪಡೆದಿಲ್ಲ. ಜಾಗ ಖರೀದಿಯ ವ್ಯವಹಾರದಲ್ಲಿ ಅವರು ನೀಡಿದ ಚೆಕ್‌ಗಳು ಬೌನ್ಸ್ ಆಗಿದ್ದು ಆ ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ಸದಾನಂದ ಶೆಟ್ಟಿ ಹೇಳಿದ್ದಾರೆ. ಶುಕ್ರವಾರ ಕೊಲ್ಲೂರಿನಲ್ಲಿ ಪತ್ರಿಕಾಗೋಷ್ಟಿ ಕರೆದು ತನಗೆ ಸದಾನಂದ ಶೆಟ್ಟಿ ವಂಚನೆ ಮಾಡಿದ್ದಾರೆ ಎಂದು ಸದಾನಂದ ಉಪ್ಪಿನಕುದ್ರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಕೀಲ ಸದಾನಂದ ಶೆಟ್ಟಿ ಶನಿವಾರ ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಸದಾನಂದ ಉಪ್ಪಿನಕುದ್ರು ನನ್ನ ಮೇಲೆ ಮಾನಹಾನಿಕರ ಮತ್ತು ಸುಳ್ಳು ಆರೋಪಗಳನ್ನು ಜಗದ್ವಿಖ್ಯಾತ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಾಡಿದ್ದಾರೆ. ಇದರ ಹಿನ್ನೆಲೆ ಏನು, ಉದ್ದೇಶವೇನು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಸದಾನಂದ ಉಪ್ಪಿನಕುದ್ರು ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಸದಾನಂದ ಶೆಟ್ಟಿ ಹೇಳಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಅವರು ನೀಡಿಲ್ಲ, ಸಾಕ್ಷ್ಯ ಅವರ ಬಳಿ ಇಲ್ಲ ಎಂದು ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಸದಾನಂದ ಉಪ್ಪಿನಕುದ್ರು ಅವರಿಗೆ ಬಾಡಿಗೆಗೆ ಜಾಗ ನೀಡಿದ್ದೆವು
ಸದಾನಂದ ಉಪ್ಪಿನಕುದ್ರು ಅವರು ವ್ಯವಹಾರ ನಡೆಸಲು ನಮ್ಮ ಕುಟುಂಬಕ್ಕೆ ಸೇರಿದ್ದ ಜಾಗವೊಂದನ್ನು ಹತ್ತು ವರ್ಷಗಳ ಕಾಲ ಬಾಡಿಗೆಗೆ ಕೇಳಿದ್ದರು. ತಿಂಗಳೊಂದರ ಬಾಡಿಗೆ 35 ಸಾವಿರ ಎಂದು ನಿಗದಿಪಡಿಸಿ ಅವರಿಗೆ ಬಾಡಿಗೆ ನೀಡಿದ್ದೆವು. ಆ ಬಳಿಕ ನನಗೂ ಅವರ ಜೊತೆ ಉತ್ತಮ ಸಂಬಂಧ ಬೆಳೆದಿತ್ತು. ಅವರ ಬಳಿ ಇದ್ದ ಜಾಗವೊಂದನ್ನು ನಮ್ಮ ಕುಟುಂಬ ಖರೀದಿ ಮಾಡಿತು. ಈ ಕುರಿತು ಅವರಿಗೆ 40 ಲಕ್ಷ ರೂಪಾಯಿಗಳನ್ನು ಸಂದಾಯ ಮಾಡಿದ್ದೆವು. ಈ ಕುರಿತು ಒಪ್ಪಂದವನ್ನೂ ಮಾಡಿಕೊಂಡು ನೋಂದಣಿ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ತನಗೆ ಆ ಜಾಗ ಮಾರಲು ಮನಸ್ಸಿಲ್ಲ, ನಿಮಗೆ ನಿಮ್ಮ ದುಡ್ಡು ವಾಪಾಸು ಕೊಡುತ್ತೇನೆ ಎಂದಾಗ ನಾನು ಅದಕ್ಕೆ ಒಪ್ಪಿದ್ದೆ. ನಾನು ಕೊಟ್ಟ 40 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಲು ಅವರು ನನಗೆ ಒಟ್ಟು ಮೂರು ಚೆಕ್ ನೀಡಿದ್ದರು. ಆ ಪೈಕಿ ಹತ್ತು ಲಕ್ಷ ರೂಪಾಯಿಗಳ ಒಂದು ಚೆಕ್ ನಗದಿಯಾಯಿತು ಬಿಟ್ಟರೆ ಉಳಿದ ಒಟ್ಟು ಇಪ್ಪತ್ತೈದು ಲಕ್ಷಕ್ಕೆ ನೀಡಿದ ಎರಡು ಚೆಕ್‌ಗಳು ಬೌನ್ಸ್ ಆಗಿ ಹಣ ಸಿಗಲಿಲ್ಲ. ಈ ಕುರಿತು ಅವರಿಗೆ ಫೋನ್ ಮಾಡಿದಾಗ ಅವರು ಹಣ ನೀಡುತ್ತೇನೆ ಎನ್ನುವ ಭರವಸೆ ನೀಡಿದರು ವಿನಃ ಹಣ ನನಗೆ ಬರಲಿಲ್ಲ. ಆ ಬಳಿಕ ಕಾನೂನು ಕ್ರಮಕ್ಕೆ ಮುಂದಾಗಿ ನಾನು ಕೋರ್ಟ್‌ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಆ ಬಳಿಕ ನನಗೆ ಅವರು ಐದು ಲಕ್ಷ ರೂಪಾಯಿ ಚೆಕ್ ಮೂಲಕ ನೀಡಿದರು. ಆದರೆ ಉಳಿದ ಹಣ ಹಾಗೆಯೆ ಉಳಿದು ಪ್ರಕರಣವೂ ಮುಂದುವರಿಯಿತು. ಇಷ್ಟು ವ್ಯವಹಾರ ಬಿಟ್ಟರೆ ನನಗೆ ಸದಾನಂದ ಉಪ್ಪಿನಕುದ್ರು ಅವರ ಜೊತೆ ಯಾವುದೇ ವ್ಯವಹಾರ ಇಲ್ಲ ಎಂದು ಸದಾನಂದ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.

ಫೋರ್ಜರಿ ಸಹಿ ಮಾಡಿ ಮೋಸ
ಸದಾನಂದ ಉಪ್ಪಿನಕುದ್ರು ಅವರಿಗೆ ನಾವು ವ್ಯವಹಾರ ನಡೆಸಲು ನೀಡಿದ್ದ ಬಾಡಿಗೆ ಜಾಗವನ್ನು ನಮ್ಮ ಗಮನಕ್ಕೆ ತಾರದೆ ನಮ್ಮ ಕುಟುಂಬ ಸದಸ್ಯರ ಫೋರ್ಜರಿ ಸಹಿ ಮಾಡಿ ಸದಾನಂದ ಉಪ್ಪಿನಕುದ್ರು ರಾಜಸ್ಥಾನದ ವ್ಯಕ್ತಿಯೋರ್ವರಿಗೆ ಬಾಡಿಗೆಗೆ ಕರಾರು ಮಾಡಿ ಪರಭಾರೆ ಮಾಡಿದರು. ಇದು ನಮ್ಮ ಗಮನಕ್ಕೆ ಬಂದ ಬಳಿಕ ನಾವು ಸದಾನಂದ ಉಪ್ಪಿನಕುದ್ರು ಅವರ ಜೊತೆ ಮಾಡಲಾದ ಬಾಡಿಗೆ ಕರಾರನ್ನು ರದ್ದು ಮಾಡಿದೆವು. ರಾಜಸ್ಥಾನದ ವ್ಯಕ್ತಿಗೂ ಸದಾನಂದ ಉಪ್ಪಿನಕುದ್ರು ಅವರಿಂದ ಮೋಸಹೋದ ವಿಷಯ ತಿಳಿದು ಬಳಿಕ ಅವರಿಗೆ ನಾವೇ ನೇರವಾಗಿ ಆ ಜಾಗವನ್ನು ಬಾಡಿಗೆಗೆ ನೀಡಿದೆವು. ಸದಾನಂದ ಉಪ್ಪಿನಕುದ್ರು ಹೀಗೆ ಫೋರ್ಜರಿ ಮಾಡಿದರೂ ಸಹ ನಾನು ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ. ಅವರಿಂದ ನನಗೆ ಬರಬೇಕಾದ ಹಣದ ಕುರಿತು ಬಿಜೆಪಿ ಮುಖಂಡರ ಸಮ್ಮುಖ ಮಾತುಕತೆ ನಡೆದು ಅವರಿಗೂ ಸದಾನಂದ ಉಪ್ಪಿನಕುದ್ರು ಅವರು ನನಗೆ ವಂಚನೆ ಮಾಡಿರುವುದು ಗಮನಕ್ಕೆ ಬಂದು ಅವರೆಲ್ಲರೂ ಸದಾನಂದ ಉಪ್ಪಿನಕುದ್ರು ಅವರಿಗೆ ಬುದ್ದಿ ಹೇಳಿದ್ದರು ಎಂದು ಸದಾನಂದ ಶೆಟ್ಟಿ ಹೇಳಿದರು.

ವಕಾಲತ್ತು ಬಿಟ್ಟರೆ ನನಗೆ ಬೇರೆ ವ್ಯವಹಾರವಿಲ್ಲ
ಕುಂದಾಪುರದಲ್ಲಿ ಕಳೆದ 35 ವರ್ಷಗಳಿಂದ ವಕೀಲನಾಗಿ ದುಡಿಯುತ್ತಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ನನ್ನ ವೃತ್ತಿಗೆ ನ್ಯಾಯ ಒದಗಿಸಿದ್ದೇನೆ. ಬಡ್ಡಿ ವ್ಯವಹಾರ ನಾನು ಎಂದಿಗೂ ಮಾಡಿಲ್ಲ. ಯಾರಿಂದಲೂ ಯಾವುದೇ ಬ್ಲ್ಯಾಂಕ್ ಚೆಕ್ ನಾನು ಪಡೆದಿಲ್ಲ. ನನಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಸುಕುಮಾರ ಶೆಟ್ಟರು ಸಹ ನನ್ನ ಮತ್ತು ಸದಾನಂದ ಉಪ್ಪಿನಕುದ್ರು ಅವರ ವ್ಯಾವಹಾರಿಕ ಸಂಬಂಧಗಳಲ್ಲಿ ಯಾವತ್ತೂ ಮಧ್ಯೆ ಬಂದವರಲ್ಲ. ಸದಾನಂದ ಉಪ್ಪಿನಕುದ್ರು ಅವರು ನನ್ನ ಮೇಲೆ ಮಾಡಿರುವ ಮಾನಹಾನಿಕರ ಆರೋಪಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ನಾನು ಚಿಂತನೆ ನಡೆಸಿದ್ದೇನೆ ಎಂದ ಸದಾನಂದ ಶೆಟ್ಟಿ ಕೊಲ್ಲೂರಿನಂತಹ ಪವಿತ್ರ ದೇವಾಲಯವನ್ನು ಇಂತಹ ಸುಳ್ಳು ಆರೋಪಗಳನ್ನು ಮಾಡುವುದಕ್ಕೆ ಬಳಸಿಕೊಂಡಿದ್ದು ಖಂಡನಾರ್ಹ ಎಂದು ಹೇಳಿದರು.

ಇಷ್ಟೆಲ್ಲ ಆರೋಪ ಮಾಡಿರುವ ಸದಾನಂದ ಅವರಿಗೆ ಈ ಕ್ರಿಮಿನಲ್ ಬುದ್ದಿಯಿಂದ ದೇವರು ಮುಕ್ತಿಕೊಡಲಿ, ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುವಂತಾಗಲಿ, ಅವರ ಕುಟುಂಬಕ್ಕೆ ನಾನೆಂದು ಕೇಡು ಬಯಸಲಾರೆ, ನನ್ನ ಹಣ ನನಗೆ ಬರಬೇಕೆಂಬುದು ಮಾತ್ರ ನನ್ನ ಹೋರಾಟ ಬಿಟ್ಟರೆ ಬೇರೆ ಯಾವುದೇ ಉದ್ದೇಶ ನನಗಿಲ್ಲ ಎಂದು ಸದಾನಂದ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸದಾನಂದ ಶೆಟ್ಟಿ ದಾಖಲೆಗಳನ್ನು  ನೀಡಿದರು.

Get real time updates directly on you device, subscribe now.