ಕೋವಿಡ್-19 ಹೆಸರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಭ್ರಷ್ಟಾಚಾರ: ಮಾಜಿ ಸಂಸದ ಧ್ರುವ ನಾರಾಯಣ

ಚಪ್ಪಾಳೆ, ಜಾವಟೆ, ಕ್ಯಾಂಡಲ್ ಹಚ್ಚುವುದರಿಂದ ಕೊರೊನಾ ಓಡಿಸಲು ಸಾಧ್ಯವೆ?

ಅಗತ್ಯ ಸೇವೆಗಳನ್ನು ಕಲ್ಪಿಸುವಲ್ಲಿ ಭ್ರಷ್ಟಾಚಾರವೆಸಗುತ್ತಿವೆ ಎಂದು ಮಾಜಿ ಲೋಕಸಭಾ ಸದಸ್ಯ ಧ್ರುವ ನಾರಾಯಣ ಕಿಡಿ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕುಮಟಾ: ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಅಗತ್ಯ ಸೇವೆಗಳನ್ನು ಕಲ್ಪಿಸುವಲ್ಲಿ ಭ್ರಷ್ಟಾಚಾರವೆಸಗುತ್ತಿವೆ ಎಂದು ಮಾಜಿ ಲೋಕಸಭಾ ಸದಸ್ಯ ಧ್ರುವ ನಾರಾಯಣ ಕಿಡಿ ಕಾರಿದ್ದಾರೆ.

ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವೈರಾಣು ವಿಶ್ವದ ಕೆಲವು ರಾಷ್ಟಗಳಲ್ಲಿ ವಿಪರೀತಗೊಂಡಾಗ ಕೆಲವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದ ಸರ್ಕಾರ ದೇಶಕ್ಕೆ ಕೊರೊನಾ ಲಗ್ಗೆ ಇಟ್ಟಾಗ ನಿಯಂತ್ರಿಸಲು ಮುಂದಾಗಿರುವುದೇ ವೈಫಲ್ಯತೆಗೆ ಕಾರಣ. ವಿಶ್ವದ ಕೆಲವು ರಾಷ್ಟçಗಳು ಕೊರೋನಾ ಪರಿಸ್ಥಿತಿಯನ್ನು ಬಹಳ ಅತ್ಯುತ್ತಮವಾಗಿ ನಿರ್ವಹಿಸಿವೆ. ಹಾಗಾಗಿ ಆ ದೇಶಗಳ ಆರ್ಥಿಕ ಸ್ಥಿತಿ ಇನ್ನು ಉತ್ತಮವಾಗಿದೆ. ಆದರೆ ನಮ್ಮ ಸರ್ಕಾರದ ಆರ್ಥಿಕತೆ ಪಾತಾಳಕ್ಕೆ ಇಳಿಯುವಂತಾಗಿದೆ. ಜನರನ್ನು ಬೀದಿಪಾಲು ಮಾಡಿ, ಮಾನವೀಯತೆಯನ್ನು ಮರೆತ ಸರ್ಕಾರ ಎಂದು ಅವರು ಜರಿದರು.

ಕೊರೊನಾ ನಿರ್ವಹಣೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ರೂಪಿಸಿ ಇದಕ್ಕೆ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು, ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಸುಮಾರು 8500 ಆರೋಗ್ಯ ಹಸ್ತ ಕಿಟ್‌ನ್ನು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುರಿಂದ ಅದನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿದೆ. ಹಾಗಾಗಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಕ್ರೀಯಾಶೀಲವಾಗಿ ನಡೆಸುತ್ತಿದ್ದೇವೆ. ಆರೋಗ್ಯ ಹಸ್ತ ಸಮಿತಿಯ ಸಂಚಾಲಕನಾಗಿರುವ ನಾನು ಈಗಾಗಲೇ 13 ಜಿಲ್ಲೆಗಳ ಪ್ರವಾಸ ಮುಗಿಸಿದ್ದೇನೆ. ಇನ್ನು ಉಳಿದ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಆರೋಗ್ಯ ಹಸ್ತ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ವಾರಿಯರ್ಸ್  ಹಾಗೂ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೆರ್, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಸೇರಿದಂತೆ ಹಲವರಿದ್ದರು.

Get real time updates directly on you device, subscribe now.