ಮಾದರಿ ಯುವ ಕೃಷಿಕ ವೀರೇಶ್ ನಾಯ್ಕಗೆ ರಾಜ್ಯ ಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿ

ಧಾರವಾಡ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕೆ ವೀರೇಶ್ ಅವರನ್ನು ಆಯ್ಕೆಗೊಳಿಸಲಾಗಿತ್ತು.

ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ ಹಳಿಯಾಳ, ಜೊಯಿಡಾ ಹಾಗೂ ಧಾರವಾಡ ಭಾಗಗಳಲ್ಲಿ ಜಮೀನು ಹೊಂದಿ ಬೇಸಾಯ ಮಾಡುತ್ತಿದ್ದಾರೆ. 

ಕರಾವಳಿ ಕರ್ನಾಟಕ ವರದಿ
ಕಾರವಾರ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ (ಬಿಎಸ್ಎನ್ಡಿಪಿ) ಕೊಡಮಾಡುವ ರಾಜ್ಯ ಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿಗೆ ಮಾದರಿ ಯುವ ಕೃಷಿಕ ವೀರೇಶ್ ನಾಯ್ಕ ಭಾಜನರಾಗಿದ್ದಾರೆ.

ರಾಜ್ಯದಲ್ಲಿ 8 ಮಂದಿಗೆ ಈ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಧಾರವಾಡ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕೆ ವೀರೇಶ್ ಅವರನ್ನು ಆಯ್ಕೆಗೊಳಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಸಾಧಕರಿಗೆ ಆಯಾ ಜಿಲ್ಲೆಯಲ್ಲಿಯೇ ಸರಳ ರೀತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ವಿದ್ಯಾನಗರ ಶಿರೂರು ಪಾಕರ್್ನ ಅಯ್ಯಪ್ಪ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿಎಸ್ಎನ್ಡಿಪಿಯ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ, ಧಾರವಾಡ ಡಿವೈಎಸ್ಪಿ ರವಿ ನಾಯ್ಕ, ಹಾವೇರಿ ಡಿವೈಎಸ್ಪಿ ವಿನೋದ್ ಮುಕ್ತೆದಾರ್, ಟಿ.ಡಿ.ನಾಯ್ಕ, ಚಂದ್ರಶೇಖರ್ ಡವಲಗಿ, ಆನಂದ ಪೂಜಾರಿ, ಹುಬ್ಬಳ್ಳಿ- ಧಾರವಾಡ ನಾಮಧಾರಿ ಬಿಲ್ಲವ ಈಡಿಗ ಸಮಾಜದ ಮುಖಂಡರಾದ ಡಿ.ಎನ್.ನಾಯ್ಕ, ವಿವೇಕ ಪೂಜಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವೀರೇಶ ನಾಯ್ಕ ಅವರು ಅಂಕೋಲಾ ಮೂಲದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ ನಾಯ್ಕ ಮತ್ತು ಶ್ಯಾಮಲಾ ನಾಯ್ಕ ದಂಪತಿಯ ಪುತ್ರರಾಗಿದ್ದು, ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ ಹಳಿಯಾಳ, ಜೊಯಿಡಾ ಹಾಗೂ ಧಾರವಾಡ ಭಾಗಗಳಲ್ಲಿ ಜಮೀನು ಹೊಂದಿ ಬೇಸಾಯ ಮಾಡುತ್ತಿದ್ದಾರೆ.

ವೀರೇಶ್ ಅವರ ಸಾಧನೆಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಹುಬ್ಬಳ್ಳಿ- ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ನಾಮಧಾರಿ, ಬಿಲ್ಲವ, ಈಡಿಗ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

***

ವೀರೇಶ್ ಅವರ ಬಗ್ಗೆ…

ಹಳ್ಳಿ ಬಿಟ್ಟು ಪಟ್ಟಣ ಸೇರುವ ಯುವಜನರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ಜೀವನ ಶೈಲಿಯ ಬೆನ್ನತ್ತಿರುವ ಯುವಕರು, ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತ ವೀರೇಶ ನಾಯ್ಕ ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ, ಬೇಸಾಯ ಮಾಡಿ ಯಶಸ್ಸು ಸಾಧಿಸಿದ್ದಾರೆ.

ಅವರು ಅಂಕೋಲಾ ಮೂಲದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ ನಾಯ್ಕ ಮತ್ತು ಶ್ಯಾಮಲಾ ನಾಯ್ಕ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮುಗಿಸಿ, ಮಾಧ್ಯಮಿಕ ಹಾಗೂ ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿರುವ ಇವರು, ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಪಿಎಂ)ನಲ್ಲಿ ವೃತ್ತಿಪರ ಸ್ನಾತಕೋತ್ತರ ಪದವಿ ಎಂಬಿಎ (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್)ಯಲ್ಲಿ ಉನ್ನತ ಶ್ರೇಯಾಂಕದೊಂದಿಗೆ ಉತ್ತೀರ್ಣರಾದರು.

ಭಾರತೀಯ ಆಡಳಿತ ಸೇವೆ (ಐಎಎಸ್) ಪರೀಕ್ಷೆಯನ್ನೆದುರಿಸಿ, ಪ್ರಿಲಿಮ್ಸ್ ಹಂತವನ್ನು ಯಶಸ್ವಿಯಾಗಿ ಪೂರೈಸಿ ಮೈನ್ಸ್ನಲ್ಲಿ ಸಂದರ್ಶನದವರೆಗೂ ತಲುಪಿದ್ದ ಇವರು, ಅಷ್ಟರಲ್ಲೇ ಕೃಷಿಯ ಸೆಳೆತಕ್ಕೂ ಒಳಗಾದರು. ವಿದೇಶಗಳಲ್ಲಿ ಅನುಸರಿಸುತ್ತಿರುವ ಕೃಷಿ ಪದ್ಧತಿ, ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಆ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ, ದೆಹಲಿಯಿಂದ ತಾಯ್ನಾಡಿ ಮರಳಿ ಕೃಷಿಯಲ್ಲಿ ತೊಡಗಿಕೊಂಡು, ಈಗ ಇದರಲ್ಲೇ ಸಂತೃಪ್ತಿ ಪಡುತ್ತಿದ್ದಾರೆ.

ಹಳಿಯಾಳದ ಕೆಸರೊಳ್ಳಿಯಲ್ಲಿ ‘ಗಂಗಾ ಸಸ್ಯಪಾಲನಾಲಯ’ ಆರಂಭಿಸಿ, ಸುಧಾರಿತ ತೆಂಗು, ಅಡಿಕೆ, ಬಾಳೆ, ಕಸಿ ಮಾಡಿದ ಮಾವು, ಹಲಸು, ಗೇರು, ಚಿಕ್ಕು, ಲಿಂಬು, ಕಾಳುಮೆಣಸು, ಏಲಕ್ಕಿ, ಶುಂಠಿ, ಪೇರಲ, ಅರಶಿನ, ಎಲೆಬಳ್ಳಿ, ಶ್ರೀಗಂಧ, ಸಾಗವಾನಿ, ಹೊನ್ನೆ, ನಂದಿ, ಕಿಂದಳ, ಸೀಸಂ ಹಾಗೂ ಸಾಂಬಾರು ಪದಾರ್ಥಗಳಾದ ಜಾಯಿಕಾಯಿ, ಲವಂಗ, ದಾಲ್ಚಿನಿ ಬೆಳೆಯುತ್ತಿದ್ದಾರೆ. ಇದರೊಂದಿಗೆ, ಎಮ್ಮೆ, ಆಕಳು, ಕುರಿ, ಕೋಳಿಯನ್ನು ಸಾಕಿರುವ ಅವರು, ಅದರ ಹಿಕ್ಕೆಯನ್ನು ಬಳಸಿ ಉತ್ತಮ ಸಾವಯವ ಗೊಬ್ಬರ ಉತ್ಪನ್ನ ಮಾಡುತ್ತಿದ್ದಾರೆ.

ಇವರ ಸಾರ್ಥಕ ಸಾಧನೆಯನ್ನು ಗುರುತಿಸಿ ದೇಶದ ಮಣ್ಣಿನ ಮಗನೆಂದೇ ಪ್ರಸಿದ್ಧರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ, ಸರಕಾರದ ‘ಆತ್ಮ ಯೋಜನೆಯಡಿ’ ತಾಲೂಕು ಮಟ್ಟದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ, ‘ಗಾವ್ಕರ್ ಮೆಮೋರಿಯಲ್ ಫೌಂಡೇಶನ್’ ವತಿಯಿಂದ ‘ಸಾಹಸಿ ಯುವಕ’, ಹುಬ್ಬಳ್ಳಿ- ಧಾರವಾಡ ನಾಮಧಾರಿ ಸಂಘದ ವತಿಯಿಂದ ನೀಡಲ್ಪಡುವ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯಲ್ಲಿ ಉತ್ತಮ ಸಂಶೋಧನೆಗಾಗಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ಕೂಡ ದೊರೆತಿದೆ. ಈ ಪ್ರಶ್ತಿಗಳ ಸಾಲಿಗೆ ಈಗ ಬ್ರಹ್ಮಶ್ರೀ ನಾರಾಯಣಗುರು ಪರಿಪಾಲನಾ ಸಂಘದಿಂದ ‘ಪರಿವರ್ತನಾ ಶ್ರೀ’ಯೂ ಸೇರಿದೆ.

 

 

 

Get real time updates directly on you device, subscribe now.