ಹರ್ಯಾಣ ಪಂಚಾಯತ್ ಚುನಾವಣೆಗೆ ಕನಿಷ್ಟ ವಿದ್ಯಾರ್ಹತೆಯ ಕಾಯ್ದೆ: ಮನುವಾದಿಗಳ ಹೊಸ ವರಸೆ

ಪಂಚಾಯತ್ ಚುನಾವಣೆಗೆ ವಿದ್ಯಾರ್ಹತೆ ಕಡ್ಡಾಯ ಮಾಡಿದ ಹರ್ಯಾಣ ಸರ್ಕಾರದ ಕಾಯ್ದೆ ತಳಸಮುದಾಯಗಳು ಮತ್ತು ಸ್ತ್ರೀಯರನ್ನು ಗ್ರಾಮಮಟ್ಟದ ಅಧಿಕಾರದಿಂದಲೂ ದೂರವಿಡಲು ಮಾಡಿದ ಷಡ್ಯಂತ್ರವೇ ಆಗಿದೆ

ಶಶಿಧರ ಹೆಮ್ಮಾಡಿ
ಪ್ರಿಯ ಓದುಗ,
ಹರ್ಯಾಣ ಸರ್ಕಾರ ಒಂದು ಜನವಿರೋಧಿ ಕರಾಳ ಕಾಯ್ದೆಯನ್ನು ರೂಪಿಸಿದೆ. ಅದಕ್ಕೆ ಈ ದೇಶದ ಸರ್ವೋಚ್ಛ ನ್ಯಾಯಾಲಯ ಕಣ್ಣು ಮುಚ್ಚಿ ಸಮ್ಮತಿ ನೀಡಿದೆ. ಇನ್ನು ಆ ಕಾಯ್ದೆ ಜಾರಿಗೆ ಬರುವುದೊಂದು ಬಾಕಿ. ಅಲ್ಲಿಗೆ ಹರ್ಯಾಣ ರಾಜ್ಯದ ಹಿಂದುಳಿದ ವರ್ಗಗಳು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪಾಲಿಗೆ ಈಗಾಗಲೇ ಕಿರಿದಾಗಿರುವ ಸಾಮಾಜಿಕ ನ್ಯಾಯದ ಚಿಕ್ಕ ಬಾಗಿಲು ಸಹ ಮುಕ್ಕಾಲು ಪಾಲು ಮುಚ್ಚಿದಂತಾಗುವುದು ಖಂಡಿತ.

ಹರ್ಯಾಣ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ಒಂದು ಹೊಸ ತಿದ್ದುಪಡಿಯನ್ನು ತಂದಿದೆ. ಈ ತಿದ್ದುಪಡಿಯ ಪ್ರಕಾರ ಹರ್ಯಾಣ ರಾಜ್ಯದಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕನಿಷ್ಟ ವಿದ್ಯಾರ್ಹತೆ ಪಡೆದಿರಲೇಬೇಕು. ಅಕ್ಷರಾಭ್ಯಾಸ ಮಾಡದ ಮಂದಿ ಬಿಡಿ, ಶಾಲೆಗೆ ಹೋದವರು ಸಹ ಇನ್ನು ಮುಂದೆ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಕಷ್ಟವಾಗಲಿದೆ. ಹರ್ಯಾಣ ಸರ್ಕಾರದ ಹೊಸ ಕಾಯ್ದೆಯ ಪ್ರಕಾರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 10ನೇ ತರಗತಿ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಟ 8ನೇ ತರಗತಿ ಮತ್ತು ದಲಿತ ಮಹಿಳೆಯರು ಕನಿಷ್ಟ 5ನೇ ತರಗತಿ ಓದಿರಬೇಕು. ಈ ಕನಿಷ್ಟ ವಿದ್ಯಾರ್ಹತೆ ಪಡೆದಿರದ ಯಾರೂ ಸಹ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇಂತಹ ಒಂದು ಕಾಯ್ದೆಯನ್ನು ಕರಾಳ ಜನವಿರೋಧಿ ಕಾಯ್ದೆ ಎನ್ನದೆ ಬೇರೇನು ಹೇಳುವುದು?

ನಮ್ಮ ಮಧ್ಯಮ ವರ್ಗದ ಜನ ಮತ್ತು ನಗರವಾಸಿಗಳು ಇದು ನಿಜಕ್ಕೂ ಉತ್ತಮ ಕಾಯ್ದೆ, ಕನಿಷ್ಟ ವಿದ್ಯಾರ್ಹತೆ ಎಲ್ಲರಿಗೂ ಬೇಕು ಎಂದು ಹರ್ಯಾಣ ಸರ್ಕಾರದ ಈ ಕ್ರಮಕ್ಕೆ ಮುಕ್ತ ಪ್ರಶಂಸೆ ನೀಡಬಹುದು. ವಿದ್ಯಾರ್ಹತೆ ನಿಗದಿ ಮಾಡುವುದರಲ್ಲಿ ತಪ್ಪೇನಿದೆ? ಸಾರ್ವಜನಿಕ ಕೆಲಸವನ್ನು ಮಾಡುವ ಪಂಚಾಯತ್‌ ಸದಸ್ಯರಿಗೆ ವಿದ್ಯಾರ್ಹತೆ ಇಲ್ಲದಿದ್ದರೆ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುವುದಾದರೂ ಹೇಗೆ? ಹೀಗೆಲ್ಲ ವಾದ ಮಾಡುವುದು ಬಹಳ ಸುಲಭ. ಆದರೆ ವಾಸ್ತವ ಮಾತ್ರ ಕಠೋರವಾಗಿಯೇ ಇರುತ್ತದೆ.
ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಕ್ಯಾಬಿನೆಟ್ ಸಚಿವ, ಮುಖ್ಯಮಂತ್ರಿ, ರಾಜ್ಯ ಸಚಿವರು, ಸಂಸದರು, ಶಾಸಕರು ಹೀಗೆ ಈ ಯಾವುದೇ ಹಂತದ ಜನಪ್ರತಿನಿಧಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಕನಿಷ್ಟ ವಿದ್ಯಾರ್ಹತೆ ಈ ದೇಶದಲ್ಲಿ ನಿಗದಿಪಡಿಸಲಾಗಿಲ್ಲ. ಓರ್ವ ಅನಕ್ಷರಸ್ಥ ಕೂಡ ಈ ದೇಶದ ಪ್ರಧಾನಿಯಾಗಬಹುದು. ದೇಶವಿದೇಶಗಳ ಹತ್ತಾರು ವಿಷಯಗಳಲ್ಲಿ ವ್ಯವಹರಿಸಬೇಕಾದ ಸಚಿವರುಗಳಿಗೆ ಕೂಡ ವಿದ್ಯಾರ್ಹತೆ ನಿಗದಿಯಾಗಿಲ್ಲ. ಆದರೆ ತಮ್ಮ ಹಳ್ಳಿಯ ನೆರೆಹೊರೆಯಲ್ಲಿ ವ್ಯವಹರಿಸುವ ಪಂಚಾಯತ್ ಸದಸ್ಯರು ಮಾತ್ರ ಕನಿಷ್ಟ 10ನೇ ಕ್ಲಾಸು ಕಲಿತಿರಲೇಬೇಕು ಎಂದು ಕಾಯ್ದೆ ಮಾಡುವುದು ಅದೆಷ್ಟು ಸರಿ ಎನ್ನುವುದು ಪ್ರಶ್ನೆ. ಕನಿಷ್ಟ 5-6ನೇ ತರಗತಿಯ ವರೆಗೂ ಓದದ ಅನೇಕಾನೇಕ ರಾಜಕಾರಣಿಗಳು ಈ ದೇಶದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ನಿದರ್ಶನಗಳು ಕೇರಳದಿಂದ ಕಾಶ್ಮೀರದ ವರೆಗೂ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಈ ದೇಶದ ಕೆಲ ಪ್ರಧಾನಿಗಳು ಪದವಿ ತನಕ ಶಿಕ್ಷಣ ಪಡೆದವರೂ ಅಲ್ಲ. ಈಗಿನ ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮುಂತಾದವರು ಎಷ್ಟು ಕಲಿತಿದ್ದಾರೆಂಬುದು ಇನ್ನೂ ಈ ದೇಶದ ಜನತೆಗೆ ಗೊತ್ತಿಲ್ಲ.

ಹರ್ಯಾಣ ಸರ್ಕಾರದ ಕಾಯ್ದೆಯನ್ನು ಪಾಲಿಸಿದರೆ ಬಹುಶಃ ಈ ದೇಶದಲ್ಲಿ ಆಗಿ ಹೋದ ಮತ್ತು ಈಗ ಕಾರ್ಯನಿರ್ವಹಿಸುತ್ತಿರುವ ಅನೇಕ ಸಚಿವರು, ಸಂಸದರು, ಮುಖ್ಯಮಂತ್ರಿಗಳು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲೂ ಸಹ ನಾಲಾಯಕ್ಕು! ಇನ್ನೂ ವಿಚಿತ್ರವೆಂದರೆ ಈ ಕಾಯ್ದೆಯನ್ನು ರೂಪಿಸಿರುವ ಹರ್ಯಾಣ ರಾಜ್ಯದ ವಿಧಾನಸಭೆಯಲ್ಲಿ ಓರ್ವ ಬಿಜೆಪಿ ಶಾಸಕ ತಮ್ಮ ಚುನಾಣಾ ಅಫಿದವಿತ್‌ನಲ್ಲೇ ತಾನು ಅನಕ್ಷರಸ್ಥ ಎಂದು ಘೋಷಿಸಿಕೊಂಡಿದ್ದಾರೆ. ಇನ್ನೂ ನಾಲ್ವರು ಶಾಸಕರು 8ನೇ ತರಗತಿ ಕೂಡ ಪಾಸಾಗಿಲ್ಲ. ಕೆಲವರು 10ನೇ ತರಗತಿಯ ತನಕ ಮಾತ್ರ ಕಲಿತವರು. 90 ಮಂದಿ ಸದಸ್ಯರ ಹರ್ಯಾಣ ವಿಧಾನಸಭೆಯಲ್ಲಿ 32% ಶಾಸಕರು ಪದವೀಧರರಲ್ಲ. ಇಂತಹ ಶಾಸನಸಭೆ ಈಗ ಪಂಚಾಯತ್ ಅಭ್ಯರ್ಥಿಗಳಿಗೆ ಕನಿಷ್ಟ ವಿದ್ಯಾರ್ಹತೆ ನಿಗದಿಪಡಿಸಲು ಹೊರಟಿದೆ.

ಕಳೆದ 30-40 ವರ್ಷಗಳ ಹಿಂದೆ ಹರ್ಯಾಣದ ಹಲವು ಹಳ್ಳಿಗಳಲ್ಲಿ ಶಾಲೆಗಳೇ ಇರಲಿಲ್ಲ. ಅಂತಹ ಹಳ್ಳಿಗಳಲ್ಲಿರುವ ಈಗ 30ರ ಪ್ರಾಯ ದಾಟಿರುವ ಜನರು ಅದು ಹೇಗೆ 10ನೇ ತರಗತಿಯ ವರೆಗೆ ಓದಿರಲು ಸಾಧ್ಯ? ಅಂಥವರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲು ಹೇಗೆ ಸಾಧ್ಯ? ಎಲ್ಲರಿಗೂ ಶಿಕ್ಷಣ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರೆ ಖಂಡಿತವಾಗಿಯೂ ಹಳಿಗಳಲ್ಲಿ ಜನ ಶಾಲೆಗೆ ಹೇಗುತ್ತಿದ್ದರು. ಶಾಲೆಗಳೇ ಇಲ್ಲದ ಹಳ್ಳಿಗಳಲ್ಲಿ, ವಿದ್ಯಾಭ್ಯಾಸದ ಅವಕಾಶವೇ ಇರದ ಹಳ್ಳಿಗಳಲ್ಲಿ ಜನ ಈ ಕಾಯ್ದೆ ನಿಗದಿಪಡಿಸಿದಷ್ಟು ಶಿಕ್ಷಣ ಹೇಗೆ ಪಡೆಯಲು ಸಾಧ್ಯವಿತ್ತು? ಶಾಲೆ ಇದ್ದ ಹಳ್ಳಿಗಳಲ್ಲೂ ದಲಿತರು, ಮಹಿಳೆಯರು, ಆದಿವಾಸಿಗಳು ಶಿಕ್ಷಣ ಪಡೆಯಲು, ಶಾಲೆಗೆ ಬರಲು ಆಗ ಇದ್ದ, ಈಗಲೂ ಇರುವ ಅಡೆತಡೆಗಳೆಷ್ಟು. ಅಸಮಾನತೆ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ, ಧಾರ್ಮಿಕ ಕಟ್ಟುಪಾಡುಗಳು, ಮೌಢ್ಯ ಮನೆ ಮಾಡಿರುವ ಈ ದೇಶದಲ್ಲಿ ಎಲ್ಲರೂ ಶಿಕ್ಷಣ ಪಡೆಯುವುದು ಅಷ್ಟು ಸುಲಭ ಸಾಧ್ಯವೆ? ತಾವು ಶಾಲೆಗೆ ಹೋಗಲಿಲ್ಲ ಎಂಬ ಒಂದೇ ಕಾರಣಕ್ಕೆ ಇವರೆಲ್ಲರೂ ಈಗ ಚುನಾವಣೆಗೆ ಸ್ಪರ್ಧಿಸುವ, ತಮ್ಮ ಹಳ್ಳಿಗಳನ್ನು ಮುನ್ನಡೆಸುವ ಹಕ್ಕುಗಳಿಂದ ವಂಚಿತರಾಗುತ್ತಾರೆ ಮತ್ತು ಅದನ್ನು ಸುಪ್ರೀಂ ಕೋರ್ಟ್ ಸಮ್ಮತಿಸುತ್ತದೆ ಎಂದರೆ ಈ ಸುಪ್ರೀಂ ಕೋರ್ಟ್‌ಗೆ ಏನಾಗಿದೆ ಎಂದು ಕೇಳಲೇಬೇಕಲ್ಲವೆ?

ಹರ್ಯಾಣದ ನೀಮ್‌ಖೇಡಾ ಎಂಬ ಸಣ್ಣ ಹಳ್ಳಿಯನ್ನೇ ತೆಗೆದುಕೊಳ್ಳಿ. 1674 ಜನರು ವಾಸವಾಗಿರುವ ಈ ಹಳ್ಳಿಯ ಗ್ರಾಮ ಪಂಚಾಯತ್ ದೇಶದ ಮೊತ್ತಮೊದಲ ಸಂಪೂರ್ಣ ಮಹಿಳಾ ಪಂಚಾಯತ್ ಎಂದು 10 ವರ್ಷಗಳ ಹಿಂದೆ ಇತಿಹಾಸ ನಿರ್ಮಿಸಿತ್ತು. ಈ ಪಂಚಾಯತ್‌ನ ಮೊತ್ತಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಆಶುಬಿ ಖಾನ್ ಸ್ವತಃ ಅನಕ್ಷರಸ್ಥಾರಾದರೂ ಸಹ ಅವರು ಈ ಗ್ರಾಮದಲ್ಲಿ ಮಾಡಿದ ಕೆಲಸಗಳು ಅದ್ಭುತವಾಗಿತ್ತು. ಊರಿನ ಹೆಣ್ಮಕ್ಕಳನ್ನು ಶಾಲಗೆ ಕಳುಹಿಸುವುದು, 5ನೇ ತರಗತಿಯ ವರೆಗೆ ಇದ್ದ ಶಾಲೆಯನ್ನು 10ನೇ ತರಗತಿ ತನಕ ವಿಸ್ತರಿಸಿದ್ದು, ಗ್ರಾಮದ ವಿದ್ಯುದೀಕರಣ, ನೀರಿನ ವ್ಯವಸ್ಥೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಆಸುಬಿ ಖಾನ್ ಮನೆಮನೆಗೆ ತೆರಳಿ ಸ್ತ್ರೀಯರಲ್ಲಿ ಎಚ್ಚರ ಮೂಡಿಸಿದ್ದು ಹೀಗೆ ಹತ್ತು ಹಲವು ಬಗೆಯಲ್ಲಿ ನೀಮ್‌ಖೇಡಾದ ಸ್ವರೂಪವನ್ನೇ ಬದಲಿಸುವಲ್ಲಿ ಆಕೆ ಪ್ರಮುಖ ಪಾತ್ರ ವಹಿಸಿದರು. ಹಳ್ಳಿಗಳಲ್ಲಿ ಹೊಸ ರಸ್ತೆಗಳು ನಿರ್ಮಾಣವಾದವು. ಮೌಢ್ಯಾಚರಣೆಗಳ ವಿರುದ್ಧ ಆಂದೋಲನ ನಡೆಯಿತು. ಅಧಿಕಾರಿಗಳು ಮತ್ತು ಪತ್ರಕರ್ತರ ಎದುರು ಮಾತನಾಡಲು ನಡುಗುತ್ತಿದ್ದ ಆಸುಬಿ ಖಾನ್ ಎಷ್ಟು ಬದಲಾಗಿದ್ದರೆಂದರೆ ಜಿಲ್ಲೆಯ ಅನೇಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಆಕೆ ಬೆಳೆದಿದ್ದರು. ಹರ್ಯಾಣ ಸರ್ಕಾರದ ಹೊಸ ಕಾಯ್ದೆಯ ಪ್ರಕಾರ ಆಕೆಯೂ ಸೇರಿದಂತೆ ಈ ಪಂಚಾಯತ್‌ನ ಏಳು ಮಹಿಳೆಯರು ಮತ್ತು ಮೂವರು ಪುರುಷರು ಚುನಾವಣೆಗೆ ಸ್ಪರ್ಧಿಸಲು ಅನರ್ಹರು. ಈ ಪಂಚಾಯತ್‌ನ ಎಂಟು ಮಂದಿ ಸದಸ್ಯರು ಅನಕ್ಷರಸ್ಥರಾದರೆ ಇಬ್ಬರು ಪುರುಷ ಸದಸ್ಯರು 5ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇವರ್ಯಾರೂ ಸ್ಪರ್ಧಿಸುವಂತಿಲ್ಲ. ನೀಮ್‌ಖೇಡಾದಲ್ಲಿ ಸ್ತ್ರೀಯರಿಗಾಗಿ ಮೀಸಲಾಗಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅರ್ಹತೆ ಇರುವ ಕೇವಲ 3-4 ಮಹಿಳೆಯರಿದ್ದಾರೆ. ಅವರೆಲ್ಲರೂ ಸರ್ಕಾರದ ಸಣ್ಣ ಪುಟ್ಟ ನೌಕರಿಯಲ್ಲಿ ಇರುವ ಕಾರಣ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ತಮ್ಮ ನೌಕರಿಗೆ ತಿಲಾಂಜಲಿ ನೀಡಲು ಅವರು ಸಿದ್ಧರಿಲ್ಲ. ಅಭ್ಯರ್ಥಿಯಾಗುವ ಆಸಕ್ತಿಯೂ ಅವರಲ್ಲಿಲ್ಲ. ನೀಮ್‌ಖೇಡಾದ ವ್ಯಕ್ತಿಯೋರ್ವರು ಹೇಳುವಂತೆ ಈ ಗ್ರಾಮದಲ್ಲೀಗ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಜನರನ್ನು ಹೊರರಾಜ್ಯದಿಂದಲೇ ಕರೆದು ತರಬೇಕಾಗುತ್ತದೆ. 50 ವರ್ಷಗಳ ಹಿಂದೆ ನಾನು ಶಾಲಗೆ ಹೋಗುತ್ತೇನೆಂದು ಬಯಸಿದರೂ ನಮ್ಮೂರಿನಲ್ಲಿ ಆಗ ಶಾಲೆ ಇತ್ತೆ ಎಂದು ಆಸುಬಿ ಖಾನ್ ಪ್ರಶ್ನಿಸುತ್ತಾರೆ.

ನೀಮ್‌ಖೇಡಾ ಇರುವುದು ಹರ್ಯಾಣ ರಾಜ್ಯದಲ್ಲೇ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮೇವಟ್ ಜಿಲ್ಲೆಯಲ್ಲಿ. ಈ ಜಿಲ್ಲೆಯ 431 ಹಳ್ಳಿಗಳಲ್ಲಿ ಈಗಲೂ ಇರುವುದು 5ನೇ ತರಗತಿಯ ವರೆಗಿನ ಪ್ರಾಥಮಿಕ ಶಾಲೆಗಳು ಮಾತ್ರ. ಆದರೆ ಹರ್ಯಾಣ ಸರ್ಕಾರದ ಕಾಯ್ದೆಯ ಪ್ರಕಾರ ಈ ಹಳ್ಳಿಗಳಲ್ಲಿರುವ ಜನರು ಮಾತ್ರ ಪಂಚಾಯತ್ ಸದಸ್ಯರಾಗಬೇಕಾದರೆ 10ನೇ ತರಗತಿ ಪಾಸ್ ಆಗಿರಬೇಕು. ಮೇವಟ್ ಜಿಲ್ಲೆಯಲ್ಲಿ ಸರ್ಕಾರವೇ ನಡೆಸಿದ ಸಮೀಕ್ಷೆಯ ಪ್ರಕಾರ 5ರಿಂದ 8 ನೇ ತರಗತಿ ವರೆಗೆ ಕಲಿತವರ ಸಂಖ್ಯೆ 0.62 ಶೇಕಡಾ. ಅರ್ಥಾತ್ ಪಂಚಾಯತ್ ಚುನಾವಣ್ಗೆ ನಿಲ್ಲಲು ನೂರಕ್ಕೆ ಒಬ್ಬರೂ ಸಹ ಅರ್ಹರಿಲ್ಲ.

ಹರ್ಯಾಣ ಸರ್ಕಾರದ ಕಾಯ್ದೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೂ ಸಹ ವಿರುದ್ಧವಾಗಿದೆ. ಇಂತಹ ಕಾಯ್ದೆಗೆ ಸುಪ್ರೀಂ ಸಮ್ಮತಿಸಿದ್ದು ಸಹ ಇನ್ನೂ ವಿಚಿತ್ರವಾಗಿದೆ. ”ಶಿಕ್ಷಣ ಮಾತ್ರ ಮನುಷ್ಯನಿಗೆ ಸರಿ ಮತ್ತು ತಪ್ಪು, ಕೆಟ್ಟದು ಮತ್ತು ಒಳ್ಳೆಯದರ ನಡುವೆ ತಾರತಮ್ಯ ಮಾಡುವ ಅಧಿಕಾರ ನೀಡುತ್ತದೆ’ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಹಾಗಾದರೆ ಈ ದೇಶದ ಸುಶಿಕ್ಷಿತ ಜನಪ್ರತಿನಿಧಿಗಳೆಲ್ಲ ಒಳ್ಳೆಯದನ್ನೇ ಮಾಡಿದ್ದಾರೆಯೆ? ಕೇಂದ್ರದಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆಗಡುಕರು, ರೌಡಿ ಶೀಟರ್‌ಗಳು, ಭ್ರಷ್ಟರು, ಅತ್ಯಾಚಾರ ಆರೋಪಿಗಳೆಲ್ಲ ಸಂಸದರು, ಸಚಿವರು, ಶಾಸಕರು, ಕಾರ್ಪೊರೇಟರ್‌ಗಳಾಗಿಲ್ಲವೆ? ಕಡಿಮೆ ಶಿಕ್ಷಣ ಪಡೆದಿರುವ ಅಥವಾ ಅನಕ್ಷರಸ್ಥರಾಗಿರುವ ಅನೇಕ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಜನಪರವಾದ ಅದ್ಭುತ ಕೆಲಸಗಳನ್ನು ಮಾಡಿಲ್ಲವೆ? ಅತ್ಯುತ್ತಮ ಆಡಳಿತ ನಡೆಸಿಲ್ಲವೆ? ಜನಪ್ರತಿನಿಧಿಯೋರ್ವನಿಗೆ ಶಿಕ್ಷಣ ಮಾತ್ರ ಇದ್ದರೆ ಸಾಕೆ? ತಿಳುವಳಿಕೆ, ದೂರದೃಷ್ಟಿ, ಸಾಮಾಜಿಕ ಕಾಳಜಿ, ಜನಪರ ನಿಲುವುಗಳ ಬೇಡವೇ? ಇದೆಲ್ಲವೂ ಶಾಲಾ ಶಿಕ್ಷಣದಿಂದ ಮಾತ್ರ ಬರುತ್ತದೆಯೆ?

ಪಂಚಾಯತ್ ಚುನಾವಣೆಗಳು ನಡೆಯಬೇಕಾಗಿರುವುದು ಸಂವಿಧಾನಬದ್ದವಾದ ನೀತಿನಿಯಮಗಳ ಪ್ರಕಾರವೇ ವಿನಃ ಸರ್ಕಾರವೊಂದು ಸಂವಿಧಾನದ ಮೂಲ ಆಶಯಗಳನ್ನೇ ಧಿಕ್ಕರಿಸಿ ರೂಪಿಸಿದ ನಿಯಮಗಳ ಪ್ರಕಾರವಂತೂ ಅಲ್ಲ. ಜನಪ್ರತಿನಿಧಿ ಕಾಯ್ದೆ 1950ರ ಅಡಿಯಲ್ಲಿ ಬಾರದ ಈ ವಿದ್ಯಾರ್ಹತೆ ಮತ್ತು ನಿರ್ಬಂಧಗಳನ್ನು ಹರ್ಯಾಣ ಸರ್ಕಾರ ಯಾವ ಆಧಾರದಲ್ಲಿ ರೂಪಿಸಿದೆ ಎಂದು ಸುಪ್ರೀಂ ಪ್ರಶ್ನಿಸಬೇಕಾಗಿತ್ತು. ಶಾಸಕರು, ಸಂಸದರಿಗಿಲ್ಲದ ಕನಿಷ್ಟ ವಿದ್ಯಾರ್ಹತೆ ಪಂಚಾಯತ್ ಸದಸ್ಯರಿಗೆ ಮಾತ್ರ ಏಕೆ ಎಂದು ಕೇಳಬೇಕಾಗಿತ್ತು. ಆದರೆ ಸರ್ವೋಚ್ಛ ನ್ಯಾಯಾಲಯ ಈ ಅಂಶಗಳನ್ನೆಲ್ಲ ಪರಿಗಣಿಸದೆ ತೀರ್ಪು ನೀಡಿದೆ.

ಹರ್ಯಾಣದ ಬಿಜೆಪಿ ಸರ್ಕಾರ ರೂಪಿಸಿರುವ ಈ ಕನಿಷ್ಟ ವಿದ್ಯಾರ್ಹತೆಯ ಕಾಯ್ದೆ ಇಲ್ಲಿನ ತಳ ಸಮುದಾಯಗಳನ್ನು ಗ್ರಾಮ ಮಟ್ಟದ ಅಧಿಕಾರದಿಂದಲೂ ದೂರವಿಡುವ ಹುನ್ನಾರವಾಗಿದೆ ಎಂಬುದನ್ನು ನಾವು ಮುಖ್ಯವಾಗಿ ಗಮನಿಸಬೇಕಾಗಿದೆ. ಮನುವಾದವನ್ನು ಎತ್ತಿ ಹಿಡಿಯುವ ಭಾರತೀಯ ಜನತಾ ಪಕ್ಷ ಹರ್ಯಾಣದ ಆದಿವಾಸಿ, ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರು, ಮುಸ್ಲಿಮರನ್ನು ಗ್ರಾಮ ಪಂಚಾಯತ್ ಅಧಿಕಾರದಿಂದ ದೂರ ಇಡಲು ಹೂಡಿದ ಷಡ್ಯಂತ್ರ ಈ ಕರಾಳ ಕಾಯ್ದೆ. ಇಂದಿಗೂ ಭಾರತದ ಹಳ್ಳಿಗಳಲ್ಲಿ ಶಿಕ್ಷಣದಿಂದ ವಂಚಿತವಾಗಿರುವ ಸಮುದಾಯಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ ದಮನ ಮಾಡುವ ಹುನ್ನಾರ ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಸಂವಿಧಾನದ ಪ್ರಕಾರ ಇತರ ಹಿಂದುಳಿದ ವರ್ಗಗಳು ಎಂದರೆ “ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ” ಹಿಂದುಳಿದ ಜನ ಸಮುದಾಯಗಳು. ಮತ್ತು ಹೀಗೆ “ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ” ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು, ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವುದು ಸರ್ಕಾರದ ಜವಾಬ್ದಾರಿ ಎಂದೂ ಸಹ ಬಣ್ಣಿಸಲಾಗಿದೆ. ಹೀಗಿರುವಾಗ ಇಂತಹ ಸಮುದಾಯಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದಲೇ ವಂಚಿತವಾಗಿಸುವ ಪ್ರಯತ್ನ ಸಂವಿಧಾನಕ್ಕೆ ಬಗೆದ ಅಪಚಾರವೇ ಆಗುತ್ತದೆ.

ಪಂಚಾಯತ್ ರಾಜ್ ವ್ಯವಸ್ಥೆ ಭಾರತದ ಹಳ್ಳಿಗಳ ತಳ ಸಮುದಾಯದ ಜನರಿಗೆ ಅಧಿಕಾರ ನೀಡಿದೆ. ತಮ್ಮ ಹಕ್ಕುಗಳ ಬಗ್ಗೆ ಹೋರಾಡುವ, ತಮ್ಮ ಮುಂದಿನ ತಲೆಮಾರುಗಳು ಹೆಚ್ಚು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಭರವಸೆ ನೀಡಿದೆ. ತಮಗೆ ಸಿಗಬೇಕಾದ ಸವಲತ್ತು, ನೆರವುಗಳು ವ್ಯವಸ್ಥೆಯಲ್ಲಿರುವ ಭ್ರಷ್ಟರ ಪಾಲಾಗದೆ ನೇರವಾಗಿ ತನಗೆ ತಲುಪುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಲು ನೆರವಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಜನಪ್ರತಿನಿಧಿಗಳಾಗಿದ್ದು ಇದು ಪ್ರಪಂಚದ ಒಟ್ಟು ಮಹಿಳಾ ಜನಪ್ರತಿನಿಧಿಗಳ ಸಂಖ್ಯೆಗಿಂತಲೂ ಹೆಚ್ಚು.

ಮೇಲ್ನೋಟಕ್ಕೆ ಇದು ಪಂಚಾಯತ್‌ಗಳ ಆಡಳಿತ ಸುಧಾರಣೆ ಮಾಡಲು, ಹೆಚ್ಚು ಮಾಹಿತಿಯುಕ್ತ ನಿರ್ಧಾರಗಳನ್ನು ಮಾಡಲು ಅನುಕೂಲವಾಗುವಂತೆ ರೂಪಿಸಲಾದ ಕಾಯ್ದೆ ಎಂದು ಕಂಡುಬಂದರೂ ಅಂತರಂಗದಲ್ಲಿ ಇದು ಸಾಮಾಜಿಕ ನ್ಯಾಯವನ್ನು ಹೊಸಕಿ ಹಾಕುವ, ಸಮಾನತೆಯ ಆಶಯಗಳಿಗೆ ಕಿಚ್ಚು ಹಚ್ಚುವ ಕಾಯ್ದೆಯೇ ಆಗಿದೆ. ಹಿಂದುಳಿದವರನ್ನು ಇನ್ನಷ್ಟು ಹಿಂದಕ್ಕೆ ತಳ್ಳುವ ಮತ್ತು ಮೇಲ್ವರ್ಗದ ಮಂದಿ ಹಿಂದುಳಿದ ವರ್ಗಗಳ ಮೇಲೆ ಇನ್ನಷ್ಟು ದೌರ್ಜನ್ಯ, ದಬ್ಬಾಳಿಕೆ ನಡೆಸುವ ಹುನ್ನಾರ ಈ ಕಾಯ್ದೆಯಲ್ಲಿದೆ. ಹಳ್ಳಿಗಳಲ್ಲಿ ದಮನಿತ ಸಮುದಾಯಗಳು ಮತ್ತು ಸ್ತ್ರೀಯರ ಮೇಲೆ ನಡೆಯುತ್ತಿರುವ ದಿನನಿತ್ಯದ ಹಿಂಸೆ, ಶೋಷಣೆಯ ವಿರುದ್ಧ ಆ ಸಮುದಾಯಗಳು ದನಿ ಎತ್ತದಂತೆ ಮಾಡುವ ಪ್ರಯತ್ನವೂ ಇದರ ಹಿನ್ನೆಲೆಯಲ್ಲಿದೆ. ಪ್ರಜಾಪ್ರಭುತ್ವದ ಮೂಲ ಸೌಧಗಳಾದ ಗ್ರಾಮ ಪಂಚಾಯತ್‌ಗಳನ್ನು ಹೀಗೆ ತಮ್ಮ ತೆಕ್ಕೆಗೆ ತೆಗೆದುಕೊಂಡು ನಾಶ ಮಾಡಿದರೆ ಪ್ರಜಾಪ್ರಭುತ್ವವನ್ನು ಮೂಲೆಗುಂಪಾಗಿಸಿ ಮನುವಾದದ ಆಡಳಿತವನ್ನು ನಡೆಸಲು ಹಾದಿ ಹೆಚ್ಚು ಸುಗಮವಾಗುತ್ತದೆಂದು ಭಾರತೀಯ ಜನತಾ ಪಕ್ಷ ಭಾವಿಸಿದಂತಿದೆ. ಆರೆಸ್ಸೆಸ್ ಗರಡಿಯಿಂದ ಬಂದು ಧಿಡೀರ್ ಆಗಿ ಮುಖ್ಯಮಂತ್ರಿಯಾದ ಮನೋಹರ್ ಲಾಲ್ ಖಟ್ಟರ್ ಈ ಕಾಯ್ದೆಯ ರೂವಾರಿ. ಇದನ್ನು ಈ ನಾಡಿನ ಪ್ರಗತಿಪರರು, ಸಾಮಾಜಿಕ ನ್ಯಾಯದ ಪರ ಇರುವ ಜನರು ವಿರೋಧಿಸಲೇಬೇಕಾಗಿದೆ. ಹರ್ಯಾಣದ ಪಂಚಾಯತ್ ರಾಜ್ ವ್ಯವಸ್ಥೆ ಉಳ್ಳವರ, ಮೇಲ್ವಗರ್ದವರ, ಪುರೋಹಿತಶಾಹಿಗಳ ಪಾಲಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸರ್ವನಾಶವಾಗುವ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ. ಆ ದಿಸೆಯತ್ತ ಹೋರಾಟಗಳು ರೂಪುಗೊಳ್ಳಬೇಕಾಗಿದೆ. ಮನುವಾದಿಗಳನ್ನು ಅಧಿಕಾರಕ್ಕೆ ತಂದರೆ ಎಂತಹ ದುರಂತಗಳು ಕಾದಿರುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ.
ಶಶಿಧರ ಹೆಮ್ಮಾಡಿ, ಪ್ರಧಾನ ಸಂಪಾದಕ

Get real time updates directly on you device, subscribe now.