ಜಾತ್ರೆಗೆ ಡಿಸಿ ಇಬ್ರಾಹಿಂಗೆ ಆಹ್ವಾನ ಮತ್ತು ಸಂಘಪರಿವಾರ ಕರಾವಳಿಗೆ ಮಾಡುತ್ತಿರುವ ಅವಮಾನ

ಪುತ್ತೂರು ಜಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ ಭಾಗವಹಿಸುವುದನ್ನು ವಿರೋಧಿಸುವ ಸಂಘಪರಿವಾರ ಮತ್ತು ಬಿಜೆಪಿಯನ್ನು ಪುತ್ತೂರಿನ ಸಜ್ಜನ ಹಿಂದೂಗಳೆ ಹಿಮ್ಮೆಟ್ಟಿಸಬೇಕು.

ಶಶಿಧರ ಹೆಮ್ಮಾಡಿ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಭಾ ಕಾರ್ಯಕ್ರಮವೊಂದಕ್ಕೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಎಂ.ಬಿ. ಇಬ್ರಾಹಿಂ ಅವರ ಹೆಸರಲ್ಲಿ ಆಹ್ವಾನ ಪತ್ರಿಕೆ ಮುದ್ರಣವಾಗಿರುವುದಕ್ಕೆ ಸಂಘಪರಿವಾರದ ಮಂದಿ ದೊಡ್ಡ ರಾದ್ಧಾಂತ ಎಬ್ಬಿಸಿದ್ದಾರೆ. ಅದಕ್ಕೂ ದೊಡ್ಡ ದುರಂತವೆಂದರೆ ಪುತ್ತೂರಿನ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿಯಂತೂ ಜಿಲ್ಲಾಧಿಕಾರಿಗಳ ಹೆಸರನ್ನು ಆಮಂತ್ರಣ ಪತ್ರದಿಂದ ಕೈಬಿಟ್ಟು ಹೊಸ ಆಮಂತ್ರಣ ಪತ್ರಿಕೆ ಮುದ್ರಿಸುವಂತೆ ‘ಆದೇಶ’ ನೀಡಿದ್ದಾರಂತೆ. ಶಕುಂತಳಾ ಶೆಟ್ಟಿಗೆ ಸಂವಿಧಾನ ಮತ್ತು ಈ ನೆಲದ ಸಾಮಾಜಿಕ ಮೌಲ್ಯಗಳಲ್ಲಿ ನಂಬಿಕೆ ಖಂಡಿತವಾಗಿಯೂ ಇಲ್ಲ. ತಾನೊಬ್ಬ ಶಾಸಕಿ ಎಂಬ ವಿವೇಕವೂ ಇಲ್ಲ. ಮಾತ್ರವಲ್ಲ ಸಂಘಪರಿವಾರದ ಗರಡಿಯಿಂದ ಆಚೆ ಬಂದರೂ ತನುಮನದಲ್ಲಿ ಆರೆಸ್ಸೆಸ್ ವಿಚಾರವೇ ತುಂಬಿಕೊಂಡಿದೆ ಎಂಬುದಂತೂ ಸ್ಪಷ್ಟವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ. ಬಿ. ಇಬ್ರಾಹಿಂ ತುಂಬಾ ಸೂಕ್ಷ್ಮ ಸಂವೇದನೆಗಳುಳ್ಳ ಮನುಷ್ಯ. ಅವರು ಜಿಲ್ಲಾಧಿಕಾರಿಯಾಗಿ ಬಂದ ತರುವಾಯ ಜಿಲ್ಲೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಜನ ಸಂಪರ್ಕದಲ್ಲಿರುವ ಜನರಿಗೆ ಸುಲಭವಾಗಿ ಕಾಣಸಿಗುವ ಅಧಿಕಾರಿ. ಮಲೆಕುಡಿಯರು ಮುಂತಾದ ಆದಿವಾಸಿಗಳು ಇರುವ ಕಾಡು ಮೇಡಿಗೂ ಭೇಟಿ ಕೊಡುವುದು, ಈ ತನಕ ಯಾವ ಅಧಿಕಾರಿಗಳೂ ಹೋಗದ ದುರ್ಗಮ ಪ್ರದೇಶಗಳಿಗೆ ನಡೆದುಕೊಂಡೇ ಹೋಗಿ ಅಲ್ಲಿನ ಬದುಕು ಬವಣೆ ಅಧ್ಯಯನ ಮಾಡುವುದು ಹೀಗೆ ಇಬ್ರಾಹಿಂ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿ. ಸರ್ಕಾರದ ಅನೇಕ ಕಾರ್ಯಕ್ರಮಗಳು, ಯೋಜನೆಗಳ ಲೋಪದೋಷಗಳ ಬಗ್ಗೆ ಸರ್ಕಾರಕ್ಕೆ ಆಗಾಗ ಪತ್ರ ಬರೆದು ತಮ್ಮ ಅನಿಸಿಕೆ ಹೇಳಿಕೊಳ್ಳುವುದು ಇಬ್ರಾಹಿಂ ಅವರ ವೈಶಿಷ್ಟ್ಯತೆ. ಅವರು ಎಷ್ಟೊಂದು ಸೂಕ್ಷ್ಮ ಸಂವೇದನೆಯ ವ್ಯಕ್ತಿ ಎಂದರೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಮಾಡುವುದನ್ನು ಅವರು ವಿರೋಧಿಸಿದ್ದರು. ಟಿಪ್ಪು ಅಲ್ಪಸಂಖ್ಯಾತರಿಗೆ ಮಾತ್ರ ಸೇರಿದವನಲ್ಲ, ಇದರಿಂದ ತಪ್ಪು ಸಂದೇಶ ಹೋಗುತ್ತದೆ, ಟಿಪ್ಪು ಜಯಂತಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಮಾಡಬೇಕು ಎಂದು ಇಬ್ರಾಹಿಂ ಸರ್ಕಾರಕ್ಕೆ ಪತ್ರ ಬರೆದಿದ್ದರು.ಬಹುಶಃ ಜನರ ಜೊತೆ ಇಷ್ಟೊಂದು ಒಡನಾಟವಿರುವ ಜಿಲ್ಲಾಧಿಕಾರಿಗಳು ಕರ್ನಾಟಕದಲ್ಲಿ ವಿರಳ. ಇಬ್ರಾಹಿಂ ಹಮ್ಮು ಬಿಮ್ಮುಗಳಿಲ್ಲದ ಸದಾ ಹಸನ್ಮುಖಿ ಮನುಷ್ಯ ಇಂತಹ ಇಬ್ರಾಹಿಂರನ್ನು ಜಿಲ್ಲಾಧಿಕಾರಿ ಅನ್ನೋದು ಬಿಡಿ, ಓರ್ವ ಸಾಮಾನ್ಯ ನಾಗರಿಕನಾಗಿ ನೋಡಿದರೂ ನಾವು ಇವರನ್ನು ಎಷ್ಟೊಂದು ಗೌರವಯುತವಾಗಿ ನೋಡಿಕೊಳ್ಳಬೇಕಿತ್ತು.

ಇಡೀ ಕರಾವಳಿಯ ಸಹಬಾಳ್ವೆ ಸೌಹಾರ್ದದ ಇತಿಹಾಸದ ಕುರಿತು ಸಂಘಪರಿವಾರಕ್ಕೆ ಅರಿವಿಲ್ಲ ಎಂದು ಕೆಲವರು ಮಾತಿಗಾದರೂ ಹೇಳುವುದುಂಟು. ಖಂಡಿತವಾಗಿಯೂ ಇಲ್ಲಿ ಸೌಹಾರ್ದ ಪರಂಪರೆಯ ಬಗ್ಗೆ ಅವರಿಗೆ ಅರಿವಿದೆ. ಆದರೆ ಆ ಕುರಿತು ಅವರಿಗೆ ಬಹಳ ಅಸಹನೆ ಇದೆ. ಈ ಭಾಗದ ಸೌಹಾರ್ದದ ಇತಿಹಾಸವನ್ನು ಇನ್ನಿಲ್ಲವಾಗಿಸಿ ಅಸಹಿಷ್ಣುತೆ, ಅವಿಶ್ವಾಸ, ಹಿಂಸೆ, ದ್ವೇಷದ ಹೊಸ ಇತಿಹಾಸ ಬರೆಯಲು ಸಂಘಪರಿವಾರ ದಶಕಗಳಿಂದ ಪಟ್ಟಿರುವ ಶ್ರಮ ಕಳೆದೆರೆಡು ದಶಕಗಳಲ್ಲಿ ಕರಾವಳಿಯಲ್ಲಿ ಫಲ ನೀಡತೊಡಗಿದೆ. ಕರಾವಳಿಯ ಒಂದಲ್ಲ ಒಂದು ಕಡೆ ದಿನನಿತ್ಯವೂ ಪ್ರಚೋದನಕಾರಿ ಭಾಷಣಗಳು ನಡೆಯುತ್ತವೆ. ಸಾವಿರಾರು ಯುವಕರನ್ನು ಒಂದೆಡೆ ಸೇರಿಸಿ ಹಸಿಹಸಿ ಸುಳ್ಳು ಹೇಳಿ ರೊಚ್ಚಿಗೆಬ್ಬಿಸಿ, ಇಲ್ಲಿನ ಮುಸ್ಲಿಂ ಮತ್ತು ಕ್ರೈಸ್ತರ ಕುರಿತು ದ್ವೇಷದ ಒಂದು ಹೊಸ ರಕ್ತನಾಡಿಯೇ ಅವರ ದೇಹಗಳಲ್ಲಿ ಸೃಷ್ಟಿಯಾಗುವಂತೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ವಿರುದ್ಧ ಒಂದಲ್ಲ ಒಂದು ರೂಪದಲ್ಲಿ ಹಿಂಸೆ ನಿರಂತರವಾಗಿ ನಡೆಯುತ್ತಿರುತ್ತದೆ. ಹಿಂದೂತ್ವದ ಪ್ರಯೋಗಾಲಯ ಎಂದು ಆರಂಭದಲ್ಲಿ ಕರೆಯಲ್ಪಡುತ್ತಿದ್ದ ಕರ್ನಾಟಕದ ಕರಾವಳಿ ಬರಬರುತ್ತಾ ಕೋಮುಹಿಂಸೆ, ಮತೀಯ ದ್ವೇಷದ ಪ್ರಯೋಗಾಲಯವಾಗಿ ರೂಪುಗೊಂಡಿತು. ಈಗಂತೂ ಈ ಪ್ರಯೋಗಾಲಯ ಕರಾವಳಿಯ ಮುಗ್ಧ ಜನರಲ್ಲಿ, ವಿಶೇಷತಃ ಇಲ್ಲಿನ ತಳ ಸಮುದಾಯಗಳ ಯುವಕ ಯುವತಿಯರಲ್ಲಿ ಸ್ನೇಹ, ಕರುಣೆ, ದಯೆ ಮುಂತಾದ ಮಾನವೀಯ ಗುಣಗಳನ್ನೇ ಇಲ್ಲವಾಗಿಸಿ ರಾಕ್ಷಸೀ ಗುಣಗಳನ್ನು ಬೆಳೆಸುವ ಔಷಧಗಳನ್ನು ತಯಾರು ಮಾಡುವ ಫಾರ್ಮಾಸುಟಿಕಲ್ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಜಿಲ್ಲಾಧಿಕಾರಿ ಇಬ್ರಾಹಿಂ ಜಾತ್ರಾ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನ್ನು ಆಕ್ಷೇಪ ಮಾಡುವ ಮಂದಿಯೂ ಇಂತಹ ಕಾರ್ಖಾನೆ ಕಟ್ಟಿದವರು ಅಥವಾ ಅಲ್ಲಿಯ ಔಷಧ ತಿಂದವರು.

ಮುಜರಾಯಿ ಇಲಾಖೆಗೆ ಸೇರಿದ ಪುತೂರು ಮಹಾಲಿಂಗೇಶ್ವರ ದೇವಸ್ಥಾನ ಈ ಭಾಗದ ಜನರ ಆರಾಧ್ಯ ದೇವತೆ. ಇಲ್ಲಿ ನಡೆಯುವ ಜಾತ್ರೆಯೂ ಅಷ್ಟೇ ಪ್ರಸಿದ್ಧ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಮುಸ್ಲಿಮರು ಪೂಜೆ ಮಾಡುವಂತಿಲ್ಲ ಎನ್ನುವುದು ಬಿಟ್ಟರೆ ಅವರು ದೇವಾಲಯ ಪ್ರವೇಶಿಸಬಾರದು, ದೇವರ ದರ್ಶನ ಪಡೆಯಬಾರದು, ಪ್ರಸಾದ ಸ್ವೀಕರಿಸಬಾರದು, ಪೂಜೆ ಸಲ್ಲಿಸಬಾರದು, ಹರಕೆ ತೀರಿಸಬಾರದು ಎಂದೆಲ್ಲ ಎಲ್ಲಿಯೂ ಹೇಳಲಾಗಿಲ್ಲ. ದೇವಾಲಯಗಳಲ್ಲಿ ದೇವರ ಮೂರ್ತಿ ಮುಟ್ಟಿ ಪೂಜೆ ಮಾಡುವ ಹಕ್ಕು ಹಿಂದುಗಳಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಬೇರಾರಿಗೂ ಇಲ್ಲ. ಹೀಗಾಗಿ ಧಾರ್ಮಿಕ ವಿಧಿವಿಧಾನಗಳನ್ನು ಹೊರತುಪಡಿಸಿ ಬ್ರಾಹ್ಮಣೇತರ ಸಮುದಾಯಗಳಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಯಾವ ಅವಕಾಶಗಳಿವೆಯೊ ಅಷ್ಟು ಅವಕಾಶ ಮುಸ್ಲಿಮರಿಗೂ ಇದೆ ಎನ್ನಬಹುದು. ಅಷ್ಟಕ್ಕೂ ಜಿಲ್ಲಾಧಿಕಾರಿ ಇಬ್ರಾಹಿಂ ವರ ಹೆಸರು ಆಹ್ವಾನಿಸುವವರ ಹೆಸರಲ್ಲಿ ಮುಜರಾಯಿ ಇಲಾಖೆಯ ಶಿಷ್ಟಾಚಾರದಂತೆ ಪ್ರಕಟವಾಗಿದೆ ಹೊರತು ಬೇರೇನೊ ಧಾರ್ಮಿಕ ವಿಧಿ ವಿಧಾನಗಳಿಗಾಗಿ ಅಲ್ಲ.

ಹಿಂದೂ ದೇವಾಲಯವೊಂದರ ಸಭಾ ಕಾರ್ಯಕ್ರಮಕ್ಕೆ ಮುಸ್ಲಿಂ ಸಮುದಾಯದ ಜಿಲ್ಲಾಧಿಕಾರಿಯನ್ನ ಕರೆದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವ ವಿಶ್ವ ಹಿಂದೂ ಪರಿಷತ್ನದ್ದು ಎಂತಹ ಜಾಣ ಸೋಗಲಾಡಿತನ ನೀವೇ ನೋಡಿ. ಹಿಂದೂ ದೇವಾಲಯಗಳ ಭದ್ರತೆಯ ಬಗ್ಗೆ ಇದೇ ಇಬ್ರಾಹಿಂ ಕನಿಷ್ಟ 25 ಸಭೆಗಳನ್ನು ನಡೆಸಿದ್ದಾರೆ. ಅನೇಕ ದೇವಸ್ಥಾನಗಳಿಗೆ ಸರ್ಕಾರ ನೀಡುವ ನೆರವಿನ ಹಣ, ಅನುದಾನದ ಚೆಕ್ಗಳಿಗೆ ಇದೇ ಇಬ್ರಾಹಿಂ ಸಹಿ ಹಾಕಿರುತ್ತಾರೆ. ಇವರೇ ನಡೆಸುವ ಹಿಂದೂ ಸಮಾಜೋತ್ಸವಗಳಲ್ಲಿ ಭದ್ರತೆಯ ವ್ಯವಸ್ಥೆಗಳಿಗಾಗಿ ಸಭೆ ನಡೆಸಿರುತ್ತಾರೆ. ಆಗೆಲ್ಲ ಇಲ್ಲದ ವಿರೋಧ ಈಗ ಎಲ್ಲಿಂದ ಬಂತು? ಇಬ್ರಾಹಿಂ ಅವರಿಗೆ ಆಹ್ವಾನ ನೀಡಿದ್ದನ್ನೇ ದೊಡ್ಡ ವಿವಾದ ಮಾಡಿಸಿಕೊಂಡು ಇಲ್ಲಿನ ಮುಸ್ಲಿಂ ಸಮುದಾಯದ ವಿರುದ್ಧ ಇನ್ನಷ್ಟು ದ್ವೇಷ ಅಸಹನೆ ಬೆಳೆಸಿ ಮತ್ತಷ್ಟು ರಾಜಕೀಯ ಲಾಭ ಮಾಡಿಕೊಳ್ಳುವ ಲೆಕ್ಕಾಚಾರಾವಲ್ಲದೆ ಇದು ಇನ್ನೇನು?

ಈ ಸಂಘಪರಿವಾರದ ಮಂದಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು. ಮುಜರಾಯಿ ಇಲಾಖೆಗೆ ಸೇರಿದ್ದೊ ಅಥವಾ ಬೇರೆ ಯಾವುದೋ ಹಿಂದೂ ದೇವಾಲಯಗಳೊ ಯಾವುದೇ ಇರಲಿ ಈ ಹಿಂದೆ ಮುಸ್ಲಿಂ ಸಮುದಾಯದ ವ್ಯಕ್ತಿ ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲವೆ? ಭಾಷಣ ಮಾಡಿಲ್ಲವೆ? ನಿಮ್ಮದೇ ಪರಮ ಗುರು ಪೇಜಾವರ ಸ್ವಾಮಿಗಳು ಮೊನ್ನೆಯಷ್ಟೆ ನಡೆದ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಮುಸ್ಲಿಮರು, ಕ್ರೈಸ್ತರು ಮೆರವಣಿಗೆಯಲ್ಲಿ ತಂದು ಸಲ್ಲಿಸಿದ ಹೊರೆ ಕಾಣಿಕೆಗಳನ್ನು ಸ್ವೀಕರಿಸಿದ್ದಾರೆ. ಪೇಜಾವರರ ಹೆಸರಿನಲ್ಲಿ ಮುಸ್ಲಿಂ ಯುವಕರು ರಕ್ತದಾನ ಶಿಬಿರ ಮಾಡಿ ಸ್ವತಃ ಪೇಜಾವರರೇ ಖುಷಿಪಟ್ಟಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪರ್ಯಾಯ ದರ್ಬಾರ್ ಮತ್ತಿತರ ಸಭಾ ಕಾರ್ಯಕ್ರಮಗಳಲ್ಲಿ ಆಸ್ಕರ್ ಫೆರ್ನಾಂಡಿಸ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಹತ್ತಾರು ಮಂದಿ ಭಾಗವಹಿಸಿದ್ದಾರೆ. ಭಾಷಣ ಮಾಡಿದ್ದಾರೆ. ನಿಮ್ಮದೇ ಪ್ರೀತಿಪಾತ್ರ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಹಿಂದೂ ದೇವಾಲಯಗಳ ಅದೆಷ್ಟೊ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡರಲ್ಲ, ರಾಷ್ಟ್ರಪತಿಯಾಗಿರುವಾಗ ಅಂತಹ ಸಭಾ ಕಾರ್ಯಕ್ರಮಗಳು ಅವರ ನೇತೃತ್ವದಲ್ಲೇ ನಡೆದವಲ್ಲ ಆಗೆಲ್ಲ ನಿಮ್ಮ ವಿರೋಧ ಎಲ್ಲಿ ಹೋಗಿತ್ತು?

ದ.ಕ. ಜಿಲ್ಲಾಧಿಕಾರಿ ಇಬ್ರಾಹಿಂ ಪುತ್ತೂರು ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಜಿಲ್ಲಾ ಬಂದ್ ಮಾಡುತ್ತೇವೆ ಎಂದು ಕರೆ ನೀಡುವ ನೀವು ಅಬ್ದುಲ್ ಕಲಾಂ ಬಂದಾಗ ಕರ್ನಾಟಕ ಬಂದ್ಗೆ ಕರೆ ನೀಡಬೇಕಿತ್ತಲ್ಲವೆ? ಕರಾವಳಿಯ ನೂರಾರು ದೇವಾಲಯಗಳ, ದೈವಸ್ಥಾನಗಳ ಜಾತ್ರೆ, ತೇರು, ಕೋಲ, ಗೆಂಡ ಸೇವೆ ಮುಂತಾದ ಸಂದರ್ಭಗಳ ಆಹ್ವಾನ ಪತ್ರಿಕೆ ಮುದ್ರಿಸುವಾಗ ಆ ಊರಿನ ಮುಸ್ಲಿಂ, ಕ್ರೈಸ್ತರ ಜಾಹೀರಾತುಗಳು ಸಹ ಅಲ್ಲಿ ಪ್ರಕಟವಾಗುತ್ತವೆ. ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅವರ ನೆರವು ಇರುತ್ತದೆ. ಅದಕ್ಕೆಲ್ಲ ನಿಮ್ಮ ವಿರೋಧವಿಲ್ಲವೆ? ಇಷ್ಟು ದಿನ ನೀವುಗಳು ಇದನ್ನೆಲ್ಲ ವಿರೋಧಿಸದಿದ್ದುದು ಸರಿಯಾಗಿಯೇ ಇದೆ. ಊರು, ಕೇರಿ, ಜನಗಳು, ಜಾತ್ರೆ ಸಹಜವಾಗಿ ಇರಬೇಕಾದದ್ದು ಹಾಗೆಯೆ. ಪರಸ್ಪರ ಸಹಕಾರ, ಸಹನೆ, ಸಮಾಧಾನ ಇವೆಲ್ಲ ಈ ಮಣ್ಣಿನ ಗುಣಗಳು. ಇದೆಲ್ಲವನ್ನೂ ಈಗ ನೀವುಗಳು ಮಣ್ಣಾಗಿಸಲು ಹೊರಟಿದ್ದೀರಿ ಎಂಬುದು ಇಬ್ರಾಹಿಂ ಪ್ರಕರಣದ ಮೂಲಕ ಮತ್ತೆ ಸಾಬೀತಾಗುತ್ತಿದೆ.

ಇಡೀ ಪ್ರಕರಣದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಜಾಣ ಮೌನ, ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿ ಮತ್ತು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರ ಸಂವಿಧಾನ ವಿರೋಧಿ ವರ್ತನೆ ನಿಜಕ್ಕೂ ಆಕ್ಷೇಪಾರ್ಹ. ಚುನಾವಣೆ ಬಂದ ತಕ್ಷಣ ಕೋಮುವಾದ, ಕಲ್ಲಡ್ಕ ಭಟ್ಟರು ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುವ ರಮಾನಾಥ ರೈ ಗೆದ್ದ ಬಳಿಕ ಒಂದು ದಿನವೂ ಕೋಮುವಾದದ ವಿರುದ್ಧ, ಕೋಮುವಾದಿ ಸಂಘಟನೆಗಳ ಕೃತ್ಯಗಳ ವಿರುದ್ಧ ತುಟಿ ಬಿಚ್ಚಿದ ಉದಾಹರಣೆಗಳಿಲ್ಲ. ಶಾಸಕಿ ಶಕುಂತಳಾ ಶೆಟ್ಟಿ ಇಬ್ರಾಹಿಂ ಅವರ ಹೆಸರನ್ನು ತೆಗೆದು ಬೇರೆ ಆಮಂತ್ರಣ ಮುದ್ರಿಸಲು ‘ಆದೇಶ’ ನೀಡಿದ್ದು ಕಾನೂನು ಬಾಹಿರ ಮಾತ್ರವಲ್ಲ ಆಕೆ ಓರ್ವ ಶಾಸಕಿಯಗಿ ಮಾಡಿದ ಈ ಕೃತ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ಕಾಂಗ್ರೆಸ್ ಪಕ್ಷ ಆಕೆಯ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಪ್ರಕರಣವನ್ನು ಸದನದಲ್ಲಿಯೂ ಚರ್ಚಿಸಬೇಕು.

ಸದಾ ಕೋಮುವಾದವನ್ನು, ಅಲ್ಪಸಂಖ್ಯಾತರ ವಿರುದ್ಧದ ಅಸಹನೆ, ದ್ವೇಷವನ್ನೇ ಬಂಡವಾಳವಾಗಿಸಿ ರಾಜಕೀಯ ಮಾಡಿಕೊಂಡು ಬಂದಿರುವ ಭಾರತೀಯ ಜನತಾ ಪಕ್ಷ ತಾನೊಂದು ರಾಜಕೀಯ ಪಕ್ಷ, ತನ್ನ ಪ್ರತಿನಿಧಿಗಳು ಸಂಘದ ಶಾಖೆಗಳಲಿ ಮಾತ್ರವಲ್ಲ, ಚುನಾವಣೆಗಳ ಮೂಲಕ ಆಯ್ಕೆಯಾಗಿ ವಿಧಾನಸೌಧದಲ್ಲಿಯೂ ಇದ್ದಾರೆ ಎಂಬುದನ್ನೂ ಸಹ ಮರೆತು ಇಬ್ರಾಹಿಂ ಅವರನ್ನು ವಿರೋಧಿಸುವ ವಿಕೃತ ಮನಸ್ಸುಗಳ ಜೊತೆ ಅಧಿಕೃತವಾಗಿ ಮತ್ತು ಬಹಿರಂಗವಾಗಿ ಕೈ ಜೋಡಿಸಿರುವುದು ನಾಚಿಕೆಗೇಡಿನ ಸಂಗತಿ. ಈ ಪಕ್ಷಕ್ಕೆ ಸಂವಿಧಾನದಲ್ಲಿ, ಈ ನೆಲದ ಕಾನೂನು, ಶಿಷ್ಟಾಚಾರಗಳಲ್ಲಿ ನಂಬಿಕೆ ಇಲ್ಲ ಎಂಬುದನ್ನು ಸಹ ಈ ಪ್ರಕರಣ ಎತ್ತಿ ತೋರಿಸುತ್ತಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ವಿಚಾರ ಹೇಳಲೇಬೇಕು. ಇಂದು ತಾವು ಹಿಂದೂಪರ ಸಂಘಟನೆಗಳು ಎಂದು ಹೇಳಿಕೊಳ್ಳುತ್ತಿರುವ ಸಂಘಪರಿವಾರದ ಅಂಗ ಸಂಸ್ಥೆಗಳು ಯಾವುದೇ ಕಾರಣಕ್ಕೂ ಇಲ್ಲಿನ ಸಮಸ್ತ ಹಿಂದೂ ಸಮುದಾಯದ ನಾಯಕರೋ ಅಥವಾ ಪ್ರತಿನಿಧಿಗಳೋ ಖಂಡಿತ ಅಲ್ಲ. ಯಾವುದೇ ಹಿಂದೂ ದೇವಾಲಯಗಳ ಮೇಲೆ, ಧಾರ್ಮಿಕ ಸ್ಥಳಗಳ ಮೇಲೆ ಇವರಿಗೆ ಯಾವ ಹಕ್ಕು, ಅಧಿಕಾರವಾಗಲಿ ಇಲ್ಲವೇ ಇಲ್ಲ. ಇವರ ಮರ್ಜಿಯಲ್ಲಿ ಹಿಂದೂ ಧಾರ್ಮಿಕ ಸ್ಥಳಗಳು ನಡೆಯಬೇಕಾಗಿಯೂ ಇಲ್ಲ. ಧಾರ್ಮಿಕ ಸ್ಥಳಗಳು ಇಡೀ ಸಮುದಾಯಕ್ಕೆ ಸೇರಿದ್ದು ವಿನಃ ಅವು ಈ ಸಂಘಟನೆಗಳಿಗೆ ಸೇರಿದವುಗಳಲ್ಲ. ಅಲ್ಲಿನ ಆಡಳಿತಕ್ಕೆ ಅಲ್ಲಲ್ಲಿ ಸಮಿತಿಗಳಿವೆ, ಸರ್ಕಾರವಿದೆ. ಹೀಗಿರುವಾಗ ವಿಶ್ವ ಹಿಂದೂ ಪರಿಷತ್ತಿಗೂ ಪುತ್ತೂರು ದೇವಾಲಯದ ಆಗುಹೋಗುಗಳ ಮೇಲೆ ಯಾವುದೇ ಹಕ್ಕಿಲ್ಲ. ಅಚ್ಚರಿ ಎಂದರೆ ಜಾತ್ರೆಯ ಆಹ್ವಾನ ಪತ್ರಿಕೆಯ ವಿಷಯದಲ್ಲಿ ಸಂಘಪರಿವಾರ ಇಡೀ ಪುತ್ತೂರಿನ ಘನತೆ ಮತ್ತು ಶಾಂತಿಗೆ ಸಂಚಕಾರ ಉಂಟುಮಾಡುವ ಹಾಗೆ ನಡೆದುಕೊಳ್ಳುತ್ತಿದ್ದರೂ ಸಹ ಸಂಘಪರಿವಾರದಲ್ಲಿ ಇಲ್ಲದ ಇಲ್ಲಿನ ಬಹುಸಂಖ್ಯಾತ ಹಿಂದೂ ಸಮುದಾಯದ ಸಜ್ಜನರು ಈ ವಿವಾದವನ್ನು ಮೌನವಾಗಿ ನೋಡುತ್ತಿದ್ದಾರೆ ವಿನಃ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಂಘಪರಿವಾರದ ವಿರುದ್ಧ ಈ ಸಜನರು ಮಾತನಾಡುತ್ತಲೂ ಇಲ್ಲ. ಈ ಮೌನವೇ ಪುತ್ತೂರಿಗೆ ಮುಂದೆ ಬಹಳ ಅಪಾಯಕಾರಿಯಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ. ಪುತ್ತೂರಿನ ಸಜ್ಜನ ಹಿಂದೂಗಳು, ಆಸ್ತಿಕರು ಮುಂದೆ ಬಂದು ಸಹಿಷ್ಣುತೆ, ಸಹಬಾಳ್ವೆಯ ಪರಂಪರೆಯನ್ನು ಎತ್ತಿಹಿಡಿಯಬೇಕು. ಈ ಸಂಘಪರಿವಾರದ ದಾದಾಗಿರಿಯನ್ನು ಹಿಮ್ಮೆಟ್ಟಿಸಿ ಊರ ಜಾತ್ರೆಯನ್ನು ತಮ್ಮ ನೇತೃತ್ವದಲ್ಲಿ ನಡೆಸಿ ಊರಿನ ಮಾನ ಕಾಪಾಡಬೆಕು. ಇಬ್ರಾಹಿಂರಂತಹ ಸೂಕ್ಷ್ಮ ಮನಸ್ಸಿನ ಅಧಿಕಾರಿಗೆ ಆದ ನೋವಿಗೆ ಈಗ ಸ್ಪಂದಿಸದಿದ್ದರೆ, ಈ ವಿವಾದದಲ್ಲಿ ಮಧ್ಯಪ್ರವೇಶ ಮಾಡದಿದ್ದರೆ ಅದು ಪುತ್ತೂರಿನ ಮಟ್ಟಿಗೆ ಇತಿಹಾಸದಲ್ಲಿ ಉಳುದುಬಿಡಬಹುದಾದ ದೊಡ್ಡ ಪ್ರಮಾದವೇ ಆಗಬಹುದು. ಸರ್ಕಾರವೂ ಸಹ ಮೌನವಹಿಸದೆ ಕಾನೂನಿನಂತೆ ನಡೆದುಕೊಳ್ಳಬೇಕು. ಅದು ಜಿಲ್ಲಾಧಿಕಾರಿಯೇ ಇರಲಿ ಅಥವಾ ಸಾಮಾನ್ಯ ಮುಸ್ಲಿಂ ನಾಗರಿಕನೋರ್ವನಿರಲಿ, ಎಲ್ಲರ ಘನತೆ ಗೌರವ ಕಾಪಾಡಬೇಕಾದದ್ದು, ಊರಲ್ಲಿ ಅಶಾಂತಿ, ಅಸಹನೆ ಮನೆಮಾಡದಂತೆ ನೋಡಿಕೊಳ್ಳಬೇಕಾದದ್ದು ಸಹ ಸರ್ಕಾರದ ಕರ್ತವ್ಯ.

ಕೊನೆಗೂ ಪುತ್ತೂರಿನ ಮಹಾಲಿಂಗೇಶ್ವರನ ಸಜ್ಜನ ಭಕ್ತರಲ್ಲಿ ಮತ್ತು ಈಗ ಅಹ್ವಾನದ ವಿವಾದವನ್ನೇ ದೊಡ್ಡದು ಮಾಡುತ್ತಿರುವ ಸಂಘಪರಿವಾರದ ಬಳಿ ಒಂದು ಪ್ರಶ್ನೆ ಕೇಳಲೇಬೇಕು. ವರ್ಷಗಳಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮತ್ತು ಇಂತಹ ಇತರ ಅನೇಕ ಧಾರ್ಮಿಕ ಸ್ಥಳಗಳಿಗೆ ಸಮಾಜ ಘಾತುಕರು, ಕೊಲೆಗಡುಕರು, ಭೂಗತ ಪಾತಕಿಗಳು ದೊಡ್ಡದೊಡ್ಡ ಮೊತ್ತದ ಕೊಡುಗೆಗಳನ್ನು ಕೊಡುತ್ತಿದ್ದರಲ್ಲ, ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಮಿಂಚುತ್ತಿದ್ದರಲ್ಲ ಆಗೆಲ್ಲ ನಿಮಗೆ ಏನೂ ಅನಿಸಿರಲಿಲ್ಲವೆ?

ಸುತ್ತೂರಿಗೆಲ್ಲ ಪ್ರಿಯನಾದ ಹತ್ತೂರು ಫೊರೆಯುವ ಪುತ್ತೂರು ಮಹಾಲಿಂಗೇಶ್ವರನೆ, ನಿನ್ನ ಸುತ್ತ ಇರುವವರನ್ನು ಗಮನಿಸುತ್ತಲೇ ಇರು ತಂದೆ!
-ಶಶಿಧರ ಹೆಮ್ಮಾಡಿ

Get real time updates directly on you device, subscribe now.