ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ. ಸಾಧಿಸಿದ್ದಾದರೂ ಏನನ್ನು?

ಅನುಪಮಾ ಶೆಣೈ ಅವರು ಫೇಸ್‌ಬುಕ್‌ನಲ್ಲಿ ಬರೆದಿರುವಂತೆ ಸರ್ಕಾರ ಬೃಹನ್ನಳೆಯೆ ಅಂತಿಟ್ಟುಕೊಳ್ಳೋಣ. ಆದರೆ ಅನುಪಮಾ ಅವರದು ಉತ್ತರ ಕುಮಾರನ ಪೌರುಷವೂ ಆಗಬಾರದು ಅಲ್ಲವೆ?


ಶಶಿಧರ ಹೆಮ್ಮಾಡಿ

ಕೂಡ್ಲಿಗಿಯ ಡಿವೈಎಸ್‌ಪಿ ಅನುಪಮಾ ಶೆಣೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಂದೊಮ್ಮೆ ಸಚಿವರ ಫೋನ್ ರಿಸೀವ್ ಮಾಡುವಲ್ಲಿ ವಿಳಂಬ ಮಾಡಿದರು ಎಂಬ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಜನಾಕ್ರೋಶಕ್ಕೆ ಮಣಿದ ಸರ್ಕಾರ ಮತ್ತೆ ಅವರನ್ನು ಕೂಡ್ಲಿಗಿಯಲ್ಲೇ ಮುಂದುವರಿಯುವಂತೆ ವ್ಯವಸ್ಥೆ ಮಾಡಿತ್ತು. ಇದೆಲ್ಲ ಆಗಿ ಕೆಲಕಾಲ ಕಳೆದಿದೆ. ಈಗ ಧಿಡೀರ್ ಎಂದು ಅನುಪಮಾ ರಾಜೀನಾಮೆ ನೀಡಿದ್ದಾರೆ.

ಅನುಪಮಾ ಅವರು ನಮ್ಮನಿಮ್ಮಂತೆ ಹೆಚ್ಚಿನವರಿಗೆ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮದಲ್ಲಿ ಮತ್ತು ಸುದ್ದಿಯಲ್ಲಿ ಪರಿಚಯವಾದವರು. ಕೂಡ್ಲಿಗಿಯಲ್ಲಿ ಅವರ ಜನಪ್ರಿಯತೆ, ಅವರ ಕೆಲಸಗಳು ಹೇಗಿದ್ದವು ಎಂಬ ಕುರಿತು ಮಾಹಿತಿ ರಾಜ್ಯದ ಇತರೆಡೆಯ ಜನರಿಗೆ ಕಡಿಮೆ. ಸಚಿವರ ಸಿಟ್ಟಿಗೆ ಕೂಡ್ಲಿಗಿಯಿಂದ ಅನುಪಮಾ ವರ್ಗಾವಣೆ ಆದ ಸುದ್ದಿ ಒಂದಲ್ಲದಿದ್ದರೆ ಕೂಡ್ಲಿಗಿಯಾಚೆ ಅನುಪಮಾ ಅವರ ಪರಿಚಯ ಕಡಿಮೆಯೆ. ಕರಾವಳಿಯ ಮೂಲದ ಅನುಪಮಾ ಬಗ್ಗೆ ಕರಾವಳಿಗರಿಗೂ ಹೆಚ್ಚು ಗೊತ್ತಿರಲಿಲ್ಲ. ಶೆಣೈ ಎಂಬ ಹೆಸರಿದ್ದ ಕಾರಣ ಕರಾವಳಿಯವರೆಂದು ತಿಳಿದು ಕೊನೆಗೂ ಅವರ ಅಪ್ಪ-ಅಮ್ಮ-ಅಣ್ಣ ಅಂತೆಲ್ಲ ಕರಾವಳಿಯ ಪತ್ರಕರ್ತರು ಹುಡುಕಾಟ ಮಾಡಿ ಮಾತಾಡಿಸಿ ಸುದ್ದಿ ಮಾಡಿದ್ದರು. ಅಂತೂ ವರ್ಗಾವಣೆ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಅವರ ಪರ ಅಭಿಯಾನ ನಡೆಸಿದವರಿಗೆ ಮತ್ತು ಬಹುಶಃ ಅನುಪಮಾ ಅವರ ಪಾಲಿಗೂ ಸುಖಾಂತ್ಯವೇ ಆಯ್ತು. ತದನಂತರ ಅನುಪಮಾ ಹೆಸರು ಈಗ ಮತ್ತೊಮ್ಮೆ ಕೇಳುತ್ತಿದ್ದೇವೆ. ಅದೂ ಸಹ ರಾಜೀನಾಮೆಯ ಮೂಲಕ.

ಡಿವೈಎಸ್‌ಪಿಯಂತಹ ಒಂದು ಪ್ರಮುಖ ಹುದ್ದೆಯಲ್ಲಿದ್ದುಕೊಂಡು ಆಕೆ ಅತ್ಯಮ್ತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಿರಬಹುದು. ಈ ಪ್ರಾಮಾಣಿಕ ಕೆಲಸದ ನಡುವೆ ಆಕೆಯ ಮೇಲೆ ಒತ್ತಡವೂ ಹಲವು ದಿಕ್ಕುಗಳಿಂದ ಇದ್ದಿರಬಹುದು. ಆದರೆ ಪೊಲೀಸ್ ಇಲಾಖೆಯಲ್ಲಿ ಪಳಗಿದ ಓರ್ವ ಡಿವೈಎಸ್‌ಪಿ ಮಟ್ಟದ ಅಧಿಕಾರಿ ಹೀಗೆ ಒತ್ತಡಕ್ಕೆ ಮಣಿದು ವ್ಯವಸ್ಥೆಯ ಮುಂದೆ ಸೋತು ಶಿರಬಾಗಿ ರಾಜೀನಾಮೆ ನೀಡಿಬಿಡುವುದೆ? ಈ ಪ್ರಶ್ನೆ ಈಗ ರಾಜ್ಯದ ಪ್ರಜ್ಞಾವಂತರನ್ನು ಕಾಡುತ್ತಿದೆ.

ಅನುಪಮಾ ರಾಜೀನಾಮೆಗೆ ಹಲವರು ಹಲವು ಕಾರಣ ನೀಡುತ್ತಿದ್ದಾರೆ. ಲಿಕ್ಕರ್ ಲಾಬಿಯಂತೆ, ಸಚಿವರ ಜೊತೆ ಅದೇನೋ ದೂರವಾಣಿಯಲ್ಲಿ ಜಗಳವಾಗಿತ್ತಂತೆ. ಅಂಬೇಡ್ಕರ್ ಭವನಕ್ಕೆ ಹೋಗುವ ದಾರಿಯಲ್ಲಿ ವೈನ್ ಶಾಪ್ ಕಟ್ಟುತ್ತಿದ್ದರಂತೆ, ಆ ಕುರಿತು ಬಂದ ದೂರಿನಲ್ಲಿ ಡಿವೈಎಸ್‌ಪಿ ಬಹಳ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದರಂತೆ ಹೀಗೆ ಎಲ್ಲ ಬಗೆಯಿಂದಲೂ ಖಡಕ್ ಆಗಿದ್ದ ಅನುಪಮಾ ಅವರಮೇಲೆ ಸ್ಥಾಪಿತ ಹಿತಾಸಕ್ತಿಗಳ ಒತ್ತಡ ಹೆಚ್ಚಾಗಿ ಈಗ ಅವರು ರಾಜೀನಾಮೆ ನೀಡಿದ್ದಾರಂತೆ. ಈ ಸುದ್ದಿಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಗೊತ್ತಿಲ್ಲ. ಆದರೆ ಅನುಪಮಾ ರಾಜೀನಾಮೆ ನೀಡಿರುವುದು ಮಾತ್ರ ಸತ್ಯ.

ಕರ್ನಾಟಕ ಅಥವಾ ಬಾರತದ ಯಾವುದೇ ಭಾಗಕ್ಕೆ ಹೋದರೂ ಸರ್ಕಾರಿ ಅಧಿಕಾರಿಗಳು ಸರ್ಕಾರ ನಡೆಸುತ್ತಿರುವ ಮಂದಿಯ ಮರ್ಜಿಯಲ್ಲೇ ಕೆಲಸ ಮಾಡುತ್ತಾರೆ. ಕೆಲವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕೆಲವರು ಹೊಂದಾಣಿಕೆಯ ನಡುವೆಯೂ ಜನಪರ ಕೆಲಸಗಳನ್ನು ಮಾಡುತ್ತಾರೆ. ಇನ್ನು ಕೆಲವರು ಯಾವುದೇ ರಾಜಿಗೆ ಸಿದ್ಧರಿರದೆ ನ್ಯಾಯಸಮ್ಮತವಾಗಿ, ಕಾನೂನುಬದ್ದವಾಗಿ ಕೆಲಸ ಮಾಡುತ್ತಾರೆ. ಇಂತಹವರಿಗೆ ವರ್ಗಾವಣೆ, ಹಿಂಭಡ್ತಿ, ಪ್ರಾಮುಖ್ಯತೆ ಇಲ್ಲದ ಇಲಾಖೆ ಅಥವಾ ನೀರಿಲ್ಲದ ಊರಿಗೆ ಕಳಿಸುವುದು ಹೀಗೆ ತೊಂದರೆಗಳು ಜಾಸ್ತಿ. ಸರ್ಕಾರ, ವಿಪಕ್ಷ ಅಥವಾ ಯಾವುದೇ ಲಾಬಿಗಳು ಕೊಟ್ಟ ತೊಂದರೆಗಳನ್ನೆಲ್ಲ ಸಹಿಸಿಕೊಂದು ತಮ್ಮ ವೃತ್ತಿ ಜೀವನದುದ್ದಕ್ಕೂ ಪ್ರಾಮಾಣಿಕರಾಗಿದ್ದು ಕೆಲಸ ಮಾಡಿದ ಅದೆಷ್ಟೊ ಅಧಿಕಾರಿಗಳಿದ್ದಾರೆ. ಇವರೆಲ್ಲರೂ  ಯಾವುದೋ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿ ಹೊರಬಂದರೆ ಒಂದೆರಡು ದಿನ ಸುದ್ದಿಯಾಗುತ್ತಿದ್ದರು ಬಿಟ್ಟರೆ ಈ ದೇಶದ ಜನರಿಗೆ ಅದರಿಂದ ಅಪಾರ ನಷ್ಟವಾಗುತ್ತಿತ್ತು. ಅನುಪಮಾ ನಿಜವಾಗಿಯೂ ಪ್ರಾಮಾಣಿಕವಾಗಿ ಕಾನೂನುಬದ್ದವಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಯಾಗಿದ್ದರೆ ಅವರ ರಾಜೀನಾಮೆ ಕೂಡ ಜನರಿಗೆ ಆಗುತ್ತಿರುವ ನಷ್ಟ ಎಂದೇ ಹೇಳಬೇಕಾಗುತ್ತದೆ.

ಅನುಪಮಾ ಶೆಣೈ ರಾಜೀನಾಮೆ ನೀಡಿ ಯಾವ ಸಾಧನೆ ಮಾಡಿದಂತೆಯೂ ಆಗಿಲ್ಲ. ಯಾವುದೇ ಲಾಬಿಗೆ, ಒತ್ತಡಕ್ಕೆ ಮಣಿದು ಅವರು ರಾಜೀನಾಮೆ ನೀಡುತ್ತಾರಾದರೆ ಈ ದೇಶದಲ್ಲಿ ನಿತ್ಯವೂ ಸರ್ಕಾರಿ ಅಧಿಕಾರಿಗಳು ರಾಜೀನಾಮೆ ನೀಡುತ್ತಲೇ ಇರಬೇಕು. ಅಷ್ಟಕ್ಕೂ ಮೇಲ್ನೋಟಕ್ಕೆ ಅನುಪಮಾ ಅವರ ಮೇಲೆ ರಾಜೀನಾಮೆ ನೀಡುವಷ್ಟರ ಮಟ್ಟಿನ ಭಾರೀ ಒತ್ತಡವೋ, ಬೆದರಿಕೆಯೊ ಇದ್ದಂತೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಯಾವುದೊ ಒಂದು ದುಡುಕಿನ ಕ್ಷಣದಲ್ಲಿ ಸಿಡುಕಿನಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಅವರ ಸದ್ಯದ ನಡೆಗಳಿಂದ ಕಂಡುಬರುತ್ತಿದೆ.

ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಹತ್ಯಾಕಾಂಡದ ವೇಳೆ ಅಲ್ಲಿನ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಮೇಲಿದ್ದಷ್ಟು ಒತ್ತಡ, ಬೆದರಿಕೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಆ ಮಟ್ಟದ ಒತ್ತಡವಂತೂ ಅನುಪಮಾ ಮೇಲಿರಲಿಲ್ಲ. ಈ ರಾಜ್ಯದ ಓರ್ವ ಸಚಿವನೊ, ಇಲ್ಲ ಶಾಸಕನನ್ನೊ ಎದುರಿಸಲಾಗದಷ್ಟು ಅಧೀರರಾದರೆ ಅನುಪಮಾ?

ಅನುಪಮಾ ಈಗ ಫೇಸ್‌ಬುಕ್ ಬರಹಗಳ ಮೂಲಕ ಮೂಲಕ ಸರ್ಕಾರದ ವಿರುದ್ಧ ತಮ್ಮ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ ಅಂತಿಟ್ಟುಕೊಳ್ಳೋಣ. ಅನುಪಮಾ ಅವರ ನಿರ್ಧಾರದ ಕುರಿತು ಅವರ ಫೇಸ್‌ಬುಕ್ ಸ್ಟೇಟಸ್‌ಗಳೇ ಅನುಮಾನ ಮೂಡಿಸುತ್ತಿವೆ. ಆಗಾಗ ಏನನ್ನೊ ಬರೆದು ಆಗಾಗ ಅಳಿಸುವುದು, ತಾನೇನೊ ದೊಡ್ಡ ಬಂಡಾಯದ ಬಾವುಟ ಹಾರಿಸಿದ್ದೇನೆ ಎನ್ನುವಂತಹ ಅರ್ಥ ಬರುವ ಸ್ಟೇಟಸ್‌ಗಳನ್ನು ಹಾಕುತ್ತಿರುವುದು ನೋಡಿದರೆ ಅನುಪಮಾ ತೀರಾ ಆತುರದ ಮತ್ತು ದುಡುಕಿನ ಸ್ವಭಾವದವರು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ.

‘ಅನ್ಯಾಯ ಕಾನೂನಾದಾಗ ತಿರುಗಿ ಬೀಳುವುದು ಕರ್ತವ್ಯವಾಗುತ್ತದೆ (when injustice becomes law, rebellion becomes duty) ಎಂದು ತಮ್ಮ ಪ್ರೊಫೈಲ್ ಫೋಟೊವನ್ನು ಅನುಪಮಾ ಫೇಸ್‌ಬುಕ್‌ನಲ್ಲಿ ಬದಲಾಯಿಸಿಕೊಂಡಿದ್ದಾರೆ. ಈ ನಡುವೆ ಅವರು ಅನೇಕ ಸ್ಟೇಟಸ್, ಫೋಟೊಗಳನ್ನು ಹಾಕಿ ಡಿಲೀಟ್ ಕೂಡ ಮಾಡಿದ್ದಾರೆಂಬ ಸುದ್ದಿಯೂ ಇದೆ. ಕೂಡ್ಲಿಗಿ ಸುತ್ತಮುತ್ತ ಅನ್ಯಾಯವಾಗುತ್ತಿರುವಾಗ ಅನ್ಯಾಯದ ವಿರುದ್ಧ ತಿರುಗಿಬಿದ್ದು ತನ್ನ ಕರ್ತವ್ಯ ನಿಭಾಯಿಸಬೇಕಾದ ಅನುಪಮಾ ರಾಜೀನಾಮೆ ಯಾಕೆ ನೀಡಿದರು? ನೀವು ಯಾವಾಗಲಾದರೂ ತಲೆ ತಗ್ಗಿಸಿದರೆ ಅದು ನಿಮ್ಮ ಪಾದರಕ್ಷೆಯ ಅಂದ ನೋಡಲು ಮಾತ್ರ ಎಂದು ಸ್ಟೇಟಸ್ ಹಾಕುವ ಅನುಪಮಾ ಯಾಕೆ ತಲೆತಗ್ಗಿಸಿಕೊಂಡು ತಮ್ಮ ಪೊಲೀಸ್ ಶೂಗಳನ್ನೇ ಕಳಚಿ ಬಂದರು?

‘ಈ ಸಂಜೆ’ಯಲ್ಲಿ ಬಂದ ವರದಿಯೊಂದರ ಪ್ರಕಾರ ಡಿವೈಎಸ್‌ಪಿ ಅನುಪಮಾ ಶೆಣೈ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅದನ್ನು ಸ್ಲಂ ಸರ್ಕಾರ ಎಂದು ಕರೆದಿದ್ದರಂತೆ. ಅದು ನಿಜವೇ ಆದರೆ ಅನುಪಮಾ ಅವರ ಮನಸ್ಥಿತಿಯ ಬಗ್ಗೂ ಅನುಮಾನ ಬರುವುದು ಸಹಜ. ಮೊದಲನೆಯದಾಗಿ ಅನುಪಮಾ ಅವರಿಗೆ ಸ್ಲಂ ಜನರ ಬಗ್ಗೆ ಇರುವ ತಾತ್ಸಾರದ ಬಗ್ಗೆ ಪ್ರಶ್ನೆಗಳು ಏಳುತ್ತವೆ.  ಸಿದ್ದು ಸರ್ಕಾರ ಭ್ರಷ್ಟವೋ, ನಾಲಾಯಕ್ಕೊ ಅಥವಾ ಇನ್ನೇನೋ ಇರಬಹುದು. ಅದನ್ನು ಒರೆಗೆ ಹಚ್ಚೋಣ. ಆದರೆ ಅದು ಸ್ಲಂ ಸರ್ಕಾರ ಹೇಗಾಗುತ್ತದೆ? ಕರ್ನಾಟಕ ‘ರಮ್ ರಾಜ್ಯ’ ಎಂದು ಸಹ ಸ್ಟೇಟಸ್ ಹಾಕಿದ್ದರಂತೆ. ರಮ್ ರಾಜ್ಯವನ್ನು ನಿಯಂತ್ರಣಕ್ಕೆ ತರುವ ಕೆಲಸ ಮಾಡಲು ಅಧಿಕಾರ ಇರುವುದು ಸಹ ಅನುಪಮಾ ಅವರಂತಹ ಅಧಿಕಾರಿಗಳ ಕೈಯ್ಯಲ್ಲೆ ಅಲ್ಲವೆ?

ಅನುಪಮಾ ದಕ್ಷರು, ಪ್ರಾಮಾಣಿಕರು ಎಲ್ಲವೂ ಆಗಿರಬಹುದು. ಆದರೆ ಅಷ್ಟು ದಷ್ಟ, ಪ್ರಾಮಾಣಿಕ ಅಧಿಕಾರಿಯೋರ್ವರು ತಾನು ‘ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಯಾಕೆ ಪತ್ರ ಬರೆಯಬೇಕು? ಮತ್ತು ಹಾಗೆ ರಾಜೀನಾಮೆ ಪತ್ರ ಬರೆದು ತಮ್ಮ ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಸೋಷಿಯಲ್ ಮೀಡಿಯಾ ಬಳಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಯಾಕೆ ಅನುಪಮಾ ಸವಾರಿ ಮಾಡುತ್ತಿದ್ದಾರೆ? ಇದೆಲ್ಲ ಗಮನಿಸಿದಾಗ ಅನುಪಮಾ ಅವರ ನಡೆಯ ಮೇಲೂ ಅನುಮಾನಗಳು ಸಹಜವಾಗಿ ಮೂಡುತ್ತದೆ. ಇವತ್ತು ಅನುಪಮಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಸುವ ಅರ್ಧಕ್ಕಿಂತ ಹೆಚ್ಚಿನ ಮಂದಿ ಐಎಎಸ್ ಅಧಿಕಾರಿ ಡಿ.ಕೆ. ರವಿಯದ್ದು ಆತ್ಮಹತ್ಯೆ ಎಂದು ಎಂತಹ ವರದಿಯೇ ಬಂದರೂ ಅದು ಸುಳ್ಳು, ಸಿದ್ದರಾಮಯ್ಯ ಸ್ವತಃ ಡಿ.ಕೆ ರವಿಯನ್ನು ಕೊಂದಿದ್ದಾರೆ ಎನ್ನುವ ಮನಸ್ಥಿತಿಯವರು. ಇಂತಹವರನ್ನು ಕಟ್ಟಿಕೊಂಡು ಅನುಪಮಾ ಯಾವ ಹೋರಾಟ ನಡೆಸಲು ಮುಂದಾಗಿದ್ದಾರೆ? ರಾಜೀನಾಮೆ ಕೊಟ್ಟ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುವ ಸೋಷಿಯಲ್ ಮೀಡಿಯಾದ ಎಡಬಿಡಂಗಿ ಬೆಂಬಲಿಗರಿಗಿಂತ ಕರ್ತವ್ಯದಲ್ಲಿದ್ದು ನಿಷ್ಟೆಯಿಂದ ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಸಿಗುವ ಜನಸಾಮಾನ್ಯರ ಬೆಂಬಲದ ವ್ಯಾಪ್ತಿ, ಪ್ರಭಾವ, ಪರಿಣಾಮ ಮತ್ತು ಸಾರ್ಥಕತೆ ಅಗಾಧವಾದುದು.

ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಅನುಪಮಾ ಅಂತಹ ಅಜ್ಞಾತ ವಾಸದಲ್ಲೂ ತನ್ನ ಪ್ರಚಾರವನ್ನು ಸಮರ್ಪಕವಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ರಾಜೀನಾಮೆ ಅಂಗೀಕಾರವಾಗುವ ಮೊದಲೇ ಈ ಪಬ್ಲಿಸಿಟಿ ಸ್ಟಂಟ್ ಯಾತಕ್ಕಾಗಿ ಎಂದು ಅನುಪಮಾ ಅವರನ್ನ ಕೇಳಲೇಬೇಕಾಗುತ್ತದೆ. ಇನ್ನೊಂದೆಡೆ ಅನುಪಮಾ ಶೆಣೈ ಪ್ರಕರಣದ ಹಿಂದೆ ಕರಾವಳಿ ಮೂಲದ ಕೆಲವು ಸಂಘ ಪರಿವಾರದ ನಾಯಕರಿದ್ದಾರೆ ಎಂಬ ಗಾಳಿ ಸುದ್ದಿಗಳೂ ಹರಡಿರುವುದು ಅನುಪಮಾ ಅವರ ಧಿಡೀರ್ ರಾಜೀನಾಮೆಯ ಹಿಂದಿನ ಉದ್ದೇಶ ಬಗ್ಗೆ ಇನ್ನಷ್ಟು ಅನುಮಾನ, ಊಹಾಪೋಹ ಹೆಚ್ಚಾಗುವಂತೆ ಮಾಡಿದೆ.

 

ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅನುಪಮಾ ಶೆಣೈ ಜನರಿಗೆ, ರಾಜ್ಯಕ್ಕೆ ಒಳ್ಳೆಯದು ಮಾಡುವುದಿದ್ದರೆ ಅಲ್ಲಿಯೇ ವ್ಯಾಪಕ ಅವಕಾಶಗಳಿವೆ. ಎಲ್ಲೇ ಇರಲಿ ತಾನು ನಿಷ್ಟೆಯಿಂದ ಕೆಲಸ ಮಾಡುತ್ತೇನೆ ಎನ್ನುವ ಅಧಿಕಾರಿ ಯಾರ ಒತ್ತಡಕ್ಕೂ, ಯಾವ ಲಾಬಿಗೂ ಮಣಿಯಬೇಕಾಗಿಲ್ಲ. ಇಲ್ಲಿ ಈಸಬೇಕು ಮತ್ತು ಇದ್ದು ಜೈಸಬೇಕು. ಪಲಾಯನ ಮಾಡುವುದರಿಂದ ಯಾವ ಸಾಧನೆ ಮಾಡಿದಂತಾಗುವುದಿಲ್ಲ. ಅನುಪಮಾ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದು ಸರ್ಕಾರದ ಕಾನೂನಿನಂತೆ, ತನ್ನ ಆತ್ಮಸಾಕ್ಷಿಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು. ರಾಜೀನಾಮೆ ಹಿಂಪಡೆಯಬೇಕು. ಅನುಪಮಾ ರಾಜೀನಾಮೆಯಿಂದ ನಷ್ಟವಾಗುವುದು ಕೂಡ್ಲಿಗಿ ಮತ್ತು ಈ ರಾಜ್ಯದ ಜನರಿಗೆ. ಸರ್ಕಾರ ಬೃಹನ್ನಳೆಯಂತೆ ನನ್ನ ಮೇಲೆ ಎಫ್‌ಐಆರ್ ದಾಖಲಿಸುತ್ತದೆ ಎಂದು ಅನುಪಮಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರಂತೆ. ಸರ್ಕಾರ ಬೃಹನ್ನಳೆಯೆ ಅಂತಿಟ್ಟುಕೊಳ್ಳೋಣ. ಆದರೆ ಅನುಪಮಾ ಅವರದು ಉತ್ತರ ಕುಮಾರನ ಪೌರುಷವೂ ಆಗಬಾರದು ಅಲ್ಲವೆ

ಅನುಪಮಾ ಅವರ ಈ ದುಡುಕಿನ, ಸಿಡುಕಿನ ನಿರ್ಧಾರದಿಂದ ಹೆಚ್ಚೆಂದರೆ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಸುಂಟರಾಗಾಳಿ ಏಳಬಹುದು, ಬಿಜೆಪಿ, ಜೆಡಿಎಸ್‌ಗೆ ಸರ್ಕಾರದ ವಿರುದ್ಧ ಕತ್ತಿ ಮಸೆಯಲು ಇನ್ನೊಂದು ವಿಷಯ ಸಿಗಬಹುದು ಮತ್ತು ಹೆಚ್ಚೆಂದರೆ ಅನುಪಮಾ ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಚುನಾವಣೆಗೆ ಟಿಕೆಟ್ ಸಿಗಬಹುದು. ಈ ಬಂಡಾಯದಿಂದ ಇದಕ್ಕಿಂತ ಹೆಚ್ಚೇನೂ ಸಾಧಿಸುವುದು ಸದ್ಯಕ್ಕಂತೂ ಕಾಣುತ್ತಿಲ್ಲ.

-ಶಶಿಧರ ಹೆಮ್ಮಾಡಿ

Get real time updates directly on you device, subscribe now.