ಕ್ಷಮಿಸಿ, ನನ್ನೂರಿನ ಆಗಸದಿಂದ ನಕ್ಷತ್ರಗಳು ಮರೆಯಾಗಿವೆ

ಕಂದಮ್ಮಗಳನ್ನು ಕಳೆದುಕೊಂಡ ಮನೆಗಳಲ್ಲಿ ಮಡುಗಟ್ಟಿರುವ ಮೌನ, ಆವರಿಸಿರುವ ನೋವು, ಅಲ್ಲಿನ ಶೋಕ ಊಹಿಸಲೂ ಅಸಾಧ್ಯ. ಅವರ ನೋವಿನಲ್ಲಿ ‘ಕರಾವಳಿ ಕರ್ನಾಟಕ’ ಭಾಗಿ.

ಶಶಿಧರ ಹೆಮ್ಮಾಡಿ
ಪ್ರಿಯ ಓದುಗರೆ,
ದುರಂತವೊಂದು ನಡೆದು ಹೋಗಿದೆ. ಕರಾವಳಿಯ ಇತಿಹಾಸದಲ್ಲಿ ಇಂತಹ ಕರಾಳ ದಿನವೊಂದು ಬಂದು ಹೋಗಿದೆ. ಶಾಲೆಗೆಂದು ಹೊರಟ ಎಂಟು ಮಕ್ಕಳು ತಾವು ಪಯಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಮೂವರು ಅಪ್ಪ ಅಮ್ಮಂದಿರ ಇಬ್ಬರೂ ಮಕ್ಕಳು ತೀರಿಕೊಂಡಿದ್ದರೆ ಇನ್ನಿಬ್ಬರು ತಮ್ಮ ಏಕೈಕ ಮಗುವನ್ನು ಕಳೆದುಕೊಂಡಿದ್ದಾರೆ. ಮನೆಗಳನ್ನು ಬೆಳಬೇಕಾಗಿದ್ದ ದೀಪಗಳು ಶಾಶ್ವತವಾಗಿ ಆರಿ ಹೋಗಿವೆ. ಈ ದುರಂತವನ್ನು ತಪ್ಪಿಸಬಹುದಿತ್ತೆ? ನಮ್ಮ ಚಾಲಕರೇಕೆ ರಾಕ್ಷಸರಾಗುತ್ತಾರೆ? ಇನ್ನೊಂದು ಜೀವದ ಬೆಲೆ ನಮ್ಮ ಚಾಲಕರಿಗೇಕೆ ಅರ್ಥವಾಗುವುದಿಲ್ಲ? ಇಂದಿನ ಅಪಘಾತ ಶಾಲಾ ವಾಹನ ಚಾಲಕನ ಒಂದು ಕ್ಷಣದ ನಿರ್ಲಕ್ಷ್ಯದಿಂದ ಸಂಭವಿಸಿದೆ. ಐದು ಜನರು ಕೂರುವ ಒಮ್ನಿ ಕಾರಿನಲ್ಲಿ ಹೈಸ್ಕೂಲ್ ಮಕ್ಕಳು ಸೇರಿದಂತೆ 18 ಮಕ್ಕಳು ಮತ್ತು ಇಬ್ಬರು ವಯಸ್ಕರು ಪ್ರಯಾಣಿಸುತ್ತಿದ್ದರು.

ನಾವೇಕೆ ನಮ್ಮ ಮಕ್ಕಳ ಕುರಿತು ಇಷ್ಟು ನಿರ್ಲಕ್ಷ್ಯ ವಹಿಸುತ್ತೇವೆ? ಕೊಂಚ ಹೆಚ್ಚು ವೆಚ್ಚವಾದರೂ ಪರವಾಗಿಲ್ಲ ಮಕ್ಕಳನ್ನು ಸುರಕ್ಷಿತವಾಗಿ ಶಾಲೆ ತಲುಪಿಸುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಅಲ್ಲವೆ? ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ದಯವಿಟ್ಟು ಎಚ್ಚರ ವಹಿಸಿ. ಶಾಲಾಡಳಿತಕ್ಕೂ ಎಚ್ಚರ ವಹಿಸಲು ಆಗ್ರಹಿಸಿ. ನಮ್ಮ ಪೊಲೀಸ್, ಆ‍ರ್‌ಟಿಒ, ಶಿಕ್ಷಣ ಇಲಾಖೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಂತೆ ಆಗಾಗ ಎಚ್ಚರಿಸುವುದನ್ನೂ ಸಹ ನಾವು ಮರೆಯಬಾರದು. ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಸುರಕ್ಷಿತವಾಗಿ ಶಾಲೆಗೆ ಕಳುಹಿಸಿ. ಮಕ್ಕಳಿಗೆ ನಿಮ್ಮ ಪ್ರೀತಿ, ಅಕ್ಕರೆ ಮಾತ್ರ ಸಾಲದು ಅವರ ಸುರಕ್ಷತೆಯ ಬಗ್ಗೆ ಗಮನಹರಿಸಬೇಕಾದವರೂ ಸಹ ನೀವೆ.

ಚಾಲಕರೆ, ವೇಗ, ಗಡಿಬಿಡಿ ಮತ್ತು ಸ್ವಾರ್ಥಕ್ಕಾಗಿ ಮಾನವೀಯತೆ ಮಣ್ಣುಗೂಡಿಸದಿರಿ. ಪೋಷಕರೆ, ಮಕ್ಕಳ ಸುರಕ್ಷತೆಯ ಕುರಿತು ಕಾಳಜಿ ವಹಿಸಿ.

ಕಂದಮ್ಮಗಳನ್ನು ಕಳೆದುಕೊಂಡ ಮನೆಗಳಲ್ಲಿ ಮಡುಗಟ್ಟಿರುವ ಮೌನ, ಆವರಿಸಿರುವ ನೋವು, ಅಲ್ಲಿನ ಶೋಕ ಊಹಿಸಲೂ ಅಸಾಧ್ಯ. ಅವರ ನೋವಿನಲ್ಲಿ ”ಕರಾವಳಿ ಕರ್ನಾಟಕ’ ಭಾಗಿ.

ಕ್ಷಮಿಸಿ, ನನ್ನೂರಿನ ಆಗಸದಿಂದ ನಕ್ಷತ್ರಗಳು ಮರೆಯಾಗಿವೆ.
ಶಶಿಧರ ಹೆಮ್ಮಾಡಿ
ಸಂಪಾದಕ

Get real time updates directly on you device, subscribe now.