ಆರೋಪಿಗಳಿಗೆ ಕಾನೂನು ನೆರವು ನೀಡುವುದು ಯಾವಾಗಲಿಂದ ಅಪರಾಧವಾಯ್ತು?

ಅಮಾಯಕ ಯುವಕರಿಗೆ ಉಗ್ರ ಪಟ್ಟ ಕಟ್ಟಿದ ದೃಷ್ಟಾಂತಗಳು ಕಣ್ಮುಂದೆ ಇರುವಾಗ ಶಂಕಿತರಿಗೆ ಕಾನೂನು ನೆರವು ನೀಡುತ್ತೇನೆಂದು ಹೇಳಿದ ಒವೈಸಿಯ ಹೇಳಿಕೆ ಕಾನೂನುಬದ್ದವಾಗಿದೆ, ನೈತಿಕವಾಗಿಯೂ ಸರಿಯಾಗಿದೆ

ಶಶಿಧರ ಹೆಮ್ಮಾಡಿ

ಈ ಕೋರ್ಟ್‌ಗಳಿಗೆ ಏನಾಗಿದೆ?
ನಾನು ಒವೈಸಿ ಸಹೋದರರ ರಾಜಕೀಯದ ಕಡು ವಿರೋಧಿ. ಒಂದು ಧರ್ಮವನ್ನು ಆಧರಿಸಿ ಅವರನ್ನು ಪುಸಲಾಯಿಸಿ ಇವರ ಪಕ್ಷ ಮಾಡುವ ಮತ ರಾಜಕಾರಣವನ್ನು ನಾನು ಒಪ್ಪಲಾರೆ. ಆದರೆ ಅಸಾದುದ್ದೀನ್ ಒವೈಸಿ ಆತನ ಸಹೋದರ ಅಕ್ಬರುದ್ದೀನ್ ಒವೈಸಿಗಿಂತ ಸೆನ್ಸಿಬಲ್ ಮನುಷ್ಯ. ಮತ ರಾಜಕಾರಣವನ್ನೇ ಮಾಡಿದರೂ ಬೀದಿಯಲ್ಲಿ ನಿಂತು ಸಾಧ್ವಿ ಪ್ರಾಚಿ, ಯೋಗಿ ಆದಿತ್ಯನಾಥ, ಸಾಕ್ಷಿ ಮಹಾರಾಜ್ ತರಹ ಕೊಚ್ಚಿ, ಕೊಲ್ಲಿ, ಕಡಿಯಿರಿ ಎಂದು ಈತ ಭಾಷಣ ಮಾಡುವುದಿಲ್ಲ. ಮಾತ್ರವಲ್ಲ ಈತ ಸಂಸತ್ತಿನಲ್ಲಿ ಸೆನ್ಸಿಬಲ್ ಆಗಿ ಪ್ರಶ್ನೆಗಳನ್ನು ಕೇಳುತ್ತಾರೆ, ಡಿಬೇಟ್‌ಗಳಲ್ಲಿ ಭಾಗವಹಿಸುತ್ತಾರೆ.

ಮೊನ್ನೆ ಐಸಿಸ್ ಕುರಿತು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದ ಒವೈಸಿ ಮುಸ್ಲಿಮ್ ಯುವಕರು ಇಸ್ಲಾಂಗಾಗಿ ಸಾಯಬಾರದು, ಇಸ್ಲಾಂ ಮತ್ತು ಮನುಕುಲಕ್ಕಾಗಿ ಬದುಕಬೇಕು ಎಂದು ಹೇಳಿದ್ದರು. ಜಿಹಾದ್ಗಾಗಿ ನೀವು ಆಯುಧಗಳನ್ನು ಎತ್ತಿಕೊಳ್ಳಬೇಡಿ, ಜಿಹಾದ್ ಮಾಡಬೇಕು ಎಂದಿದ್ದರೆ ಬಡವರಿಗೆ ಅನ್ನ ನೀಡಿ, ಅವರ ಅಭಿವೃದ್ಧಿಗೆ ಶ್ರಮಿಸಿ, ಬಡ ಹೆಣ್ಣುಮಕ್ಕಳ ಮದುವೆಗೆ ನೆರವಾಗಿ ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದರು. ನಿಜವಾದ ಜಿಹಾದ್ ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಹೋರಾಡುವುದು ಎಂದು ಸಹ ಅಸಾದುದ್ದೀನ್ ಹೇಳಿದ್ದರು. ಅವರ ಅನೇಕ ಹೇಳಿಕೆಗಳು, ಅವರ ಧಾರ್ಮಿಕ ಮೂಲಭೂತವಾದಿ ನಿಲುವುಗಳನ್ನು ನಾನು ಒಪ್ಪದಿದ್ದರೂ ಆತ ಸಾರಾಸಗಟಾಗಿ ತಿರಸ್ಕರಿಸಬಲ್ಲ ರಾಜಕಾರಣಿ ಅಲ್ಲ. ಈ ದೇಶದ ರಾಜಕಾರಣಕ್ಕೆ, ಈ ದೇಶದ ನಾಳೆಗಳಿಗೆ ಅಸಾದುದ್ದೀನ್ ಅವರ ಪಕ್ಷದ ರಾಜಕೀಯ ನಿಲುವುಗಳು ಅಥವಾ ಬಿಜೆಪಿಯಂತಹ ಪಕ್ಷಗಳ ರಾಜಕೀಯ ಧೋರಣೆಗಳು ಒಳ್ಳೆಯದಲ್ಲ. ಆದರೆ ದಿನ ಬೆಳಗಾದರೆ ಹಿಂಸೆ, ದ್ವೇಷ ಎಂದು ಯುವಕರನ್ನು ಪ್ರಚೋದಿಸುವ ಕೆಲ ಸಂಘಪರಿವಾರದ ನಾಯಕರಿಗೆ ಹೋಲಿಸಿದರೆ ಅಸಾದುದ್ದೀನ್ ಎಷ್ಟೋ ವಾಸಿ.

ಇಷ್ಟೆಲ್ಲ ಬರೆಯಲು ಕಾರಣವಿದೆ. ಹೈದರಾಬಾದ್ ನ್ಯಾಯಾಲಯವೊಂದು ಅಸಾದುದ್ದೀನ್ ಮೇಲೆ ಕೇಸು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಈ ಕೇಸ್ ಯಾಕಾಗಿ? ಪ್ರಚೋದನಕಾರಿಯಾಗಿ ಮಾತಾಡಿದ್ದಕ್ಕಾಗಿಯೆ? ಗಲಭೆ ನಡೆಸಿದ್ದು ಅಥವಾ ಗಲಭೆಗೆ ಸಂಚು ನಡೆಸಿದ್ದಕ್ಕಾಗಿಯೆ? ಚುನಾವಣಾ ಅಕ್ರಮ ನಡೆಸಿದ್ದಕ್ಕಾಗಿಯೆ? ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕಾಗಿಯೆ? ಹಾಗೆ ಭಾವಿಸಿದರೆ ಅದು ತಪ್ಪು. ಈ ಕೇಸ್ ಈ ಯಾವುದೇ ಕಾರಣಗಳಿಗಾಗಿ ಅಲ್ಲ. ಬದಲಾಗಿ ಶಂಕಿತ ಆರೋಪಿಗಳಿಗೆ ಕಾನೂನು ನೆರವನ್ನು ಒದಗಿಸುತ್ತೇನೆ ಎಂದು ಹೇಳಿದ್ದಕ್ಕಾಗಿ ಈ ಕೇಸ್!

ಇತ್ತೀಚೆಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೈದರಾಬಾದ್ನ ವಿವಿಧೆಡೆ ದಾಳಿಗಳನ್ನು ನಡೆಸಿ ಹಲವು ಯುವಕರನ್ನು ಬಂಧಿಸಿತ್ತು. ಇವರೆಲ್ಲ ಕುಖ್ಯಾತ ಉಗ್ರಗಾಮಿಗಳಾದ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ನಂಟು ಇಟ್ಟುಕೊಂಡವರು ಎಂದು ಎನ್ಐಎ ಹೇಳಿತ್ತು. ಹೈದರಾಬಾದ್ ಮತ್ತು ದೇಶದ ವಿವಿಧೆಡೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಇವರಿಗಿತ್ತು ಎಂದು ಎನ್ಐಎ ಹೇಳಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಯುವಕರನ್ನು ಬಂಧಿಸಿದಾಗ ಅಸಾದುದ್ದಿನ್ ಓವೈಸಿ ತಾನು ಬಂಧಿತ ಯುವಕರಿಗೆ ಕಾನೂನು ನೆರವು ನೀಡುವುದಾಗಿ ಬಹಿರಂಗವಾಗಿ ಹೇಳಿದ್ದರು. ಹೈದರಾಬಾದ್ ಸಂಸದರಾಗಿರುವ ಒವೈಸಿಯ ಈ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರದ ನಾಯಕರಿಂದ ಬಾರೀ ವಿರೋಧ ವ್ಯಕ್ತವಾಯಿತು. ಅಸಾದುದ್ದೀನ್ ಒವೈಸಿ ಉಗ್ರಗಾಮಿಗಳನ್ನು ಬೆಂಬಲಿಸುತ್ತಾರೆ ಎಂದು ಆರೋಪವನ್ನೂ ಮಾಡಲಾಯ್ತು. ಮಾತ್ರವಲ್ಲ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ ಅಸಾದುದ್ದೀನ್ ಒವೈಸಿಯನ್ನು ಬಂಧಿಸಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಯ್ತು. ಆದರೆ ಪೊಲೀಸರು ಈ ದೂರನ್ನು ಸ್ವೀಕರಿಸಿದ್ದರೂ ಸಹ ಅಸಾದುದ್ದೀನ್ ಮೇಲೆ ಪ್ರಕರಣ ದಾಖಲಿಸಿರಲಿಲ್ಲ. ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿ ಇನ್ನೂ ಸಹ ಪ್ರಕರಣ ದಾಖಲಿಸಿಲ್ಲ ಎಂದು ಓರ್ವ ವಕೀಲರು ಅಸಾದುದ್ದೀನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು. ಇದೀಗ ಹೈದರಾಬಾದ್ನ 11ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ‘ಉಗ್ರರಿಗೆ ಕಾನೂನು ನೆರವನ್ನು ನೀಡುತ್ತೇನೆ’ ಎಂದು ಹೇಳಿದ್ದಕ್ಕಾಗಿ ಅಸಾದುದ್ದೀನ್ ಒವೈಸಿ ಮೇಲೆ ದೇಶದ್ರೋಹದ ಕೇಸು (ಸೆಕ್ಷನ್ 124A) ದಾಖಲಿಸಬೇಕು ಎಂದು ನಗರದ ಪೊಲೀಸ್ ಠಾಣೆಯೊಂದಕ್ಕೆ ಆದೇಶ ನೀಡಿದೆ. ಜುಲೈ 30ರ ಒಳಗೆ ಈ ಕುರಿತು ತನಗೆ ವರದಿ ನೀಡಬೇಕೆಂದೂ ಸಹ ಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಈ ಆದೇಶ ಭಾರತೀಯ ಕಾನೂನಿಗೆ ವಿರುದ್ಧವಾಗಿದೆ ಮತ್ತು ವಿಚಿತ್ರವಾಗಿದೆ.

ಹೈದರಾಬಾದ್ನ ಓರ್ವ ಜವಾಬ್ದಾರಿಯುತ ಸಂಸದನಾಗಿ ಅಸಾದುದ್ದೀನ್ ನೀಡಿದ ಹೇಳಿಕೆ ಯಾವ ರೀತಿಯಲ್ಲಾದರೂ ಸಂವಿಧಾನ ವಿರೋಧಿಯೆ? ಕಾನೂನು ವಿರೋಧಿಯೆ? ದೇಶದ್ರೋಹವೆ? ಖಂಡಿತವಾಗಿಯೂ ಇಲ್ಲ. ಅಪರಾಧ ಕೃತ್ಯ ಮಾಡಲು ಸಹಾಯ ಮಾಡುವುದು ಅಪರಾಧವೇ ವಿನಃ ಆರೋಪಿಯೋರ್ವನಿಗೆ ಕಾನೂನು ನೆರವು ಒದಗಿಸುತ್ತೇನೆ ಎನ್ನುವುದು ಭಾರತದಲ್ಲಿ ಯಾವಾಗಲಿಂದ ಅಪರಾಧವಾಯ್ತು?

ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಈ ಯುವಕರೆಲ್ಲರೂ ಹೈದರಾಬಾದ್ನವರು. ಹೆಚ್ಚಿನವರು ಹಿಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದವರಲ್ಲ. ಶಂಕಿತ ಉಗ್ರರು ಅಥವಾ ಐಸಿಸ್ ಜೊತೆ ಸಿಂಪಥಿ ಹೊಂದಿದ್ದಾರೆ ಎಂದು ಇವರನ್ನು ಬಂಧಿಸಲಾಗಿದೆ. ಇವರು ವಿಧ್ವಂಸಂಕ ಚಟುವಟಿಕೆ ನಡೆಸುತ್ತಾರೆಂಬ ಗುಮಾನಿಯಿಂದ ಬಂಧಿಸಲಾಗಿದೆ ಎಂದು ಎನ್ಐಎ ಹೇಳಿದೆ ವಿನಃ ಇವರು ಈಗಾಗಲೇ ಯಾವುದೇ ವಿಧ್ವಂಸಕ ಕೃತ್ಯ ಅಥವಾ ಹಿಂಸೆಯಲ್ಲಿ ಭಾಗವಹಿಸಿದೆ ಎಂದು ಎನ್ಐಎ ಹೇಳಿಯೂ ಇಲ್ಲ, ಈ ಯುವಕರು ಹಾಗೆ ಮಾಡಿಯೂ ಇಲ್ಲ. ಅನುಮಾನದ ಮೇರೆಗೆ ಇವರನ್ನು ಬಂಧಿಸಲಾಗಿದೆ. ಎನ್ಐಎ ಬಳಿ ದಾಖಲೆ ಇರಬಹುದು, ಸಕಾರಣವಾಗಿಯೇ ಈ ಯುವಕರನ್ನು ಬಂಧಿಸಿರಬಹುದು ಎಂದು ಸದ್ಯಕ್ಕೆ ನಾವೂ ನಂಬೋಣ. ಆದರೆ ಒಂದು ವಿಷಯ ಮುಖ್ಯವಾಗಿ ಗಮನಿಸಬೇಕು. ಈ ಹಿಂದೆ ಬಾಂಬ್ ಸ್ಫೋಟ ಮಾಡಿದವರು, ಮಾಡಲು ಉದ್ದೇಶಿಸಿದವರು, ಶಂಕಿತ ಉಗ್ರರು, ಅಲ್ ಕೈದಾ ನಂಟು ಹೊಂದಿರುವವರು, ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವರು ಎಂದೆಲ್ಲ ಹಲವು ಕಾರಣ ಮತ್ತು ಹಲವು ನೆವಗಳನ್ನು ಹೇಳುತ್ತಾ ಈ ದೇಶದ ಅನೇಕ ರಾಜ್ಯಗಳ ಪೊಲೀಸರು, ಬೇರೆಬೇರೆ ತನಿಖಾ ಸಂಸ್ಥೆಗಳು ಬಂಧಿಸಿದ ಮುಸ್ಲಿಮ್ ಯುವಕರಲ್ಲಿ ನೂರಾರು ಜನರು ಅಮಾಯಕರು, ನಿರಪರಾಧಿಗಳು ಸಹ ಇದ್ದರು ಎನ್ನುವುದನ್ನು ಅಲ್ಲಗಳೆಯಲಾದೀತೆ? ಅದೆಷ್ಟೊ ಯುವಕರು ತಮ್ಮ ಅಮೂಲ್ಯ ಯೌವ್ವನ ವಿನಃ ಕಾರಣ ಜೈಲಿನಲ್ಲಿ ಕಳೆದವರಿದ್ದಾರೆ. ಅನೇಕರು ಮೀಡಿಯಾ ಟ್ರಯಲ್ಗಳಲ್ಲೇ ‘ಉಗ್ರರೆಂದು’ ಸಾಬೀತಾಗಿ ತಮ್ಮ ಘನತೆ, ಗೌರವ, ಬದುಕು ಎಲ್ಲವನ್ನೂ ಕಳಕೊಂಡು ಬಳಿಕ ಅಮಾಯಕರೆಂದು ನ್ಯಾಯಾಲಾಯದಲ್ಲಿ ಸಾಬೀತಾಗಿ ಬಿಡುಗಡೆಯಾದ ಅಥವಾ ಕೆಲವೊಮ್ಮೆ ಸ್ವತಃ ತನಿಖಾ ಸಂಸ್ಥೆಗಳೆ ಅಮಾಯಕರೆಂದು ಬಿಡುಗಡೆ ಮಾಡಿದ ಯುವಕರ ಸಂಖ್ಯೆ ಏನು ಕಡಿಮೆ ಇದೆಯೆ? ಅಮಾಯಕ ಮುಸ್ಲಿಮ್ ಯುವಕರಿಗೆ ಉಗ್ರ ಪಟ್ಟ ಕಟ್ಟಿದ ಇಷ್ಟೆಲ್ಲ ದೃಷ್ಟಾಂತಗಳು ನಮ್ಮ ಕಣ್ಣ ಮುಂದೆ ಇರುವಾಗ ಬಂಧಿಸಲ್ಪಟ್ಟ ಹೈದರಾಬಾದ್ ಯುವಕರಿಗೆ ಕಾನೂನು ನೆರವು ನೀಡುತ್ತೇನೆ ಎಂದು ಹೇಳಿದ ಒವೈಸಿಯ ಹೇಳಿಕೆ ಕಾನೂನುಬದ್ದವಾಗಿದೆ ಮಾತ್ರವಲ್ಲ ನೈತಿಕವಾಗಿಯೂ ಅತ್ಯಂತ ಸರಿಯಾಗಿದೆ.

ಶಂಕಿತ ಆರೋಪಿಗಳಿಗೆ ಕಾನೂನು ನೆರವು ನೀಡುವ ಅಸಾದುದ್ದೀನ್ ವಿರುದ್ಧ ಪ್ರಕರಣ ದಾಖಲಿಸುವ ಆದೇಶ ನೀಡಿರುವ ನ್ಯಾಯಾಲಯದ ಆದೇಶದಲ್ಲಿ ನ್ಯಾಯವಿದೆಯೆ? ಆರೋಪಿಯೋರ್ವನಿಗೆ ವಕೀಲರನ್ನು ನೇಮಕ ಮಾಡಲು ಸಾಧ್ಯವಾಗದಿರುವಾಗ ನ್ಯಾಯಾಲಯವೇ ಆರೋಪಿಗೆ ವಕೀಲರ ಅಗತ್ಯವಿದೆಯೆ ಎಂದು ಕೇಳುತ್ತದೆ. ಅಗತ್ಯವಿದ್ದರೆ ವಕೀಲರನ್ನೂ ನೇಮಿಸುತ್ತದೆ. ಇದು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಮಾಮೂಲಿ ಸಂಗತಿ. ಮುಂಬೈ ಉಗ್ರ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ಗೆ ನ್ಯಾಯಾಲಯವೇ ವಕೀಲರ ನೆರವನ್ನು ನೀಡಿತ್ತು. ಆ ವಕೀಲರು ಅಜ್ಮಲ್ ಕಸಬ್ ಪರವಾಗಿ ವಾದವನ್ನೂ ಮಂಡಿಸಿದ್ದರು. ಹಾಗಾದರೆ ಅಜ್ಮಲ್ ಕಸಬ್ಗೆ ಕಾನೂನಿನ ನೆರವನ್ನು ನೀಡಿದ ನ್ಯಾಯಾಧೀಶರು ಮತ್ತು ಉಗ್ರ ಕಸಬ್ ಪರ ವಾದ ಮಂಡಿಸಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತೆ? ಪಾಕಿಸ್ತಾನದಿಂದ ಬಂದು ಅಮಾಯಕರ ಹತ್ಯೆಗೈದ ಓರ್ವ ಉಗ್ರಗಾಮಿಗೆ ಭಾರತದ ನ್ಯಾಯಾಲಯ ಕಾನೂನಿನ ನೆರವು ನೀಡುತ್ತದೆ ಅಂತಾದರೆ ಭಾರತದಲ್ಲಿಯೇ ಹುಟ್ಟಿ ಬೆಳೆದ ಇಂದಿಗೂ ಭಾರತದ ಪ್ರಜೆಗಳೇ ಆಗಿರುವ ಹೈದರಾಬಾದ್‌ನ ಯುವಕರಿಗೆ ಕಾನೂನಿನ ನೆರವು ನೀಡುವ ಅಸಾದುದ್ದೀನ್ ಹೇಳಿಕೆ ಹೇಗೆ ಅಪರಾಧವಾಗುತ್ತದೆ?

ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಂತಕರು, ಸಿಖ್ ಹತ್ಯಾಕಾಂಡದ ಆರೋಪಿಗಳು, ಗುಜರಾತ್ನಲ್ಲಿ ಮುಸ್ಲಿಮರ ಮಾರಣ ಹೋಮ ಮಾಡಿದವರು, ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದವರು, ಸಂಸತ್ ದಾಳಿ ಪ್ರಕರಣದ ಉಗ್ರರು ಮುಂತಾದವರ ಪರವಾಗಿ ಈ ದೇಶದ ಘಟಾನುಘಟಿ ನ್ಯಾಯವಾದಿಗಳು ವಾದ ಮಂಡಿಸಿಲ್ಲವೆ? ಹಾಗಾದರೆ ಅವರೆಲರೂ ಕಾನೂನು ದೃಷ್ಟಿಯಲ್ಲಿ ಅಪರಾಧಿಗಳೆ? ಹೈದರಾಬಾದ್‌ನ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡುವುದು ದೇಶದ್ರೋಹ ಎಂದೆಲ್ಲ ಆರೋಪಿಸುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರು ಮಾಲೆಗಾಂವ್, ಮಕ್ಕಾ ಮಸ್ಜಿದ್, ಸಂಝೋತಾ ಎಕ್ಸ್ಪ್ರೆಸ್ ರೈಲು ಮುಂತಾದ ಬಾಂಬ್ ಸ್ಫೋಟಗಳಲ್ಲಿ ಆರೋಪಿಗಳೆಂದು ತನಿಖೆಯಲ್ಲಿ ಸಾಬೀತಾಗಿ ಜೈಲುಪಾಲಾದ ಸಾಧ್ವಿ ಮತ್ತು ಇತರ ಆರೋಪಿಗಳಿಗೆ ಕಾನೂನು ನೆರವು ನೀಡುತ್ತಿದ್ದಾರೆ ಮಾತ್ರವಲ್ಲ ಅವರೆಲ್ಲ ನಿರಪರಾಧಿಗಳು ಎಂದು ಸಾರ್ವಜನಿಕವಾಗಿ ಭಾಷಣ ಬಿಗಿಯುತ್ತಾರೆ. ತಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆ ತನಿಖೆಯಲ್ಲೂ ಹಸ್ತಕ್ಷೇಪ ಮಾಡುತ್ತದೆ. ತನಿಖಾ ವರದಿಗಳನ್ನೇ ತಿರುಚುತ್ತದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಆರೋಪಿಗಳ ವಿರುದ್ಧ ನಿಧಾನಗತಿಯಲ್ಲಿ ಸಾಗುವಂತೆ ಆದೇಶ ನೀಡುತ್ತದೆ. ಇದೆಲ್ಲ ಸಂಘಪರಿವಾರ ಮಾಡುತ್ತಿರುವ ದೇಶಪ್ರೇಮದ ಕೆಲಸವೆ? ಅಸಾದುದ್ದೀನ್ ಐಸಿಸ್ ಅನ್ನು ಸಾರ್ವಜನಿಕವಾಗಿ ‘ನರಕದ ನಾಯಿಗಳು’ ಎಂದು ಖಂಡಿಸುತ್ತಾರೆ. ಬಿಜೆಪಿ ಅಥವಾ ಸಂಘಪರಿವಾರ ಹಿಂದೂತ್ವವಾದಿಗಳು ನಡೆಸಿದ ಬಾಂಬ್ ಸ್ಫೊಟ, ಹಿಂಸೆಯನ್ನು ಯಾವತ್ತಾದರೂ ಖಂಡಿಸಿದೆಯೆ? ಸದಾ ಹಿಂಸೆ ಮತ್ತು ದ್ವೇಷಕ್ಕೆ ಯುವಜನತೆಯನ್ನು ಪ್ರಚೋದಿಸುವ ಕೆಲಸ ಮಾಡುವ ಸಂಘಪರಿವಾರ ಹಿಂಸೆಯನ್ನು ಖಂಡಿಸುತ್ತದೆ ಎಂದು ನಿರೀಕ್ಷಿಸುವುದು ಸಹ ಅಸಾಧ್ಯ.

ಅಸಾದುದ್ದೀನ್‌ಗೆ ಶಂಕಿತ ಆರೋಪಿಗಳಿಗೆ ಕಾನೂನಿನ ನೆರವು ನೀಡುವ ಹಕ್ಕು ಇದೆ. ಶಂಕಿತ ಉಗ್ರರೆಂದು ಬಂಧಿಸಲ್ಪಟ್ಟ ಯುವಕರಿಗೂ ಕಾನೂನಿನೆ ನೆರವು ಪಡೆಯುವ ಹಕ್ಕಿದೆ. ಕಾನೂನು ನೆರವು ಒದಗಿಸುವ ಮತ್ತು ಪಡೆಯುವ ಎರಡೂ ಹಕ್ಕನ್ನು ಈ ದೇಶದ ಸಂವಿಧಾನ ಮತ್ತು ಕಾನೂನು ನಮಗೆಲ್ಲರಿಗೂ ನೀಡಿದೆ. ಇದಕ್ಕಾಗಿಯೇ ಕೇಸ್ ಹಾಕುವುದಾದರೆ ಈ ಹಕ್ಕನ್ನು ಈ ದೇಶದ ಪ್ರಜೆಗಳಿಗೆ ನೀಡಿದವರ ಮೇಲೆಯೆ ಮೊದಲ ಕೇಸ್ ದಾಖಲಾಗಬೇಕು. ಅಸಾದುದ್ದೀನ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆದೇಶಿಸಿರುವ ಈ ವಿಚಿತ್ರ ಆದೇಶ ಭಾರತದ ನ್ಯಾಯ ವ್ಯವಸ್ಥೆ ನಿಧಾನಕ್ಕೆ ಎಂಥವರ ಪ್ರಭಾವಕ್ಕೆ ಒಳಗಾಗುತ್ತಿದೆ ಮತ್ತು ಯಾರಿಂದ ನಿಯಂತ್ರಿಸಲ್ಪಡುತ್ತಿದೆ ಎನ್ನುವುದಕ್ಕೆ ಒಂದು ನಿದರ್ಶನ.
-ಶಶಿಧರ ಹೆಮ್ಮಾಡಿ

Get real time updates directly on you device, subscribe now.