ಡಿ ಸಿ ಇಬ್ರಾಹಿಂ ಕಾರು ಅಪಘಾತ ಮತ್ತು ಸಂಘಪರಿವಾರದ ‘ಭಕ್ತರ’ ಸಂಭ್ರಮ!

ಸುತ್ತೂರು ಕಾಯುವ ಪುತ್ತೂರು ದೇವರು ಹೆದ್ದಾರಿ ಮಧ್ಯೆ ಬಂದು ನಿಂತು ಇಬ್ರಾಹಿಂ ಕಾರಿಗೆ ಸ್ಕೊರ್ಪಿಯೊ ಗುದ್ದಿಸಿ ಯಾವುದೋ ಬಡಪಾಯಿಗಳು ಆಸ್ಪತ್ರೆ ಸೇರುವಂತೆ ಮಾಡುತ್ತಾನೆಯೆ? ಎಂಚಿನ ಸಾವ್ ಮಾರೆ

ಶಶಿಧರ ಹೆಮ್ಮಾಡಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ನಡುವೆ ಸಾಮಾನ್ಯರಂತೆ ಬೆರೆತು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದ ಜಿಲ್ಲಾಧಿಕಾರಿ ಇಬ್ರಾಹಿಂ ಇದೀಗ ಬೆಂಗಳೂರಿಗೆ ವರ್ಗವಾಗಿ ಹೋಗಿದ್ದಾರೆ. ಇಬ್ರಾಹಿಂ ಇತರ ಐಎಎಸ್ ಅಧಿಕಾರಿಗಳಂತೆ ಇರಲಿಲ್ಲ. ಅವರಿಗೆ ಜನರ ಕಷ್ಟಗಳ ಅರಿವಿತ್ತು. ಸಾಮಾನ್ಯ ಜನರ ಬದುಕು ಏನು ಎಂಬುದು ತಿಳಿದಿತ್ತು. ಅನೇಕ ಬಾರಿ ಸರ್ಕಾರದ ಕೆಲವು ನಿರ್ಧಾರಗಳು ಜನಪರವಾಗಿ ಇರದಿದ್ದಾಗ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇದ್ದಾಗ ಆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ಇಬ್ರಾಹಿಂ ಪತ್ರಗಳನ್ನೂ ಬರೆದಿದ್ದರು. ಆ ಪತ್ರಗಳನ್ನು ಓದಿದವರಿಗೆ ಇಬ್ರಾಹಿಂ ಎಷ್ಟು ಸೂಕ್ಷ್ಮ ಸಂವೇದನೆಯ ಮನುಷ್ಯ ಎಂದು ಗೊತ್ತಿದೆ. ಸಾಹಿತ್ಯ ಮತ್ತು ಸೃಜನಶೀಲತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲೂ ಇಬ್ರಾಹಿಂಗೆ ಅತೀವ ಆಸಕ್ತಿ ಇತ್ತು. ಇದೆಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿ ಅದ್ಭುತವಾದ ಅಂತಃಕರಣವಿತ್ತು.

ಪುತ್ತೂರು ದೇವಾಲಯದ ಜಾತ್ರೆಗೆ ಸಂಬಂಧಿಸಿ ಆಮಂತ್ರಣ ಪತ್ರಿಕೆಯಲ್ಲಿ ಇಬ್ರಾಹಿಂ ಅವರ ಹೆಸರು ಇದ್ದದ್ದಕ್ಕೆ ಸಂಘ ಪರಿವಾರ ಅವರನ್ನು ತೀರಾ ಹೀನಾಯವಾಗಿ ನಡೆಸಿಕೊಂಡು ಅವಮಾನ ಮಾಡಿತು. ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದ ಓರ್ವ ಜಿಲ್ಲಾಧಿಕಾರಿಗೆ ಈ ರೀತಿಯ ಅವಮಾನ ಮಾಡಿದ್ದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೌಲ್ಯಗಳಿಗೆ ವಿರುದ್ಧವಾಗಿತ್ತು. ಪುತ್ತೂರಿನ ಸಮಸ್ತರಿಗೂ ಸೇರಿದ ಮಹಾಲಿಂಗೇಶ್ವರ ದೇವಸ್ಥಾನವನ್ನು ಸಂಘಪರಿವಾರದ ಕೆಲವೇ ಮಂದಿಯ ಗುಂಪು ಹೈಜಾಕ್ ಮಾಡಿ ಪುತ್ತೂರಿನ ಜನರ ಉದಾತ್ತ ಮನೋಭಾವ, ಸಹಿಷ್ಣುತೆಯ ಶತಮಾನಗಳ ಸಂಸ್ಕೃತಿಯ ಮೇಲೆಯೇ ಪ್ರಹಾರ ಮಾಡಿತು. ಪುತ್ತೂರಿನ ಸಜ್ಜನ ಹಿಂದೂ ಬಾಂಧವರೆಲ್ಲ ಸಂಘಪರಿವಾರ ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದೂ ಸುಮ್ಮನಾದರು. ಕೊನೆಗೆ ನ್ಯಾಯಾಲಯದಲ್ಲೂ ಸರ್ಕಾರ ಇಬ್ರಾಹಿಂ ಅವರ ಪರ ಸಮರ್ಥ ವಾದ ಮಂಡಿಸಲು ವಿಫಲವಾಯ್ತು. ಸಂಘಪರಿವಾರದ ಕೈ ಮೇಲಾಯ್ತು.

ಇಷ್ಟೆಲ್ಲ ಈಗ ಏಕೆ ಹೇಳುತ್ತಿದ್ದೇನೆ ಎಂದರೆ ಮೊನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಜಿಲ್ಲಾಧಿಕಾರಿಗಳು ಇದ್ದ ಕಾರು ಅಪಘಾತಕ್ಕೆ ಈಡಾಯಿತು. ಇಬ್ರಾಹಿಂ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಫಾರ್ಚುನರ್ ವಾಹನ ಮತ್ತು ಸ್ಕೊರ್ಪಿಯೊ ವಾಹನ ಪರಸ್ಪರ ಢಿಕ್ಕಿಯಾಯಿತು. ಇಬ್ರಾಹಿಂ ಮತ್ತು ಅವರ ಪತ್ನಿ ಯಾವುದೇ ಅಪಾಯವಿಲ್ಲದೆ ಪಾರಾದರು. ಸ್ಕೊರ್ಪಿಯೊ ವಾಹನದಲ್ಲಿದ್ದವರಿಗೆ ಗಾಯಗಳಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಬಳಿಕ ಇನ್ನೊಂದು ಅಪಘಾತ ನಡೆಯಿತು. ಅಪಘಾತಕ್ಕೆ ಈಡಾದ ಇಬ್ರಾಹಿಂ ಅವರ ವಾಹನದಿಂದ ಅವರ ಸಾಮಾನು ಸರಂಜಾಮುಗಳನ್ನು ಇನ್ನೊಂದು ಫಾರ್ಚುನರ್ ವಾಹನದಲ್ಲಿ ಹಾಕಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಜಿಲ್ಲಾಧಿಕಾರಿ ಅವರ ಮಗನಿದ್ದ ಕಾರು ಕೂಡ ಎದುರಿನಿಂದ ಬಂದ ಇನ್ನೊಂದು ವಾಹನಕ್ಕೆ ಢಿಕ್ಕಿಯಾಯ್ತು. ಇಬ್ರಾಹಿಂ ಅವರ ಮಗನಿಗೆ ಏಟಾಗಲಿಲ್ಲ. ಆದರೆ ಎದುರಿದ್ದ ವಾಹನದಲ್ಲಿದವರಿಗೆ ಗಂಭೀರ ಗಾಯಗಳಾಗಿವೆ. ಯಾರಿಗೆ ಏನೇ ದುರಂತ ಸಂಭವಿಸಲಿ, ಅದರಲ್ಲೂ ಖುಷಿಪಡುವ ವಿಕೃತ ಜನರು ಈಗಲೂ ಇದ್ದಾರೆ. ಇಬ್ರಾಹಿಂ ಮತ್ತು ಅವರ ಮಗನಿದ್ದ ವಾಹನಗಳ ಅಪಘಾತ ಕೆಲವರಿಗೆ ತಮ್ಮ ವಿಚಿತ್ರ ತೀಟೆ ತೀರಿಕೊಳ್ಳಲು ವಿಷಯವಾಗಿದ್ದು ಮಾತ್ರ ಈ ಸಮಾಜದ ದುರಂತ.

ಇಬ್ರಾಹಿಂ ಮತ್ತು ಅವರ ಮಗನಿದ್ದ ಕಾರುಗಳ ಅಪಘಾತ ನಡೆದದ್ದೆ ತಡ, ‘ನೋಡಿ ಪುತ್ತೂರು ಮಹಾಲಿಂಗೇಶ್ವರನ ಮಹಿಮೆ, ಜಿಲ್ಲೆಯ ಗಡಿ ದಾಟುವ ಒಳಗೆ ತಾನು ಏನೆಂದು ಇಬ್ರಾಹಿಂಗೆ ಆ ಮಹಾಲಿಂಗೇಶ್ವರ ತೋರಿಸಿಕೊಟ್ಟ’ ಎಂದೆಲ್ಲ ಕಥೆಕಟ್ಟಿ ಪ್ರಚಾರಕ್ಕೆ ಶುರುವಿಟ್ಟರು. ಈಗ ಇಂತಹ ವಿಕೃತ ಮನಸ್ಸುಗಳು ಸೃಷ್ಟಿ ಮಾಡುವ ಇಂತಹ ನೀಚ ಕಥೆಗಳು ಹರಡಲು ಸೋಷಿಯಲ್ ಮೀಡಿಯಾ ಇದೆ ಮತ್ತು ಅದರಲ್ಲಿ ಇಂತಹ ವಿಕೃತಿಗಳು ಹರಡಲು ಸಮಯವೇ ಬೇಕಾಗಿಲ್ಲ, ತಕ್ಷಣ ಹರಡಿಬಿಡುತ್ತದೆ. ಇದೀಗ ಸಂಘಪರಿವಾರದ ಭಕ್ತ ಮಹಾಶಯರು ಇಬ್ರಾಹಿಂ ಅವರಿಗೆ ಆದ ಅಪಘಾತ ಪುತ್ತೂರಿನ ಮಹಾಲಿಂಗೇಶ್ವರನ ಶಾಪ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಥೆ ಕಟ್ಟಿ ಬೀಗುತ್ತಿದ್ದಾರೆ. ನೋಡಿದಿರಾ ದೇವರ ಶಕ್ತಿ ಎಂದು ಎದುರಿನಿಂದ ಹೇಳುತ್ತಾ ‘ಛೇ ಅಪಘಾತವಾದರೂ ಇಬ್ರಾಹಿಂಗೆ, ಅವರ ಹೆಂಡತಿಗೆ, ಅವರ ಮಗನಿಗೆ ಏನೂ ಆಗಲಿಲ್ಲವಲ್ಲ’ ಎಂದು ಒಳಗೊಳಗೆ ಕೊರಗುತ್ತಲೂ ಇದ್ದಾರೆ. ಇಂತಹ ಮನಸ್ಥಿತಿಯವರಿಗೆ ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ.

ಅಷ್ಟಕ್ಕೂ ಸುತ್ತೂರು ಕಾಯುವ ಪುತ್ತೂರು ಮಹಾಲಿಂಗೇಶ್ವರ ಜಿಲ್ಲಾಧಿಕಾರಿ ಇಬ್ರಾಹಿಂರನ್ನೋ ಅಥವಾ ಇನ್ನಾವುದೋ ದಾರಿಹೋಕನನ್ನು ಕಾಯಬಹುದು ವಿನಃ ಕಾಡುತ್ತಾನೆಯೆ? ಈ ವಿಕೃತಿಗಳು ತಾವೆ ಕಟ್ಟುತ್ತಿರುವ ಕಥೆ ಎಷ್ಟು ಅಮಾನವೀಯವಾಗಿದೆ ಎಂಬ ಅರಿವಾದರೂ ಇವರಿಗೆ ಇದೆಯೆ? ಇಬ್ರಾಹಿಂ ಅವರ ಕಾರು ಗಟ್ಟಿಮುಟ್ಟಾದ ಫಾರ್ಚುನರ್ ಕಾರು. ಅವರು ಸೀಟ್ ಬೆಲ್ಟ್ ಧರಿಸಿದ ಕಾರಣ ಅವರಿಗೆ ಅಪಾಯವಾಗಿಲ್ಲ. ಫಾರ್ಚುನರ್‌ನಲ್ಲಿ ಜೀವರಕ್ಷಕ ಏರ್‌ಬ್ಯಾಗ್‌ಗಳು ಇದ್ದವು. ಅವರ ಕಾರಿಗೆ ಎದುರಿನಿಂದ ಗುದ್ದಿದ ಸೊರ್ಪಿಯೊ ಹಳೆಯ ವಾಹನ. ಅದರಲ್ಲಿದ್ದವರಿಗೆ ಹೆಚ್ಚು ಏಟಾಗಿದೆ. ಮತ್ತೂ ಒಂದು ಸಂಗತಿ ನೋಡಿ. ಸ್ಕೊರ್ಪಿಯೊ ವಾಹನದ ಎದುರು ದೊಡ್ಡದಾಗಿ ಲಕ್ಷಿ ನರಸಿಂಹ ಪ್ರಸನ್ನ ಎಂದು ಬರೆಯಲಾಗಿದೆ. ಅದರಲ್ಲಿದ್ದವರು ಪಾಪ ಯಾರೋ ಬಡಪಾಯಿಗಳು. ಜಿಲ್ಲಾಧಿಕಾರಿಗೆ ‘ಶಿಕ್ಷಿಸುವ’ ಭರದಲ್ಲಿ ಪುತ್ತೂರು ಮಹಾಲಿಂಗೇಶ್ವರ ಯಾರೋ ಬಡಪಾಯಿಗಳಿಗೆ ಹೆಚ್ಚು ಹಾನಿ ಮಾಡುತ್ತಾನೆಯೆ?ಜಿಲ್ಲಾಧಿಕಾರಿ ಇಬ್ರಾಹಿಂ ಒಂದು ವೇಳೆ ತಪ್ಪೇ ಮಾಡಿ ಮಹಾಲಿಂಗೇಶ್ವರ ಶಾಪ ಕೊಟ್ಟ ಅಂತ ವಾದಕ್ಕಾದರೂ ಸರಿ ಎಂದರೂ ಆ ದೇವರು ಅದರಿಂದ ಇನಾರೋ ಬಡಪಾಯಿ ದಾರಿಹೋಕರಿಗೆ ಹಾನಿಯಾಗುವ ಹಾಗೆ ಶಾಪ ಕೊಡುತಾನೆಯೆ? ಓದಲು ತಮಾಷೆ ಅನಿಸಬಹುದು. ಆದರೆ ಇವರ ಈ ವಿಕೃತ ಮನಸ್ಸು ಆ ಬಡಪಾಯಿ ಗಾಯಾಳುಗಳ ಬಗ್ಗೆ ಯಾಕೆ ಯೋಚನೆ ಮಾಡುವುದಿಲ್ಲ? ದೇವರು ಕಾಯಲಿಕ್ಕಾಗಿರುತ್ತಾನೊ ಅಥವಾ ಕೊಲ್ಲಲಿಕ್ಕಾಗಿಯೊ? ದೇವರಿಗೆ ಕೆಡುಕು ಮಾಡುವುದು ಉದ್ಯೋಗವೆ? ಮನುಷ್ಯ ತಪ್ಪು ಮಾಡಿದರೂ ಕ್ಷಮೆ ಕೊಡುವುದು, ತಪ್ಪನ್ನು ಸುಧಾರಿಸುವುದು, ಒಳ್ಳೆಯ ಬುದ್ದಿ ಕೊಡುವುದು ಇದೆಲ್ಲ ದೇವರ ಕೆಲಸ ಅಂತ ನಾವೆಲ್ಲ ತಿಳಿದುಕೊಂಡಿದ್ದೆವು. ದೇವರು ಯಾವುದೊ ಹೆದ್ದಾರಿಯಲ್ಲಿ ನಮಗೇನು ಕೇಡು ಮಾಡದಿರಲಿ ಎಂದು ಆಸ್ತಿಕರೆಲ್ಲ ಗಾಡಿ ಹತ್ತುವ ಮುನ್ನವೇ ದೇವರನ್ನು ನೆನೆಯುತ್ತಾರೆ. ಅಂಥದ್ದರಲ್ಲಿ ಆ ದೇವರೇನು ಊದನೆ-ಗುಂಡ್ಯದ ಮಧ್ಯೆ ಬಂದು ನಿಂತು ಇಬ್ರಾಹಿಂ ಕಾರಿಗೆ ಸ್ಕೊರ್ಪಿಯೊ ಕಾರು ಗುದ್ದಿಸುತ್ತಾನೆಯೆ? ಎಂಚಿನ ಸಾವ್ ಮಾರೆ!

ನಿತ್ಯವೂ ನೂರಾರು ಜನರು ವಿವಿಧ ಕಾರಣಗಳಿಗೆ ಸಾಯುತ್ತಾರೆ. ಏನೇನು ಲೋಕದ ಅರಿವಿಲ್ಲದ ಮಕ್ಕಳು ಕೂಡ ಅಪಘಾತಗಳಲ್ಲಿ ಸಾಯುತ್ತಾರೆ. ಬದುಕಿದ್ದವರಿಗೆ ಮಾತ್ರ ದೇವರ ಕೃಪೆ, ಸಾಯುವವರೆಲ್ಲ ದೇವರ ಸಿಟ್ಟಿಗೆ ಪಾತ್ರರಾದವರು ಎಂದು ಯೋಚಿಸುವುದೆ ಎಷ್ಟು ಅಮಾನವೀಯ. ಕಳೆದ ಶನಿವಾರ ಉಡುಪಿ ಸಮೀಪದ ಹಿರಿಯಡ್ಕ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಶುರು ಮಾಡಿದ ದಿನವೇ ಸ್ವಯಂಪ್ರೇರಿತರಾಗಿ ಅಲ್ಲಿ ಕೆಲಸ ಮಾಡಲು ಬಂದಿದ್ದ ಇಬ್ಬರು ಯುವಕರು ಮಣ್ಣಿನ ಗೋಡೆಯಡಿ ಸಿಲುಕಿ ಸಾವನ್ನಪ್ಪಿದರು. ಎಂತಹ ಘೋರ ದುರಂತವಿದು. ಮನೆಯ ಆಧಾರ ಸ್ತಂಭಗಳಾಗಿದ್ದ ಇಬ್ಬರು ಯುವಕರು ಇಲ್ಲದೆ ಅವರ ಮನೆಗಳೀಗ ಗೋಳಿನ ಗೂಡು. ಕಳೆದ ಕೆಲ ತಿಂಗಳ ಹಿಂದೆ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ‘ಶ್ರೀನಿವಾಸ ಕಲ್ಯಾಣೋತ್ಸವ’ ಕಾರ್ಯಕ್ರಮದ ಸಿದ್ಧತೆ ನಡೆಸುತ್ತಿದ್ದಾಗ ಇಬ್ಬರು ಯುವಕರು ವಿದ್ಯುತ್ ತಂತಿ ತಾಗಿ ಮೃತಪಟ್ಟರು. ಇವರೆಲ್ಲ ದೇವರ ಸೇವೆಗೆಂದು ಹೋದವರು. ಆದರೆ ಸಾವು ಇವರನ್ನು ಕೊಂಡೊಯ್ಯಿತು. ಇವರೆಲ್ಲ ಪಾಪಿಗಳೆಂದು ಈ ವಿಕೃತ ಮನಸ್ಸಿನ ವ್ಯಕ್ತಿಗಳು ಹೇಳುತ್ತಿದ್ದಾರೆಯೆ? ಇಂತಹ ವಿಕೃತ ವಿತಂಡವಾದಗಳಿಂದ ಅದ್ಯಾವ ರಾಜಕೀಯ ಮಾಡುತ್ತಿದ್ದೇವೆ ಎಂದು ಈ ದರಿದ್ರ ಮನಸ್ಸುಗಳು ಆತ್ಮಾವಲೋಕ ಮಾಡಿಕೊಳ್ಳಬೇಕಿದೆ.

ಕೆಡುಕಿನಲ್ಲಿ ಸಂಭ್ರಮಿಸುವುದು ಅತ್ಯಂತ ಕ್ರೂರ. ಇಬ್ರಾಹಿಂ ಎಂಬ ಜಿಲ್ಲಾಧಿಕಾರಿ ಈ ಜಿಲ್ಲೆಗೆ ಅತ್ಯುತ್ತಮ ಸೇವೆ ಸಲ್ಲಿಸಿ ಹೊರಟು ನಿಂತಿದ್ದಾರೆ. ಅವರ ಮುಂದಿನ ಹುದ್ದೆಗೆ, ಅವರ ಕೌಟುಂಬಿಕ ಜೀವನಕ್ಕೆ ಶುಭ ಹರಸಿ ಬೀಳ್ಕೊಡಬೇಕಾಗಿತ್ತು ನಾವೆಲ್ಲ. ಆದರೆ ಅವರ ಕಾರು ಅಪಘಾತವಾಯಿತೆಂದು ಸಂಭ್ರಮಪಡುವ ಜನರು ನಮ್ಮ ಕರಾವಳಿಯಲ್ಲಿ, ನಮ್ಮ ಸುತ್ತಮುತ್ತಲೇ ಇದ್ದಾರಲ್ಲ ಎಂದು ಯೋಚಿಸುವುದಕ್ಕೂ ಹೇಸಿಗೆ ಅನಿಸುತ್ತಿದೆ. ಕ್ಷಮಿಸಿ ಇಬ್ರಾಹಿಂ. ನಿಮಗೆ ಶುಭವಾಗಲಿ.

ಸುತ್ತೂರು ಕಾಯುವ ಪುತ್ತೂರು ಮಹಾಲಿಂಗೇಶ್ವರ ತನ್ನ ಭಕ್ತರಿಗೆ ಸದ್ಬುದ್ದಿ ಕೊಡುತ್ತಿರುವನೊ ಇಲ್ಲವೊ ತಿಳಿಯದು, ಆದರೆ ಈ ಸಂಘಪರಿವಾರದ ‘ಭಕ್ತ’ ಮಹಾಶಯರಿಗೆ ಮಾನವೀಯತೆ ಮತ್ತು ಅಂತಃಕರಣದ ತುರ್ತು ಕ್ಲಾಸ್ ಬೇಕಾಗಿದೆ. ಕರಾವಳಿ ಹೀಗಂತೂ ಇರಬಾರದು. ಇಷ್ಟು ಈ ಬರಹದ ಆಶಯ.
-ಶಶಿಧರ ಹೆಮ್ಮಾಡಿ

Get real time updates directly on you device, subscribe now.