ಸರ್ಜಿಕಲ್ ದಾಳಿ ಮತ್ತು ಮೋದಿ ಸರ್ಕಾರದ ‘ಆಸ್ಥಾನ ಮಾಧ್ಯಮಗಳು’

ರಾಜ ಮಹಾರಾಜರ ಕಾಲದಲ್ಲಿ ಅಸ್ಥಾನ ಕವಿಗಳು, ಆಸ್ಥಾನ ವಿದೂಷಕರು ಇದ್ದ ಹಾಗೆ ಈ ಮೋದಿ ಸರ್ಕಾರದ ಕಾಲದಲ್ಲಿ ಆಸ್ಥಾನ ಮಾಧ್ಯಮಗಳು ಹುಟ್ಟಿಕೊಂಡಿವೆ ಎಂಬುದನ್ನು ಸರ್ಜಿಕಲ್ ದಾಳಿ ಸಾಬೀತು ಮಾಡಿದೆ.

ಶಶಿಧರ ಹೆಮ್ಮಾಡಿ
ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ಸರ್ಜಿಕಲ್ ದಾಳಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಂದೆಂದೂ ಸರ್ಜಿಕಲ್ ದಾಳಿಗಳು ನಡೆದೇ ಇಲ್ಲವೆಂಬಂತೆ ಒಂದು ಮನಸ್ಥಿತಿಯ ಜನರು ಸಂಭ್ರಮಪಡುತ್ತಿದ್ದಾರೆ. ಪಟಾಕಿ ಸಿಡಿಸುತ್ತಿದ್ದಾರೆ. ಹಿಂದೆಯೂ ಸರ್ಜಿಕಲ್ ದಾಳಿಗಳು ನಡೆದಿದ್ದವು. ಮನಮೋಹನ್ ಸಿಂಗ್ ಪ್ರಧಾನಿಯಾಗಿರುವ ಕಾಲದಲ್ಲೇ ಸರ್ಜಿಕಲ್ ದಾಳಿ ನಡೆದಿರುವುದನ್ನು ಮಾಜಿ ಸೇನಾಧಿಕಾರಿಗಳು, ಮಿಲಿಟರಿ ಕಾರ್ಯಾಚರಣೆಗಳ ವಿಶ್ಲೇಷಕರು, ಅನೇಕ ಪತ್ರಕರ್ತರು ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಮಾಧ್ಯಮ ತೋರಿಸುತ್ತಿಲ್ಲ. ‘ಭಕ್ತರು’ ಇದನ್ನು ನಂಬಲು ತಯಾರಿಲ್ಲ. ಹಿಂದಿನ ಸರ್ಜಿಕಲ್ ದಾಳಿಗಳಿಗೂ ಮೊನ್ನೆಯ ಮೋದಿ ಸರ್ಜಿಕಲ್ ದಾಳಿಗಳಿಗೂ ಇದ್ದ ವ್ಯತ್ಯಾಸಗಳೆಂದರೆ ಸರ್ಜಿಕಲ್ ದಾಳಿಯನ್ನು ಮಾಧ್ಯಮದೆದುರು ಬಂದು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಪ್ರಚಾರಕ್ಕೆ ಮೊರೆ ಹೋಗಿರಲಿಲ್ಲ. ಪಟಾಕಿ ಸಿಡಿಸಿ ವಾಯು ಮಾಲಿನ್ಯ ಮಾಡಿರಲಿಲ್ಲ. ಯುದ್ಧ ಎಂದು ಸಂಭ್ರಮಪಡುವ ವಾತಾವರಣವನ್ನು ಸರ್ಕಾರವೇ ಮುಂದೆ ನಿಂತು ನಿರ್ಮಿಸಿರಲಿಲ್ಲ. ಮಾಧ್ಯಮಗಳಲ್ಲಿ ರಣೋತ್ಸಾಹ ಮನೆಮಾಡಿರಲಿಲ್ಲ. ಆಡಳಿತ ಪಕ್ಷಗಳು ಅದರಲ್ಲಿ ಚುನಾವಣಾ ಲಾಭದ ಲೆಕ್ಕ ಹಾಕಿರಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭಗಳಲ್ಲಿ ಎಷ್ಟು ಘನತೆಯಿಂದ ನಡೆದುಕೊಳ್ಳಬೇಕೊ ಆ ಘನತೆಯಿಂದ ಸರ್ಕಾರ ನಡೆದುಕೊಂಡಿತ್ತು.

ಈ ಬಾರಿಯ ಸರ್ಜಿಕಲ್ ದಾಳಿಗಳು ಮಾತ್ರ ಹೇಗೆಲ್ಲ ತನ್ನ ವೈಫಲಗಳನ್ನು ಮುಚ್ಚಿಕೊಳ್ಳಲು ಬಳಸಿಕೊಳ್ಳಬೇಕು, ಅದರಿಂದ ಈ ದೇಶದ ಜನರ ಗಮನವನ್ನು ಬೇರೆಡೆಗೆ ಹೇಗೆ ಸೆಳೆಯಬೇಕು, ಮುಂಬರುವ ಚುನಾವಣೆಯಲ್ಲಿ ಅದನ್ನು ಗೆಲುವಿಗಾಗಿ ಹೇಗೆ ಬಳಸಿಕೊಳ್ಳಬೇಕು ಎಂದು ಸರ್ಜಿಕಲ್ ದಾಳಿಯ ಮೊದಲೇ ಕರಾರುವಾಕ್ಕಾಗಿ ಮೋದಿ ಸರ್ಕಾರ ಪ್ಲ್ಯಾನ್ ಮಾಡಿತ್ತು ಎಂಬುದು ಸರ್ಜಿಕಲ್ ದಾಳಿಯ ನಂತರ ಬಟಾಬಯಲಾಗಿದೆ. ಸೈನಿಕರನ್ನು, ಸೇನೆಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡ ಈ ದೇಶದ ಮೊದಲ ಸರ್ಕಾರ ವಾಜಪೇಯಿಯ ಎನ್ಡಿಎ ಪಾಳಯ. ಎರಡನೆಯ ಸರ್ಕಾರ ಮೋದಿಯ ದೇಶ ಭಕ್ತರ ಸರ್ಕಾರ.

ಸರ್ಜಿಕಲ್ ದಾಳಿ ನಡೆಸಿದ್ದೇವೆ, ಉಗ್ರರ ನೆಲೆಗಳು ನಾಶವಾಗಿವೆ ಎಂಬ ಮಾಹಿತಿ ಮಾತ್ರ ಸೇನೆ ಮತ್ತು ಸರ್ಕಾರದಿಂದ ಅಧಿಕೃತವಾಗಿ ಸಿಕ್ಕಿದೆ. ಅದರಾಚೆ ಯಾವ ಮಾಹಿತಿಯೂ ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರದೊಳಗೆ ವೈಮಾನಿಕ ದಾಳಿ ನಡೆಸಲಾಗಿತ್ತು. ಅಲ್ಲಿಯೇ ಸೈನಿಕರನ್ನು ವಿಮಾನದಿಂದ ಇಳಿಸಲಾಗಿತ್ತು. ನಸುಕಿನ ವೇಳೆ ಕಾರ್ಯಾಚರಣೆ ಮುಗಿಸಿ ಸೈನಿಕರು ವಾಪಸಾಗಿದ್ದರು. ಗಡಿ ಕಾಯುತ್ತಿರುವ ಭಾರತೀಯ ಪಡೆಗಳಿಗೂ ತಿಳಿಯದ ಹಾಗೆ ಈ ಸಂಪೂರ್ಣ ಕಾರ್ಯಾಚರಣೆ ಮಾಡಲಾಗಿತ್ತು. ಸೇನೆಯ ಈ ಕಾರ್ಯಾಚರಣೆಗೆ ಸೆಲ್ಯೂಟ್. ಅಲ್ಲಿಗೆ ಈ ವಿಷಯ ಮುಗಿಯಬೇಕಿತ್ತು. ಆದರೆ ನಂತರ ಶುರುವಾದದ್ದು ಆಡಳಿತ ನಡೆಸುತ್ತಿರುವ ಸರ್ಕಾರದಿಂದ ತನ್ನ ಚುನಾವಣಾ ಲಾಭದ ಕಾರ್ಯಾಚರಣೆ. ಮಾಧ್ಯಮಗಳಿಂದ ಮೋದಿ ಸರ್ಕಾರದ ಪ್ರಚಾರದ ಕಾರ್ಯಾಚರಣೆ. ದೇಶದ ಜನರಲ್ಲಿ ಯುದ್ಧವೊಂದನ್ನು ಗೆದ್ದು ಬಂದ ವಾತಾವರಣ ನಿರ್ಮಿಸುವ ಕಾರ್ಯಾಚರಣೆ. ಈ ದೇಶದ ಯುವಕರಲ್ಲಿ ಯುದ್ಧೋನ್ಮಾದವನ್ನು ಮೂಡಿಸಿ ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಕಾರ್ಯಾಚರಣೆ. ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಮೋದಿ ಸರ್ಕಾರದ ಮುಖ ಉಳಿಸಿಕೊಳ್ಳುವ ಕಾರ್ಯಾಚರಣೆ.

ಎಷ್ಟು ಉಗ್ರರು ಈ ಕಾರ್ಯಾಚರಣೆಯಲ್ಲಿ ಹತರಾದರು? ಸೇನೆಯಂತೂ ಲೆಕ್ಕ ಹೇಳಿಲ್ಲ. ಅಲ್ಲಿದ್ದ ಎಲ್ಲ ಉಗ್ರರು ಸತ್ತರೆ? ಅದನ್ನೂ ಸೇನೆ ಹೇಳಿಲ್ಲ. ಆದರೆ ಈ ದೇಶದ ಮಾಧ್ಯಮಗಳು 38 ಉಗ್ರರು ಎಂದು ತಾವೇ ಕಂಡುಬಂದಂತೆ ಲೆಕ್ಕ ಹೇಳಿದವು. ಹೇಗೆ ಕಾರ್ಯಾಚರಣೆ ನಡೆಸಿದೆವು ಎಂದು ಸೇನೆ ಎಲ್ಲಿಯೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಆದರೆ ಮಾಧ್ಯಮಗಳು ಇಡೀ ಸರ್ಜಿಕಲ್ ಕಾರ್ಯಾಚರಣೆಯನ್ನು ತಾವೇ ಸ್ವತಃ ಲೈವ್ ಶೂಟ್ ಮಾಡಿಬಂದಂತೆ ಪುಟಗಟ್ಟಲೆ ಬರೆದವು, ಗಂಟೆಗಟ್ಟಲೆ ಕಾರ್ಯಕ್ರಮ ನೀಡಿದವು. ಮೋದಿ ಭಕ್ತರ ಪಡೆಯಂತೂ ಸೇನೆಯನ್ನು ಮರೆತು ಮೋದಿಯ ಬಗ್ಗೆ ಬರೆದ ಕಥೆಗಳು, ತೋರಿಸಿದ ಭಟ್ಟಂಗಿತನ ಸೈನಿಕರನ್ನೂ ಅವಮಾನಿಸುವಂತಿತ್ತು.

ಸೇನೆ ತನ್ನ ಕಾರ್ಯಾಚರಣೆಯ ಒಂದೇ ಒಂದು ಚಿತ್ರವನ್ನೂ ಮಾಧ್ಯಮಕ್ಕೆ ಬಿಡುಗಡೆ ಮಾಡಿಲ್ಲ. ಆದರೆ ಮೋದಿಯ ಭಕ್ತ ಬ್ರಿಗೇಡಿನ ಜನರು ಭಾರತೀಯ ಸೇನೆ ಹತ್ಯೆ ಮಾಡಿದ ಉಗ್ರರ ದೇಹಗಳು ಎಂದು ಯಾವುದೋ ಕಾಲದ ಒಂದು ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಪಟ್ಟರು. ಆದರೆ ಆ ಫೋಟೊದ ಅಸಲಿಯತ್ತು ಏನೆಂದರೆ ಅದು ಪಾಕಿಸ್ತಾನದ ಸೇನೆ ಪೇಶಾವರದ ಶಾಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ನೂರೈವತ್ತಕ್ಕು ಹೆಚ್ಚು ಮಕ್ಕಳ ಕಗ್ಗೊಲೆ ಮಾಡಿದ ಬಳಿಕ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ ಉಗ್ರರ ಚಿತ್ರಗಳು. ಪಾಕಿಸ್ತಾನದ ಸೇನೆ ಹತ್ಯೆ ಮಾಡಿದ ಉಗ್ರರ ಚಿತ್ರಗಳನ್ನು ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರು ಎಂದು ಪ್ರಚಾರ ಮಾಡಿದ ಈ ಫೇಕುಗಳು ತಾವು ಭಾರತೀಯ ಸೇನೆಗೆ ಅವಮಾನ ಮಾಡುತ್ತಿದ್ದೇವೆಂದೂ ಸಹ ನಾಚಿಕೆಪಡಲಿಲ್ಲ.

ಸರ್ಜಿಕಲ್ ದಾಳಿಯ ವರದಿಯಲ್ಲಿ ಮಾಧ್ಯಮಗಳ ವರ್ತನೆಯಂತೂ ಎಷ್ಟು ಬೇಜಾವಾಬ್ದಾರಿಯಾಗಿತ್ತು ಎಂದರೆ ಈ ಸುದ್ದಿಸಂಸ್ಥೆಗಳ ಒಳಗೆ ಎಂತೆಂತಹ ಪತ್ರಕರ್ತರು ತುಂಬಿಕೊಂಡಿದ್ದಾರೆ ಎಂಬ ವಿರಾಟ್ ದರ್ಶನವೇ ಆಯಿತು. ಸೇನಾ ಕಾರ್ಯಾಚರಣೆಯನ್ನು ಮೋದಿ ಸರ್ಕಾರ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಕುರಿತು, ಸೋಷಿಯಲ್ ಮೀಡಿಯಾ ಅಣುಬಾಂಬ್ನಂತಹ ವಿಚಾರಗಳಲ್ಲಿಯೂ ಅತ್ಯಂತ ಅಸೂಕ್ಷ್ಮವಾಗಿ ಕಮೆಂಟ್ ಮಾಡುತ್ತಿರುವ ಕುರಿತು, ಅಲ್ಲಿ ಹಬ್ಬಿರುವ ಸುಳ್ಳುಗಳ ಕುರಿತು ಕನಿಷ್ಟ ಒಂದು ಅನುಮಾನವನ್ನೂ ಸಹ ವ್ಯಕ್ತಪಡಿಸದೆ ಪಕ್ಕಾ ‘ಭಕ್ತರ’ ತರಹ ಮಾಧ್ಯಮಗಳು ವರದಿ ಬಿತ್ತರಿಸಿದವು. ರಾಜ ಮಹಾರಾಜರ ಕಾಲದಲ್ಲಿ ಅಸ್ಥಾನ ಕವಿಗಳು, ಆಸ್ಥಾನ ವಿದೂಷಕರು ಇದ್ದ ಹಾಗೆ ಈ ಮೋದಿ ಸರ್ಕಾರದ ಕಾಲದಲ್ಲಿ ಆಸ್ಥಾನ ಮಾಧ್ಯಮಗಳು ಹುಟ್ಟಿಕೊಂಡಿವೆಯೆ ಎಂಬ ಅನುಮಾನ ಬರುವಂತೆ ಮಾಧ್ಯಮಗಳು ವರ್ತಿಸುತ್ತಿವೆ. ಬೇರೆ ವಿಚಾರ ಪಕ್ಕಕ್ಕಿರಲಿ, ಇಂತಹ ದಾಳಿಗಳು ಈ ಹಿಂದೆ ನಡೆದಿವೆಯೆ ಎಂಬ ಸಣ್ಣ ತನಿಖೆಯನ್ನೂ ಸಹ ಮಾಧ್ಯಮಗಳು ಮಾಡುವ ಗೋಜಿಗೆ ಹೋಗಲಿಲ್ಲ. ಹಾಗೇನಾದರೂ ಮಾಡುವುದು ಅವರಿಂದ ಸಾಧ್ಯವೂ ಇರಲಿಲ್ಲವೊ ಏನೋ. ಯಾಕೆಂದರೆ ಅವುಗಳ ಅಂತಿಮ ಉದ್ದೇಶವೇ ಸರ್ಕಾರವೊಂದರ ಚಮಚಾಗಿರಿ ಅಂತಾದ ಮೇಲೆ ಅವರು ಯಾಕಾದರೂ ಇಂತಹ ವಿಚಾರಗಳ ಆಳಕ್ಕೆ ಇಳಿಯಬಯಸುತ್ತಾರೆ? ಪಾಕಿಸ್ತಾನದ ಪ್ರಭುತ್ವ, ಸೈನ್ಯ, ಅಲ್ಲಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ನಮ್ಮ ಸಿಟ್ಟು, ಆಕ್ರೋಶ ಸಹಜವೆ. ಆದರೆ ಪಾಕಿಸ್ತಾನದ ಜನಸಾಮಾನ್ಯರು ಈ ಉಗ್ರಗಾಮಿಗಳಿಂದ ಅನುಭವಿಸಿದ ಸಾವು-ನೋವು ಕಡಿಮೆ ಇದೆಯೆ? ಅದನ್ನು ಯಾವ ಮಾಧ್ಯಮಾವದರೂ ಹೇಳುತ್ತಿದೆಯೆ? ನಮ್ಮ ಮಾಧ್ಯಮಗಳು ಈ ಹಿಂದೆಂದೂ ಇಷ್ಟು ಬರಡಾಗಿರಲಿಲ್ಲ.

ಭಾರತೀಯ ಯೋಧನೊಬ್ಬ ಗಡಿ ದಾಟಿ ಹೋಗಿ ಪಾಕಿಸ್ತಾನದ ವಶದಲ್ಲಿದ್ದಾನೆ ಎಂಬ ಸುದ್ದಿ ಬಂತು. ಸೇನೆ ಇದನ್ನು ದೃಢೀಕರಿಸಿತು. ಆತ ಸರ್ಜಿಕಲ್ ದಾಳಿಯಲ್ಲಿ ಪಾಲ್ಗೊಂಡ ಯೋಧನಲ್ಲ ಎಂದು ಸೇನೆ ಹೇಳಿತು. ಆದರೆ ಆತ ಯಾವ ಸನ್ನಿವೇಶದಲ್ಲಿ ಗಡಿದಾಟಿ ಹೋದ ಎಂಬುದನ್ನು ಸೇನೆ ಈ ವರೆಗೆ ಸ್ಪಷ್ಟಪಡಿಸಿಲ್ಲ. ಸೊಷಿಯಲ್ ಮೀಡಿಯಾದಲ್ಲಂತೂ ಎಂತಹ ಜನರಿದ್ದಾರೆ ಎಂದರೆ ಪಾಕಿಸ್ತಾನದ ವಶದಲ್ಲಿ ಭಾರತೀಯ ಯೋಧನೊಬ್ಬ ಇದ್ದಾನೆ ಎಂದು ಸುದ್ದಿ ಪ್ರಕಟಿಸಿದ ‘ಕರಾವಳಿ ಕರ್ನಾಟಕ’ ಮತ್ತೆ ಕೆಲವು ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ತಮ್ಮ ನಂಜು ಕಾರಿಕೊಂಡರು. ‘ಏನ್ರೀ ನಮ್ಮ ಸೇನೆಯ ಬಗ್ಗೆ ಹೀಗೆ ಬರೆಯುತ್ತೀರಲ್ಲ, ಸುಳ್ಳು ಹೇಳುತ್ತೀರಲ್ಲ, ಸೇನೆಗೆ ಅವಮಾನ ಮಾಡುತ್ತಿದ್ದೀರಲ್ಲ, ನೀವು ಪಾಕಿಸ್ತಾನಿ ಸಪೋರ್ಟರ್’ ಎಂದೆಲ್ಲ ಕಮೆಂಟ್ಗಳು ಬಂದವು. ನಮ್ಮ ಯುವಜನತೆಯ ಮನಸ್ಸು ಎಷ್ಟು ಕೆಟ್ಟು ಹೋಗುತ್ತಿದೆ ಎಂದರೆ ಸತ್ಯವನ್ನು ಹೇಳುವುದೇ ಅಪರಾಧ ಎಂಬಂತಾಗಿದೆ. ಮಹಾರಾಷ್ಟ್ರದ ಬಡ ಕುಟುಂಬದ ಯೋಧ ಚಂದೂ ಬಾಬುಲಾಲ್ ಚವಾಣ್ ಪಾಕಿಸ್ತಾನದ ವಶದಲ್ಲಿರುವುದು ನಮಗೆ ಯಾಕೆ ಮುಖ್ಯವಾಗುವುದಿಲ್ಲ? ಅದನ್ನು ಮಾಧ್ಯಮಗಳು ಯಾಕೆ ಬಚ್ಚಿಡಬೇಕು? ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತು ಎಂದು ಸಂಭ್ರಮಿಸುವ ಮೊದಲು ಚಂದೂ ಬಾಬುಲಾಲ್ ಚವಾಣ್ ಸುರಕ್ಷಿತವಾಗಿ ಮನೆಗೆ ಮರಳಿ ಬರಲಿ ಎಂದು ನಮ್ಮ ಮನಸ್ಸುಗಳು ಹಾರೈಸದಿದ್ದರೆ ಅದೆಂತಹ ದೇಶಪ್ರೇಮ? ಆತ ಮನೆಗೆ ಮರಳುವ ತನಕ ಹೇಗೆ ನಾವು ಸಂಭ್ರಮಿಸಲು ಸಾಧ್ಯ?

ಕೆಲವರಂತೂ ಯುದ್ಧ ಯುದ್ಧ ಎಂದು ಅರಚಾಡುತ್ತಿದ್ದಾರೆ. ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಂತೆ, ನಮ್ಮ ಸೇನೆಯಲ್ಲಿ ಬಳಕೆಯಾಗದೆ ಇರುವ ಶಸ್ತ್ರಾಸ್ತ್ರ, ಬಾಂಬುಗಳನ್ನೆಲ್ಲ ಬಳಕೆ ಮಾಡಲು ಇದು ಸಕಾಲವಂತೆ ಎಂದೆಲ್ಲ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಯುದ್ಧ, ಅದರ ಭೀಕರತೆ, ಅದು ತರುವ ವಿನಾಶ, ಸೈನಿಕರ ಸಾವು, ನೋವು, ನಮ್ಮ ದೇಶದ ಆರ್ಥಿಕತೆಯ ಮೇಲೆ ಅದರ ಪರಿಣಾಮ, ಯುದ್ಧ ಗೆದ್ದರೂ ನಮ್ಮ ದೇಶದ ಪ್ರಗತಿಗೆ ಆಗುವ ಹಿನ್ನಡೆ ಯಾವುದನ್ನೂ ಈ ಜನರು ಕಿಂಚಿತ್ತು ಯೋಚನೆಯೂ ಮಾಡಲಾರರು. ಅಣುಬಾಂಬ್ ಬಳಕೆ ಮಾಡಬೇಕಂತೆ, 10 ಕೋಟಿ ಜನರು ಬಲಿದಾನಕ್ಕೆ ಸಿದ್ಧರಾಗಬೇಕಂತೆ ಎಂದು ಕರೆ ಕೊಡುವವರನ್ನು ಮತಿವಿಕಲರೆನ್ನದೆ ಮತ್ತೇನು ಹೇಳಲು ಸಾಧ್ಯವಿಲ್ಲ. ಕಾರ್ಗಿಲ್ ಯುದ್ಧದಲ್ಲಿ ಬಲಿಯಾದ ನಮ್ಮ ಸೈನಿಕರು, ಅವರ ಮನೆಮಂದಿಯ ಸ್ಥಿತಿ ಕೂಡ ನಮ್ಮನ್ನು ಕಾಡಬೇಕಲ್ಲವೆ? ಪಾಕಿಸ್ತಾನದಲ್ಲೂ ಸಾಯುವುದು ಯಾವುದೋ ತಾಯಂದಿರ ಮಕ್ಕಳಲ್ಲವೆ? ಯುದ್ಧದಲ್ಲಿ ಉದ್ಧಾರವಾಗುವುದು ಎರಡೂ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಕಂಪೆನಿಗಳು ಮಾತ್ರ.

ಸರ್ಜಿಕಲ್ ದಾಳಿಯೊಂದು ನಡೆದ ಬಳಿಕದ ಈ ಎಲ್ಲ ವಿದ್ಯಮಾನಗಳು ಈ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಕುರಿತು ನಮ್ಮ ಮುಂದೆ ಸ್ಪಷ್ಟವಾದ ಚಿತ್ರಣವನ್ನು ಇಟ್ಟಿದೆ. ಹಿಂತಿರುಗಿ ಬರಲಾರದಷ್ಟು ದೂರ ಹೋಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಈ ದೇಶಕ್ಕೆ ಆಗುವ ಅನಾಹುತ ಊಹಿಸಲೂ ಅಸಾಧ್ಯ.

-ಶಶಿಧರ ಹೆಮ್ಮಾಡಿ . 

Get real time updates directly on you device, subscribe now.