ಶತಮಾನದ ಹಸಿವೆಯಲ್ಲಿರುವ ಕುಂದಾಪುರದ ಕೊರಗರ ಊಟಕ್ಕೆ ಬಜರಂಗಿಗಳು ಒದ್ದಾಗ!

ಜೀವಮಾನದಲ್ಲಿ ಒಮ್ಮೆಯೂ ಕೊರಗರು ಹೊಟ್ಟೆಗೆ ಹಿಟ್ಟು ತಿನ್ನುತ್ತಾರೊ ಅಥವಾ ಹಸಿವಿನಿಂದ ಸಾಯುತ್ತಿದ್ದಾರೊ ಎಂದು ನೋಡದ ಈ ನೀಚರು ನಿಶ್ಚಿತಾರ್ಥದ ಮನೆಗೆ ನುಗ್ಗಿ ಮಾಡಿದ ದೌರ್ಜನ್ಯ ಅತ್ಯಂತ ಹೇಯ.

ಶಶಿಧರ ಹೆಮ್ಮಾಡಿ
ಕುಂದಾಪುರ ತಾಲೂಕಿನಲ್ಲಿರುವ ದಲಿತರಲ್ಲೇ ಅತ್ಯಂತ ದಮನಿತ ಮತ್ತು ದಲಿತ ಸಮುದಾಯವೆಂದರೆ ಕೊರಗ ಸಮುದಾಯ. ಹೆಚ್ಚೆಂದರೆ ತಾಲೂಕಿನಲ್ಲಿ 3 ಸಾವಿರದಷ್ಟು ಜನಸಂಖ್ಯೆ ಇರುವ ಈ ಸಮುದಾಯ ಶತಮಾನಗಳಿಂದ ಬಡತನ, ಹಸಿವು, ಅವಮಾನಗಳನ್ನೇ ನಿತ್ಯವೂ ಬದುಕಿದ ಅತ್ಯಂತ ಶೋಷಿತ ಸಮುದಾಯ. ಪರಿಶಿಷ್ಟ ಪಂಗಡದಲ್ಲಿ ಬರುವ ಈ ಸಮುದಾಯವನ್ನು ಉಳಿದವರು ಬಿಡಿ, ಇಲ್ಲಿನ ಪರಿಶಿಷ್ಟ ಜಾತಿಯವರೆ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೆ ಶೈಕ್ಷಣಿಕವಾಗಿ ಒಂದಷ್ಟು ಮಕ್ಕಳು ಈ ಸಮುದಾಯದಲ್ಲಿ ಮುಂದೆ ಬರುತ್ತಿದ್ದಾರೆ. ಕುಂದಾಪುರ ಪುರಸಭೆಯ ಪೌರಕಾರ್ಮಿಕರಲ್ಲಿ ಮುಕ್ಕಾಲು ಪಾಲು ಇದೇ ಸಮುದಾಯದವರು. ಇಲ್ಲಿನ ಪ್ರತಿಷ್ಠಿತ ವಸತಿ ಗೃಹಗಳಲ್ಲಿ ಸಫಾಯಿ ಕರ್ಮಚಾರಿಗಳೂ ಹೆಚ್ಚಿನವರು ಇದೇ ಸಮುದಾಯದವರು, ಅದರಲ್ಲಿ ಹೆಚ್ಚಿನವರು ಗಂಡಸರು. ಈಗ್ಗೆ ಇಪ್ಪತ್ತು ವರ್ಷಗಳ ಹಿಂದಿನ ತನಕವೂ ಮದುವೆ ಮನೆಗಳಲ್ಲಿ ಉಂಡು ಎಸೆದ ಎಲೆಗಳಲ್ಲಿರುವ ಅನ್ನ, ಪಲ್ಯ ಇತ್ಯಾದಿಗಳನ್ನು ಸಂಗ್ರಹ ಮಾಡಿಕೊಂಡು ಮನೆಗೆ ಹೋಗಿ ಅದನ್ನೇ ಶೇಖರಿಸಿಟ್ಟು ಊಟ ಮಾಡುತ್ತಿದ್ದ ಈ ಸಮುದಾಯ ಈ ಸಮಾಜದ ಅವಕೃಪೆಗೆ ಒಳಗಾದಷ್ಟು ಕರಾವಳಿಯಲ್ಲಿ ಇತರ ಯಾವುದೇ ಸಮುದಾಯಗಳು ಒಳಗಾಗಿಲ್ಲ ಎನ್ನಬಹುದು. ಇವರದೇ ಆದ ಒಂದು ಪ್ರತ್ಯೇಕ ಭಾಷೆ ಇದ್ದರೂ ಕೀಳರಿಮೆಯ ಕಾರಣ ಇಂದಿನ ಯುವ ಜನಾಂಗ ಈ ಭಾಷೆಯನ್ನು ಮಾತಾಡದೆ ತುಳು, ಕನ್ನಡ ಭಾಷೆಗಳನ್ನು ಮಾತನಾಡುತ್ತಿದೆ. ಮೀಸಲಾತಿಯ ಕಾರಣ ಪಂಚಾಯತ್ ಮಟ್ಟದಲ್ಲಿ ಕೆಲವು ಗಂಡಸರು, ಹೆಂಗಸರು ಸದಸ್ಯರಾಗಿ ಆಯ್ಕೆಯಾಗುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ರಾಜಕೀಯ ಕ್ಷೇತ್ರದಲ್ಲೂ ಇವರಿಗೆ ಸಿಕ್ಕಿಲ್ಲ.

ಇಲ್ಲಿನ ಪರಿಶಿಷ್ಟ ಜಾತಿಗಳ ಜನರು ದಲಿತ ಸಂಘರ್ಷ ಸಮಿತಿ ಇತ್ಯಾದಿಗಳ ಮೂಲಕ ಸಂಘಟಿತರಾಗಿಯಾದರೂ ಇದ್ದಾರೆ. ಹೋರಾಟಗಳು ಅವರಿಗೆ ಗೊತ್ತಿವೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರುವ ಈ ಕೊರಗರು ಸಂಘಟಿತರಾಗಿಯೂ ಇಲ್ಲ, ಹೋರಾಟಗಳೂ ಅವರಿಗೆ ಗೊತ್ತಿಲ್ಲ. ಮೊನ್ನೆಮೊನ್ನೆಯ ತನಕ ಅಥವಾ ಬಹುಶಃ ಇಂದಿನ ತನಕವೂ ಇಲ್ಲಿನ ದಸಂಸಗಳಲ್ಲಿ ಕೊರಗರು ನಾಯಕರಾಗಿ ಬಿಡಿ, ಸದಸ್ಯರಾಗಿಯೊ, ಕಾರ್ಯಕರ್ತರಾಗಿಯೊ ಕೂಡ ಇರಲಿಲ್ಲ ಅಥವಾ ಈಗಲೂ ಇಲ್ಲ. ಕೊರಗರ ಕಷ್ಟಗಳಿಗೆ, ಸಮಸ್ಯೆಗಳಿಗೆ ಇಲ್ಲಿನ ದಸಂಸಗಳು ಅಥವಾ ಇತರ ದಲಿತ ಸಂಘಟನೆಗಳು ಸ್ಪಂದಿಸಿದ್ದು ತೀರಾ ಕಡಿಮೆ. ಈ ಕೊರಗ ಕುಟುಂಬಗಳನ್ನು ಕರಾವಳಿಯ ನಾಗರಿಕ(?) ಸಮಾಜ ಕನಿಷ್ಟ ಸಹಾನುಭೂತಿಯಿಂದ ಕೂಡ ನಡೆಸಿಕೊಂಡ ಉದಾಹರಣೆಗಳು ಹುಡುಕಿದರೂ ಸಿಗಲಿಕ್ಕಿಲ್ಲ.

ಕುಂದಾಪುರ ತಾಲೂಕಿನ ಮೊವಾಡಿಯಲ್ಲಿ ಇಂತಹುದೇ ಒಂದು ಕೊರಗ ಕುಟುಂಬದಲ್ಲಿ ಮೊನ್ನೆ ಹೆಣ್ಣು-ಗಂಡಿನ ಮದುವೆಯ ಸಂಬಂಧ ಗಟ್ಟಿಯಾಗುವ ನಿಶ್ಚಿತಾರ್ಥ ಸಮಾರಂಭವಿತ್ತು. ಸಡಗರದಲ್ಲಿದ್ದ ಹೆಣ್ಣಿನ ಮನೆಯಲ್ಲಿ ಅವರ ಸಾಂಪ್ರದಾಯಿಕ ಆಹಾರ ದನದ ಮಾಂಸದ ಅಡುಗೆಗೆ ಸಿದ್ಧತೆಯೂ ನಡೆದಿತ್ತು. ಬೆಳಗಾದರೆ ಸಡಗರದಲ್ಲಿರಬೇಕಾದ ಮನೆಗೆ ನಡುರಾತ್ರಿ ಹೊತ್ತು ಹಿಂದೂತ್ವವಾದಿ ಸಂಘಟನೆಗಳ ಅದರಲ್ಲಿಯೂ ಮುಖ್ಯವಾಗಿ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ದಂಡು ನುಗ್ಗಿಬಿಟ್ಟಿತು. ಹೆಂಗಸರು ಮಕ್ಕಳು ಇದ್ದ ಮನೆಗಳಿಗೆ ಈ ಕಿರಾತಕ ಪಡೆ ನುಗ್ಗಿ ಮನೆಯಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ನಡೆಸಿತು. ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಓರ್ವ ಮಹಿಳೆಯನ್ನು ಸಹ ಬಿಡದೆ ಆಕೆಗೆ ಅತ್ಯಂತ ಅವಾಚ್ಯ ಶಬ್ದಗಳಲ್ಲಿ ಬೈದು ಮೂರು ರಸ್ತೆ ಕೂಡುವ ಕಡೆ ನಿನ್ನ ಮೇಲೆ ಅತ್ಯಾಚಾರ ನಡೆಸುತ್ತೇವೆ ಎಂಬ ಬೆದರಿಕೆಯನ್ನೂ ಒಡ್ಡಿತು. ಮನೆಯಲ್ಲಿ ಮಲಗಿದ್ದ ವಯೋವೃದ್ಧರೋರ್ವರನ್ನು ಸಹ ಹೊರಗೆಳೆದು ಹಿಂಸೆ ನೀಡಲಾಯ್ತು. ಜೀವಮಾನದಲ್ಲಿ ಒಮ್ಮೆಯೂ ಈ ಕೊರಗರು ಹೊಟ್ಟೆಗೆ ಹಿಟ್ಟು ತಿನ್ನುತ್ತಾರೊ ಇಲ್ಲವೊ ಅಥವಾ ಹಸಿವಿನಿಂದ ಹಾಗೆ ಸಾಯುತ್ತಿದ್ದಾರೊ ಎಂದು ನೋಡದ ಮಂದಿ ನಿಶ್ಚಿತಾರ್ಥಕ್ಕೆ ಮಾಡುತ್ತಿದ್ದ ಅಡುಗೆಯ ಬಗ್ಗೆ ಮಾತ್ರ ಆಕ್ಷೇಪಿಸಿ ಅಡುಗೆಯನ್ನು ಹಾಳುಗೆಡವಿತು. ಸುಮಾರು ಹೊತ್ತಿನ ಬಳಿಕ ಬಂದ ಪೊಲೀಸರು ದನದ ಮಾಂಸ ಮಾಡುತ್ತಿದ್ದಾರೆ ಎಂದು ಮನೆಯಲ್ಲಿದ್ದ ಮೂವರು ಯುವಕರನ್ನು ಜೀಪಿನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗಿ ಗೋಹತ್ಯಾ ನಿಷೇಧ ಕಾನೂನಿನ ಅಡಿಯಲ್ಲಿ ಮೂವರ ಮೇಲೆ ಕೇಸು ದಾಖಲಿಸಿತು. ಆದರೆ ನಡುರಾತ್ರಿ ಮನೆಗೆ ನುಗ್ಗಿದ ಬಜರಂಗಿಗಳ ಮೇಲೆ ಯಾವ ಕ್ರಮವನ್ನೂ ಪೊಲೀಸರು ಕೈಗೊಳ್ಳಲಿಲ್ಲ. ಇದ್ದುದರಲ್ಲಿ ಒಂದೇ ಒಂದು ಸಮಾಧಾನವೆಂದರೆ ಆ ಮನೆಯಲ್ಲಿ ಆ ಹೆಣ್ಣುಮಗಳ ನಿಶ್ಚಿತಾರ್ಥ ಅದೇ ದಿನ ಅದೇ ಮನೆಯಲ್ಲಿ ನಡೆಯಿತು. ಈ ಕುಟುಂಬದ ದಿಟ್ಟ ಹೆಣ್ಣು, ಗ್ರಾಮ ಪಂಚಾಯತ್ ಸದಸ್ಯೆ ಶಕುಂತಲಾ ಬಜರಂಗಿಗಳ ದೌರ್ಜನ್ಯಕ್ಕೆ ಜಗ್ಗದೆ ನಿಶ್ಚಿತಾರ್ಥ ನೆರವೇರಿಸಿಯೇಬಿಟ್ಟರು.

ಈ ಶಕುಂತಳಾ ಎಂಬ ದಿಟ್ಟ ಹೆಂಗಸಿನ ಧೈರ್ಯ ಒಂದಲ್ಲದೆ ಇದ್ದರೆ ಬಜರಂಗಿಗಳ ಈ ನಡುರಾತ್ರಿಯ ದೌರ್ಜನ್ಯ ಹಾಗೆಯೆ ಇನ್ನೊಂದು ಪ್ರಕರಣವಾಗಿ ಮುಚ್ಚಿಹೋಗುತ್ತಿತ್ತು. ಆದರೆ ಶಕುಂತಳಾ ಹಾಗಾಗಲು ಬಿಡಲಿಲ್ಲ. ಅಂದು ರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಹತ್ತಕ್ಕೂ ಹೆಚ್ಚು ಮಂದಿಯ ಮೇಲೆ ಈಕೆ ಕೇಸು ದಾಖಲಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲೀಗ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಬಜರಂಗಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇದಕ್ಕೆಲ್ಲ ದಲಿತ ಸಂಘರ್ಷ ಸಮಿತಿಯ ಉದಯ ಕುಮಾರ್ ತಲ್ಲೂರು ಮತ್ತು ಅವರ ತಂಡ ಸಾಥ್ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಯಾವಾಗ ಈ ಬಜರಂಗಿ ಪಡೆಯ ಮೇಲೆ ಎಟ್ರಾಸಿಟಿ ಕೇಸು ದಾಖಲಾಯಿತೊ ಅಲ್ಲಿಗೆ ಬಿಜೆಪಿ ಮುಖಂಡರು ಎಚ್ಚೆತ್ತುಕೊಂಡರು. ವಿಪರ್ಯಾಸ ಎಂದರೆ ಬಜರಂಗಿಗಳನ್ನು ಕೇಸ್‌ನಿಂದ ರಕ್ಷಿಸಲು ಬಿಜೆಪಿಯವರ ಜೊತೆ ಕಾಂಗ್ರೆಸ್‌ನವರು ಸೇರಿಕೊಂಡರು. ಸ್ಥಳೀಯ ಶಾಸಕ ಗೋಪಾಲ ಪೂಜಾರಿ ದೌರ್ಜನ್ಯ ನಡೆದ ಮನೆಗೆ ಭೇಟಿ ನೀಡಲೂ ಇಲ್ಲ, ಮಾತ್ರವಲ್ಲ ತಮ್ಮದೇ ಪಕ್ಷದ ಗ್ರಾಮ ಪಂಚಾಯತ್ ಸದಸ್ಯೆ ಶಕುಂತಳಾ ಅವರನ್ನೂ ಗೋಪಾಲ ಪೂಜಾರಿ ಮಾತನಾಡಿಸಲು ಹೋಗಿಲ್ಲ. ಈಕೆಯ ಮತದಿಂದಲೇ ಅಧ್ಯಕ್ಷರಾಗಿ ಆಯ್ಕೆಯಾದ ಹೊಸಾಡು ಗ್ರಾಮಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಕೂಡ ಈ ಕೊರಗ ಕುಟುಂಬಗಳ ನೆರವಿಗೆ ಬರಲಿಲ್ಲ.

ಇಡೀ ಪ್ರಕರಣದಲ್ಲಿ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ ಇಲ್ಲಿನ ಸ್ಥಳೀಯ ನಿವಾಸಿ, ಮೀಸಲಾತಿಯಲ್ಲಿ ಹಲವಾರು ಬಾರಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಲವಾರು ಬಾರಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಅನಂತ ಮೊವಾಡಿ ಎಂಬ ದಲಿತ ರಾಜಕಾರಣಿ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ. ತನ್ನ ಮನೆಯ ಪಕ್ಕ ಇರುವ ಕೊರಗರ ಮನೆಯತ್ತ ಕಣ್ಣೆತ್ತಿಯೂ ನೋಡದ ಈ ಬಿಜೆಪಿ ಹೃದಯದ ಕಾಂಗ್ರೆಸ್ ನಾಯಕ ಬೈಂದೂರು ಬಿಜೆಪಿ ನಾಯಕರ ಜೊತೆ ಸೇರಿಕೊಂಡು ಸೀದಾ ಗಂಗೊಳ್ಳಿ ಠಾಣೆಗೆ ಧಾವಿಸಿದರು. ಅಮಾಯಕರ ಮೇಲೆಲ್ಲ ಶಕುಂತಲಾ ಎಟ್ರಾಸಿಟಿ ಕೇಸು ದಾಖಲಿಸಿದ್ದಾರೆ ನೋಡಿ, ಅದೆಲ್ಲ ಹಿಂದೆಗೆದುಕೊಳ್ಳಬೇಕು, ಅವರ ಮೇಲೆಲ್ಲ ಕೇಸು ಮಾಡಬಾರದು ಎಂದು ಬಜರಂಗಿಗಳ ಪರವಾಗಿ ಈತ ವಕಾಲತ್ತು ಮಾಡಿದರು. ದಲಿತರ ಮೀಸಲಾತಿ ಕ್ಷೇತ್ರಗಳ ಮೂಲಕ ಪ್ರತಿ ಬಾರಿಯೂ ಆಯ್ಕೆಯಾದ ಅನಂತ ಮೊವಾಡಿ ಯಾವತ್ತೂ ದಲಿತನೆಂದು ಗುರುತಿಕೊಂಡವರೂ ಅಲ್ಲ, ದಲಿತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿದವರೂ ಅಲ್ಲ, ಯಾವುದೇ ದಲಿತರ, ದಲಿತಪರ ಸಮಾವೇಶ, ಹೋರಾಟಗಳಲ್ಲಿ ಪಾಲ್ಗೊಂಡ ಮನುಷ್ಯನೂ ಅಲ್ಲ. ಆದರೂ ಕನಿಷ್ಟ ತಾನು ಕಾಂಗ್ರೆಸ್ ಪಕ್ಷದಲ್ಲಾದರೂ ಇದ್ದೇನೆ ಎಂಬ ಪ್ರಜ್ಞೆಯೂ ಈ ಮನುಷ್ಯನಲ್ಲಿ ಇಲ್ಲವಾಯಿತು. ಎಟ್ರಾಸಿಟಿ ಕೇಸ್‌ನಲ್ಲಿ ಯಾರಾದರೂ ಅಮಾಯಕರನ್ನು ಫಿಕ್ಸ್ ಮಾಡಿದ್ದಾರೆಂದು ತಿಳಿದುಕೊಂಡರೂ ಅಷ್ಟು ಗಡಿಬಿಡಿಯಲ್ಲಿ ಅದೂ ಅಹ ಬಿಜೆಪಿಯವರೊಂದಿಗೆ ಹೋಗಿ ಈತ ಅಲ್ಲಿ ಬಜರಂಗಿಗಳ ಪರವಾಗಿ ಮಾತನಾಡುವುದು ಏನಿತ್ತು ಎಂಬುದು ಪ್ರಶ್ನೆ. ಇನ್ನೊಂದು ದುರಂತವೆಂದರೆ ಮೊವಾಡಿಯ ಪರಿಶಿಷ್ಟ ಜಾತಿಗೆ ಸೇರಿದ ದಲಿತ ಯುವಕರೂ ಈ ಅನಂತ ಮೊವಾಡಿಗೆ ಮತ್ತು ಬಿಜೆಪಿ ನಾಯಕರಿಗೆ ಸಾಥ್ ನೀಡಿದ್ದಾರೆ. ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ ಅದನ್ನು ವಿರೋಧಿಸಿ ನಾವು ಹೋರಾಟ ನಡೆಸುತ್ತೇವೆ, ಪತ್ರಿಕಾಗೋಷ್ಟಿ ಕರೆಯುತ್ತೇವೆ ಎಂದು ಕೊರಗರ ವಿರುದ್ಧವೇ ತಿರುಗಿ ನಿಂತಿದ್ದಾರೆ. ಹಿಂದೂ ಸಂಘಟನೆಗಳೊಂದಿಗೆ ಗಳಸ್ಯಕಂಠಸ್ಯವಾಗಿರುವ ತಾಲೂಕಿನ ಕೆಲ ದಸಂಸ ನಾಯಕರು ಈ ಯುವಕರಿಗೆ ಹಿಂದಿನಿಂದ ಕುಮ್ಮಕ್ಕು ನೀಡುತ್ತಿರುವುದೂ ಸಹ ಸುಳ್ಳಲ್ಲ.

ಶಾಸಕ ಗೋಪಾಲ ಪೂಜಾರಿಯಂತೂ ಮೌನಕ್ಕೆ ಶರಣಾಗಿದ್ದಾರೆ. ಹಾಗಂತ ಅವರು ಸುಮ್ಮನೆ ಕೂತಿಲ್ಲ. ಎಟ್ರಾಸಿಟಿ ಕೇಸ್‌ನಲ್ಲಿ ಸಿಲುಕಿರುವ ಎಲ್ಲ ಬಜರಂಗಿಗಳನ್ನೂ ಬಚಾವು ಮಾಡುವ ವಾಗ್ದಾನವನ್ನು ಅವರು ಈಗಾಗಲೇ ನೀಡಿದ ಹಾಗಿದೆ. ಆ ಮಾಸ್ಟರ್‌ಪ್ಲ್ಯಾನ್ ಅಂಗವಾಗಿಯೇ ಈಗ ಅನಂತ ಮೊವಾಡಿಯನ್ನು ಮುಂದೆ ಬಿಡಲಾಗಿದೆ. ಇತರ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಾಜು ದೇವಾಡಿಗ ಮುಂತಾದವರೂ ಬಾಯಿಮುಚ್ಚಿಕೊಂಡಿದ್ದಾರೆ. ಈ ಪ್ರಕರಣದಲ್ಲೀಗ ಕಾಂಗ್ರೆಸ್ ಮತ್ತು ಬಿಜೆಪಿ ಭಾಯಿ ಭಾಯಿ ಆಗಿ ಶಕುಂತಳಾ ಮತ್ತು ಸಂತ್ರಸ್ತ ಕೊರಗ ಕುಟುಂಬಕ್ಕೆ ಇನ್ನಷ್ಟು ಅನ್ಯಾಯ ಮಾಡಲು ಹೊರಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ದನದ ಮಾಂಸ ಲಾಗಾಯ್ತಿನಿಂದಲೂ ಸೇವನೆ ಮಾಡುತ್ತಿರುವ ಸಾವಿರಾರು ಕುಟುಂಬಗಳು ಕರಾವಳಿಯಲ್ಲಿ ಇವೆ. ಅನೇಕ ಸಮುದಾಯಗಳು ತಮ್ಮ ಮನೆಗಳಲ್ಲಿನ ವಿಶೇಷ ಸಮಾರಂಭಗಳಲ್ಲಿ ದನದ ಮಾಂಸದ ಊಟ ಬಡಿಸುವುದು ಹಿಂದಿನಿಂದಲೂ ಇದೆ. ಇತ್ತೀಚೆಗೆ ಈ ನಕಲಿ ಗೋರಕ್ಷಕರ ಉಪಟಳದಿಂದ ಇದಕ್ಕೆ ಧಕ್ಕೆಯಾಗಿದೆ. ದನದ ಮಾಂಸ ಕೋಳಿ ಅಥವಾ ಕುರಿ ಮಾಂಸಕ್ಕೆ ಹೋಲಿಸಿದರೆ ಹೆಚ್ಚು ಅಗ್ಗ. ಅಷ್ಟೆ ಪೌಷ್ಟಿಕಾಂಶ ಭರಿತವೂ ಹೌದು. ಅಗ್ಗ ಎಂಬ ಕಾರಣಕ್ಕೆ ಇಲ್ಲಿನ ಹಲವು ಸಮುದಾಯಗಳು ದನದ ಮಾಂಸವನ್ನು ದೈನಂದಿನ ಮತ್ತು ವಿಶೇಷ ಸಮಾರಂಭಗಳ ಮುಖ್ಯ ಮೆನು ಆಗಿ ಇಟ್ಟುಕೊಂಡಿವೆ. ಕೊರಗರೊ ಅಥವಾ ಬೇರೆ ಯಾವುದೇ ಸಮುದಾಯದವರೊ ಹೊಟ್ಟೆಗೆ ತಿನ್ನದೆ ಸತ್ತರೆ ಈ ದೇಶದಲ್ಲಿ ದಲಿತರ ಸಂಖ್ಯೆ ಅಷ್ಟರ ಮಟ್ಟಿಗಾದರೂ ಕಡಿಮೆಯಾಗಲಿ ಎಂಬ ಮಾನಸಿಕ ಸ್ಥಿತಿ ಹೊಂದಿರುವ ಸಂಘಪರಿವಾರ ಮತ್ತು ಹಿಂದೂತ್ವವಾದಿ ಸಂಘಟನೆಗಳು ಆಹಾರದ ಈ ಹಕ್ಕಿನ ಮೇಲೆ ನಿರಂತರ ಪ್ರಹಾರ ಮಾಡುತ್ತಲೇ ಇವೆ. ಉಳಿದವರ ಮದುವೆ ಮನೆಗಳ ಹೊರಗೆ ತೊಟ್ಟಿಗಳಲ್ಲಿ ಎಸೆದ ಎಂಜಲು ಎಲೆಗಳ ಮೇಲಿನ ಅನ್ನ, ಪಲ್ಯಗಳನ್ನು ಬುಟ್ಟಿಗೆ ತುಂಬಿಸಿಕೊಂಡು ಮನೆಗೆ ಹೋಗಿ ತಿನ್ನುತ್ತಿದ್ದ ಕೊರಗರು ಈಗಲೂ ಹಾಗೆ ಮಾಡಬೇಕೆಂದು ಬಯಸುವ ಜನರಿಗೆ ಈಗಲೂ ಕೊರತೆ ಇಲ್ಲ.

ಶಕುಂತಳಾ ಅವರ ಮನೆಯಲ್ಲಿ ದನದ ಮಾಂಸ ಮಾಡುತ್ತಿದ್ದರು. ಅದು ನಿಜ. ಅದು ಕಾನೂನು ಪ್ರಕಾರ ತಪ್ಪಾದರೆ ಅದನ್ನು ಪ್ರಶ್ನಿಸಲು ಕಾನೂನುಬದ್ದವಾದ ವ್ಯವಸ್ಥೆಗಳಿವೆ. ಸಂಭ್ರಮದಲ್ಲಿರುವ ಒಂದು ಮನೆಯ ಮೇಲೆ ತಾವು ವಿರೋಧಿಸುವ ಅಹಾರವನ್ನು ತಯಾರು ಮಾಡುತ್ತಿದ್ದಾರೆಂದು ಹೆಂಗಸರು, ಮಕ್ಕಳು ಇರುವ ಮನೆಗಳ ಮೇಲೆ ನಡುರಾತ್ರಿಯಲ್ಲಿ ಬಂದು ದಾಳಿ ನಡೆಸುವ, ಹಲ್ಲೆ ನಡೆಸುವ, ಹೆಂಗಸರು ವೃದ್ಧರೆನ್ನದೆ ಧಮಕಿ ಹಾಕುವ ಅಧಿಕಾರ ಬಜರಂಗದಳಕ್ಕಾಗಲಿ ಆಗಲಿ ಅಥವಾ ಇನ್ಯಾವ ಸಂಘಟನೆಗಳಿಗಾಗಲಿ ಕೊಟ್ಟವರು ಯಾರು?

ಕಾನೂನು ಕೈಗೆತ್ತಿಕೊಂಡವರ ಮೇಲೆ ಪೊಲೀಸರು ತಾವಾಗಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನಂತೂ ಪೊಲೀಸರು ಮಾಡಲಿಲ್ಲ. ಶಕುಂತಳಾ ಅವರು ದೂರು ನೀಡಿದ ಮೇಲಾದರೂ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹೊಣೆಯನ್ನು ಪೊಲೀಸ್ ಇಲಾಖೆ ಸೂಕ್ತವಾಗಿ ನಿಭಾಯಿಸಬೇಕಾಗಿದೆ. ಕೊರಗ ಕುಟುಂಬವೊಂದಕ್ಕೆ ಅನ್ಯಾಯವಾದರೂ ಬಜರಂಗಿಗಳ ಬಚಾವಿಗಾಗಿ ಬಿಜೆಪಿಗೆ ಸಾಥ್ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕರು ಛೀಮಾರಿ ಹಾಕಬೇಕಾಗಿದೆ. ದಲಿತರ ಮೀಸಲಾತಿಯ ಎಲ್ಲ ಸವಲತ್ತು, ಸ್ಥಾನಮಾನ ಗಳಿಸಿ ಸಂಪತ್ತನ್ನೂ ಕೂಡಿ ಹಾಕಿ ಈಗ ದಲಿತರ ವಿರುದ್ಧವೇ ಕತ್ತಿ ಮಸೆಯುತ್ತಿರುವ ಮತ್ತು ಬಿಜೆಪಿಗರ ಜೊತೆ ಬಹಿರಂಗವಾಗಿ ಪೋಸ್ ಕೊಟ್ಟಿರುವ ಅನಂತ ಮೊವಾಡಿಗೆ ಮುಂದೆಂದೂ ಯಾವ ಚುನಾವಣೆಯಲ್ಲೂ ಸ್ಪರ್ಧಿಸಲು ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷ ತನ್ನ ಮಾನ ಉಳಿಸಿಕೊಳ್ಳಬೇಕಾಗಿದೆ. ಬಜರಂಗಿಗಳ ತಾಳಕ್ಕೆ ಕುಣಿಯುತ್ತಿರುವ ಮೊವಾಡಿ ಮತ್ತು ಈ ಪರಿಸರದ ಕೆಲವು ದಲಿತ ಯುವಕರು ಮತ್ತು ದಲಿತ ಸಂಘಟನೆಗಳ ನಾಯಕರಿಗೆ ಅಂಬೇಡ್ಕರ್ ಫೋಟೊಗಳ ಜೊತೆ ಅಂಬೇಡ್ಕರ್ ಅವರ ಪುಸ್ತಕಗಳನ್ನು ಸಹ ಕೊಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಕುಂತಳಾ ಹಾಗೂ ಸಂತ್ರಸ್ತ ಕೊರಗ ಕುಟುಂಬಗಳಿಗೆ ನ್ಯಾಯ ಒದಗಿಸಲು ನಾಗರಿಕ ಸಮಾಜ ಸಾಥ್ ನಿಡಬೇಕಾಗಿದೆ.
-ಶಶಿಧರ ಹೆಮ್ಮಾಡಿ

Get real time updates directly on you device, subscribe now.