ಪಾರ್ವತಮ್ಮನ ಶವ ಮತ್ತು ರಾಷ್ಟ್ರಧ್ವಜ

ಹೇಗೆ ರಾಷ್ಟ್ರ ಧ್ವಜ ಹಾರಾಡುತ್ತಿರುವಾಗ ಅದರ ಮುಂದೆ ಎಲ್ಲರೂ ಸಮಾನರೊ ಅದೇ ರೀತಿ ರಾಷ್ಟ್ರ ಧ್ವಜದ ಬಗ್ಗೂ ಈ ದೇಶದ ನಾಗರಿಕರೆಲ್ಲರಿಗೂ ಸಮಾನ ಹಕ್ಕಿರಬೇಕು.

ಶಶಿಧರ ಹೆಮ್ಮಾಡಿ
ಯಾರ ಶವದ ಮೇಲೂ ರಾಷ್ಟ್ರ ಧ್ವಜ ಹೊದಿಸಬಾರದು. ಅವರ ಮನೆಯವರಿಗೆ ಏನು ತೊಡಿಸಬೇಕು ಎಂದು ಅನಿಸುತ್ತದೊ ಅದನ್ನು ತೊಡಿಸಬೇಕು. ಇದು ನನ್ನ ನಿಲುವು. ಇದೀಗ ಪಾರ್ವತಮ್ಮ ರಾಜಕುಮಾರ್ ಅವರ ಶವದ ಮೇಲೆ ರಾಷ್ಟ್ರಧ್ವಜ ಹೊದಿಸಿರುವುದನ್ನು ಕೆಲವರು ವಿವಾದ ಮಾಡುತ್ತಿದ್ದಾರೆ. ಇದರಲ್ಲಿ ಮುಖ್ಯ ಪಾತ್ರ ವಹಿಸಿರುವುದು ಕರಾವಳಿಯ ಮತ್ತು ಕರ್ನಾಟಕದ ಸಂಘಿಗಳು. ಸಿದ್ದರಾಮಯ್ಯ ಸರ್ಕಾರವನ್ನು ಹೇಗಾದರೂ ಮಾಡಿ ಕರ್ನಾಟಕದಿಂದ ತೊಲಗಿಸಬೇಕೆಂಬ ಕನಸು ಕಾಣುತ್ತಿರುವ ಸಂಘಿಗಳು ಯಾವ ಮಟ್ಟಕ್ಕೂ ಇಳಿಯಲಿಕ್ಕೆ ಸಿದ್ಧರಾಗಿದ್ದಾರೆ. ಅದಕ್ಕೆ ಈಗ ಪಾರ್ವತಮ್ಮ ರಾಜಕುಮಾರ್ ಅವರ ಶವದ ಮೇಲೆ ರಾಷ್ಟ್ರಧ್ವಜ ಹೊದಿಸುವುದನ್ನು ದೊಡ್ಡ ಅಪರಾಧ ಎನ್ನುವಂತೆ ಸಿದ್ದರಾಮಯ್ಯನ ಮೇಲೆ ಈ ಸೋಷಿಯಲ್ ಮೀಡಿಯಾದ ಸಂಘಿಗಳ ಪಡೆ ಮುಗಿಬಿದ್ದಿದೆ. ಪಾರ್ವತಮ್ಮ ಕರ್ನಾಟಕದ ಖಳನಾಯಕಿಯಂತೂ ಅಲ್ಲ. ಈ ನಾಡು ಕಂಡ ಮಹಾನ್ ನಾಯಕ ನಟನೊಬ್ಬನ ಪತ್ನಿ. ಚಲನ ಚಿತ್ರ ರಂಗದಲ್ಲಿ ಹಿನ್ನೆಲೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಅವರ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸುವುದು ರಾಷ್ಟ್ರ ಧ್ವಜಕ್ಕೆ ಯಾವುದೇ ರೀತಿಯಿಂದಲೂ ಅಗೌರವ ಖಂಡಿತ ಅಲ್ಲ. ಎಂತೆಂತಹ ಕೋಮುವಾದಿ, ಕೊಲೆಗಡುಕ, ಭ್ರಷ್ಟ ರಾಜಕಾರಣಿಗಳ ಶವದ ಮೇಲೆ ಈ ರಾಷ್ಟ್ರ ಧ್ವಜವನ್ನು ಹೊದಿಸಿದ್ದಾರೆ. ಕೋಮು ಗಲಭೆ, ಜಾತಿ ಘರ್ಷಣೆಗಳಿಗೆ ಕುಮ್ಮಕ್ಕು ನೀಡಿದವರು, ಕೊಲೆ-ಹಿಂಸೆ-ದೊಂಬಿ ನಡೆಸಿದವರು, ದರೋಡೆ, ದೌರ್ಜನ್ಯ, ಅತ್ಯಾಚಾರ ಮಾಡಿದವರು, ಸಂವಿಧಾನಕ್ಕೆ ವಿರುದ್ಧವಾಗಿ ಮಾತಾಡಿದವರು ಇಂತಹುದನ್ನೆಲ್ಲ ಮಾಡಿ ಅಧಿಕಾರಕ್ಕೇರಿದ ಮಂದಿ ಅದ್ಯಾವಾಗಲೋ ಮೃತಪಟ್ಟಾಗ ಅಂತಹ ರಾಜಕಾರಣಿಗಳ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸಿದಾಗ ಅದಕ್ಕೆ ಅಗೌರವ ಆಗಿರಲಿಲ್ಲವೆ? ಪಾರ್ವತಮ್ಮನ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸಿದ್ದು ಮಾತ್ರ ಅಗೌರವವಾಯಿತೆ?

ಪುಟಪರ್ತಿಯ ವಿವಾದಾತ್ಮಕ ಸಾಯಿಬಾಬಾ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸಿದ್ದರು. ಮಹಾರಾಷ್ಟ್ರವೇ ದೇಶ ಎನ್ನುತ್ತಿದ್ದ, ಅಲ್ಪಸಂಖ್ಯಾತರನ್ನು, ಮರಾಠಿಗರಲ್ಲದವರನ್ನು ಸತತವಾಗಿ ದ್ವೇಷ ಭಾವನೆಯಿಂದ ನೋಡುತ್ತಾ ಕೋಮುವಾದಿ ರಾಜಕಾರಣ ಮಾಡುತ್ತಿದ್ದ ಬಾಳ ಠಾಕ್ರೆಯ ಶವದ ಮೇಲೂ ರಾಷ್ಟ್ರ ಧ್ವಜ ಹೊದಿಸಿದ್ದರು. ಇದೆಲ್ಲ ತಪ್ಪಲ್ಲವೆ?

ನನ್ನ ಪ್ರಕಾರ ಮೃತ ಸೈನಿಕ, ಶಾಸಕ, ಮಂತ್ರಿ ಮಾತ್ರವಲ್ಲ ಓರ್ವ ಪೌರ ಕಾರ್ಮಿಕ ಸತ್ತರೂ, ಓರ್ವ ಕಟ್ಟಡ ಕಾರ್ಮಿಕ ಸತ್ತರೂ, ಓರ್ವ ಜನಸಾಮಾನ್ಯ ಸತ್ತರೂ ಆತನ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸುವ ಅವಕಾಶ, ಹಕ್ಕು ಈ ನಾಡಿನ ಜನಸಾಮಾನ್ಯರಿಗೆ ಇರಬೇಕು. ಹೇಗೆ ರಾಷ್ಟ್ರ ಧ್ವಜ ಹಾರಾಡುತ್ತಿರುವಾಗ ಅದರ ಮುಂದೆ ಎಲ್ಲರೂ ಸಮಾನರೊ ಅದೇ ರೀತಿ ರಾಷ್ಟ್ರ ಧ್ವಜದ ಬಗ್ಗೂ ಎಲ್ಲರಿಗೂ ಸಮಾನ ಹಕ್ಕಿರಬೇಕು. ಅಪರಾಧಿಗಳನ್ನು ಹೊರತುಪಡಿಸಿ ಈ ದೇಶದ ಯಾವುದೇ ನಾಗರಿಕ ಸತ್ತರೂ ಅವರ ಶವದ ಮೇಲೆ ರಾಷ್ಟ್ರ ಧ್ವಜ ಹೊದಿಸುವ ಹಕ್ಕಿರಲಿ ಅಥವಾ ಯಾರ ಶವದ ಮೇಲೂ ರಾಷ್ಟ್ರ ಧ್ವಜ ಹೊದಿಸುವುದನ್ನು ನಿಷೇಧಿಸಲಿ.

Get real time updates directly on you device, subscribe now.