ಕರಾವಳಿಯ ಮನೆಗಳು ಹೀಗೆ ಖಾಲಿಯಾಗಲು ಬಿಡದಿರೋಣ

ಶರತ್, ಅಶ್ರಫ್ ಕಲಾಯಿ ಇಬ್ಬರ ಕೊಲೆಗಳನ್ನೂ ಯಾವುದೇ ರಾಜಕೀಯ ಪಕ್ಷ, ಕೋಮುವಾದಿ ಸಂಘಟನೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳದಂತೆ ನಾಗರಿಕ ಸಮಾಜ ಸಂಯಮದಿಂದ ನಡೆದುಕೊಳ್ಳಬೇಕಿದೆ.

ಶಶಿಧರ ಹೆಮ್ಮಾಡಿ
ಬಿ.ಸಿ. ರೋಡ್‌ನಲ್ಲಿ ಉದಯ ಲಾಂಡ್ರಿ ಎಂಬ ಸಣ್ಣ ಉದ್ಯಮ ನಡೆಸುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದ ಸಜೀಪಮುನ್ನೂರು ಬಳಿಯ ತನಿಯಪ್ಪ ಮಡಿವಾಳ ಅವರ ಒಬ್ಬನೇ ಒಬ್ಬ ಮಗ ಶರತ್ ದುಷ್ಕರ್ಮಿಗಳ ಹಲ್ಲೆಯಲ್ಲಿ ಜೀವ ತೆತ್ತಿದ್ದಾನೆ. ಈತ ಆರೆಸ್ಸೆಸ್ ಕಾರ್ಯಕರ್ತ. ಹೀಗಾಗಿ ಈ ಕೊಲೆ ಬಂಟ್ವಾಳದಲ್ಲಿ ನಡೆಯುತ್ತಿರುವ ಕೋಮುದ್ವೇಷದ ರಾಜಕಾರಣದ ಮುಂದುವರಿಕೆಯಾಗಿ ಆಗಿದೆಯೆ ಅಥವಾ ಬೇರೆ ಕಾರಣಗಳಿವೆಯೆ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.

ಆರೆಸ್ಸೆಸ್ ಕಾರ್ಯಕರ್ತನಿರಲಿ, ಪಿಎಫ್‌ಐ ಕಾರ್ಯಕರ್ತನಿರಲಿ ಆತ ಸಂಘಟನೆಯಲ್ಲಿ ಇದ್ದಾನೆ ಎಂಬ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು. ಈ ಕೊಲೆಯನ್ನು ನಾಗರಿಕ ಸಮಾಜ ಖಂಡಿಸಬೇಕು.

ಕೊಲೆಗಳನ್ನೇ ಮಾಡಿ ಮುಗ್ದ ಜನರ ಹೆಣಗಳ ಮೇಲೆ ನಡೆದು ಇಂದು ಅಧಿಕಾರದ ಗದ್ದುಗೆ ಏರಿದ ಪರಿವಾರದವರಿಗೆ ಇಂತಹ ಕೊಲೆಗಳು ಒಳಗೊಳಗೆ ತುಂಬಾ ಖುಷಿ ನೀಡುತ್ತವೆ. ಇದು ಅವರ ಮತೀಯ ದ್ವೇಷದ ರಾಜಕಾರಣಕ್ಕೆ ಮತ್ತಷ್ಟು ಚೈತನ್ಯ ನೀಡುತ್ತದೆ ಎಂಬ ಲಾಭದ ಲೆಕ್ಕಾಚಾರ ಅವರದ್ದು. ಇನ್ನೊಂದೆಡೆ ಪರಿವಾರದ ಹಿಂಸೆಗೆ ಹಿಂಸೆಯಿಂದಲೇ ಉತ್ತರ ಕೊಡುತ್ತೇವೆ ಎಂಬ ಮನಸ್ತಿತಿಯ ಇನ್ನೊಂದು ಗುಂಪು ಪ್ರಜಾತಂತ್ರದ ಹೆಸರಿಟ್ಟುಕೊಂಡು ಹಿಂಸೆಗೆ ಇಳಿಯುವ ತಾಲೀಮು ನಡೆಸುತ್ತಿದೆ. ಹಿಂಸೆಗೆ ಇಳಿದಿದೆ ಕೂಡ.

ಶರತ್, ಅಶ್ರಫ್ ಕಲಾಯಿ ಇಬ್ಬರ ಕೊಲೆಗಳನ್ನೂ ಯಾವುದೇ ರಾಜಕೀಯ ಪಕ್ಷ, ಕೋಮುವಾದಿ ಸಂಘಟನೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳದಂತೆ ನಾಗರಿಕ ಸಮಾಜ ಸಂಯಮದಿಂದ ನಡೆದುಕೊಳ್ಳಬೇಕಿದೆ. ಆಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಕೊಲೆಗಳನ್ನು ತಡೆಯಬಹುದು, ಸ್ವಸ್ಥ ಸಮಾಜ ನಿರ್ಮಿಸಬಹುದು.

ಕರಾವಳಿಯಲ್ಲಿ ಆಕ್ರೋಶದ-ದ್ವೇಷದ ಭಾಷಣಗಳು, ಲಾಠಿ-ಖಡ್ಗ-ದೊಣ್ಣೆಗಳನ್ನು ಹಿಡಿದ ಮೆರವಣಿಗೆಗಳು, ಪರೇಡ್‌ಗಳು ಹದ್ದುಬಸ್ತಿಗೆ ಬರಬೇಕು. ಯುವಕರನ್ನು ಭಾಷಣ ಮಾಡಿ ಹಾಳು ಮಾಡುವವರನ್ನು ಹೆತ್ತವರೇ ತರಾಟೆಗೆ ತೆಗೆದುಕೊಳ್ಳಬೇಕು. ಪೊಲೀಸರಂತೂ ಅವರ ವಿರುದ್ಧ ಏನೂ ಮಾಡುವುದಿಲ್ಲ, ಸೆಕ್ಯೂಲರ್ ಎಂದು ಹೇಳಿಕೊಳ್ಳುವ ಸರ್ಕಾರಗಳು ಇದ್ದಾಗಲೂ ಕೂಡ. ಕರಾವಳಿಯ ಸೌಹಾರ್ದದ ಇತಿಹಾಸವನ್ನು ನಮ್ಮ ಯುವಕರಿಗೆ ತಿಳಿಹೇಳಬೇಕು.

ಅಪ್ಪ-ಅಮ್ಮನ ಒಬ್ಬನೆ ಮಗನಾಗಿದ್ದ ಶರತ್ ಇನ್ನಿಲ್ಲವಾಗಿದ್ದಾನೆ. ಆ ಮನೆಯ ಶೋಕದಲ್ಲಿ ನಾನೂ ಭಾಗಿ. ಸಂಘಟನೆಗೆ ಕಾರ್ಯಕರ್ತರು ಸಾವಿರಾರು ಹೊಸಬರು ಬರುತ್ತಾರೆ. ಆದರೆ ಶರತ್ ಮನೆ ಇನ್ನು ಸದಾ ಖಾಲಿಯಾಗಿ ಇರಲಿದೆ. ಕರಾವಳಿಯ ಯಾವುದೇ ಮನೆಗಳು ಹೀಗೆ ಖಾಲಿಯಾಗಲು ನಾವು ಬಿಡಬಾರದು. ಅದೇ ನಾವು ಶರತ್‌ಗೂ ಮತ್ತು ಹೀಗೆ ಬಲಿಯಾದ ಯುವಕರಿಗೆ ನೀಡುವ ಅರ್ಥಪೂರ್ಣ ಶ್ರದ್ಧಾಂಜಲಿ.

Get real time updates directly on you device, subscribe now.