ರಾಷ್ಟ್ರಧ್ವಜ ಎಲ್ಲಾದರೂ ಉಲ್ಟಾ ಹಾರಾಡಿದರೆ ಏನು ಮಾಡುವಿರಿ? ಇಲ್ಲಿದೆ ಒಂದು ಸಲಹೆ
ನೀವು ಎಲ್ಲಾದರೂ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದು ಕಂಡರೆ ಇಷ್ಟು ಮಾಡಿ ನಿಮ್ಮ ನಿಜವಾದ ದೇಶಭಕ್ತಿ ಮೆರೆಯಿರಿ
ಶಶಿಧರ ಹೆಮ್ಮಾಡಿ
ಪ್ರಿಯ ಓದುಗರೆ,
ನೀವು ಎಲ್ಲಾದರೂ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದು ಕಂಡರೆ ಇಷ್ಟು ಮಾಡಿ ನಿಮ್ಮ ನಿಜವಾದ ದೇಶಭಕ್ತಿ ಮೆರೆಯಿರಿ
ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಸ್ವಾತಂತ್ರ್ಯ ದಿನವೆಂದರೆ ಭಾರತೀಯರೆಲ್ಲರೂ ಸಂಭ್ರಮಪಡುವ ದಿನ. ಮಕ್ಕಳಿಗಂತೂ ಶಾಲೆಯಲ್ಲಿ ಹಬ್ಬದ ವಾತಾವರಣದಲ್ಲಿ ಸಡಗರಪಡುವ ಸಮಯ. ಈ ಸಂಭ್ರಮದ ನಡುವೆ ಕೆಲವೊಮ್ಮೆ ಪ್ರಮಾದಗಳು ಸಂಭವಿಸುವುದಿದೆ. ಅದು ಪ್ರಮಾದವಶಾತ್ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುವುದು.
ಹೀಗೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಾಡಿಸುವುದು ಅಪರಾಧ. ಅದು ಖಂಡಿತ ನಿಜ. ಆದರೆ ಇದು ಅಚಾತುರ್ಯದಿಂದ ಆಗಿರುತ್ತದೆಯೆ ವಿನಃ ಉದ್ದೇಶಪೂರ್ವಕವಲ್ಲ.
ಪತ್ರಕರ್ತರಲ್ಲಿ ಮತ್ತು ದೇಶಭಕ್ತರಲ್ಲಿ ವಿಶೇಷ ವಿನಂತಿ. ನಿಮ್ಮ ದೇಶಭಕ್ತಿಯ ಲೆವೆಲ್ ಯಾವ ಮಟದ್ದೋ ಗೊತ್ತಿಲ್ಲ, ಅದು ನಿಮಗೆ ಬಿಟ್ಟದ್ದು. ಆದರೆ ನಾಳೆ ಎಲ್ಲಾದರೂ ಯಾವುದಾದರೂ ಸರ್ಕಾರಿ ಕಛೇರಿ, ಪಂಚಾಯತ್ ಆಫೀಸ್, ಯುವಕ ಮಂಡಲ, ರಸ್ತೆಯ ಸರ್ಕಲ್, ಶಾಲೆ ಮುಂತಾದ ಕಡೆ ಎಲ್ಲಾದರೂ ರಾಷ್ಟ್ರಧ್ವಜ ಉಲ್ಟಾ ಹಾರಾಡಿದರೆ ದಯಮಾಡಿ ಅದನ್ನ ದೊಡ್ಡ ನ್ಯಾಶನಲ್ ನ್ಯೂಸ್ ಮಾಡಬೇಡಿ. ಅದನ್ನ ದೊಡ್ಡ ದೇಶದ್ರೋಹ ಎಂಬಂತೆ ಬಿಂಬಿಸಬೇಡಿ.
ಈ ರಾಷ್ಟ್ರಧ್ವಜ ಹಾರಾಟದ ಸಿದ್ಧತೆ ಎಲ್ಲ ಮಾಡುವವರು ಬಡಪಾಯಿ ಗುಮಾಸ್ತರು ಅಥವಾ ಕೆಳಮಟ್ಟದ ಸಿಬ್ಬಂದಿ ಅಥವಾ ದೇಶದ ಕುರಿತು ಭಾರೀ ಅಭಿಮಾನವಿರುವ ಸಾಮಾನ್ಯ ಜನರು ಮತ್ತು ಶಾಲಾ ಮಕ್ಕಳು. ಇವರಲ್ಲಿ ಯಾರು ಕೂಡ ಉದ್ದೇಶಪೂರ್ವಕವಾಗಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲ್ಲ. ಏನೋ ತಪ್ಪಿನಿಂದ ಹಾಗೆ ಆಗಿರುತ್ತದೆ. ಈ ಭಾರತದಲ್ಲಿ ಅನೇಕ ಜನ ಇಂದಿಗೂ ನಮ್ಮ ದೇಶದ ಬಾವುಟದ ಮೇಲಿನ ಬಣ್ಣ ಯಾವುದು, ಕೆಳಗಿನ ಬಣ್ಣ ಯಾವುದು ಎಂದು ಗೊತ್ತಿಲ್ಲದವರು ಇದ್ದಾರೆ. ಹಾಗೆ ಗೊತ್ತಿಲ್ಲದಿರುವುದು ಮಹಾಪರಾಧವೇನೂ ಅಲ್ಲ.
ನೀವು ಎಲ್ಲಾದರೂ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದು ಕಂಡರೆ ಅಲ್ಲಿ ಆಯೋಜಕರ ಬಳಿ ಹೋಗಿ ’ರಾಷ್ಟ್ರಧ್ವಜ ಉಲ್ಟಾ ಇದೆ, ಅದನ್ನು ಸರಿ ಮಾಡಿ” ಎಂದು ಕಿವಿಯಲ್ಲಿ ಹೇಳಿ. ಅಷ್ಟು ಸಾಕು. ಅವತು ತಮ್ಮ ತಪ್ಪಿನ ಅರಿವಾಗಿ ತಕ್ಷಣ ಅದನ್ನು ಸರಿಪಡಿಸುತ್ತಾರೆ. ಅದನ್ನು ಬಿಟ್ಟು ಬಾವುಟ ತಲೆಕೆಳಗಾಯಿತು ಎಂದು ರಾದ್ದಾಂತ ಮಾಡಿ, ಪೊಲೀಸರಿಗೆ ಫೋನ್ ಮಾಡಿ, ಕೇಸ್ ಮಾಡಿ ಮತ್ತೆ ಏನೇನೋ ಮಾಡಬೇಡಿ. ಇಂಥದ್ದನ್ನೇ ಹೊಂಚು ಹಾಕಿ ಕಾದು ದೊಡ್ಡ ಸುದ್ದಿ ಮಾಡುವ ನಮ್ಮ ಕೆಲವು ಪತ್ರಕರ್ತ ಮಿತ್ರರಿಗೂ ಇದು ಅನ್ವಯಿಸುತ್ತದೆ.
ನೀವು ಹೀಗೆ ಒಂದು ಸಣ್ಣ ತಪ್ಪನ್ನು ತಿದ್ದುವುದರಿಂದ ಕೆಲ ಬಡಪಾಯಿಗಳು ಸರ್ಕಾರಿ ನೌಕರಿಯಿಂದ ವಜಾ ಆಗದೆ ಉಳಿಯುತ್ತಾರೆ. ಯಾರೋ ಹಳ್ಳಿಯ ಅಥವಾ ಪಟ್ಟಣದ ದೇಶಾಭಿಮಾನಿ ಸಾಮಾನ್ಯ ಜನರ ಮೇಲೆ ಕೇಸ್ ಆಗುವುದು ನಿಲ್ಲುತ್ತದೆ. ಧ್ವಜ ಸರಿಯಾಗಿ ಹಾರಾಡಬೇಕು ಅದು ನಿಜ. ಧ್ವಜದ ಕೆಳಗಿರುವ ಜನರ ಬದುಕು ಕೂಡ ಬರ್ಬಾದ್ ಆಗಬಾರದು. ಅಂತಹವರನ್ನು ಕ್ಷಮಿಸಿ, ತಿದ್ದಿ ನಿಮ್ಮ ನಿಜವಾದ ದೇಶಭಕ್ತಿ ಮೆರೆಯಿರಿ. ಪ್ಲೀಸ್ ಇಷ್ಟು ಮಾಡಿ.
ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ.
ಜಂಡಾ ಊಂಚೆ ರಹೆ ಹಮಾರಾ
ವಿಜಯಿ ವಿಶ್ವ ತಿರಂಗಾ ಪ್ಯಾರಾ
-ಶಶಿಧರ ಹೆಮ್ಮಾಡಿ
ಸಂಪಾದಕ