ಅಮೇರಿಕ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ಇಂಟರ್‌ಪೋಲ್ ನೆರವು ಕೋರಿದ ಇರಾನ್

ಟ್ರಂಪ್ ಮತ್ತು ಇತರರ ವಿರುದ್ಧ ‘ರೆಡ್ ಕಾರ್ನರ್’ ನೋಟೀಸ್ ಹೊರಡಿಸುವಂತೆ ಇರಾನ್ ಮನವಿ.

ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲೆ ಮತ್ತು ಭಯೋತ್ಪಾದನೆ ಪ್ರಕರಣದ ಆರೋಪಿ ಎಂದಿರುವ ಇರಾನ್.

ಕರಾವಳಿ ಕರ್ನಾಟಕ ವರದಿ
ಟೆಹ್ರಾನ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಬಂಧನ ವಾರಂಟ್ ಹೊರಡಿಸಿದೆ.

ಬಾಗ್ದಾದ್‌ನಲ್ಲಿ ನಡೆದ ಖಾಸಿಂ ಸೋಲೆಮನಿ ಅವರ ಹತ್ಯೆಯಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಮುವತ್ತು ಮಂದಿಯ ಕೈವಾಡ ಇದೆ ಎಂದು ಇರಾನ್ ಆರೋಪಿಸಿದೆ. ಇವರೆಲ್ಲ ಕೊಲೆ ಮತ್ತು ಭಯೋತ್ಪಾದನೆ ಪ್ರಕರಣದ ಆರೋಪಿಗಳು ಎಂದಿರುವ ಇರಾನ್ ಟ್ರಂಪ್ ಬಂಧನಕ್ಕೆ ಇಂಟರ್‌ಪೋಲ್ ನೆರವು ಕೋರಿದೆ. ಇಂಟರ್‌ಪೋಲ್ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಟ್ರಂಪ್ ವಿರುದ್ಧದ ಕಾನೂನು ಸಮರ ಆತನ ಅಧ್ಯಕ್ಷತೆ ಅವಧಿ ಮುಗಿದ ಬಳಿಕವೂ ಮುಂದುವರಿಸಲಾಗುತ್ತದೆ ಎಂದು ಟೆಹ್ರಾನ್ ಸರಕಾರಿ ವಕೀಲ ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ಟ್ರಂಪ್ ಮತ್ತು ಇತರರ ವಿರುದ್ಧ ‘ರೆಡ್ ಕಾರ್ನರ್’ ನೋಟೀಸ್ ಹೊರಡಿಸುವಂತೆ ಇರಾನ್ ಮನವಿ ಮಾಡಿದೆ.

ಇರಾನ್ ಸೇನಾ ಕಮಾಂಡರ್ ಖಾಸಿಂ ಸೋಲೆಮನಿ ಅವರನ್ನು ಅಮೇರಿಕ ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಹತ್ಯೆಗೈದಿತ್ತು. ಅಮೇರಿಕ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಅಮೇರಿಕ ಅಧ್ಯಕ್ಷರು ಕೈಗೊಂಡ ಖಚಿತ ನಿರ್ಧಾರದಂತೆ ಸೇನಾ ಕಮಾಂಡರ್ ಹತ್ಯೆಗೈಯಲಾಗಿದೆ ಎಂದು ಅಮೇರಿಕ ಸೇನೆ ಹೇಳಿತ್ತು.

Get real time updates directly on you device, subscribe now.