ಗೌರಿ ಲಂಕೇಶ್ ಹತ್ಯೆ. ಮತ್ತೋರ್ವನ ಬಂಧನ. ಈತನೇ ಶಾರ್ಪ್ ಶೂಟರ್?

ಸಿಂದಗಿ ತಹಸೀಲ್ದಾರ್‌ ಕಚೇರಿ ಎದುರು ಪಾಕ್‌ ಧ್ವಜ ಹಾರಿಸಿದ್ದ ಆರೋಪಿ

The Special Investigation Team probing Gauri Lankesh murder have arrested a man named Parashuram Waghmore (26), who they believe is the man who shot her.

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಎನ್ನಲಾದ ಪರಶುರಾಮ ಅಶೋಕ ವಾಘ್ಮೋರೆ (26) ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಾಗ್ಮೋರೆ 2011ರಲ್ಲಿ ಸಿಂದಗಿ ತಹಸೀಲ್ದಾರ್‌ ಕಚೇರಿ ಎದುರು ಪಾಕ್‌ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ವಿಜಯಪುರ ಜಿಲ್ಲೆ ಸಿಂದಗಿ ನಿವಾಸಿಯಾಗಿರುವ ಆರೋಪಿ ಸೈಬರ್‌ ಕೆಫೆ ನಡೆಸುತ್ತಿದ್ದಾನೆ.

ಈತ ಪಿಸ್ತೂಲ್ ಬಳಸುವುದರಲ್ಲಿ ಪರಿಣಿತ ಎನ್ನಲಾಗಿದ್ದು ಈತನೇ ಗೌರಿ ಲಂಕೇಶ್ ಮನೆ ಎದುರು ಅವರಿಗೆ ಗುಂಡು ಹಾರಿಸಿ ಕೊಂದ ಶಾರ್ಪ್ ಶೂಟರ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ.

ಕಲಬುರ್ಗಿ ಜಿಲ್ಲೆಯ ಸೊನ್ನ ಹಾಗೂ ವಿಜಯಪುರ ಜಿಲ್ಲೆಯ ದೇವನಗಾಂವ್‌ ಗಡಿಯಲ್ಲಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಈ ಪ್ರದೇಶವು ಸಿಂದಗಿಗೆ ಸಮೀಪದಲ್ಲಿದೆ. ಅಲ್ಲಿಂದಲೂ ಆರೋಪಿ ಪಿಸ್ತೂಲ್‌ಗಳನ್ನು ಖರೀದಿಸಿದ್ದ ಮಾಹಿತಿ ಇರುವುದಾಗಿ ತಿಳಿದುಬಂದಿದೆ.

ಎಸ್‌ಐಟಿ ಅಧಿಕಾರಿಗಳು ವಾಗ್ಮೊರೆಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಜೂನ್ 24ರವರೆಗೆ ಆತನನ್ನು ಎಸ್‌ಐಟಿ ಕಸ್ಟಡಿಗೆ ನೀಡಿದೆ.

ಈ ಪ್ರಕರಣದಲ್ಲಿ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಎಂಬಾತನನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ಪರಶುರಾಮ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಪರಶುರಾಮನ ಸ್ನೇಹಿತ ಸುನಿಲ್ ಎಂಬಾತನನ್ನೂ ಸಹ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪರಶುರಾಮನ ಪಾತ್ರವೇನು ಎಂಬುದನ್ನು ವಿಚಾರಣೆಯಿಂದ ತಿಳಿದುಕೊಳ್ಳಲಿದ್ದೇವೆ. ನಂತರ, ನ್ಯಾಯಾಲಯಕ್ಕೆ ವರದಿ ನೀಡಲಿದ್ದೇವೆ
– ಎನ್‌. ಅನುಚೇತ್, ಡಿಸಿಪಿ, ಎಸ್ಐಟಿ ತಂಡ

Get real time updates directly on you device, subscribe now.