ಮೊಹಮದ್ ನಲಪಾಡ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌ 

ಹೈಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದಗಳೇನು?

ಉದ್ಯಮಿಯ ಮಗ ವಿದ್ವತ್ ಮೇಲೆ ಹಲ್ಲೆ ಆರೋಪದಲ್ಲಿ ಸೆರೆವಾಸದಲ್ಲಿರುವ ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 19ರಂದು ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದರು.

ಬೆಂಗಳೂರು: ಉದ್ಯಮಿಯ ಮಗ ವಿದ್ವತ್ ಮೇಲೆ ಹಲ್ಲೆ ಆರೋಪದಲ್ಲಿ ಸೆರೆವಾಸದಲ್ಲಿರುವ ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 19ರಂದು ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದರು.

ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತ್ತು.
ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಆರೋಪಿಯು ಇಬ್ಬರು ವ್ಯಕ್ತಿಗಳು 2 ಲಕ್ಷ ಮೌಲ್ಯದ ಬಾಂಡ್ ಭದ್ರತೆ ಒದಗಿಸಬೇಕು. ಸಾಕ್ಷ್ಯ ನಾಶಪಡಿಸ ಕೂಡದು ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ. ಬಿಡುಗಡೆ ಆದೇಶದ ಪ್ರತಿಯನ್ನು ಪಡೆದ ಬಳಿಕ ಬಿಡುಗಡೆ ಪ್ರಕ್ರಿಯೆಗಳನ್ನು ಜೈಲರ್ ಪೂರ್ಣಗೊಳಿಸಲಿದ್ದಾರೆ.

ಬೆಂಗಳೂರಿನ ಯು.ಬಿ.ಸಿಟಿ ಫರ್ಜಿ ಕೆಫೆಯಲ್ಲಿ ನಲಪಾಡ್ ಹಾಗೂ ಅವರ ಏಳು ಸಹಚರರು ಫೆಬ್ರುವರಿ 17, 2018ರಂದು ವಿದ್ವತ್ ಮೇಲೆ ಜಗ್, ಬಾಟಲಿ ಹಾಗೂ ಕಬ್ಬಿಣದ ರಿಂಗ್ಗಳಿಂದ ಹಲ್ಲೆಗೈದ ಆರೋಪ ಎದುರಿಸುತ್ತಿದ್ದಾರೆ.

ಶಾಸಕರ ಪುತ್ರ ಎಂಬ ಕಾರಣಕ್ಕೆ ಪ್ರಕರಣ ಮಹತ್ವದ್ದೇ?
ಜಾಮೀನು ಕೋಡೋಣ ಬಿಡಿ, ಏಕೆ ಹಟ ಸಾಧಿಸುತ್ತಿದ್ದೀರಿ, ದೋಷಾರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಜಾಮೀನು ಕೊಡಲು ಏನು ತೊಂದರೆ ಇದೆ? ತಂದೆಗೆ ಪ್ರಭಾವ ಇದ್ದರೆ ಮಗನಿಗೂ ಪ್ರಭಾವ ಇದೆ ಎಂದು ಹೇಗೆ ಹೇಳ್ತೀರಾ? ಆತ ಶಾಸಕರ ಪುತ್ರ ಎಂಬ ಕಾರಣಕ್ಕೆ ಈ ಪ್ರಕರಣ ಮಹತ್ವ ಪಡೆದಿದೆಯೇ? ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಸುಂದರ್ ಅವರಿಗೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಬುಧವಾರ ಕೇಳಿದ ಪ್ರಶ್ನೆಗಳಿವು.

ಸ್ವಾಮಿ, ನಲಪಾಡ್ ತನ್ನ ಅಧಿಕಾರದ ದರ್ಪವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲು ಹಿಟ್ಲರ್ನಂತೆ ವರ್ತಿಸಿದ್ದಾನೆ. ಆದ್ದರಿಂದಲೇ ಪ್ರಕರಣ ಮಹತ್ವ ಪಡೆದುಕೊಂಡಿದೆ. ಆತ ಶಾಸಕರೊಬ್ಬರ ಪುತ್ರ ಎಂಬ ಕಾರಣಕ್ಕೆ ಅಲ್ಲ’ ಎಂದು ಶ್ಯಾಮಸುಂದರ್ ಉತ್ತರಿಸಿದ್ದರು.

‘ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಾರಾಕಾಸ್ತ್ರ ಬಳಕೆಯಾಗಿವೆ ಎಂದು ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಇದು ಕೊಲೆ ಯತ್ನದ ಪ್ರಕರಣವಲ್ಲ. ಆರೋಪಿಗಳಿಗೆ ಕೊಲೆ ಮಾಡುವ ಉದ್ದೇಶವೂ ಇರಲಿಲ್ಲ ಎಂದು ವಿಚಾರಣೆ ವೇಳೆ ನಲಪಾಡ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹೇಳಿದ್ದರು.
ಈ ಪ್ರಕರಣದಲ್ಲಿ 15 ಸಾಕ್ಷಿಗಳಿದ್ದು, ಎಲ್ಲರ ಮೇಲೆ ನಲಪಾಡ್ ಪ್ರಭಾವ ಬೀರುತ್ತಾರೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನಂಬಲು ಆಗದು. ಇಲ್ಲಿಯವರಿಗೆ ನಲಪಾಡ್ ತಂದೆ ಯಾರೊಬ್ಬರ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಮೊಹಮದ್ ನಲಪಾಡ್ ಹ್ಯಾರಿಸ್ ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲಿನ ವಿಚಾರಣೆಯನ್ನು ನ್ಯಾಯಪೀಠವು ಬುಧವಾರ ಮುಕ್ತಯಗೊಳಿಸಿದ್ದು, ಇಂದು ಆದೇಶ ನೀಡಿದೆ.

ಕ್ಷುಲ್ಲಕ ಕಾರಣಕ್ಕೆ ಭೀಕರ ಹಲ್ಲೆಗೈದಿದ್ದ ನಲಪಾಡ್ ಮತ್ತು ಸಹಚರರು
ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರು ಫರ್ಜಿ ಕೆಫೆಯಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದ ವಿದ್ವತ್ ತಮ್ಮ ಕ್ಷಮೆ ಕೋರುವಂತೆ ಹೇಳಿದ್ದರು. ಅವರ ಮಾತನ್ನು ಕೇಳಲಿಲ್ಲ ಎಂದು ಏಕಾಏಕಿ ಹೊಡೆಯಲು ಶುರು ಮಾಡಿದ್ದು, ಬಿಯರ್ ಬಾಟಲಿಯಿಂದ ಬಾಯಿಗೇ ಹಲ್ಲೆಗೈದಿದ್ದರು.

ನಲಪಾಡ್ ಜೊತೆ ಸುಮಾರು ಹದಿನೈದು ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು. ಕ್ಷಮೆ ಕೇಳು ಎಂದರು. ಕ್ಷಮೆಯಾಚಿಸಿದರೂ ಹೊಡೆದರು ಎಂದು ಹಲ್ಲೆಯ ಭೀಕರತೆಯನ್ನು ವಿದ್ವತ್ ಸಹೋದರ ಸಾತ್ವಿಕ್ ವಿವರಿಸಿದ್ದರು.

ನಟ ರಾಘವೇಂದ್ರ ರಾಜಮಾರ್ ಮಗ ಗುರು ಅವರು ಮಲ್ಯ ಆಸ್ಪತ್ರೆಗೆ ಬರದಿದ್ದರೆ ನನ್ನ ತಮ್ಮನನ್ನು ಹೊಡೆದು ಸಾಯಿಸಿಬಿಡುತ್ತಿದ್ದರು. ಚಿಕಿತ್ಸೆಗಾಗಿ ಮಲ್ಯಾ ಆಸ್ಪತ್ರೆಗೆ ದಾಖಲಾದರೂ ನಲಪಾಡ್ ಗ್ಯಾಂಗ್ ವಿದ್ವತ್ ನನ್ನು ಬಿಟ್ಟಿರಲಿಲ್ಲ.

ವಿದ್ವತ್ಗೆ ನರ್ಸ್ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವ ವೇಳೆ ಮಲಪಾಡ್ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿತ್ತು. ಎರಡು ಕಾರುಗಳಲ್ಲಿ ಆಸ್ಪತ್ರೆಗೆ ನುಗ್ಗಿದ ರೌಡಿ ನಲಪಾಡ್ ಹಾಗೂ ಸಹಚರರು ಆಸ್ಪತ್ರೆ ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದರು.

ಈ ವೇಳೆ ರಕ್ಷಣೆಗೆ ಹೋದ ನನ್ನ ಮೇಲೂ ಹಲ್ಲೆ ನಡೆಸಿ ಕೊರಳಪಟ್ಟಿ ಹರಿದರು. ಈ ಸಂದರ್ಭದಲ್ಲಿ ಗುರುವನ್ನು ನೋಡಿದ ನಲಪಾಡ್, ಸಹಚರರನ್ನು ಕರೆದುಕೊಂಡು ಸುಮ್ಮನೆ ಹೊರಟು ಹೋದ ಎಂದು ಸಾತ್ವಿಕ್ ಹೇಳಿದ್ದನ್ನು ಸ್ಮರಿಸಬಹುದು.

Get real time updates directly on you device, subscribe now.