ಮಂಗಳೂರು ಸ್ಕಾರ್ಫ್ ವಿವಾದ: ಮುಸ್ಲಿಂ ಮುಖಂಡರ ಸಭೆ

ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದ ತಲೆದೋರಿರುವ ಸ್ಕಾರ್ಫ್ ವಿವಾದ ಪರಿಹಾರ ಕ್ರಮಗಳ ಬಗ್ಗೆ ಮುಸ್ಲಿಂ ಮುಖಂಡರು ಮತ್ತು ವಿದ್ಯಾರ್ಥಿನಿಯರ ಸಭೆ.

ಕಾಲೇಜು ಆಡಳಿತ ಮಂಡಳಿ ಮನವಿಗೆ ಕಿವಿಗೊಡದಿದ್ದಲ್ಲಿ, ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರೊಂದಿಗೆ ಬೃಹತ್ ಹೋರಾಟ ಸಂಘಟಿಸುವ ಬಗ್ಗೆ ನಿರ್ಧಾರ.

ಮಂಗಳೂರು: ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದ ತಲೆದೋರಿರುವ ಸ್ಕಾರ್ಫ್ ವಿವಾದ ಪರಿಹಾರ ಕ್ರಮಗಳ ಬಗ್ಗೆ ಮುಸ್ಲಿಂ ಮುಖಂಡರು ಮತ್ತು ವಿದ್ಯಾರ್ಥಿನಿಯರು ಸಭೆ ನಡೆಸಿದರು.

ಕಾಲೇಜಿನಲ್ಲಿ ಹಿಂದೆ ಇಲ್ಲದಂಥ ಕೆಲವು ನಿಯಮಗಳನ್ನು ವಿದ್ಯಾರ್ಥಿನಿಯರ ಮೇಲೆ ಹೇರಲಾಗುತ್ತಿದೆ. ಸ್ಕಾರ್ಫ್ ಧರಿಸಲು ಮತ್ತು ನಮಾಝ್ ನಿರ್ವಹಿಸುವ ಬಗ್ಗೆಯೂ ಪ್ರಾಂಶುಪಾಲರು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಮಾತುಗಳನ್ನು ಪರಿಗಣಿಸದೇ ನಮ್ಮನ್ನು ಹೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯೋರ್ವರು ಹೇಳಿಕೊಂಡರು. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೋಟೀಸ್ ನೀಡಲಾಗಿದ್ದು, ಕ್ಯಾಲೆಂಡರ್ ಹಿಂಪಡೆದು ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ಸಮಸ್ಯೆ ವಿವರಿಸಿದರು.

ವಿದ್ಯಾರ್ಥಿಗಳು ನೀಡಿದ ಮಾಹಿತಿಯ ಬಗ್ಗೆ ಚರ್ಚಿಸಿದ ಮುಖಂಡರು ಈ ಬಗ್ಗೆ ಸಚಿವ ಯು.ಟಿ .ಖಾದರ್ ಅವರು ಸಂಬಂಧಿತ ಇಲಾಖಾ ಅಧಿಕಾರಿಗಳು, ವಿದ್ಯಾರ್ಥಿನಿಯರು, ಪೋಷಕರ ಜೊತೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಭೆ ಕರೆಯುವ ಬಗ್ಗೆ ಒತ್ತಾಯಿಸುವುದು, ಪೊಲೀಸ್ ವರಿಷ್ಠಾಧಿಕಾರಿಯವರು ಈ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಬೇಕು, ಕಾಲೇಜು ಆಡಳಿತ ಮಂಡಳಿ ಮನವಿಗೆ ಕಿವಿಗೊಡದಿದ್ದಲ್ಲಿ, ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರೊಂದಿಗೆ ಬೃಹತ್ ಹೋರಾಟ ಸಂಘಟಿಸುವ ಬಗ್ಗೆ ನಿರ್ಧಾರ ಕೈಗೊಂಡರು.

ಮಂಗಳೂರಿನ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಮಾಜಿ ಮೇಯರ್ ಅಶ್ರಫ್, ಸುಹೈಲ್ ಕಂದಕ್, ಹನೀಫ್ ಖಾನ್ ಕೋಡಾಜೆ, ರಫೀಯುದ್ದೀನ್ ಕುದ್ರೋಳಿ, ಅತಾವುಲ್ಲ ಜೋಕಟ್ಟೆ, ಇಕ್ಬಾಲ್ ಮುಲ್ಕಿ, ಜಾಫರ್ ಸಾದಿಕ್ ಫೈಝಿ, ಅಹ್ಮದ್ ಬಾವ, ಮೊಹ್ಮದ್ ತಫ್ಸೀರ್, ನಝೀರ್ ಅಹ್ಮದ್, ಮೊಹ್ಮದ್ ಸಲೀಂ, ಮತ್ತಿತರರು ಉಪಸ್ಥಿತರಿದ್ದರು.

 

 

Get real time updates directly on you device, subscribe now.