ಪ್ರೀತಿ ‘ಅರಳಿ’ ಮರವಾಗಿ…..

ಪ್ರೀತಿ ಯಾವ ಚೌಕಟ್ಟಿಗೂ ಸಿಗುವಂತದ್ದಲ್ಲ. ಅದಕ್ಕೆ ಬೇಲಿ ಇಲ್ಲ , ಕಟ್ಟಳೆಗಳಿಲ್ಲ. ಹಾಗೆ ಇದ್ದರೆ ಅದು ನಿಜವಾದ ಪ್ರೀತಿ ಕೂಡ ಅಲ್ಲ.

ಸಮಾಜ ಹಾಗೂ ಧರ್ಮಗಳ ಕಟ್ಟಳೆಗೆ ಒಳಪಟ್ಟು ಎಷ್ಟೋ ಪ್ರೀತಿ ಪ್ರೇಮ ಸಲ್ಲಾಪಗಳು-ಸಂಬಂಧಗಳು ಬೇಗ ಅಥವ ಕ್ರಮೇಣ  ನಿಶಬ್ದವಾಗಿ ತನ್ನ ಉಸಿರನ್ನೇ ಬಿಡುತ್ತದೆ. ಇಲ್ಲಿ ಯಾರಿಗೂ ಅದರ ಪರಿವೆ ಇಲ್ಲ.

ಪ್ರೀತಿ ‘ಅರಳಿ’ ಮರವಾಗಿ…..
ಮೆಲ್ವಿನ್ ಡಿ’ಸೋಜ ಪಡುಕೋಣೆ

ಪ್ರೀತಿ ಒಂದು ಅರಳಿ ಮರದಂತೆ ಅನಿಸುತ್ತದೆ ನನಗೆ . ಹೇಗೆ ಈ ಅರಳಿ ಮರ ಎಲ್ಲಿ ಬೇಕಾದರಲ್ಲಿ ಚಿಗುರೊಡೆದು , ಯಾರೂ ಕೀಳದೇ ಹೋದರೆ ಅದು ಹೆಮ್ಮರವಾಗಿ ಬೆಳೆಯುತ್ತದೋ ಹಾಗೇ ಪ್ರೀತಿ ಕೂಡ. ಯಾರೂ ಅದಕ್ಕೆ ನೋಯಿಸದಿದ್ದರೆ , ಅದನ್ನ ಈ ಸಮಾಜ ಕೀಳದೇ ಅದರ ಪಾಡಿಗೆ ಬದುಕ ಬಿಟ್ಟರೆ ಅದು ಹೆಮ್ಮರವಾಗಿ ಬೆಳೆಯಬಲ್ಲದು.

ನೀವು ಈ ಅರಳಿ ಮರವನ್ನ ನೋಡಿರಬಹುದು .ಅದು ಸಿಕ್ಕ ಜಾಗದಲ್ಲಿ ಬೆಳೆಯಬಲ್ಲದು. ಹಳೆ ಗೋಡೆ, ರಸ್ತೆ, ಚರಂಡಿ ,ದೇವಸ್ಥಾನ ಎಲ್ಲೆಂದರಲ್ಲಿ ಅದು ಬೇರು ಬಿಟ್ಟು ಚಿಗುರೊಡೆದು ನಿಲ್ಲುತ್ತದೆ.

ಪ್ರೀತಿ ಕೂಡ ಹಾಗೆ. ಈ ಪ್ರೀತಿಯ ಆರಂಭಕ್ಕೆ ಕಾರಣ ಬೇಕಿಲ್ಲ. ಯಾವತ್ತೂ ಅದು ಯಾವುದೇ ಸಮಯದಲ್ಲಿ ಹಾಗೂ ಯಾರ ಮೇಲೆಯೂ ಬೇರು ಬಿಟ್ಟು ಚಿಗುರೊಡೆಯಬಹುದು, ಅರಳಬಹುದು. ಪ್ರೀತಿ ಯಾವ ಚೌಕಟ್ಟಿಗೂ ಸಿಗುವಂತದ್ದಲ್ಲ .ಅದಕ್ಕೆ ಬೇಲಿ ಇಲ್ಲ , ಕಟ್ಟಳೆಗಳಿಲ್ಲ. ಹಾಗೆ ಇದ್ದರೆ ಅದು ನಿಜವಾದ ಪ್ರೀತಿ ಕೂಡ ಅಲ್ಲ.

ಪ್ರೀತಿಯು ಜಾತಿ-ಧರ್ಮ,ಆಚಾರ-ವಿಚಾರ ,ಗಡಿ ,ಭಾಷೆ ,ಬಣ್ಣ ,ಸಂಬಂಧ ,ಹಾಗೂ ಲಿಂಗ ನೋಡಿ ಬರೋಲ್ಲ. ಬದಲಿಗೆ ಅದು ಸಬ್ಕಾನ್ಶಿಯಸ್ ಆಗಿ ಇಷ್ಟಪಡುವ ವ್ಯಕ್ತಿಯ ನಡತೆ ಹಾಗೂ ಭಾವನೆಗೆ ಸ್ಪಂದಿಸುವ ಬಗೆಗೆ ಒಲಿದು ಬರುತ್ತೆ.

ಅರಳಿ ಮರದಂತೆ!

ಸಮಾಜ ಹಾಗೂ ಧರ್ಮಗಳ ಕಟ್ಟಳೆಗೆ ಒಳಪಟ್ಟು ಎಷ್ಟೋ ಇಂಥ ಪ್ರೀತಿ ಪ್ರೀತಿ ಪ್ರೇಮ ಸಲ್ಲಾಪಗಳು-ಸಂಬಂಧಗಳು ಬೇಗ ಅಥವ ಕ್ರಮೇಣ ನಿಶಬ್ದವಾಗಿ ತನ್ನ ಉಸಿರನ್ನೇ ಬಿಡುತ್ತವೆ. ಇಲ್ಲಿ ಯಾರಿಗೂ ಅದರ ಪರಿವೆ ಇರುವುದಿಲ್ಲ.

ಪಾಶ್ಚ್ಯಾತರು ಅನುಸರಿಸುವ ರೀತಿ ಅವರ ಪ್ರೀತಿಯ ನೀತಿಯೂ  ಸರಿ ಅನ್ನಿಸುತ್ತದೆ, ಕೆಲವೊಮ್ಮೆ. ಅವರು ಇಷ್ಟ ಪಟ್ಟ ಸಂಗಾತಿಯನ್ನು ಕೂಡುವ ಎಲ್ಲಾ ಸ್ವಾತಂತ್ರ್ಯವೂ ಅವರಿಗಿದೆ.ಪ್ರೀತಿಗೆ ನೀರೆರೆದು ಪೋಷಿಸಬಹುದು ಅಥವಾ ನೀರೆರೆದು ಜತನ ಮಾಡದೇ ಇದ್ದರೂ, ಅದನ್ನ ಅದರ ಪಾಡಿಗೆ ಬಿಡುವ ವಿವೇಚನೆ ಅವರಲ್ಲಿ ಉಂಟು.

ನಾವು ನಮ್ಮ ಧರ್ಮ ಹಾಗೂ ಸಂಸ್ಕ್ರತಿಯ ಹೆಸರಲ್ಲಿ ,ಪ್ರೀತಿಸುವ ಜೀವಿಗಳನ್ನ ವಿಭಜಿಸುವುದು ಬಿಟ್ಟರೆ ,ಅವರ ಭಾವನೆಗಳ ಬಗ್ಗೆ ಆಲೋಚಿಸುವ ನೈತಿಕತೆ ಆಗಲಿ ಕರುಣೆ ಆಗಲಿ ಇಲ್ಲ.

ಸ್ವಲ್ಪ ದಿನದ ಹಿಂದೆ ಮಿತ್ರನೊರ್ವ ಖಿನ್ನತೆ ಒಳಗಾಗಿದ್ದ. ಸ್ವಲ್ಪ ಕೆದಕಿ ಕೇಳಿದಾಗ  ತನ್ನ ಎಂಟು ವರ್ಷದ ಪ್ರೀತಿ ಕಳೆದುಕೊಂಡ ವಿಚಾರ ತುಂಬಾ ಅತ್ತು ತಿಳಿಸಿದ. ತುಂಬಾ ಹತ್ತಿರದ ಸಂಬಂಧಿ ಹುಡುಗಿ ಜೊತೆ ಪ್ರೀತಿ ಮೂಡಿತ್ತು. ಪ್ರೀತಿ ಬೇರು ತುಂಬಾ ಆಳಕ್ಕೆ ಸಾಗಿತ್ತು. ಅವರ ಕನಸುಗಳು ಹೆಮ್ಮರವಾಗಿ  ಆಕಾಶಕ್ಕೆ ಏರಿತ್ತು. ಇಬ್ಬರು ಸೇರಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತುಂಬಾ ಉಪಾಯವನ್ನು ಮಾಡಿದ್ದರು. ಆದರೆ ಮದುವೆ ಆಗಲಿಕ್ಕೆ ಯಾವುದೇ ದಾರಿ ಈ ಸಮಾಜ ನಿರ್ಮಿಸಿದ ಕಟ್ಟಳೆಗಳಲ್ಲಿ ಕಾಣಲೇ ಇಲ್ಲ.  ಓಡಿ ಹೋಗುವ ಎಂದರೆ ಅವನಿಗೆ ನಂತರ ಈ ಸಮಾಜದಲ್ಲಿ ನಮ್ಮವರು ಯಾರು ಎನ್ನುವ ಚಿಂತೆ. ಹಾಗಂತ ಪ್ರೀತಿಯಿಂದ ದೂರ ಸರಿಯಲು ಅವರ ಮನಸಾಕ್ಷಿ  ಒಪ್ಪುತ್ತಿಲ್ಲ. ಕೊನೆಗೆ ಆ ಹುಡುಗಿ ಆದರೂ ಚೆನ್ನಾಗಿರಲಿ ಎಂದು ಅವಳ ಮನ ಒಲಿಸಿ ತಮ್ಮ ಪ್ರೀತಿ ಸಂಬಂಧದಿಂದ ದೂರ ಉಳಿಯುವ ನಿರ್ಧಾರ ಮಾಡಿದ.

ನಿಜವಾಗಿಯೂ ಆ ಪ್ರೀತಿಯೇ ಸುಳ್ಳಾಗಿತ್ತೆ ?

ಇಲ್ಲ. ಈ ಪ್ರೀತಿ ಸಮಾಜದ ಹಾಗೂ ಧರ್ಮದ ಕಟ್ಟಳೆಗೆ ಸಿಲುಕಿ ನಲುಗಿತೇ ಹೊರತು ಸಾಯಲಿಲ್ಲ. ಎರಡು ದೇಹ ಬೇರೆ ಆಯಿತೆ ವಿನಃ ಬೆಳೆದ ಪ್ರೀತಿ ನಲುಗಿ, ಇನ್ನೂ ಬೆಳೆದಂತೆ ಸ್ಥಬ್ದವಾಗಿ ಉಳಿಯಿತು. ಕಂಡ ಕನಸುಗಳು ಒಮ್ಮೆಗೆ  ಚೂರಾಗಿ,ಇಬ್ಬರ ಹೃದಯಗಳನ್ನು  ಘಾಸಿಗೊಳಿಸಿತು.

ಅದೇ ಆ ರಸ್ತೆಯ ಪಕ್ಕದಲ್ಲಿ ಬೆಳೆದ ಅರಳಿ ಮರದಂತೆ!

ದಷ್ಟ ಪುಷ್ಟವಾಗಿ ಹೆಮ್ಮರದಂತೆ ಬೆಳೆದಿದ್ದ ಮರ ,ಅಭಿವೃದ್ಧಿ ಎನ್ನುವ ಸಮಾಜದ ಕ್ರೂರ ಬದಲಾವಣೆಗೆ ಕೊಡಲಿ ಏಟಿಗೆ ಧರೆಗೆ ಬಿದ್ದಂತೆ ಅನಿಸಿತು.

Get real time updates directly on you device, subscribe now.