ಜೂನ್.1ರಿಂದ ದೇವಸ್ಥಾನಗಳಂತೆಯೇ ಚರ್ಚ್, ಮಸೀದಿಗಳೂ ಓಪನ್: ಸಿಎಂ ಯಡಿಯೂರಪ್ಪ

ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದರೆ ಅದೇ ನೀತಿ ಚರ್ಚ್ ಮತ್ತು ಮಸೀದಿಗಳಿಗೂ ಅನ್ವಯವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಕೇಂದ್ರ ಅನುಮತಿ ನೀಡಿದರೆ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಜೂನ್.1ರಿಂದ ದೇವಸ್ಥಾನಗಳನ್ನು ಭಕ್ತರ ದರ್ಶನಕ್ಕೆ ತೆರೆಯುವಂತೆಯೇ ಚರ್ಚ್ ಮತ್ತು ಮಸೀದಿಗಳನ್ನೂ ತೆರೆಯಲು ಅವಕಾಶ ನೀಡಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧ ಆವರಣದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪುಣ್ಯತಿಥಿ ಅಂಗವಾಗಿ ನೆಹರೂ ಪ್ರತಿಮೆಗೆ ಮಾಲಾರ್ಪಣೆಗೈದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದರೆ ಅದೇ ನೀತಿ ಚರ್ಚ್ ಮತ್ತು ಮಸೀದಿಗಳಿಗೂ ಅನ್ವಯವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ದೇವಸ್ಥಾನ, ಚರ್ಚ್, ಮಸೀದಿ ತೆರೆಯುವುದು, ಹೊರರಾಜ್ಯದಿಂದ ಬರುತ್ತಿರುವ ಜನರಿಗೆ ಉಂಟಾಗಬಹುದಾದ ವಸತಿ ಸಮಸ್ಯೆ, ಮಾಲ್‌ಗಳನ್ನು ತೆರೆಯುವ ಬಗ್ಗೆ ಈ ಎಲ್ಲ ವಿಷಯಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಅನುಮತಿ ನೀಡಿದರೆ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನಗಳನ್ನು ಜೂ.1ರಿಂದ ತೆರೆಯುವುದಾಗಿ ಹೇಳಿದ್ದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಸೀದಿ ಮತ್ತು ಚರ್ಚ್ ತೆರೆಯುವ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿರುವುದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ತಾರತಮ್ಯ ಧೋರಣೆ ತಾಳುತ್ತಿದೆಯೇ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಸರಕಾರಕ್ಕೆ ಚಾಟಿ ಬೀಸಿದ್ದರು. ಇಂದು ಮುಖ್ಯಮಂತ್ರಿ ನೇರವಾಗಿ ಉತ್ತರಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Get real time updates directly on you device, subscribe now.