ಶಾಸಕರೊಂದಿಗೆ ಚರ್ಚೆಗೆ ತುರ್ತು ಸಭೆ ಕರೆದಿಲ್ಲ: ಸಿಎಂ ಯಡಿಯೂರಪ್ಪ

ಉಮೇಶ್ ಕತ್ತಿ ಆಪ್ತ ಶಾಸಕರ ಸಭೆ ನಡೆಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟನೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: “ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಂಥ ಯಾವುದೇ ಸಭೆ ಕರೆದಿಲ್ಲ” ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಶಾಸಕ ಉಮೇಶ್ ಕತ್ತಿ ಗುರುವಾರ ರಾತ್ರಿ ಆಪ್ತ ಶಾಸಕರ ಸಭೆ ನಡೆಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಸಭೆಯಲ್ಲಿ ಉಮೇಶ್ ಕತ್ತಿಯವರ ಸಹೋದರ ರಮೇಶ್ ಕತ್ತಿಯವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ವರಿಷ್ಠರ ಮನಒಲಿಸುವ ಬಗ್ಗೆ ನಡೆಸಿದ ಚರ್ಚೆಯಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಭಾಗವಹಿಸಿದ್ದು, ಯಡಿಯೂರಪ್ಪ ವಿರುದ್ಧ ಅಸಮಾಧಾನ ಸ್ಫೋಟವಾಗಿತ್ತು.

‘ನಾವು ಯಾರಿಗೂ ಗುಲಾಮರಲ್ಲ’ ಎಂದು ಕೆಲ ಶಾಸಕರು ಏರಿದ ದನಿಯಲ್ಲಿ ಮಾತನಾಡಿದ್ದಾರೆ. ಇನ್ನೂ ಕೆಲವರು ಒಟ್ಟಿಗೆ ಹೋಗೋಣ ಎಂದು ಸಮಾಧಾನ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ಯತ್ನಾಳ ನಾವು ಮಾವು ತಿನ್ನಲು, ಹರಟೆ ಹೊಡೆಯಲು ಉಮೇಶ್ ಕತ್ತಿಯವರ ಜೊತೆ ಸೇರಿದ್ದೆವು. ಬಿ.ಎಸ್.ವೈ ನಮ್ಮ ಮುಖ್ಯಮಂತ್ರಿ. ಅವರಿಗೆ ವಯಸ್ಸಾಗಿದೆ. ಅವರಿಗೆ ಟೆನ್ಶನ್ ಕೊಡೋಲ್ಲ. ಪಕ್ಷದ ವರಿಷ್ಠರು ಬಿ.ಎಸ್. ವೈಯವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಿದರೂ ಆಕ್ಷೇಪ ಇಲ್ಲ, ಅವರನ್ನು ಇಳಿಸಿದರೂ ಆಕ್ಷೇಪ ಇಲ್ಲ. ಸಚಿವಗಿರಿಗಾಗಿ ನಾನಂತೂ ಯಾವತ್ತೂ ಬಿ.ಎಸ್.ವೈಗೆ ಬೇಡಿಕೆ ಇಟ್ಟಿಲ್ಲ. ನನ್ನ ಸಾಮರ್ಥ್ಯ ನನಗಿದೆ ಎಂದಿದ್ದಾರೆ.

Get real time updates directly on you device, subscribe now.