ಖಾರಿಫ್ ಬೆಳೆಗಳಿಗೆ ಬೆಂಬಲ ಬೆಲೆ ಮರುಪರಿಶೀಲನೆಗೆ ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

ಕೇಂದ್ರ ನಿಗದಿಪಡಿಸಿದ ಬೆಲೆ ವಾಸ್ತವಕ್ಕೆ ಹತ್ತಿರವಾಗಿಲ್ಲ. ರೈತರ ಎಲ್ಲ ಖರ್ಚು ಪರಿಗಣಿಸಿ ಹದಿನೇಳು ಬೆಲೆಗಳ ಬೆಂಬಲ ಬೆಲೆ ಪರಿಷ್ಕರಿಸಲು ಸಿದ್ದರಾಮಯ್ಯ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ತೀರ್ಮಾನಗಳು ರೈತರನ್ನು ಮತ್ತಷ್ಟು ಕಷ್ಟಗಳಿಗೆ ತಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅನುಮೋದಿಸಿರುವ ರೈತರ 17 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕೃತ ಮಾನದಂಡದೊಂದಿಗೆ ನಿಗದಿ ಮಾಡಬೇಕು ಎಂದು ವಿಧಾನಸಬೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೇಂದ್ರ ನಿಗದಿಪಡಿಸಿದ ಬೆಲೆ ವಾಸ್ತವಕ್ಕೆ ಹತ್ತಿರವಾಗಿಲ್ಲ. ರೈತರ ಎಲ್ಲ ಖರ್ಚು ಪರಿಗಣಿಸಿ ಹದಿನೇಳು ಬೆಲೆಗಳ ಬೆಂಬಲ ಬೆಲೆ ಪರಿಷ್ಕರಿಸಲು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಈ ಹದಿನೇಳು ಬೆಲೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸಿ2 ವೆಚ್ಚದ ಆಧಾರದಲ್ಲಿ ವಾಸ್ತವಗನುಗುಣವಾಗಿ ಘೋಷಿಸಬೇಕು ಎಂದು ಅವರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

2022-23ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಕೃಷಿ ಚಟುವಟಿಕೆ ಹಾಗೂ ರೈತರಿಗೆ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ತೆಗೆದುಕೊಳ್ಳುವ ತೀರ್ಮಾನಗಳು ಭರವಸೆಗೆ ಪೂರಕವಾಗಿಲ್ಲ. ಕೋವಿಡ್19 ರೈತರನ್ನು ಮತ್ತಷ್ಟು ದುರ್ಬಲಗೊಳಿಸಿದೆ, ನಿಮ್ಮ ತೀರ್ಮಾನಗಳು ರೈತರನ್ನು ಮತ್ತಷ್ಟು ಕಷ್ಟಗಳಿಗೆ ತಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2018-19ನೇ ಬಜೆಟ್ ನಲ್ಲಿ ರೈತರಿಗೆ ಬೆಳೆ ಬೆಳೆಯಲು ತಗುಲುವ ವೆಚ್ಚ 1.5 ರಷ್ಟು ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದಿರಿ ಎಂದು ಅವರು ಪ್ರಧಾನಿಗೆ ಜವಾಬ್ದಾರಿ ನೆನಪಿಸಿದ್ದಾರೆ.

ಕಷಿ ವೆಚ್ಚ ಮತ್ತು ಬೆಲೆ ಆಯೋಗ ತಕ್ಕ ಮಾನದಂಡ ಅನುಸರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ವೇಳೆ ಸಿ-2 ಮಾನದಂಡದ ಪ್ರಕಾರ ಕೃಷಿ ವೆಚ್ಚ ಮಾತ್ರವಲ್ಲದೆ ಹೊಲದಲ್ಲಿ ದುಡಿಯುವ ಕುಟುಂಬ ಸದಸ್ಯರ ಕೂಲಿ, ನೆಲದ ಬಾಡಿಗೆ, ಬಂಡವಾಳದ ಮೇಲಿನ ಬಡ್ಡಿ ಸೇರಿ ಗಣನೆಗೆ ತೆಗೆದುಕೊಂಡು ಉತ್ಪಾದನಾ ವೆಚ್ಚ ಅಂದಾಜಿಸಬೇಕು.

ಉದಾಹರಣೆಗೆ ಆಯೋಗದ ಶಿಫಾರಸಿನ ಪ್ರಕಾರ ಕಡಲೆಕಾಯಿ ಬೆಳೆಯಲು ಆಗುವ ವೆಚ್ಚ 3,515 ರು. ಹಾಗೂ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ 5,275ರು. ಕಡಲೆಕಾಯಿ ಬೆಳೆಯಲು ಉತ್ಪಾದನಾ ವೆಚ್ಚವೇ 6,509ರು. ಆಗುತ್ತದೆ. ಕೇಂದ್ರ ಘೋಷಿಸಿದಂತೆ ಒಂದುವರೆಪಟ್ಟು ಬೆಂಬಲ ಬೆಲೆ ಘೋಷಿಸುವುದಾದರೆ ಪ್ರತಿ ಕ್ವಿಂಟಾಲ್‌ಗೆ 9,763ರು. ನೀಡಬೇಕು.

ಅನೇಕ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಉತ್ಪನ್ನಗಳನ್ನು ಮಾರಲು ಮಾರುಕಟ್ಟೆಗಳಿಗೆ ಪ್ರವೇಶವಿಲ್ಲ. ರೈತರು ಉತ್ಪನ್ನಗಳನ್ನು ಸ್ಥಳೀಯವಾಗಿ ಕಡಿಮೆ ಬೆಲೆಗೆ ವ್ಯಾಪಾರಿಗಳಿಗೆ ಮಾರುವ ಪರಿಸ್ಥಿತಿ ಇದೆ ಎಂದು ಪ್ರಧಾನಿಗೆ ವಾಸ್ತವ ಸಂಗತಿ ತಿಳಿಸಿರುವ ಸಿದ್ದರಾಮಯ್ಯ, ಈ ಸಂದರ್ಭ ಸರಕಾರ ಮಧ್ಯಪ್ರವೇಶಿಸಿ, ವಾಸ್ತವಕ್ಕನುಗುಣವಾಗಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.