ಬ್ಯಾಂಕಿನ ಅಮಾನವೀಯತೆ: 3ರೂ.46ಪೈಸೆ ಸಾಲ ಪಾವತಿಸಲು 15ಕಿ.ಮೀ ನಡೆದ ರೈತ

ಬಸ್ ಸೌಲಭ್ಯ ಇಲ್ಲದಿರುವುದರಿಂದ ನಡೆದೇ ಬಂದು ಸಾಲ ಕಟ್ಟಿದ್ದಾರೆ.

ಕೃಷಿ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಾಯಿಸುವಂತಿಲ್ಲ ಎಂದು ಸರಕಾರಿ ಆದೇಶವಿದ್ದರೂ ಚಿಲ್ಲರೆ ಮೂರು ರೂ. ನಲವತ್ತಾರು ಪೈಸೆ ಸಾಲ ಕಟ್ಟಲು ಸೂಚಿಸಿದ ಬ್ಯಾಂಕಿನ ಅಮಾನವೀಯ ಕ್ರಮ.

ಕರಾವಳಿ ಕರ್ನಾಟಕ ವರದಿ
ಹೊಸನಗರ: ಸಾಲದ ಬಾಕಿ ಕೂಡಲೇ ಕಟ್ಟಿ, ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂಬ ಬ್ಯಾಂಕಿನವರ ಪೋನ್ ಕರೆಗೆ ಬೆಚ್ಚಿದ ರೈತರೊಬ್ಬರು 15ಕಿ.ಮೀ ನಡೆದು 3ರೂಪಾಯಿ 46ಪೈಸೆ ಕಟ್ಟಿದ ಪ್ರಕರಣ ವರದಿಯಾಗಿದ್ದು, ಬ್ಯಾಂಕಿನ ಕಾರ್ಯವೈಖರಿ ತೀವೃ ಟೀಕೆಗೆ ಕಾರಣವಾಗಿದೆ.

ತಾಲೂಕಿನ ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮಿನಾರಾಯಣ ಅವರು ಕೆನರಾ ಬ್ಯಾಂಕಿನಲ್ಲಿ ಸಾಲ ಕಟ್ಟಿದವರು. ಬಸ್ ಸೌಲಭ್ಯ ಇಲ್ಲದಿರುವುದರಿಂದ ನಡೆದೇ ಬಂದು ಸಾಲ ಕಟ್ಟಿದ್ದಾರೆ.

ಇವರು ಬ್ಯಾಂಕಿನಿಂದ 35000ರೂ. ಸಾಲ ಪಡೆದಿದ್ದು, ಸಾಲ ಮನ್ನಾ ಯೋಜನೆಯಲ್ಲಿ  32,000ರೂ. ಮನ್ನಾ ಆಗಿತ್ತು. ಮೂರು ಸಾವಿರ ಬಾಕಿ ಮೊತ್ತವನ್ನು ಬಡ್ಡಿ ಸಹಿತ ಕಟ್ಟಿದ್ದರು. ಯಾವುದೇ ಸಾಲ ಬಾಕಿ ಇಲ್ಲ ಎಂದು ಭಾವಿಸಿದ್ದ ರೈತ ಲಕ್ಷ್ಮಿನಾರಾಯಣ ಅವರು ಬ್ಯಾಂಕಿನ ಕರೆ ಬಂದಾಗ ಹೆದರಿ ತೋಟಕ್ಕೆ ಔಷಧ ಸಿಂಪಡಿಸುವ ಕೆಲಸ ಬಿಟ್ಟು ನಡೆದೇ ಬಂದಿದ್ದರು.

ಬ್ಯಾಂಕಿನ ನಿಯಮದಂತೆ ಸಾಲ ಬಾಕಿ ಕಟ್ಟಿಸಿಕೊಂಡಿದ್ದೇವೆ. ಬ್ಯಾಂಕಿನಲ್ಲಿ ಆಡಿಟ್ ನಡೆಯುತ್ತಿರುವುದರಿಂದ ಸಾಲ ರಿನ್ಯೂವಲ್‌ಗೆ ಸಹಿಯ ಅಗತ್ಯವಿತ್ತು ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎಲ್.ಸಿಂಗ್ವಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೃಷಿ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಾಯಿಸುವಂತಿಲ್ಲ ಎಂದು ಸರಕಾರಿ ಆದೇಶವಿದ್ದರೂ ಚಿಲ್ಲರೆ ಮೂರು ರೂ. ನಲವತ್ತಾರು ಪೈಸೆ ಸಾಲ ಕಟ್ಟಲು ಸೂಚಿಸಿದ ಬ್ಯಾಂಕಿನ ಕ್ರಮ ಅಮಾನವೀಯವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.