ಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಇತ್ತೀಚೆಗಷ್ಟೇ ಬ್ಯಾಂಕ್ ಹಾಗೂ ವಾಸುದೇವ ಮಯ್ಯ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಪ್ರಮುಖ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿತ್ತು.

ಬಸವನಗುಡಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ 1400ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ಆರೋಪ ಇದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಒಳಗಾಗಿರುವ ಬಸವನಗುಡಿ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕಿನ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ  ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಾಸುದೇವ ಮಯ್ಯ ಅವರು ಮನೆ ಮುಂದೆ ಕಾರಿನಲ್ಲಿ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕಲಸಂದ್ರದಲ್ಲಿ ಘಟನೆ ನಡೆದಿದ್ದು, ಡಿಸಿಪಿ ರೋಹಿಣಿ ಸಪೇಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.

ಬಸವನಗುಡಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ 1400ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ಆರೋಪ ಇದೆ. ಇತ್ತೀಚೆಗಷ್ಟೇ ಬ್ಯಾಂಕ್ ಹಾಗೂ ವಾಸುದೇವ ಮಯ್ಯ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಪ್ರಮುಖ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿತ್ತು.

ಕೋರ್ಟ್ ಆದೇಶದಂತೆ ಪ್ರಕರಣ ಸಿಐಡಿಗೆ ಹಸ್ತಾಂತರಗೊಂಡಿದೆ. ಮಯ್ಯ ಬ್ಯಾಂಕಿನ ಸಿಇಒ ಆಗಿದ್ದ ಸಂದರ್ಭ ನಕಲಿ ಖಾತೆಗಳ ಮೂಲಕ ಸಾಲ ವಿತರಿಸಲಾಗಿದೆ. ಈ ಸಾಲಗಳಿಗೆ ಭದ್ರತೆ ಇಲ್ಲ ಎಂದು ಆರೋಪಿಸಲಾಗಿತ್ತು. ಮಯ್ಯ ಅವರಿಗೆ ಸಂಬಂಧಿಸಿದಂತೆ ಬ್ಯಾಂಕಿನಲ್ಲಿ 8ಕೋಟಿ ಸಾಲ ಇದೆ. ಏಳು ಖಾತೆಗಳ ಮೂಲಕ ಈ ಸಾಲ ಪಡೆಯಲಾಗಿದೆ ಎಂದು ಆರ್‌ಬಿಐಗೆ ಸಲ್ಲಿಸಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಯ್ಯ ಅವರು ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.

ಯಕ್ಷಗಾನ ಪ್ರಸಂಗಕರ್ತರಾಗಿದ್ದ ಮಯ್ಯ

ಇಂದ್ರನಾಗ, ದೇವ ಗಂಗೆ, ಸೂರ್ಯ ಸಂಕ್ರಾಂತಿ, ಪುಷ್ಪ ಸಿಂಧೂರಿ ಮುಂತಾದ ಪ್ರಸಂಗಗಳನ್ನು ಮಯ್ಯ ಅವರು ರಚಿಸಿದ್ದು, ಪೆರ್ಡೂರು ಮೇಳದಲ್ಲಿ ಆಡಲಾಗುತ್ತಿತ್ತು. ಯಕ್ಷಗಾನ ಸಂಘಟಕರಾಗಿಯೂ, ಪೋಷಕರಾಗಿಯೂ ಮಯ್ಯ ಗುರುತಿಸಿಕೊಂಡಿದ್ದರು.

Get real time updates directly on you device, subscribe now.