ರಾಜ್ಯದಲ್ಲಿ ಇನ್ನು ಮುಂದೆ ಲಾಕ್‌ ಡೌನ್ ಅನ್ನುವ ಮಾತೇ ಇಲ್ಲ: ಯಡಿಯೂರಪ್ಪ ಸ್ಪಷ್ಟ ನುಡಿ

ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಿಸಲು ಸಹಾಯ ಮಾಡಿ

ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಮಾತಾಡಬಾರದು. ಕಂಟೋನ್ಮೆಂಟ್ ಝೋನ್‌ಗಳಲ್ಲಿ ಮಾತ್ರ ಅತ್ಯಂತ ಕಠಿಣ ಕ್ರಮಗಳು ಜಾರಿಯಲ್ಲಿರುತ್ತವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಲಾಕ್ ಡೌನ್ ಮಾತೇ ಇಲ್ಲ. ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಿಸಲು ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಜನತೆಯನ್ನು ಉದ್ದೇಶಿಸಿ ಇಂದು ಸಂಜೆ 5 ಗಂಟೆಗೆ ಭಾಷಣ ಮಾಡಿದ ಯಡಿಯೂರಪ್ಪ ರಾಜ್ಯದ ಜನರು ನಾಳೆಯಿಂದ ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಆರ್ಥಿಕವಾಗಿ ರಾಜ್ಯವನ್ನು ಪುನಶ್ಚೇತನಗೊಳಿಸಲು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸೇರಿ ಸುಮಾರು 11 ಸಾವಿರ ಬೆಡ್‌ಗಳು ಬೆಂಗಳೂರಿನಲ್ಲಿ ಲಭ್ಯವಿದೆ. ಸಚಿವರು, ಶಾಸಕರು ಅಧಿಕಾರಿಗಳು ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಸಂಪೂರ್ಣ ಸಹಕರಿಸಬೇಕು. ಕೋವಿಡ್ ರೋಗಿಗಳನ್ನು ಸಹಾನುಭೂತಿಯಿಂದ ನೋಡಬೇಕು ಎಂದು ಬಿಎಸ್‌ವೈ ಹೇಳಿದರು.

ಮಾಸ್ಕ್ ಹಾಕದೇ ಇದ್ದರೆ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕಿದೆ. 98 ಶೇಕಡಾ ಜನರು ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗುತ್ತಾರೆ. ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ಕೋವಿಡ್ ರೋಗಿಗಳು ಮಾಡಬಾರದು. ಎಲ್ಲರ ಜೀವ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಯಡಿಯೂರಪ್ಪ ಹೇಳಿದರು.

ಕೋವಿಡ್-19ಗೆ ಸಂಬಂಧಿಸಿದಂತೆ ಖರೀದಿಗಳಲ್ಲಿ ಯಾವುದೇ ಹಗರಣ ನಡೆದಿಲ್ಲ. ಯಾವುದೇ ದಾಖಲೆಗಳನ್ನು ಪ್ರತಿಪಕ್ಷ ನಾಯಕರಿಗೆ ನೀಡಲು ಸಿದ್ಧರಿದ್ದೇವೆ. ಇಂತಹ ಸಂಕಷ್ಟದ ಘಳಿಗೆಯಲ್ಲಿ ಅನಗತ್ಯ ಟೀಕೆ ಮಾಡದೆ ಸರ್ಕಾರಕ್ಕೆ ರಚಾನತ್ಮಕ ಸಲಹೆಗಳನ್ನು ನೀಡಬೇಕು ಎಂದು ಸಿದ್ಧರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ನಾಯಕರಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಮಾತಾಡಬಾರದು. ಕಂಟೋನ್ಮೆಂಟ್ ಝೋನ್‌ಗಳಲ್ಲಿ ಅತ್ಯಂತ ಕಠಿಣ ಕ್ರಮಗಳು ಜಾರಿಯಲ್ಲಿರುತ್ತವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Get real time updates directly on you device, subscribe now.