ಕೃಷ್ಣಮೂರ್ತಿ ಹನೂರರ ‘ಕಾಲಯಾತ್ರೆ’, ಬಿ. ಜನಾರ್ಧನ ಭಟ್ ಅವರ ‘ಬೂಬರಾಜ ಸಾಮ್ರಾಜ್ಯ’ ಪುಸ್ತಕ ಬಿಡುಗಡೆ
ಪುಸ್ತಕದ ಜೊತೆ ನಾವು ಹೆಚ್ಚು ದಿನ ಜೀವಿಸಬಹುದು ಎಂದು ಲೇಖಕ, ಪತ್ರಕರ್ತ ಜೋಗಿ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ಪ್ರಕಾಶನದ ಪ್ರಭಾ ಕಂಬತ್ತಳ್ಳಿ, ಪ್ರಕಾಶ್ ಕಂಬತ್ತಳ್ಳಿ, ಕೃತಿಯ ಲೇಖಕರಾದ ಬಿ. ಜನಾರ್ಧನ ಭಟ್, ಬುಕ್ ಬ್ರಹ್ಮ ಸಂಪಾದಕರಾದ ದೇವು ಪತ್ತಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ‘ಪುಸ್ತಕದ ಜೊತೆ ನಾವು ಹೆಚ್ಚು ದಿನ ಜೀವಿಸಬಹುದು. ಪುಸ್ತಕಗಳ ಓದು ಏಕಾಂತ, ಶ್ರದ್ಧೆ, ತನ್ಮಯತೆಯನ್ನು ಕಲಿಸುತ್ತದೆ’ ಎಂದು ಲೇಖಕ, ಪತ್ರಕರ್ತ ಜೋಗಿ ಅವರು ಅಭಿಪ್ರಾಯಪಟ್ಟರು.
‘ಬುಕ್ ಬ್ರಹ್ಮ ಹಾಗೂ ಅಂಕಿತ ಪುಸ್ತಕ ಜಂಟಿಯಾಗಿ ಆಯೋಜಿಸಿದ್ದ ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ ಮತ್ತು ಬಿ. ಜನಾರ್ಧನ ಭಟ್ ಅವರ ‘ಬೂಬರಾಜ ಸಾಮ್ರಾಜ್ಯ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬೂಬರಾಜ ಸಾಮ್ರಾಜ್ಯ ಕಾದಂಬರಿಯು ಬೂಬರಾಜನ ಕಾಲದ ಚಿತ್ರಣವನ್ನು ನೀಡುವುದರೊಂದಿಗೆ ಇತಿಹಾಸ ಮತ್ತು ವರ್ತಮಾನವನ್ನು ಪರಸ್ಪರ ತಳಕು ಹಾಕುತ್ತಾ, ಆ ಕಾಲಕ್ಕೂ ಈ ಕಾಲಕ್ಕು ಇರುವ ಸಾಮ್ಯತೆಯನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಕಾಲಯಾತ್ರೆ’ ಕಾದಂಬರಿಯು ಹನೂರರ ಲಯಬದ್ಧವಾದ ಭಾಷೆ ಕಾದಂಬರಿ ಓದಿನಲ್ಲಿದೆ. ಕಾಲಯಾತ್ರೆ ಕರಾಳವಾದ ರಾಜಕೀಯ, ಮುಗ್ದವಾದ ಜನರ ಬದುಕು, ಸಂಕೀರ್ಣ ಪಾತ್ರಗಳನ್ನು ಪರಿಚಯಿಸಿದೆ’ ಎಂದರು.
ನಿರ್ದೇಶಕ ಪಿ. ಶೇಷಾದ್ರಿ ಅವರು ಮಾತನಾಡಿ, ‘ಕಾಲಯಾತ್ರೆ ಮತ್ತು ಬೂಬರಾಜ ಸಾಮ್ರಾಜ್ಯ ಕಾದಂಬರಿಗಳಲ್ಲಿ ಎರಡು ಸಾಮ್ಯತೆಗಳಿವೆ. ಭೂತ ಮತ್ತು ವರ್ತಮಾನ ಎರಡೂ ಈ ಕಾದಂಬರಿಗಳಲ್ಲಿ ತಳುಕುಹಾಕಿಕೊಂಡಿವೆ’ ಎಂದರು.
ಐತಿಹಾಸಿಕ ಕಾದಂಬರಿಗಳನ್ನು ಬರೆಯುವಾಗ ಬೇರೆ ಬೇರೆ ಶೈಲಿಯನ್ನು ಕಥನಕ್ರಮವನ್ನು ಬಳಸಬೇಕು. ಇಲ್ಲವಾದಲ್ಲಿ ಕಾದಂಬರಿಯನ್ನು ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಅವರು ತಿಳಿಸಿದರು.
ಅಂಕಿತ ಪುಸ್ತಕ ಪ್ರಕಾಶನದ ಪ್ರಭಾ ಕಂಬತ್ತಳ್ಳಿ, ಪ್ರಕಾಶ್ ಕಂಬತ್ತಳ್ಳಿ, ಕೃತಿಯ ಲೇಖಕರಾದ ಬಿ. ಜನಾರ್ಧನ ಭಟ್, ಬುಕ್ ಬ್ರಹ್ಮ ಸಂಪಾದಕರಾದ ದೇವು ಪತ್ತಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.