ಎರಡು ವರ್ಷದಲ್ಲಿ 25 ಸಾವಿರ ಶಿಕ್ಷಕರ ನೇಮಕ: ಶಿಕ್ಷಣ ಸಚಿವ ಎನ್. ಮಹೇಶ್

ಹತ್ತು ಸಾವಿರ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ

ಎರಡು ವರ್ಷದಲ್ಲಿ 25 ಸಾವಿರ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು: ಶಿಕ್ಷಣ ಸಚಿವರ ಭರವಸೆ.

ಬೆಂಗಳೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ಕಳೆದ ನವೆಂಬರ್ನಲ್ಲಿ ನಡೆಸಿದ್ದ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಪ್ರಕಟಿಸಿದ್ದಾರೆ.

ಹತ್ತು ಸಾವಿರ ಪದವೀಧರ ಶಿಕ್ಷಕರು ಸೇರಿದಂತೆ ಎರಡು ವರ್ಷದಲ್ಲಿ 25 ಸಾವಿರ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಎನ್.ಮಹೇಶ್ ಘೋಷಿಸಿದ್ದಾರೆ. ಪ್ರತಿ ವರ್ಷ 4 ಸಾವಿರ ಶಿಕ್ಷಕರ ಭರ್ತಿಗೆ ಅವಕಾಶ ಇದೆ. ಪ್ರಾಥಮಿಕ ಶಾಲೆಯಲ್ಲಿ 12,501 ಹುದ್ದೆ ಖಾಲಿ ಇದೆ. ಹತ್ತು ಸಾವಿರ ಪದವೀಧರ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವವರೆಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರೌಢಶಾಲೆಯಲ್ಲಿ 3,100 ಹುದ್ದೆಗಳು ಖಾಲಿ ಇವೆ. ಎಂದರು.

ಒಂದು ಹುದ್ದೆಗೆ ಇಬ್ಬರು ಶಿಕ್ಷಕರು ಎನ್ನುವ ಅನುಪಾತದಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಡಿಡಿಪಿಐಗಳು ಪರಿಶೀಲಿಸಿ ವರದಿ ನೀಡಿದ ನಂತರ, ಅಂಕಗಳ ಆಧಾರ ಮೇಲೆ ಒಂದು ಹುದ್ದೆಗೆ ಒಬ್ಬ ಶಿಕ್ಷಕ ಎಂಬ ಅನುಪಾತದಲ್ಲಿ ಅಂತಿಮ ಫಲಿತಾಂಶವನ್ನು ಜುಲೈ 29ಕ್ಕೆ ಪ್ರಕಟಿಸಲಾಗುವುದು. ಆಗಸ್ಟ್ 5ರಿಂದ ಅವರಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಅಂತಿಮ ಪಟ್ಟಿ ಪ್ರಕಟಗೊಂಡ ಒಂದು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಎಲ್ಲ ಮಕ್ಕಳಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂಬುದು ಸಚಿವರ ಚಿಂತನೆಯಾಗಿದೆ. ಎಲ್ಲರಿಗೂ ಪಾಸ್ ನೀಡುವುದರಿಂದ ಸಾರಿಗೆ ಇಲಾಖೆಗೆ ಹೊರೆಯಾಗುತ್ತದೆ ಎಂದು ಸಚಿವರು ಹೇಳಿರುವುದರಿಂದ ಆರ್ಥಿಕ ಹೊರೆಯನ್ನು ಯಾರು ಹೊರಬೇಕು ಎನ್ನುವುದನ್ನು ಚರ್ಚಿಸಿ, ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಎನ್.ಮಹೇಶ್ ಹೇಳಿದರು.

ನಗರದ ಸರ್ವಶಿಕ್ಷಾ ಅಭಿಯಾನದ ಕಚೇರಿಯಲ್ಲಿ ಮಂಗಳವಾರ ಹತ್ತು ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ ಸಚಿವರು ಮಾತನಾಡಿದರು. ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ http://www. schooleducation.kar.nic.in ನಲ್ಲಿ ಬಿಡುಗಡೆ ಮಾಡಲಾಗಿದೆ.
ಪದವೀಧರ ಶಿಕ್ಷಕರ ಪಟ್ಟಿಯನ್ನು ಸಚಿವರು ಘೋಷಣೆ ಮಾಡಿದ ನಂತರವೂ ಇಲಾಖೆ ತನ್ನ ವೆಬ್ ಸೈಟ್ನಲ್ಲಿ ಪ್ರಕಟಿಸಿಲ್ಲದಿರುವುದು ಅರ್ಹ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕ್ಷಕರ ವರ್ಗಾವಣೆ: ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಕ್ರಮ
ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವಿಗೆ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದ್ದು, ವಾರದೊಳಗೆ ವರ್ಗಾವಣೆ ಪ್ರಕ್ರಿಯೆಯನ್ನು ಪುನರ್ ಆರಂಭಿಸಲಿದ್ದೇವೆ ಎಂದು ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ.

Get real time updates directly on you device, subscribe now.