ಜಮ್ಮು – ಕಾಶ್ಮೀರ ರಾಜ್ಯಪಾಲರ ಆಡಳಿತ: ರಾಷ್ಟ್ರಪತಿ ಕೋವಿಂದ್ ಅಂಕಿತ

ಆಡಳಿತಾರೂಢ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದ ಹಿನ್ನೆಲೆ

ಬಿಜೆಪಿಯು ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಮಂಗಳವಾರ ಹಿಂತೆಗೆದ ಹಿನ್ನೆಲೆಯಲ್ಲಿ ತಕ್ಷಣ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಆಡಳಿತಾರೂಢ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ರಾಜ್ಯಪಾಲರ ಆಡಳಿತಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಅಂಕಿತ ಹಾಕಿದ್ದಾರೆ.
ಬಿಜೆಪಿಯು ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಮಂಗಳವಾರ ಹಿಂತೆಗೆದ ಹಿನ್ನೆಲೆಯಲ್ಲಿ ತಕ್ಷಣ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮೈತ್ರಿ ಸರಕಾರ ಮುರಿದಿರುವುದರಿಂದ ರಾಜ್ಯದ ಆಡಳಿತವನ್ನು ರಾಜ್ಯಪಾಲರ ಕೈಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.
ಮೆಹಬೂಬಾ ಅವರ ಆಡಳಿತದಲ್ಲಿ ಮೂಲಭೂತವಾದ ಹೆಚ್ಚಾಗಿದೆ, ಭಯೋತ್ಪಾದನಾ ಚಟುವಟಿಕೆ ತೀವ್ರಗೊಂಡಿದೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣಕ್ಕೆ ಸರ್ಕಾರದಿಂದ ಹೊರನಡೆದಿರುವುದಾಗಿ ಬಿಜೆಪಿ ಹೇಳಿಕೊಂಡಿದೆ.

ಮೈತ್ರಿಕೂಟದಲ್ಲಿ ಮುಂದುವರಿದರೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈತ್ರಿ ಮುರಿದುಕೊಳ್ಳಲೇಬೇಕಾದ ಸ್ಥಿತಿಯನ್ನು ಮಿತ್ರಪಕ್ಷ ಪಿಡಿಪಿ ಸೃಷ್ಟಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿ ಹೊಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ಮಾಧವ್ ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಮುಖಂಡರ ಜತೆ ದೆಹಲಿಯಲ್ಲಿ ಪಕ್ಷಾಧ್ಯಕ್ಷ ಅಮಿತ್ ಶಾ ಸಭೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸಲಾಗಿದ್ದು, ಪ್ರಧಾನಿ ಮೋದಿ ಜತೆಗೂ ಸಮಾಲೋಚನೆ ನಡೆಸಲಾಗಿತ್ತು.

ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಕಳೆದ ವಾರ ಶ್ರೀನಗರದಲ್ಲಿ ಹತ್ಯೆ ಮಾಡಿದ್ದನ್ನು ಉಲ್ಲೇಖಿಸಿದ ರಾಮ್ಮಾಧವ್, ಹತ್ಯೆ ನಡೆದು ಹಲವು ದಿನಗಳಾದರೂ ತಪ್ಪಿತಸ್ಥರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಾಲಿಟ್ಟಾಗಲೇ ರಾಜ್ಯದ ವಿನಾಶ ಖಚಿತ ಎಂದು ಅರಿವಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿರುವುದು ಗಮನಾರ್ಹ.

Get real time updates directly on you device, subscribe now.