ಆಗ್ನೆಸ್ ಕಾಲೇಜು ಸ್ಕಾರ್ಫ್ ವಿವಾದ: ಕಾಲೇಜಿನ ನಿಯಮ ಪಾಲಿಸುವುದು ಕಡ್ಡಾಯ

ತರಗತಿಯೊಳಗೆ ಸ್ಕಾರ್ಫ್ ಹಾಕದಂತೆ ಸೂಚಿಸಲಾಗಿದೆಯೇ ಹೊರತು ಕಾಲೇಜಿನ ಆವರಣದೊಳಗೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ವಿರೋಧಿಸಿಲ್ಲ.

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿದ ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ದರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಸೇರ್ಪಡೆಯಾಗಬಹುದು. ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ ಪ್ರಾಂಶುಪಾಲೆ ಡಾ.ಎಂ. ಜೆಸ್ವಿನಾ

ಮಂಗಳೂರು: ನಗರದ ಸಂತ ಆ್ಯಗ್ನೆಸ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕ್ಯಾಂಪಸ್ ನಲ್ಲಿ ಸ್ಕಾರ್ಫ್ ಧರಿಸದಂತೆ ನಿಯಮ ಮಾಡಿದ್ದಾರೆಂದು ಆರೋಪಿಸಿ ಸಿಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪ್ರಾಂಶುಪಾಲರಾದ ಡಾ.ಎಂ. ಜೆಸ್ವಿನಾ ಎ.ಸಿ ಕಾಲೇಜಿನ ಸಿಬ್ಬಂದಿ ಮಂಡಳಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ  ಪ್ರತಿಕ್ರಿಯೆ ನೀಡಿದರು.

ತರಗತಿಯೊಳಗೆ ಸ್ಕಾರ್ಫ್ ಹಾಕದಂತೆ ಸೂಚಿಸಲಾಗಿದೆಯೇ ಹೊರತು ಕಾಲೇಜಿನ ಆವರಣದೊಳಗೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ವಿರೋಧಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಅದು ಸತ್ಯವಲ್ಲ. ನಮ್ಮಲ್ಲಿ 80ಶೇಕಡಾ ಮುಸ್ಲಿಂ ವಿದ್ಯಾರ್ಥಿನಿಯರಿಲ್ಲ. ಇಲ್ಲಿ ಶೇ.20ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಇದ್ದಾರೆ. ಸುಮಾರು ನೂರು ವಿದ್ಯಾರ್ಥಿನಿಯರಿಗೆ ಎರಡು ಲಕ್ಷ ರೂ. ರಿಯಾಯಿತಿ ನೀಡಲಾಗಿದೆ ಎಂದು ಪ್ರಾಂಶುಪಾಲೆ ಡಾ. ಎಂ. ಜೆಸ್ವಿನಾ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲೆ ಡಾ. ಜೆಸ್ವಿನಾ

ಸಂತ ಆ್ಯಗ್ನೆಸ್ ಕಾಲೇಜು ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಯಾಗಿದ್ದು,  ಭಾರತದ ಪಶ್ಚಿಮ ಕರಾವಳಿಯ ಪ್ರಥಮ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಇಡೀ ದೇಶದಲ್ಲೇ ಖಾಸಗಿ ಆಡಳಿತ ಹೊಂದಿರುವ ಎರಡನೇ ಮಹಿಳಾ ಕಾಲೇಜು ಇದಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾದರೂ ಎಲ್ಲ ಜಾತಿ, ಮತದವರಿಗೆ, ಬಡವ ಶ್ರೀಮಂತ ಎಂಬ ತಾರತಮ್ಯ ಇಲ್ಲದೇ ಎಲ್ಲರಿಗೂ ಶಿಕ್ಷಣ ಪಡೆಯಲು ಅವಕಾಶ ನೀಡಿದೆ. ಗುಣಮಟ್ಟ, ಮೌಲ್ಯಯುತ ಶಿಕ್ಷಣಕ್ಕೆ ಸಂಸ್ಥೆ ಖ್ಯಾತಿಪಡೆದಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿದ್ದಾರೆ.  2021ರಲ್ಲಿ ಶತಮಾನೋತ್ಸವ ಆಚರಿಸಲು ನಾವೆಲ್ಲ ಸಜ್ಜಾಗುತ್ತಿದ್ದೇವೆ. ಇಂಥದೊಂದು ಕಾಲಘಟ್ಟದಲ್ಲಿ ಸ್ಕಾರ್ಫ್ ವಿಚಾರವಾಗಿ ಸಂಸ್ಥೆಯ ಹೆಸರು ಹಾಳು ಮಾಡುತ್ತಿರುವುದು ಬೇಸರದ ಸಂಗತಿ ಎಂದು ಜೆಸ್ವಿನಾ ಅವರು ಹೇಳಿದ್ದಾರೆ.

ವಸ್ತ್ರಸಂಹಿತೆ ಸೇರಿದಂತೆ ಕಾಲೇಜಿನಲ್ಲಿ ನಿಯಮಾವಳಿಗಳು ಹಲವು ವರ್ಷಗಳಿಂದಲೂ ಇವೆ. ಕಾಲೇಜಿನಲ್ಲಿ ಶಿಸ್ತು, ಸಮಾನತೆ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು  ನಿರ್ದಿಷ್ಟ ನಿಯಮಗಳನ್ನು ಪಾಲಿಸಲಾಗುತ್ತಿದೆ. ವಸ್ತ್ರಸಂಹಿತೆ ಸೇರಿದಂತೆ ಕಾಲೇಜಿನ ನೀತಿ-ನಿಯಮಾವಳಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಿಳಿದಿರಲಿ ಎಂಬ ಕಾರಣಕ್ಕಾಗಿಯೇ ಪ್ರತೀ ವರ್ಷ ಕಾಲೇಜಿನ ಹ್ಯಾಂಡ್ ಬುಕ್ ನಲ್ಲಿ ಪ್ರಕಟಿಸಲಾಗುತ್ತಿದೆ. ಕಾಲೇಜು ಪ್ರವೇಶ ಸಂದರ್ಭ ಈ ನಿಯಮಗಳನ್ನು ತಿಳಿದು ಅವುಗಳನ್ನು ಒಪ್ಪಿಕೊಂಡೇ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಿ ಮಾಡುತ್ತಾರೆ. ಆದರೆ ಕೆಲವು ವಿದ್ಯಾರ್ಥಿನಿಯರು ನಿಯಮ ಮೀರಿ ಪಿ.ಎಫ್.ಐ ಸಂಘಟನೆ ಜೊತೆ ಸೇರಿ ಕಾಲೇಜಿನ ಎದುರು ಪ್ರತಿಭಟಿದ್ದಾರೆ. ಕಾಲೇಜು ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿ ಅಪಪ್ರಚಾರ ಮತ್ತು ಸುಳ್ಳು ವದಂತಿ ಹಬ್ಬಿಸಿ ಕಾಲೇಜಿನ ಘನತೆಗೆ ಕುಂದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಕಾಲೇಜಿನ ನಿಯಮಗಳ ಪ್ರಕಾರ ಎಲ್ಲ ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರ ಧರಿಸಬೇಕು ಮತ್ತು ಇದರಿಂದ ಹೊರತಾದ ಬೇರೆ ಉಡುಗೆಗಳನ್ನು ತೊಡುವಂತಿಲ್ಲ. ತರಗತಿಗಳಲ್ಲಿ ಯಾವುದೇ ವಿದ್ಯಾರ್ಥಿನಿ ಸ್ಕಾರ್ಫ್ ಧರಿಸುವಂತಿಲ್ಲ. ಮುಖ ಮುಚ್ಚಿಕೊಳ್ಳುವಂತಿಲ್ಲ. ಇದನ್ನು ಹ್ಯಾಂಡ್ ಬುಕ್ ನಲ್ಲಿ ಸ್ಪಷ್ಟಪಡಿಸಲಾಗಿದ್ದು, ಇದನ್ನು ಪಾಲಿಸಬೇಕಿರುವುದು ವಿದ್ಯಾರ್ಥಿನಿಯರ ಕರ್ತವ್ಯವಾಗಿದೆ ಎಂದರು.

ಜೂನ್ 25ರಂದು ಕಾಲೇಜು ಗೇಟಿನ ಎದುರು ಪ್ರತಿಭಟಿಸಿದ ವಿದ್ಯಾರ್ಥಿನಿಯರು ಮತ್ತು ಅಂದು ಮಾಧ್ಯಮದ ಮುಂದೆ ಮಾತನಾಡಿದ ತೃತೀಯ ಬಿಕಾಂ ವಿದ್ಯಾರ್ಥಿನಿ ಫಾತಿಮಾ ಅನೀಸ್  ಕೂಡ ಮರು ದಿನದಿಂದಲೇ ಕಾಲೇಜಿಗೆ ಕಾಲೇಜು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಬಂದಿದ್ದಾರೆ.  ಎಲ್ಲ ತರಗತಿಗಳಿಗೂ ಹಾಜರಾಗಿದ್ದಾರೆ. ಕಾಲೇಜಿನ ನಿಯಮಗಳ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯರಿಗೆ ಹೆತ್ತವರ ಸಮ್ಮುಖದಲ್ಲಿ ಮೂರು ದಿನಗಳ ಒಳಗೆ ಲಿಖಿತ ಸ್ಪಷ್ಟನೆ ನೀಡಲು ಸೂಚಿಸಲಾಗಿದೆ. ಇದುವರೆಗೆ 30 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಲಿಖಿತ ಕ್ಷಮೆ ಕೇಳಿದ್ದಾರೆ ಎಂದು ಸಿಸ್ಟರ್ ಜೆಸ್ವಿನಾ ಹೇಳಿದ್ದಾರೆ.

ಕಾಲೇಜಿನ ಶಿಕ್ಷಕರು ಕೆಲ ವಿದ್ಯಾರ್ಥಿಗಳು ಆರೋಪಿಸಿರುವಂತೆ ಯಾವುದೇ ಸಂದರ್ಭದಲ್ಲಿಯೂ ಮಕ್ಕಳ ಸ್ಕಾರ್ಫ್ ಎಳೆದಿಲ್ಲ. ಅವರನ್ನು ಮುಟ್ಟಿಯೂ ಇಲ್ಲ. ಯಾವುದೇ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿಲ್ಲ. ಯಾವುದೇ ವಿದ್ಯಾರ್ಥಿನಿಯರ ಸಹಿ ಪ್ರಾಂಶುಪಾಲೆಯಾದ ನಾನು ಅಥವಾ ಇತರ ಪ್ರಾಧ್ಯಾಪಕರು ಖಾಲಿ ಕಾಗದದ ಮೇಲೆ ಪಡೆದಿಲ್ಲ ಎಂದು ಸಿಸ್ಟರ್ ಜೆಸ್ವಿನಾ ಸ್ಪಷ್ಟಪಡಿಸಿದ್ದಾರೆ

ಈ ವಿಷಯವು ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಪೋಷಕರ ಮಧ್ಯದ್ದಾಗಿದ್ದು ಹೊರಗಿನವರು ಮಧ್ಯಪ್ರವೇಶಿಸಬಾರದು ಎಂದು ಪ್ರಾಂಶುಪಾಲೆ ಕೋರಿದ್ದಾರೆ.

ವಿದ್ಯಾರ್ಥಿನಿಯರು ಕಾಲೇಜಿನೊಳಗೆ ಸ್ಕಾರ್ಫ್ ಧರಿಸಬಾರದು ಎಂಬ ನಿಯಮ ವಿರೋಧಿಸಿ ಕಳೆದ 25ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿ ಸಿಸ್ಟರ್ ಜೆಸ್ವಿನಾ, ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ಪೋಷಕರ ಸಭೆ ಕರೆದು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಮೊನ್ನೆಯ ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಲ್ಲದೇ ಹೊರಗಿನ ವಿದ್ಯಾರ್ಥಿನಿಯರೂ ಪಾಲ್ಗೊಂಡಿರುವ ಸಾಧ್ಯತೆ ಇದೆ. ಕಾಲೇಜಿನ ಎದುರು ಪ್ರತಿಭಟಿಸಿ ಸಂಸ್ಥೆಗೆ ಅಪಖ್ಯಾತಿ ತರಲು ಯತ್ನಿಸಿದ ಸಿ.ಎಫ್.ಐ ಸಂಘಟನೆಯ ವಿರುದ್ಧ ದೂರು ನೀಡುವ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವುದು ಎಂದರು.

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿದ ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ದರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಸೇರ್ಪಡೆಯಾಗಬಹುದು. ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದರು.

ವಿದ್ಯಾರ್ಥಿನಿ ಫಾತಿಮಾ ತಂದೆ ಆನಿಸ್ ಅವರು, ಸ್ಕಾರ್ಫ್ ವಿಚಾರವಾಗಿ ವಿದ್ಯಾರ್ಥಿಗಳು ಬಾಹ್ಯ ಸಂಘಟನೆಯ ಪ್ರಚೋದನೆಯಿಂದ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಸರಿಯಲ್ಲ. ಕಾಲೇಜಿನ ನಿಯಮಗಳನ್ನು ವಿದ್ಯಾರ್ಥಿಗಳು ಅರಿಯದೆ ತಪ್ಪು ಮಾಡಿದ್ದಾರೆ ಎಂದರು.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್(ಹಿಜಾಬ್) ಧರಿಸಬಾರದೆಂಬ ಆಡಳಿತ ಮಂಡಳಿ ನಿಯಮವನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದು ದೇಶಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಕಾಲೇಜಿನ ಜೊತೆ ಕಾರ್ಯದರ್ಶಿ ಡಾ. ಮರಿಯಾ ರೂಪಾ, ಉಪ ಪ್ರಾಂಶುಪಾಲೆ ಡಾ. ವೆನಿಸ್ಸಾ, ರಿಜಿಸ್ಟ್ರಾರ್ ಚಾರ್ಲ್ಸ್ ಸ್ಟ್ಯಾನಿ ಪಾಯ್ಸ್, ಶಿಸ್ತು ಸಮಿತಿ ಸಂಯೋಜಕಿ ಡಾ. ದೇವಿ ಪ್ರಭಾ ಆಳ್ವ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ನೀನಾ, ಹಳೆ ವಿದ್ಯಾರ್ಥಿನಿ ನಯನಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.