ಮಳೆ ತಂದ ಇನ್ನೊಂದು ದುರಂತ: ದೈವಸ್ಥಾನದ ಆವರಣ ಗೋಡೆ ಕುಸಿದು ಎಂಎಸ್ಸಿ ವಿದ್ಯಾರ್ಥಿನಿ ಸಾವು

ವಿವಿ ಕ್ಯಾಂಪಸ್‌ನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿರುವ ಧನ್ಯ

ದೈವದ ಮನೆಯ ಆವರಣ ಗೋಡೆ ಕುಸಿದು ಮಂಗಳಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿದ್ದಾರೆ.

ಬೈಂದೂರು: ಇಲ್ಲಿಗೆ ಸಮೀಪದ ಹೆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದೈವದ ಮನೆಯ ಆವರಣ ಗೋಡೆ ಕುಸಿದು ಮಂಗಳಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿದ್ದಾರೆ. ಉಳ್ಳೂರು ಜಟ್ಟಿಗೇಶ್ವರ ದೇವಸ್ಥಾನದ ಆವರಣ ಗೋದೆ ಕುಸಿದು ಈ ದುರಂತ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿರುವ ಧನ್ಯ ಎಂದು ಗುರುತಿಸಲಾಗಿದೆ.

ನಿತ್ಯವೂ ಮನೆಯ ಸಮೀಪ ಇರುವ ಜಟ್ಟಿಗೇಶ್ವರ ದೈವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಬರುತ್ತಿದ್ದ ಧನ್ಯಶ್ರೀ ಇಂದು ಬೆಳಿಗ್ಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಆವರಣ ಗೋಡೆ ಕುಸಿದಾಗ ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಧನ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯ ಕುಂದಾಪುರ, ಬೈಂದೂರು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಬೆಳಿಗ್ಗೆಯೂ ಧಾರಾಕಾರ ಮಳೆ ಸುರಿಯುತ್ತಿದ್ದು ಮಗಳು ಜಟ್ಟಿಗೇಶ್ವರ ದೈವಸ್ಥಾನಕ್ಕೆ ಹೋಗುವುದು ಬೇಡ ಎಂದು ಮನೆಯವರು ಹೇಳಿದ್ದರೂ ಧನ್ಯ ಎಂದಿನಂತೆ ಅಲ್ಲಿಗೆ ಹೋಗಿದ್ದರು.

ಧನ್ಯ ಚಂದ್ರಶೇಖರ ಶೆಟ್ಟಿ ಎಂಬವರ ಪುತ್ರಿಯಾಗಿದ್ದಾರೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಬೈಂದೂರಿನ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Get real time updates directly on you device, subscribe now.