ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಿದ್ದು ಔತಣ ಕೂಟ: ಅತೃಪ್ತರ ಗೈರು

ಪಕ್ಷದ ಶಾಸಕರನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೋಜನ ಕೂಟ ಏರ್ಪಡಿಸಿದ್ದರು.

ಬೆಂಗಳೂರು: ಪಕ್ಷದ ಶಾಸಕರನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೋಜನ ಕೂಟ ಏರ್ಪಡಿಸಿದ್ದರು. ಆದರೆ ಈ ಔತಣಕೂಟಕ್ಕೆ ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡ ಅತೃಪ್ತ ಶಾಸಕರು ಗೈರು ಹಾಜರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಹಿರಿಯ ನಾಯಕರಾಗಿರುವ ಎಚ್‌.ಕೆ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ರೋಶನ್‌ ಬೇಗ್‌, ಎಂ.ಕೃಷ್ಣಪ್ಪ, ಸಿ.ಎಸ್‌.ಶಿವಳ್ಳಿ, ಎಚ್‌.ಎಂ.ರೇವಣ್ಣ ಔತಣಕೂಟದಿಂದ ದೂರ ಉಳಿದಿದ್ದರು. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಮನೂರು ಶಿವಶಂಕರಪ್ಪ, ಡಾ| ಸುಧಾಕರ್‌, ಎಸ್‌.ಟಿ.ಸೋಮಶೇಖರ್‌, ಎಸ್‌.ಆರ್‌. ಪಾಟೀಲ್‌, ಬಂಗಾರಪೇಟೆ ನಾರಾಯಣಸ್ವಾಮಿ ಭೋಜನಕೂಟಕ್ಕೆ ಹಾಜರಾಗಿದ್ದರು.

ಸಚಿವರಾದ ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್‌ ಖರ್ಗೆ, ರಾಜಶೇಖರ ಪಾಟೀಲ್‌, ಕೃಷ್ಣ ಬೈರೇಗೌಡ, ಪುಟ್ಟರಂಗ ಶೆಟ್ಟಿ, ರಮೇಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌ ಪಾಲ್ಗೊಂಡಿದ್ದರು. ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ತಡವಾಗಿ ಆಗಮಿಸಿ, ಬೇಗ ನಿರ್ಗಮಿಸಿದರು.

ಶಾಂತಿವನದಲ್ಲಿ ನಡೆದ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಮಾಜಿ ಸಿಎಂ ಅವರು, ಭೋಜನ ಕೂಟಕ್ಕೆ ಬಂದ ಶಾಸಕರು, ಸಚಿವರು, ಸಿಬ್ಬಂದಿಗೆ ‘ಎಲ್ಲರೂ ಚೆನ್ನಾಗಿ ಊಟ ಮಾಡಿ, ಆದರೆ ಯಾರು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್ ಬೇಡ ಎಂದು ನಗುತ್ತಲೇ ಕಿಚಾಯಿಸಿದ್ದಾರೆ ಎನ್ನಲಾಗಿದೆ.

Photo courtesy: The New Indian Express

Get real time updates directly on you device, subscribe now.