ರೈತರ ಎರಡು ಲಕ್ಷ ರೂ. ಸಾಲ ಮನ್ನಾ: ಕುಮಾರಸ್ವಾಮಿ ಬಜೆಟ್
ರಾಜ್ಯ ಬಜೆಟ್ 2018 ಅನ್ನು ಸಿಎಂ ಕುಮಾರಸ್ವಾಮಿ ಮಂಡನೆ ಮಾಡಿದ್ದು, ನಿರೀಕ್ಷೆಯಂತೆಯೇ ರೈತರ ಸಾಲಮನ್ನಾ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ಬಜೆಟ್ 2018 ಅನ್ನು ಸಿಎಂ ಕುಮಾರಸ್ವಾಮಿ ಮಂಡನೆ ಮಾಡಿದ್ದು, ನಿರೀಕ್ಷೆಯಂತೆಯೇ ರೈತರ ಸಾಲಮನ್ನಾ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ವಿಧಾನಸೌಧಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸಿದ ಸಿಎಂ ಕುಮಾರಸ್ವಾಮಿ ಅವರು, ಪ್ರತೀ ರೈತ ಕುಟುಂಬ 2017ರ ಡಿಸೆಂಬರ್ 1ರ ವರೆಗೆ ಮಾಡಿದ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸುಮಾರು 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಈಗಾಗಲೇ 2 ಲಕ್ಷ ರೂ ವರೆಗಿನ ಸಾಲ ಪಾವತಿ ಮಾಡಿರುವ ರೈತರ ಖಾತೆಗಳಿಗೆ ರಾಜ್ಯ ಸರ್ಕಾರ ಸಾಲದ ಮೊತ್ತವನ್ನು ಮರುಪಾವತಿ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಇದಲ್ಲದೆ ರೈತರ ಸಾಲ ಮರುಪಾವತಿ ಉತ್ತೇಜಿಸುವ ನಿಟ್ಟಿನಲ್ಲಿ ಈಗಾಗಲೇ ಸಾಲ ಮರುಪಾವತಿ ಮಾಡಿರುವ ರೈತರಿಗೆ ಸಾಲದ ಮೊತ್ತ ಇಲ್ಲವೇ 25 ಸಾವಿರ ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ರೈತರ ಖಾತೆಗಳಿಗೆ ಉತ್ತೇಜನ ಧನವಾಗಿ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು.
ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ ಅಳವಡಿಕೆಗೆ 150 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿಯವರ ಸಾಲ ಮನ್ನಾ ಯೋಜನೆಯಿಂದ ರೈತರಿಗೆ ಒಟ್ಟಾರೆ 34,000ಕೋಟಿ ರೂ. ಮೊತ್ತದ ಪ್ರಯೋಜನವಾಗಲಿದೆ. ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ಆರುವರೆ ಸಾವಿರ ಕೋಟಿ ರೂ. ಇಡಲಾಗಿದ್ದು, ಹಿಂದಿನ ಸಿದ್ದರಾಮಯ್ಯ ಸರಕಾರ ಉಳಿಸಿಕೊಂಡಿದ್ದ ಬಾಕಿಗೆ ನಾಲ್ಕು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.