ಇವರ ಯೋಗ್ಯತೆಗೆ ನಯಾ ಪೈಸಾ ಕೊಡಿಸೋಕಾಗಲ್ಲ, ಮತ್ತೆ ಮಾತಾಡ್ತಾರೆ! ಬಜೆಟ್ ಕುರಿತು ಟೀಕೆ ಮಾಡಿದ ಬಿಜೆಪಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
ಕೇಂದ್ರದಿಂದ ನಯಾ ಪೈಸೆ ಕೊಡಿಸುವ ಯೋಗ್ಯತೆ ಇಲ್ಲದವರು ನಮ್ಮ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ಕೇಂದ್ರದಿಂದ ನಯಾ ಪೈಸೆ ಕೊಡಿಸುವ ಯೋಗ್ಯತೆ ಇಲ್ಲದವರು ನಮ್ಮ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ನಮ್ಮ ಸರ್ಕಾರ ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಂಡಿಸಿದ ಬಜೆಟ್ನ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಿದೆ, ಹೊಸ ಬಜೆಟ್ನಲ್ಲಿ 9 ಸಾವಿರ ಕೋಟಿ ರೂಪಾಯಿಗಳ ಹೊಸ ಕಾರ್ಯಕ್ರಮಗಳನ್ನು ಮಾತ್ರವೆ ಘೋಷಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಕರ್ನಾಟಕದ ಯಾವುದೆ ಭಾಗಕ್ಕೂ ಅನ್ವಯವಾಗಿಲ್ಲ. ಯಾವುದೆ ಸಮುದಾಯಗಳಿಗೂ ಬಜೆಟ್ನಲ್ಲಿ ತಾರತಮ್ಯ ಮಾಡಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಎಲ್ಲ ಪ್ರದೇಶ ಮತ್ತು ಸಮುದಾಯಗಳಿಗಾಗಿ ಯಾವೆಲ್ಲ ಯೋಜನೆಗಳನ್ನು ಮಂಡಿಸಿತ್ತೊ ಅದೆಲ್ಲ ನಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ರೈತರ ಸಾಲ ಮನ್ನಾಕ್ಕೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿಯವರಿಗೂ ಮನವಿ ಮಾಡಿದ್ದೇನೆ. ಆದರೆ ಅವರು ಯಾವ ನೆರವನ್ನೂ ನೀಡಿಲ್ಲ. ಬಿಜೆಪಿಯವರಿಗೆ ನಯಾ ಪೈಸ ಸಹಾಯ ಕೊಡಿಸುವ ಯೋಗ್ಯತೆ ಇಲ್ಲ. ರಾಜ್ಯದಲ್ಲಿ ಪೆಟ್ರೋಲ್, ಡೀಸಲ್ ತೆರಿಗೆ ಒಂದು ರೂಪಾಯಿಯಷ್ಟು ಹೆಚ್ಚಿಸಿದ್ದಕ್ಕೆ ಬಿಜೆಪಿ ಟೀಕೆ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸುತ್ತಲೆ ಬಂದಿದೆ. ಆಗೇಕೆ ಬಿಜೆಪಿಯವರು ಸುಮ್ಮನೆ ಇದ್ದರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಡೀಸಲ್, ಪೆಟ್ರೋಲ್ ಬೆಲೆ ಹೆಚ್ಚಳದ ಬಳಿಕವೂ ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ದರಕ್ಕೆ ಪೆಟ್ರೋಲ್, ಡೀಸಲ್ ಸಿಗುತ್ತಿರುವುದು ಕರ್ನಾಟಕದಲ್ಲಿ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ಇಂಧನ ಬೆಲೆ ನಮಗಿಂತ ಹೆಚ್ಚಿದೆ ಎಂದು ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದರು.
ಅಶೋಕ ಚಕ್ರವರ್ತಿಗಳೆ…
ಬೆಂಗಳೂರಿಗೆ ಯಾವುದೆ ಹೆಚ್ಚುವರಿ ಯೋಜನೆಗಳನ್ನು ನೀಡಿಲ್ಲ ಎಂದು ಟೀಕಿಸಿದ ಶಾಸಕ ಆರ್. ಅಶೋಕ್ ಅವರನ್ನು ‘ಅಶೋಕ ಚಕ್ರವರ್ತಿ’ ಎಂದು ಉಲ್ಲೇಖಿಸಿ ಮಾತನಾಡಿದ ಕುಮಾರಸ್ವಾಮಿ ರಾಜ್ಯದ ಬಜೆಟ್ನಲ್ಲಿ ಬೆಂಗಳೂರಿನ ನಾಗರಿಕರಿಗಾಗಿ ಕಾಲಬದ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.
ಸರ್ಕಾರವನ್ನು ಯಾರು ಕೆಡುವಲು ಸಾಧ್ಯವಿಲ್ಲ ನಾವು ಒಟ್ಟಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಉತ್ತಮ ಬಜೆಟ್ ಮಂಡನೆ ಸಾಧ್ಯವಾಗಿದೆ. ಬಿಜೆಪಿಯವರ ಟೊಳ್ಳು ಮಾತುಗಳನ್ನು ಜನ ನಂಬಬಾರದು. ಸಮ್ಮಿಶ್ರ ಸರ್ಕಾರವಿರುವುದು ನಾಡಿನ ಸಮಗ್ರ ಅಭಿವೃದ್ಧಿಗೆ ಇರುವುದು ಎಂದು ಕುಮಾರಸ್ವಾಮಿ ಹೇಳಿದರು.
ಸಾಲಮನ್ನಾ ಕೇವಲ ಘೋಷಣೆ ಮಾತ್ರ ಅಲ್ಲ. ಅದರ ಜೊತೆ ಹಣ ಪಾವತಿಸಿದ ರೈತರಿಗೂ ಪ್ರಯೋಜನವಾಗಲಿದೆ. ಕೇಂದ್ರ ಸರ್ಕಾರದಿಂದ ನಯಾ ಪೈಸೆ ನೆರವು ನೀಡಿದ ಬಿಜೆಪಿ ಈಗ ಟೀಕೆ ಮಾಡುತ್ತಿದೆ. ಸಾಲಮನ್ನ ಮಾಡಿದ್ದಕ್ಕೆ ಬಿಜೆಪಿಯವರಿಗೆ ಒಂದು ಕೃತಜ್ಞತೆ ಇಲ್ವಾ ಎಂದು ಕುಮಾರಸ್ವಾಮಿ ಬಿಜೆಪಿಯನ್ನು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯುದ್ದಕ್ಕೂ ಸಿಎಂ ಕುಮಾರಸ್ವಾಮಿ ಬಿಜೆಪಿಯ ವಿರುದ್ಧ ಹರಿಹಾಯ್ದರು.