ಕರಾವಳಿಯನ್ನು ಬೆಚ್ಚಿ ಬೀಳಿಸಿದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಇಂದು ವಿಚಾರಣೆ

ಜುಲೈ28, 2016ರಂದು ನಡೆದ ಉದ್ಯಮಿ ಭಾಸ್ಕರ ಶೆಟ್ಟಿಯವರ ಕೊಲೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ ಮತ್ತು ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ಬಂಧಿಸಲಾಗಿತ್ತು.

ಉಡುಪಿ: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಆರೋಪಿ ರಾಜೇಶ್ವರಿ ಶೆಟ್ಟಿ ಪರ ವಕೀಲರಾದ ಅಶ್ವಿನ್ ಕುಮಾರ್ ಜೋಶಿ ಅವರು ಪ್ರಕರಣದ ವಕಾಲತಿಯಿಂದ ನಿವೃತ್ತರಾದ ಕಾರಣ ಮಂಗಳೂರಿನ ವಕೀಲರಾದ ನಾರಾಯಣ ಪೂಜಾರಿ ಎಂಬವರು ರಾಜೇಶ್ವರಿ ಪರ ವಕಾಲತ್ತು ವಹಿಸಲು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಇಂದು ನಡೆಯಲಿದೆ ಎಂದು ತಿಳಿದುಬಂದಿದೆ.

ರಾಜೇಶ್ವರಿ ಶೆಟ್ಟಿ ಪರ ವಕೀಲರಾದ ಅಶ್ವಿನ್ ಕುಮಾರ್ ಜೋಶಿಯವರು ಪ್ರಕರಣದ ವಕಾಲತಿಯಿಂದ ನಿವೃತ್ತರಾದ ಕಾರಣ ಮಂಗಳವಾರ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಬೇಕಿದ್ದ ಪಾಟಿ ಸವಾಲು ಪ್ರಕ್ರಿಯೆ ನಡೆದಿರಲಿಲ್ಲ.

ಮಂಗಳವಾರ ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿಯವರು ಪಾಟಿ ಸವಾಲಿಗೆ ಒಳಪಡಬೇಕಿತ್ತು ಮತ್ತು ಮಣಿಪಾಲ ಠಾಣೆಯಲ್ಲಿ ತನಿಖಾಧಿಕಾರಿಯಾಗಿದ್ದ(ಪ್ರಕರಣದ ಪ್ರಥಮ ತನಿಖಾಧಿಕಾರಿ) ಎಸ್.ವಿ. ಗಿರೀಶ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಬೇಕಿತ್ತು. ಆರೋಪಿ ಪರ ವಕೀಲ ಅಶ್ವಿನ್ ಕುಮಾರ್ ಜೋಶಿ ಅವರು ಗುಲಾಬಿ ಶೆಡ್ತಿ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಿದ್ದರು. ಆದರೆ ಅಶ್ವಿನ್ ಕುಮಾರ್ ಪ್ರಕರಣದ ವಕಾಲತಿಯಿಂದ ನಿವೃತ್ತಿಯಾಗಿದ್ದರಿಂದ ಹೇಳಿಕೆಗಳು ದಾಖಲಾಗಿರಲಿಲ್ಲ. ಮುಂದಿನ ವಿಚಾರಣೆ ಜುಲೈ6 ರಂದು ನಡೆಯಲಿದೆ ಎಂದು ಸರಕಾರಿ ಅಭಿಯೋಜಕಿ ಶಾಂತಾ ಬಾಯಿ ಮಾಧ್ಯಮ ಪ್ರತಿನಿಧಿಗೆ ತಿಳಿಸಿದ್ದರು.

ಜುಲೈ28, 2016ರಂದು ನಡೆದ ಉದ್ಯಮಿ ಭಾಸ್ಕರ ಶೆಟ್ಟಿಯವರ ಕೊಲೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ ಮತ್ತು ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ಬಂಧಿಸಲಾಗಿತ್ತು. ಆರೋಪಿಗಳು ಸೆರೆವಾಸದಲ್ಲಿದ್ದು, ಸುಪ್ರೀಂಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಸಾಕ್ಷಿಗಳ ಹಾಗೂ ಆರೋಪಿಗಳ ವಿಚಾರಣೆ ಆರಂಭಿಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜುಲೈ2ರಿಂದ ವಿಚಾರಣೆ ಆರಂಭಗೊಂಡಿದೆ.

ಒಟ್ಟು 167 ಸಾಕ್ಷಿಗಳ ಪೈಕಿ 44 ಸಾಕ್ಷಿಗಳ ವಿಚಾರಣೆಯು ಜು. 2 – 6ರ ತನಕ ಮತ್ತು 16 – 19ರ ವರೆಗೆ ನಡೆಯಲಿದೆ. ತನಿಖಾಧಿಕಾರಿ ನೀಡಿದ ಮಾಹಿತಿಯಂತೆ ಪ್ರಮುಖ 36 ಸಾಕ್ಷಿಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಜಿಲ್ಲಾ ಸರಕಾರಿ ಅಭಿಯೋಜಕರು ಉಳಿದ ನಾಲ್ಕು ತಿಂಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಸೂಚಿಸಿದ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕಿದೆ.

ಸೋಮವಾರ ಮೊದಲ ದಿನದ ಸಾಕ್ಷಿಗಳ ವಿಚಾರಣೆಯಲ್ಲಿ ಪ್ರಕರಣದ ಪ್ರಮುಖ ಸಾಕ್ಷಿ, ಕೊಲೆಯಾದ ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿಯವರ ಹೇಳಿಕೆಯನ್ನು ಜಿಲ್ಲಾ ಸರಕಾರಿ ಹಿರಿಯ ಅಭಿಯೋಜಕಿ ಶಾಂತಿ ಬಾಯಿ ಪಡೆದಿದ್ದರು. ಸೋಮವಾರ ಸಾಕ್ಷಿ ವಿಚಾರಣೆ ಸಂದರ್ಭ ಎಸ್.ಪಿ. ಲಕ್ಷ್ಮಣ ನಿಂಬರಗಿ, ಆರೋಪಿ ಪರ ವಕೀಲರಾದ ಅರುಣ್ ಬಂಗೇರ, ಅರುಣ್ ಶೆಟ್ಟಿ, ಕಲ್ಯಾಣ ಜೋಷಿ, ವಿಕ್ರಮ್ ಹೆಗ್ಡೆ, ಎ. ಸಂಜೀವ್ ಉಪಸ್ಥಿತರಿದ್ದರು.

ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್ (56) ಹಾಗೂ ಕಾರು ಚಾಲಕ ರಾಘವೇಂದ್ರ (26) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಕೊಲೆಗೈದು ಹೋಮ ಕುಂಡದಲ್ಲಿ ಸುಟ್ಟು ಹಾಕಲಾದ ಪ್ರಕರಣದಲ್ಲಿ ಬಂಧಿತ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ (50), ಮಗ ನವನೀತ್ ಶೆಟ್ಟಿ (20) ಹಾಗೂ ಜೋತಿಷಿ ನಂದಳಿಕೆ ನಿರಂಜನ್ ಭಟ್ (26) ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ಭದ್ರತೆ ದೃಷ್ಟಿಯಿಂದ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ವಿಚಾರಣೆ ನಡೆಸಲಾಗಿದ್ದು, ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸ್ಥಳ ಅಬಾವದಿಂದ ತೆರೆದ ಕೋರ್ಟಿನಲ್ಲೇ ಕಾನ್ಫರೆನ್ಸ್ ನಡೆಸಲಾಗಿತ್ತು.

ಸೋಮವಾರ ವಿಚಾರಣೆ ಸಂದರ್ಭ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸತ್ರ ನ್ಯಾಯಾಲಯದ ಪ್ರವೇಶದ್ವಾರದಲ್ಲಿ ಲೋಹ ಶೋಧಕ ಯಂತ್ರ ಅಳವಡಿಸಲಾಗಿತ್ತು.

Get real time updates directly on you device, subscribe now.