ಪಟ್ಟದ ದೇವರ ಹಸ್ತಾಂತರ: ನ್ಯಾಯಾಲಯಕ್ಕೆ ಶಿರೂರು ಶ್ರೀ

ಶಿರೂರು ಮಠದ ಪಟ್ಟದ ದೇವರ ಹಸ್ತಾಂತರ ಮತ್ತು ಶಿಷ್ಯ ಸ್ವೀಕಾರ ಸಂಬಂಧಿಸಿ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ನಿರ್ಧಾರ ಸಂಬಂಧಿಸಿ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಉಡುಪಿ: ಶಿರೂರು ಮಠದ ಪಟ್ಟದ ದೇವರ ಹಸ್ತಾಂತರ ಮತ್ತು ಶಿಷ್ಯ ಸ್ವೀಕಾರ ಸಂಬಂಧಿಸಿ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ನಿರ್ಧಾರ ಸಂಬಂಧಿಸಿ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಶಿರೂರು ಶ್ರೀಗಳು ಉಡುಪಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಹೊರತು ಪಡಿಸಿ ಪೇಜಾವರ, ಸೋದೆ, ಕಾಣಿಯೂರು, ಅದಮಾರು, ಫಲಿಮಾರು, ಕೃಷ್ಣಾಪುರ ಮಠಾಧೀಶರ ವಿರುದ್ಧ ಕೇವಿಯಟ್ ಸಲ್ಲಿಸಲಾಗಿದೆ. ಕೇವಿಯಟ್ ಮೂರು ತಿಂಗಳ ಅವಧಿಯದಾಗಿರುವುದರಿಂದ ಚಾತುರ್ಮಾಸ್ಯ(ಜುಲೈ 23)ರ ಮೊದಲು ಶಿರೂರು ಶ್ರೀಗಳ ವಿರುದ್ಧ ಕ್ರಮಕೈಗೊಳ್ಳುವ ಇತರ ಮಠಾಧೀಶರ ಉದ್ದೇಶಕ್ಕೆ ಇದರಿಂದ ತೀವೃ ಹಿನ್ನಡೆಯಾಗಲಿದೆ ಎನ್ನಲಾಗಿದೆ.

ಶಿರೂರು ಮಠದ ಪಟ್ಟದ ದೇವರನ್ನು ತನಗೆ ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿ ಅಷ್ಟಮಠಗಳ ಸ್ವಾಮೀಜಿಗಳಲ್ಲಿ ಯಾರಾದರೂ ತಮಗೆ ನಿರ್ಬಂಧ ಕೋರಿ ನ್ಯಾಯಾಲಯದಲ್ಲಿ ಕೇಸು ಹಾಕಿದರೆ ಏಕಪಕ್ಷೀಯ ಆದೇಶ ನೀಡಬಾರದು ಎಂಬ ಹಿನ್ನೆಲೆಯಲ್ಲಿ ಶಿರೂರು ಶ್ರೀಗಳು ಮುನ್ನೆಚ್ಚರಿಕೆ ಕ್ರಮವಾಗಿ ಕೇವಿಯಟ್ ಸಲ್ಲಿಸಿದ್ದಾರೆ.

ಶಿರೂರು ಶ್ರೀಗಳು ಶ್ರೀಕೃಷ್ಣ ಮಠದಲ್ಲಿ ನಡೆದುಕೊಂಡು ಬಂದ ಸಂಪ್ರದಾಯದಂತೆ ಕೆಲವು ತಿಂಗಳ ಹಿಂದೆ ತಮ್ಮ ಅನಾರೋಗ್ಯ ಸಂದರ್ಭ ಮಠದ ಪಟ್ಟದ ದೇವರು ವಿಠಲ ಮತ್ತು ನಾಲ್ಕು ಮೂರ್ತಿಗಳನ್ನು ಪ್ರತಿದಿನದ ಪೂಜೆಗಾಗಿ ಅದಮಾರು ಶ್ರೀಗಳಿಗೆ ನೀಡಿದ್ದರು. ಅವರು ಅದನ್ನು ಪರ್ಯಾಯ ಪಲಿಮಾರು ಮಠಕ್ಕೆ ನೀಡಿದ್ದು, ಕೃಷ್ಣ ಮಠದಲ್ಲೇ ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ಶಿರೂರು ಶ್ರೀಗಳು ಮೂರ್ತಿಗಳನ್ನು ಹಿಂದಿರುಗಿಸುವಂತೆ ಇತ್ತೀಚೆಗೆ ಕೇಳಿದ ಸಂದರ್ಭದಲ್ಲಿ ಶಿಷ್ಯ ಸ್ವೀಕಾರ ಮಾಡಿದರೆ ಮಾತ್ರ ಅವುಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಆರು ಸ್ವಾಮೀಜಿಗಳು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಶಿರೂರು ಸ್ವಾಮೀಜಿಯವರು ಸ್ವತಃ ತಾವು ಯತಿ ಧರ್ಮ ಪಾಲಿಸುತ್ತಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪಟ್ಟದ ದೇವರನ್ನು ಕೊಡುವುದು ಹೇಗೆ? ಎಂದು ಪೇಜಾವರಶ್ರೀಗಳು ಈ ವಿವಾದದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು. ಸನ್ಯಾಸಿಯೇ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸಂಪ್ರದಾಯವಲ್ಲ. ಆದ್ದರಿಂದ ಅವರಿಗೆ ಪಟ್ಟದ ದೇವರನ್ನು ನೀಡಿಲ್ಲ ಎಂದು ಪೇಜಾವರ ಶ್ರೀ ಸ್ಪಷ್ಟಪಡಿಸಿದ್ದಾರೆ.

ಪುತ್ತಿಗೆ ಮತ್ತು ಶಿರೂರು ಮಠಾಧೀಶರ ವಿಷಯಗಳಲ್ಲಿ ಬಹಳ ವ್ಯತ್ಯಾಸವಿದೆ. ಅವರೆಡೂ ಪ್ರಕರಣಗಳು ಬೇರೆ ಬೇರೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಮೇಲೆ ಅವರು ವಿದೇಶ ಪ್ರಯಾಣ ಮಾಡಿರುವುದೊಂದೇ ಆರೋಪ. ಅವರು ಯತಿಧರ್ಮದಲ್ಲಿಯೇ ಇದ್ದಾರೆ. ಆದ್ದರಿಂದ ಇತರ ಏಳು ಮಠಾಧೀಶರು ಸಭೆ ಸೇರಿ ಶಿರೂರು ಸ್ವಾಮಿಗಳು ನಿವೃತ್ತಿ ಪಡೆದುಕೊಳ್ಳುವುದೇ ಸೂಕ್ತ ಎಂದು ನಿರ್ಧರಿಸಿದ್ದಾರೆ ಎಂದು ಪೇಜಾವರಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪುತ್ತಿಗೆ ಮಠಕ್ಕೆ ದ್ವಂದ್ವ ಮಠವಾದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಶಿಷ್ಯರನ್ನು ನೇಮಿಸಬೇಕು, ಶಿರೂರು ಮಠಕ್ಕೆ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರೇ ಶಿಷ್ಯರನ್ನು ನೇಮಿಸಬೇಕೆಂಬುದು ನಮ್ಮ ಎಲ್ಲ ಮಠಾಧೀಶರ ನಿಲುವು ಆಗಿದೆ ಎಂದು ಪೇಜಾವರ ಶ್ರೀಯವರು ಹೇಳಿದ್ದರು.

ಶಿರೂರು ಶ್ರೀಗಳು ಈ ವಿಷಯದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆಂಬ ಸುದ್ದಿ ಹಬ್ಬಿತ್ತು.

Get real time updates directly on you device, subscribe now.