ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳ ತೀವ್ರ ನಿರ್ಲಕ್ಷಕ್ಕೆ ಆಕ್ರೋಶ. ಬಿಜೆಪಿ ಶಾಸಕರ ಪ್ರತಿಭಟನೆ

ಮೈತ್ರಿ ಸರ್ಕಾರದ ಬಜೆಟ್ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕರಾವಳಿ ಜಿಲ್ಲೆಗಳ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಬೆಂಗಳೂರು: ಮೈತ್ರಿ ಸರ್ಕಾರದ ಬಜೆಟ್ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕರಾವಳಿ ಜಿಲ್ಲೆಗಳ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯಕ್ಕೆ ತಾಯಿ ಸ್ಥಾನದಲ್ಲಿ ನಿಲ್ಲಬೇಕಾದ ಸರ್ಕಾರ ಬಜೆಟ್ ನಲ್ಲಿ ಕರಾವಳಿ ಸೇರಿದಂತೆ ಆರೇಳು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತಳೆದಿದೆ. ಕರಾವಳಿಯ ಜೀವನಾಡಿಯಾದ ಮೀನುಗಾರಿಕೆಗೆ ಅನುದಾನ ನೀಡದಿದ್ದ ಮೇಲೆ ಆ ಇಲಾಖೆ ಏಕೆ? ಅದನ್ನು ರದ್ದುಪಡಿಸಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್ ನಲ್ಲಿ ಕರಾವಳಿ ಜಿಲ್ಲೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದರಿಂದ ಹಲವು ಯೋಜನೆಗಳನ್ನು ಕೈಬಿಡುವ ಅನುಮಾನ ಕಾಡುತ್ತಿದೆ. ರೈತರ ಸಾಲಮನ್ನಾದ ನೆಪದಲ್ಲಿ ಜನಸಾಮಾನ್ಯರು ಬಳಸುವ ವಿದ್ಯುತ್, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾದರೆ ಇದು ಜನಪರ ಸರ್ಕಾರವೇ ಎಂದು ಕೋಟ ಪೂಜಾರಿ ಪ್ರಶ್ನಿಸಿದರು. ರಾಜ್ಯ ಸರ್ಕಾರದ ಬಜೆಟ್ ಅವಲೋಕಿಸಿದರೆ ಕೇವಲ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಜಿಲ್ಲೆಗಳಿಗೆ ಮಾತ್ರ ಹೆಚ್ಚು ಅನುದಾನ, ಯೋಜನೆಗಳನ್ನು ಬಿಡುಗಡೆ ಮಾಡಿದಂತಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದರು.

ಬಜೆಟ್ ನಲ್ಲಿ ಕರಾವಳಿ, ಮಲೆನಾಡು ಭಾಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಗಮನಿಸಿದರೆ ಕಳೆದ ಚುನಾವಣೆಯಲ್ಲಿ ಈ ಭಾಗದ ಜನರು ಮತ ನೀಡಲಿಲ್ಲ ಎಂದು ಸೇಡು ತೀರಿಸಿಕೊಳ್ಳಲು ಸರ್ಕಾರದ ಎರಡೂ ಪಕ್ಷಗಳು ನಿರ್ಧರಿಸಿದಂತಿದೆ. ಇದು ಖಂಡನೀಯ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಹಲವು ಸಂಪನ್ಮೂಲ ಮತ್ತು ಪವಿತ್ರ ಕ್ಷೇತ್ರಗಳನ್ನು ಹೊಂದಿದ್ದು, ರಾಜ್ಯಕ್ಕೆ ಆದಾಯ ತರುವ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಈ ಸಮ್ಮಿಶ್ರ ಸರ್ಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

Get real time updates directly on you device, subscribe now.