ನಾವೆಲ್ಲ ಫಂಡ್ ರೈಸಿಂಗ್ ಕೆಪಾಸಿಟಿ ಇಲ್ಲದವರು: ಮೊಹಿದೀನ್ ನಿಧನಕ್ಕೆ ಹೀಗೊಂದು ಸಂತಾಪ!

ಇಂದಿನ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಗೆದ್ದರೂ ಮಂತ್ರಿಯಾಗುವುದು ಕಷ್ಟ, ಮಂತ್ರಿಯಾದರೂ ಪ್ರಮುಖ ಖಾತೆಯನ್ನು ಪಡೆಯುವುದು ಅತ್ಯಂತ ಕಷ್ಟ.

ಬೆಂಗಳೂರು: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಮಂಗಳವಾರ ಬೆಳಿಗ್ಗೆ ನಿಧನರಾದ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರಂಥವರು ಇಂದಿನ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಗೆದ್ದರೂ ಮಂತ್ರಿಯಾಗುವುದು ಕಷ್ಟ, ಮಂತ್ರಿಯಾದರೂ ಪ್ರಮುಖ ಖಾತೆಯನ್ನು ಪಡೆಯುವುದು ಅತ್ಯಂತ ಕಷ್ಟ. ಏಕೆಂದರೆ ನಮ್ಮಂಥವರಲ್ಲಿ ‘ಫಂಡ್ ರೈಸಿಂಗ್’ ಕೆಪ್ಯಾಸಿಟಿ ಇಲ್ಲ’ ಎಂದು ವರ್ತಮಾನದ ರಾಜಕೀಯದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿರುವ ಸಂಗತಿ ವರದಿಯಾಗಿದೆ.

ಮೊಹಿದೀನ್ ಅವರ ಆತ್ಮಕತೆ ಬಗ್ಗೆ ಅವರಿಗೆ ಫೋನ್ ಮಾಡಿದಾಗ ಅವರು ಆಸ್ಪತ್ರೆಯಲ್ಲಿರುವ ವಿಷಯ ತಿಳಿದುಬಂತು. ಅವರ ಭೇಟಿಗೆ ಹೋಗಬೇಕು ಎನ್ನುವಾಗ ಬ್ರಹ್ಮಾವರದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾಯಿತು. ರಾಮಯ್ಯ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಂಡ ಮೊಹಿದೀನ್ ಅವರನ್ನು ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಅವರು ಭೇಟಿ ಮಾಡಿ ನನ್ನನ್ನು ಭೇಟಿಯಾಗಲು ಬಯಸಿದ್ದರು. ಆದರೆ ವಿಧಿಯಾಟದಂತೆ ಮೊಹಿದೀನ್ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಒಬ್ಬ ಸಜ್ಜನ ರಾಜಕಾರಣಿಗಿಂತಲೂ ಹೆಚ್ಚಾಗಿ ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಭಾವನೆಯಿಂದ ಮನಸ್ಸು ಭಾರವಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಕಂಬನಿ ಮಿಡಿದಿದ್ದಾರೆ.

ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಮೊಹಿದೀನ್ ಮಾದರಿಯಾಗಿದ್ದರು. ‘ಸಜ್ಜನ’ ಪದಕ್ಕೆ ಅವರೊಬ್ಬ ‘ಅನ್ವರ್ಥ’. ಜಾತಿ-ಧರ್ಮಾಧರಿತ ರಾಜಕಾರಣವನ್ನು ಅವರೆಂದೂ ನಡೆಸಲಿಲ್ಲ. ಸ್ವ ಧರ್ಮದಲ್ಲಿನ ಹುಳುಕನ್ನೂ ಬಹಿರಂಗವಾಗಿ ಟೀಕಿಸಬಲ್ಲವರಾಗಿದ್ದರು ಎಂದು ಹೆಗ್ಡೆ ನೆನಪಿಸಿಕೊಂಡಿದ್ದಾರೆ.

ಹೊಸ ಮಸೀದಿಗಳಲ್ಲಿ ಧ್ವನಿವರ್ಧಕ ಬೇಡ ಎಂಬ ನಿಲುವು ಅವರದಾಗಿತ್ತು. ಮಸೀದಿಯ ಬಾಂಗ್ ಎಂದರೆ ಅದು ಪ್ರಾರ್ಥನೆಯಲ್ಲ. ಇಂದು ಜನರನ್ನು ಪ್ರಾರ್ಥನೆ ಬಗ್ಗೆ ಎಚ್ಚರಿಸಲು ಎಲ್ಲರ ಕೈಯಲ್ಲೂ ಗಡಿಯಾರಗಳಿವೆ. ಧ್ವನಿವರ್ಧಕ ಮೂಲಕ ಬಾಂಗ್ ಕೂಗುವ ಅಗತ್ಯ ಇಲ್ಲ ಎಂಬ ಅನಿಸಿಕೆಯನ್ನು ತಮ್ಮಲ್ಲಿ ಮೊಹಿದೀನ್ ವ್ಯಕ್ತಪಡಿಸಿದ್ದಾಗಿ ಹೆಗ್ಡೆ ಹೇಳಿದ್ದಾರೆ.

ಮೊಹಿದೀನ್ ಅವರ ಆತ್ಮಕತೆಯಲ್ಲಿ ಇರುವುದೆಲ್ಲವೂ ಸತ್ಯ ಎಂಬುದರಲ್ಲಿ ತನಗೆ ಸಂಶಯವಿಲ್ಲ: ಜೆ.ಪಿ.ಹೆಗ್ಡೆ.

Get real time updates directly on you device, subscribe now.