ಸ್ಮಶಾನಕ್ಕೆ ಸಂಪರ್ಕ ಸೇತುವೆ ಕುಸಿತದ ಪರಿಣಾಮ: ಎದೆಮಟ್ಟ ನೀರಿನಲ್ಲಿ ಮುಳುಗಿ ಶವ ಸಾಗಿಸಿ ಅಂತ್ಯಕ್ರಿಯೆ!

ಗ್ರಾಮದ ಪ್ರಮುಖ ಸೇತುವೆ ಕುಸಿದ ಕಾರಣ ಶವವನ್ನು ಎದೆಮಟ್ಟದ ನೀರಿರುವ ಹಳ್ಳ ದಾಟಿಸಿ ಅಂತ್ಯಕ್ರಿಯೆ ನಡೆಸಿದ ಶೋಚನೀಯ ಘಟನೆ

ಕಾರವಾರ: ಗ್ರಾಮದ ಪ್ರಮುಖ ಸೇತುವೆ ಕುಸಿದ ಕಾರಣ ಶವವನ್ನು ಎದೆಮಟ್ಟದ ನೀರಿರುವ ಹಳ್ಳ ದಾಟಿಸಿ ಅಂತ್ಯಕ್ರಿಯೆ ನಡೆಸಿದ ಶೋಚನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಕೇಣಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸುಶೀಲಾ ಗಾಂವ್ಕರ್(೮೦) ಎಂಬುವವರು ನಿಧನರಾಗಿದ್ದರು. ಅವರ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಸಂಬಂಧಿಕರು ಹರ ಸಾಹಸ ನಡೆಸಿದರು. ಕೊನೆಗೆ ಅನಿವಾರ್ಯವಾಗಿ ಅಪಾಯಕಾರಿ ರೀತಿಯಲ್ಲಿ ಮೃತ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಮೃತ ದೇಹವನ್ನು ಹೆಗಲ ಮೇಲೆ ಹೊತ್ತ ನಾಲ್ವರು ಎದೆ ಮಟ್ಟದವರೆಗೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ನಡೆದು ಹೋಗಿ ಸ್ಮಶಾನ ತಲುಪಿದರು.

ಕೇಣಿ ಹಳ್ಳಕ್ಕೆ ಕಳೆದ ವರ್ಷ ನಿರ್ಮಿಸಲಾದ ಸೇತುವೆ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯ ಆರೋಪ ಎದುರಿಸುತಿದೆ. ಹೀಗಿರುವಾಗ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಆಗಿಲ್ಲ. ಸುರಿದ ಬಾರೀ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಈ ವೇಳೆಯಲ್ಲಿಯೇ ಮೃತಪಟ್ಟ ಸುಶೀಲಾ ಗಾಂವ್ಕರರ ಮೃತದೇಹವನ್ನು ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಸಾಗಿಸುವದು ಸುಲಭವಾಗಿರಲಿಲ್ಲ.

ದೋಣಿ ಮೂಲಕ ಶವ ಸಾಗಿಸುವ ಮಾತುಕಥೆ ನಡೆಯಿತಾದರೂ, ಶವವನ್ನು ದೋಣಿಯಲ್ಲಿ ಸಾಗಿಸಲು ಯಾರೂ ಮುಂದೆ ಬರಲಿಲ್ಲ. ರಭಸವಾಗಿ ಹರಿಯುತ್ತಿರುವ ನೀರು ಇಳಿಮುಖಗೊಳ್ಳುವ ಲಕ್ಷಣಗಳು ಗೋಚರಿಸಲಿಲ್ಲ. ಹೀಗಾಗಿ ಎಂಟು ಮಂದಿ ಯುವಕರು ಹೆಗಲ ಮೇಲೆ ಮೃತದೇಹ ಹೊತ್ತು ಹಳ್ಳ ದಾಟುವ ಮಾತನಾಡಿದರು.

ಅದರಂತೆ ನಾಲ್ವರು ಮೃತದೇಹಕ್ಕೆ ಹೆಗಲು ಕೊಟ್ಟು ಹಳ್ಳ ದಾಟಿದರು. ಅವರೊಮದಿಗೆ ಸಂಬಂಧಿಕರು ಹಾಗೂ ಊರಿನ ಪ್ರಮುಖರು ರಭಸವಾದ ಹಳ್ಳದಲ್ಲಿ ಹೆಜ್ಜೆ ಹಾಕಿ ಸ್ಮಶಾನ ತಲುಪಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆ ಮುಗಿದ ಮೇಲೆ ಅದೇ ಹಳ್ಳ ದಾಟಿ ಜನ ಊರು ಸೇರಿದರು.

Get real time updates directly on you device, subscribe now.