ಒತ್ತಿನೆಣೆ ಗುಡ್ಡದಲ್ಲಿ ಮತ್ತೆ ಕುಸಿಯುತ್ತಿರುವ ರಕ್ಷಣಾ ಗೋಡೆ: ಅವೈಜ್ಞಾನಿಕ ಕಮಾಗಾರಿ. ಆತಂಕದಲ್ಲಿ ಹೆದ್ದಾರಿ ಪಯಣ

ಪಾಳು ಕೊಂಪೆಯಂತಾದ ಪ್ರವಾಸಿ ತಾಣ ಒತ್ತಿನೆಣೆ

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ನೊಣೆದು ಕುಂತಿರುವ ಬೈಂದೂರು ಒತ್ತಿನೆಣ್ಣೆಯ ಚತುಷ್ಪದ ಕಾಮಗಾರಿ ಮತ್ತೇ ಎಚ್ಚರಿಕೆಯ ಗಂಟೆ ಬಾರಿಸುತ್ತ ಹೆದ್ದಾರಿ ಪ್ರಯಾಣಿಕರಿಗೆ ಆತಂಕಕಾರಿಯಾಗಿ ಪರಿಣಮಿಸಿದೆ.

ಕುಂದಾಪುರ: ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ನೊಣೆದು ಕುಂತಿರುವ ಬೈಂದೂರು ಒತ್ತಿನೆಣ್ಣೆಯ ಚತುಷ್ಪದ ಕಾಮಗಾರಿ ಮತ್ತೇ ಎಚ್ಚರಿಕೆಯ ಗಂಟೆ ಬಾರಿಸುತ್ತ ಹೆದ್ದಾರಿ ಪ್ರಯಾಣಿಕರಿಗೆ ಆತಂಕಕಾರಿಯಾಗಿ ಪರಿಣಮಿಸಿದೆ.

ಕಳೆದ ವರ್ಷವಷ್ಟೇ ನೂತನ ಚತುಷ್ಪದ ಹೆದ್ದಾರಿಯ ಇಕ್ಕೆಲದ ಗುಡ್ಡಗಳು ಹರಿದು ಬಂದ ನೀರಿನ ರಭಸಕ್ಕೆ ಹೆದ್ದಾರಿಯಲ್ಲಿ ಜರಿದು ಹೆದ್ದಾರಿ ಸಂಚಾರವನ್ನೇ ಹಲವು ವಾರಗಳ ಕಾಲ ಸ್ಥಗಿತಗೊಳಿಸಿಬಿಟಿದ್ದವು. ಅಲ್ಲದೆ ಅನಿಯಂತ್ರಿತವಾಗಿ ಹರಿದು ಬಂದ ನೀರು ತಳಭಾಗದಲ್ಲಿರುವ ಮನೆಗೆಗಳಿಗೆ ನುಗ್ಗಿ ನಿವಾಸಿಗಳಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು.

ನಂತರ ಎಚ್ಚತ್ತ ನಿರ್ಮಾಣ ಕಂಪೆನಿಯು ನೂತನ ಅವಿಷ್ಕಾರ ವೆಂಬಂತೆ ಮತ್ತಷ್ಟು ಕೋಟಿಗಳನ್ನು ಸುರಿದು ಸ್ಲೋಪಿಂಗ್ ಪ್ರೋಟೆಕ್ಷನ್ ವಾಲ್ ಎಂಬ ಹೆಸರಿನಲ್ಲಿ ಹೆದ್ದಾರಿಯ ಗುಡ್ಡವನ್ನು ಒಂದಷ್ಟು ಇಳಿಜಾರಾಗಿಸಿ ಅದರ ಮೇಲ್ಮೈ ಮೇಲೆ ತಂತಿಗಳನ್ನು ಸುತ್ತಿ ನಡುವೆ ನೀರುಹರಿದು ಹೋಗಲು ಪೈಪುಗಳನ್ನು ಆಳವಡಿಸಿ ಅದರ ಮೇಲೆ ಕಾಂಕ್ರೀಟ್ ಹಾಸನ್ನು ಹಾಸಿ ಇನ್ನೇನು ಭಯವಿಲ್ಲಾ ಆಲ್ ಹೀಸ್ ವೆಲ್ ಎಂದು ಘೋಷಿಸಿಕೊಂಡಿತ್ತು. ಆದರೆ ಮಳೆಯ ಆರಂಭದಲ್ಲಿಯೇ ಗುಡ್ಡದ ತಳ ಭಾಗದಲ್ಲಿನ ಕಾಂಕ್ರೀಟ್ ಹಾಸನ್ನು ಭೇದಿಸಿ ನುಗ್ಗಿ ಬಂದ ನೀರು ನೋಡ ನೋಡುತ್ತಲೇ ಇಡೀ ಪ್ರೊಟೇಕ್ಷನ್ ವಾಲನ್ನೇ ಕಬಳಿಸತೊಡಗಿದೆ.

ಇದರ ಪರಿಣಾಮವೆಂಬಂತೆ ಅದುಮಿಡಲಾಗಿದ್ದ ಜೇಡಿ ಮಣ್ಣು ಮಿಶ್ರಿತ ಗುಡ್ಡ ಹಂತ ಹಂತವಾಗಿ ಕುಸಿದು ಹೆದ್ದಾರಿಯ ಮೇಲೆ ತೆವಳಿ ಬರತೊಡಗಿದೆ. ಈಗಾಗಲೇ ಒತ್ತಿನೆಣ್ಣೆಯ ಸುತ್ತ ಆವರಿಸಿದ ಗುಡ್ಡದ ಜೇಡಿ ಮಣ್ಣು ಬಹುತೇಕ ಪ್ರೋಟೆಕ್ಷನ್ ವಾಲ್ ಒಳಗಿನಿಂದ ಹರಿದು ಬರುತ್ತಿರುವ ನೀರಿನ ರಭಸಕ್ಕೆ ಶಿಥಿಲಗೊಳ್ಳಲಾರಂಭಿಸಿದ್ದು, ಇಡೀ ಗುಡ್ಡವು ಒಮ್ಮೆಗೆ ಹೆದ್ದಾರಿಯ ಮೇಲೆ ಕುಸಿದು ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲಾ ಎಂದು ಭಯಪಡಲಾಗಿದೆ.

ಪಾಳು ಕೊಂಪೆಯಂತಾದ ಒತ್ತಿನೆಣೆ
ಒಂದೆಡೆ ಪಶ್ಚಿಮದ ಇಳಿಜಾರಿನ ತಿರುವಿನಲ್ಲಿ ನೂರಾರು ಅಡಿಗಳ ಕೆಳಗೆ ಭೋರ್ಗೆರೆಯುವ ಅರಬ್ಬೀ ಸಮುದ್ರ, ಇನ್ನೊಂದೆಡೆ ಪೂರ್ವದಲ್ಲಿ ಗಗನವನ್ನು ಚುಂಬಿಸುತ್ತಿರುವ ಪಶ್ಚಿಮ ಘಟ್ಟಗಳು, ನಡುವೆ ಪಸರಿಸಿಕೊಂಡ ಹಸಿರಿನಲ್ಲಿ ಬೆಂಕಿ ಪೊಟ್ಟಣಗಳಂತೆ ಗೋಚರಿಸುತ್ತಿದ್ದ ಜನವಾಸದ ಮನೆಗಳು ಒಂದಾನೊಂದು ಕಾಲದಲ್ಲಿ ಇಡೀ ದಕ್ಷಿಣ ಕರಾವಳಿಯಲ್ಲಿಯೇ ಹೆದ್ದಾರಿ ತಟದ ಪ್ರಕೃತಿ ನಿರ್ಮಿತ ನಯನ ಮನೋಹರ ತಾಣವೆಂದೇ ಪ್ರವಾಸಿಗರನ್ನು, ಹೆದ್ದಾರಿ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸುತ್ತಿದ್ದ ಒತ್ತಿನೆಣ್ಣೆ ಪ್ರದೇಶವು ಅವೈಜ್ಞಾನಿಕ ರೀತಿಯ ಚತುಷ್ಪದ ಕಾಮಗಾರಿಗೆ ಬಲಿಯಾಗಿದ್ದು ಇದೀಗ ದುಷ್ಟ ಸಾಮ್ರಾಟನೋರ್ವನ ದಾಳಿಗೆ ಸಿಲುಕಿದ ಪಾಳು ಕೊಂಪೆಯಂತಾಗಿ ಹೋಗಿದೆ.

ಒತ್ತಿನೆಣ್ಣೆ ಸೊಬಗನ್ನು ಹಾಗೇ ಉಳಿಸಿ ಪಕ್ಕದಲ್ಲಿ ಚತುಷ್ಪದ ಹೆದ್ದಾರಿಯನ್ನು ನಿರ್ಮಿಸುವ ಸಾಧ್ಯತೆಯಿದ್ದರೂ, ಈ ಪರಿಸರದ ಮಣ್ಣಿನ ಗುಣದ ಸಾಧ್ಯಾ ಸಾಧ್ಯತೆಗಳ ಪರಿಚಯವೇ ಇಲ್ಲದ ನಿರ್ಮಾಣ ಕಂಪೆನಿಯ ಮಹಾ ಮೇಧಾವಿ ಇಂಜಿನಿಯರ್‌ಗಳು ಇಡೀ ಗುಡ್ಡವನ್ನೇ ನಟ್ಟ ನಡುವೆ ಸೀಳಿ ಅದರ ಮಧ್ಯೆ ಹೆದ್ದಾರಿಯನ್ನು ನಿರ್ಮಿಸಿದ್ದು ತೀರಾ ಅವೈಜ್ಞಾನಿಕ ಕಾಮಗಾರಿಯೆನ್ನಲಾಗುತ್ತಿದೆ.

ಒಂದೆಡೆ ಇಡೀ ಒತ್ತಿನೆಣ್ಣೆಯ ನಯನ ಮನೋಹರ ಪ್ರಕೃತಿಯ ಚಿತ್ತಾರವನ್ನು ಹೊಸಕಿ ಹಾಕಿದ ನಿರ್ಮಾಣ ಕಂಪೆನಿ ಇನ್ನೊಂದೆಡೆ ಕೋಟಿ ಕೋಟಿ ಸುರಿದು ನಿರ್ಮಿಸಿದ್ದ ಹೆದ್ದಾರಿಯನ್ನು ಸಂಭಾಳಿಸುವಲ್ಲಿ ವಿಫಲವಾಗಿ ಮತ್ತೇ ಕೋಟಿ ಕೋಟಿಗಳನ್ನು ಸುರಿಯುತಲಿದ್ದರೂ ಪ್ರಕೃತಿಯ ಮುನಿಸಿನೆದರು ಅಸಹಾಯಕವಾಗಿ ಬಿಟ್ಟಿದೆ. ಆದರೆ ಕಂಪೆನಿಯ ಈ ಹುಚ್ಚಾಟಕ್ಕೆ ಮಳೆಗಾಲ ಬಂತೆಂದರೆ ಸಾಕು ಇಲ್ಲಿ ಪಯಣಿಸುವ ಪ್ರಯಾಣಿಕರು ಜೀವವನ್ನು ಅಂಗೈಯಲ್ಲಿ ಹಿಡಿದು ಸಾಗಬೇಕಾಗಿರುವುದು ಮಾತ್ರ ವ್ಯವಸ್ಥೆಯ ದುರಂತ ಎನ್ನಲಾಗುತ್ತಿದೆ.

Get real time updates directly on you device, subscribe now.