ಡಿವೈಡರ್ ದಾಟಿ ಟೆಂಪೊಗೆ ಢಿಕ್ಕಿ ಹೊಡೆದ ಕಾರು: ಇಬ್ಬರು ದಾರುಣ ಸಾವು. ಇನ್ನಿಬ್ಬರು ಗಂಭೀರ
ಕಾರು ಮತ್ತು ಟೆಂಪೊ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಉಡುಪಿ: ಕಾರು ಮತ್ತು ಟೆಂಪೊ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಂದು ಬೆಳಿಗ್ಗೆ ಉಡುಪಿಯ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸಂತೆಕಟ್ಟೆ ಕೆಜಿ ರೋಡ್ ಸಮೀಪ ಇಂದು ಬೆಳಗ್ಗೆ ಕಾರು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗೂಡ್ಸ್ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಕಾರು ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಟೆಂಪೋ ಚಾಲಕ, ಉಡುಪಿ ಬೈಲೂರು ನಿವಾಸಿ ಸುಂದರ್ ಶೆಟ್ಟಿಗಾರ್ ಹಾಗೂ ಕಾರು ಚಾಲಕ ಅನೂಪ್ ಮೃತಪಟ್ಟವರು. ಅಪಘಾತದಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಕಾರು ಸಂತೆಕಟ್ಟೆ ಕೆಜಿ ರೋಡ್ ತಲುಪುತ್ತಿದ್ದಂತೆ ಡಿವೈಡರ್ ಮೇಲೇರಿ, ಬ್ರಹ್ಮಾವರ ಕಡೆಯಿಂದ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಹಾಗೂ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಜಮಾಯಿಸಿದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು. ಅಲ್ಲದೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ರು. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಉಡುಪಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ರು. ಕಾರು ಚಾಲಕನ ಅತೀ ವೇಗದ ಚಾಲನೆಯೇ ಅಪಘಾತ ಕಾರಣ ಎನ್ನಲಾಗಿದೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.