ಮಕ್ಕಳ ಕಳ್ಳರೆಂದು ಹಲ್ಲೆ: ಅಮಾಯಕ ಗೂಗಲ್ ಟೆಕ್ಕಿ ಸಾವು

ಹೈದರಾಬಾದ್‌ನಿಂದ ಗೆಳೆಯನ ಮನೆಗೆ ಆಗಮಿಸಿದ್ದ ಯುವಕರು

ಅಪಘಾತಕ್ಕೆ ಈಡಾದ ಕಾರಿನಲ್ಲಿದ್ದ ಗಾಯಾಳುಗಳನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಅವರ ಮೇಲೆ ಹಲ್ಲೆ ಮಾಡಿದ ಘಟನೆಯಲ್ಲಿ ಓರ್ವ ಅಮಾಯಕ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ.

ಬೀದರ್: ಅಪಘಾತಕ್ಕೆ ಈಡಾದ ಕಾರಿನಲ್ಲಿದ್ದ ಗಾಯಾಳುಗಳನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಅವರ ಮೇಲೆ ಹಲ್ಲೆ ಮಾಡಿದ ಘಟನೆಯಲ್ಲಿ ಓರ್ವ ಅಮಾಯಕ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಮೊಹಮ್ಮದ್ ಆಝಮ್ ಎಂದು ಗುರುತಿಸಲಾಗಿದ್ದು ಇವರು ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಹಲ್ಲೆಗೊಳಗಾದವರಲ್ಲಿ ಓರ್ವ ಕತಾರ್ ಪ್ರಜೆಯೂ ಸೇರಿದ್ದಾರೆ.

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ ಬಳಿ ಕಾರು ಮತ್ತು ಬೈಕ್ ಢಿಕ್ಕಿಯಾಗಿತ್ತು. ಈ ವೇಳೆಯಲ್ಲಿ ಪಲ್ಟಿಯಾದ ಕಾರಿನಲ್ಲೆ ಮೂವರನ್ನು ಸುತ್ತುವರಿದ ಸ್ಥಳೀಯರು ಸುಮಾರು ಎರಡು ಗಂಟೆಗಳ ಕಾಲ ಹಲ್ಲೆ ಮಾಡಿದ್ದಾರೆ.

ಕಾರಿನಲ್ಲಿ ಬಂದ ಈ ಮೂವರು ಹೈದ್ರಾಬಾದ್ ಮೂಲದವರಾಗಿದ್ದು ಹಂದಿಖೆರಾ ಗ್ರಾಮದ ಬಶೀರಸಾಬ್ ಎಂಬಾತರ ಮನೆಗೆ ಊಟಕ್ಕೆ ಬಂದಿದ್ದರು ಎನ್ನಲಾಗಿದ್ದು ಊಟ ಮುಗಿಸಿ ಸಂಜೆ ಮಹಾರಾಷ್ಟ್ರದ ಉದಗಿರ ಕಡೆ ಹೊಗುವಾಗ ಬೊಟಕುಳ ತಾಂಡ ಹತ್ರ ವಿಧ್ಯಾರ್ಥಿನಿಯರಿಗೆ ಚಾಕಲೇಟ್ ಕೊಟ್ಟಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಂಡ ಕೆಲವರು ಇವರು ಮಕ್ಕಳ ಕಳ್ಳರು ಎಂದು ವಾಟ್ಸ್ಯಾಪ್ ಮತ್ತು ಫೇಸ್‌ಬುಕ್‌ನಲ್ಲಿ ವದಂತಿ ಹಬ್ಬಿಸಿದ್ದಾರೆ. ಇದನ್ನೆ ಅಪಾರ್ಥ ಮಾಡಿಕೊಂಡ ಕೆಲವರು ಮಕ್ಕಳ ಕಳ್ಳರು ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿ ಸಕಾಲಕ್ಕೆ ಭೇಟಿಕೊಟ್ಟ ಎಸ್.ಪಿ.ದೇವರಾಜ್ ಅವರು ಸಾವಿರಾರು ಜನರ ಸೇರಿದ್ದ ಗುಂಪಿನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿ ಪಲ್ಟಿಯಾದ ಕಾರಿನ ಅಡಿಯಲ್ಲಿ ಸಿಲುಕಿದ್ದ ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಯಲ್ಲಿ ಕಾರನಲ್ಲಿದ್ದ ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಕಲ್ಬುರ್ಗಿ ಐಜಿ ಮುರುಗನ್ ಭೇಟಿ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ 30 ಕ್ಕೂ ಹೆಚ್ಚು ಕೀಡಿಗೇಡಿಗಳನ್ನು ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್‌ ಮತ್ತು ಫೇಸ್ ಬುಕ್ ನಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸುಳ್ಳು ವದಂತಿ ಹರಡಿಸಿ ಮುರ್ಕಿ ಗ್ರಾಮದಲ್ಲಿನ ಘಟನೆಗೆ ಕಾರಣರಾದ ವಾಟ್ಸ್ಯಾಪ್‌ ಅಡ್ಮಿನ್ ಹಾಗೂ ಫೇಸ್ ಬುಕ್ ಖಾತೆದಾರರನ್ನು ಕೂಡ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.