ಸ್ಯಾಂಟ್ರೊ ಕಾರು ಬಸ್ ಮುಖಾಮುಖಿ ಡಿಕ್ಕಿ: ಇಬ್ಬರು ದಾರುಣ ಸಾವು. ಮೂವರು ಗಂಭೀರ
ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.
ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ.
ಮೃತರನ್ನು ಕುಂದಾಪುರ ತಾಲೂಕಿನ ಹೊಸ್ಮಠ ನಿವಾಸಿ ಕಿರಣ ಶೆಟ್ಟಿ (23) ಹಾಗೂ ಮಲ್ಯಾಡಿಯ ದೀಕ್ಷಿತ್ ಶೆಟ್ಟಿ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರ ಮೂವರಲ್ಲಿ ಅರುಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಮಣಿಪಾಲದಲ್ಲಿ ಹಾಗೂ ಮನೀಷ್ ಹಾಗೂ ಜೀವನ್ ಎನ್ನುವವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಎರಡು ಕಾರಿನಲ್ಲಿ ಜೋಗ ಜಲಪಾತ ನೋಡಲು ಸ್ನೇಹಿತರು ತೆರಳಿದ್ದು ಸಂಜೆ ವಾಪಸಾಗಿ ಊರು ತಲುಪಬೇಕೆನ್ನುವಷ್ಟರಲ್ಲಿ ಈ ದುರ್ಘಟನೆ ನಡಿದಿದೆ.
ಕುಂದಾಪುರದಿಂದ ಸಿದ್ದಾಪುರದತ್ತ ಸಾಗಿಬಂದ ಖಾಸಗಿ ಬಸ್ ಸ್ಯಾಂಟ್ರೋ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗಲೆ ದೀಕ್ಷಿತ್ ಮೃತಪಟ್ಟಿದ್ದು ಗಂಭೀರ ಗಾಯಗೊಂಡ ಕಿರಣ್ ಕೂಡ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಅಪಘಾತದ ತೀವೃತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತ ಕಿರಣ್ ಶೆಟ್ಟಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೀಕ್ಷಿತ್ ಕೊಣಾಜೆಯಲ್ಲಿ ಎಂ.ಎಸ್.ಸಿ ಮುಗಿಸಿ ಕ್ಯಾಂಪಸ್ ಸೆಲಕ್ಷನ್ನಲ್ಲಿ ಉದ್ಯೋಗ ಗಿಟ್ಟಿಸಿ ಆ.1ಕ್ಕೆ ಕೆಲಸಕ್ಕೆ ಹಾಜರಾಗುವವರಿದ್ದರು.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.