ಬಡವರಾದರೇನು, ಹೃದಯ ಶ್ರೀಮಂತಿಕೆಗೆ ಬರವೆ? ಕ್ವಾರಂಟೈನ್‌ನಲ್ಲಿದ್ದ ವಲಸೆ ಕಾರ್ಮಿಕರಿಂದ ಶಾಲೆಗೆ ಸುಣ್ಣಬಣ್ಣ

ಕ್ವಾರಂಟೈನ್‌ನಲ್ಲಿ ಇದ್ದ ವಲಸೆ ಕಾರ್ಮಿಕರು ತಮಗೆ ಕ್ವಾರಂಟೈನ್‌ನಲ್ಲಿ ಆಶ್ರಯ ನೀಡಿದ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲಾ ಕಟ್ಟಡಕ್ಕೆ ಹೊಸ ಮೆರುಗು ತಂದಿದ್ದಾರೆ.

ಸಿಕರ್ (ರಾಜಸ್ಥಾನ): ಜಗತ್ತು ಕೊರೋನಾ ವೈರಸ್ ಪಿಡುಗಿನ ವಿರುದ್ಧ ಸೆಣಸಾಡುತ್ತಾ ಲಾಕ್ ಡೌನ್‌ನಲ್ಲಿ ಇದೆ. ಆದರೆ ಕ್ವಾರಂಟೈನ್‌ನಲ್ಲಿ ಇದ್ದ ವಲಸೆ ಕಾರ್ಮಿಕರು ಮಾತ್ರ ತಮಗೆ ಕ್ವಾರಂಟೈನ್‌ನಲ್ಲಿ ಆಶ್ರಯ ನೀಡಿದ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲಾ ಕಟ್ಟಡಕ್ಕೆ ಹೊಸ ಮೆರುಗು ತಂದಿದ್ದಾರೆ. ತನ್ಮೂಲಕ ಲಾಕ್ ಡೌನ್ ವೇಳೆಯೂ ತಾವು ಹೇಗೆ ಸಕ್ರಿಯರಾಗಿ ಇದ್ದೇವೆ ಎಂಬುದನ್ನು ತೋರಿಸಿಕೊಂಡು ಮಾದರಿಯಾಗಿದ್ದಾರೆ.

ರಾಜಸ್ಥಾನದ ಸಿಕರ್ ಎಂಬಲ್ಲಿ ವಲಸೆ ಕಾರ್ಮಿಕರನ್ನು ಶಾಲೆಯೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಇನ್ನಿತರ ರಾಜ್ಯಗಳ ವಲಸೆ ಕಾರ್ಮಿಕರು ಈ ಕ್ವಾರಂಟೈನ್ ಶಿಬಿರದಲ್ಲಿದ್ದಾರೆ. ಊರಿನ ಪಂಚಾಯತ್‌ನ ಮುಸ್ಖ್ಯಸ್ಥರು (ಸರ್ಪಂಚ್) ಈ ಕ್ವಾರಂಟೈನ್ ಶಿಬಿರದಲ್ಲಿ ಇರುವವರ ಊಟ-ಉಪಾಹಾರ ಮತ್ತು ಶುಚಿತ್ವಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ವಸ್ತುಗಳನ್ನು ಪೂರೈಸಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ.

ಕಾರ್ಮಿಕರು ಬಡವರಾದರೇನು? ಅವರ ಹೃದಯ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ತಮಗೆ ಕ್ವಾರಂಟೈನ್‌ನಲ್ಲಿ ಚೆನ್ನಾಗಿ ನೋಡಿಕೊಂಡ ಊರಿನ ಋಣ ತೀರಿಸಬೇಕೆಂಬ ಕೃತಜ್ಞತಾ ಭಾವ ಕಾರ್ಮಿಕರಲ್ಲಿ ಮೂಡಿದೆ. ಅದಕ್ಕಾಗಿ ತಾವು ಇದ್ದ ಶಾಲೆಗೆ ಸ್ವಯಂಪ್ರೇರಿತರಾಗಿ ಪೈಂಟ್ ಮಾಡಿದ್ದಾರೆ. ಶಾಲಾ ಕಟ್ಟಡ ಈಗ ಹೊಸ ಕಳೆಯಿಂದ ಮಿನುಗುತ್ತಿದೆ.

ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗಿದ್ದೇ ತಡ, ತುಂಬಾ ವೈರಲ್ ಆಗಿದೆ. ನೆಟ್‌ ನಾಗರಿಕರು ವಲಸೆ ಕಾರ್ಮಿಕರ ಹೃದಯ ಶ್ರೀಮಂತಿಕೆಯನ್ನು ಮುಕ್ತಮನಸ್ಸಿನಿಂದ ಹೊಗಳಿದ್ದಾರೆ.

Get real time updates directly on you device, subscribe now.